ಆನೆಗಳ ಭಾರ ಹೊರುವ, ಸಿಡಿಮದ್ದು ತಾಲೀಮು ಹೇಗಿರುತ್ತೆ?
ಮೈಸೂರು, ಅಕ್ಟೋಬರ್ 14 : ನಾಡ ಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಕಣೆ ಜಂಬೂ ಸವಾರಿ. ಈ ಜಂಬೂಸವಾರಿಯಲ್ಲಿ ಸಾಗುವ ಗಜಪಡೆಗಳ ತಾಲೀಮು ದಿನದಿಂದ ದಿನಕ್ಕೆ ಬದಲಾಗುತ್ತಾ ಹೋಗುತ್ತದೆ. ದಸರಾ ದಿನದಂದು ನಡೆಯುವ ಜಂಬೂಸವಾರಿ ಯಶಸ್ವಿಯಾಗಿ ನಡೆಯುವಲ್ಲಿ ಅದರ ಹಿಂದಿನ ತಾಲೀಮು ಪ್ರಮುಖ ಪಾತ್ರವಹಿಸುತ್ತದೆ.
750 ಕೆಜಿ ಚಿನ್ನದ ಅಂಬಾರಿ ಹೊರುವ ಅರ್ಜುನ ಮತ್ತು ಇತರ ಆನೆಗಳಿಗೆ ಸದ್ಯ ಭಾರ ಹೊರುವ ಮತ್ತು ಸಿಡಿಮದ್ದಿನ ತಾಲೀಮು ಆರಂಭವಾಗಿದೆ. ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ಆನೆಗಳಿಗೂ ಈ ತಾಲೀಮು ಮಾಡಿಸಲಾಗುತ್ತದೆ. ಶಬ್ದಗಳಿಗೆ ಆನೆಗಳು ಭಯಪಡದಂತೆ ಸಿಡಿಮದ್ದಿನ ಅಭ್ಯಾಸ ಮಾಡಿಸಲಾಗುತ್ತದೆ. [ದಸರಾ ಆನೆಗಳ ಆಹಾರ ಪದ್ಧತಿ ಹೇಗಿರುತ್ತೆ?]
ಆನೆಗಳನ್ನು ಭಾರ ಹೊರುವ ತಾಲೀಮಿಗೆ ಸಜ್ಜುಗೊಳಿಸುವುದು ಸುಲಭದ ಕೆಲಸವಲ್ಲ. ಅದು ಎಲ್ಲರಿಂದಲೂ ಸಾಧ್ಯವಿಲ್ಲ. ಅದಕ್ಕೆಂದೇ ಪಳಗಿದ ಮಾವುತರು ಅರಣ್ಯ ಸಿಬ್ಬಂದಿ, ಅಧಿಕಾರಿಗಳಿದ್ದಾರೆ. ಅವರೆಲ್ಲರ ಸಮ್ಮುಖದಲ್ಲಿ ತಾಲೀಮು ನಡೆಯುತ್ತದೆ. [ದಸರಾ ಆನೆಗಳ ಬಗ್ಗೆ ಓದಿ]
ಆನೆಗಳ ಮೇಲೆ ಮರಳಿನ ಮೂಟೆಗಳನ್ನು ಕಟ್ಟಿ, ಅಂಬಾರಿ ಹೊರುವ ಅರ್ಜುನನ ಮೇಲೆ ಮರದ ಅಂಬಾರಿಯನ್ನು ಇಟ್ಟು ತಾಲೀಮು ನಡೆಸಲಾಗುತ್ತದೆ. ಮರಳಿನ ಮೂಟೆ ಹೊತ್ತು ಅರಮನೆಯಿಂದ ಹೊರಡುವ ಆನೆಗಳು ಬನ್ನಿಮಂಟಪದ ಮಂಟಪದವರೆಗೆ ಹೋಗಿ ಬರುತ್ತವೆ. ಭಾರ ಹೊರುವ ತಾಲೀಮಿನ ವಿವರ ಚಿತ್ರಗಳಲ್ಲಿ.... [ಮೈಸೂರು ದಸರಾದ ಚಿತ್ರ ಸಂಪುಟ]

ತಾಲೀಮು ನಡೆಸಲಿವೆ ಆನೆಗಳು
ಮೈಸೂರು ದಸರಾದ ಪ್ರಮುಖ ಆಕರ್ಷಕಣೆ ಜಂಬೂ ಸವಾರಿ. ಈ ಜಂಬೂಸವಾರಿಯಲ್ಲಿ ಸಾಗುವ ಗಜಪಡೆಗಳು ಹಲವು ದಿನಗಳ ಕಾಲ ತಾಲೀಮು ನಡೆಸುತ್ತವೆ. ಆದ್ದರಿಂದ, ಯಾವುದೇ ಅಡೆತಡೆಗಳಿಲ್ಲದೇ ಯಶಸ್ವಿಯಾಗಿ ಜಂಬೂ ಸವಾರಿ ನಡೆಯುತ್ತವೆ. ಲಕ್ಷಾಂತರ ಜನರು ಸೇರಿದ್ದರೂ ಯಾವುದೇ ಶಬ್ದಕ್ಕೆ ಗಲಿಬಿಲಿಗೊಳ್ಳದೇ ಆನೆಗಳು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತವೆ.

ಆನೆಗಳಿಗೆ ಭಾರ ಹೊರುವ ತಾಲೀಮು
ಸಿಡಿ ಮದ್ದಿನ ತಾಲೀಮಿನ ಜೊತೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಭಾರ ಹೊರುವ ತಾಲೀಮನ್ನು ನಡೆಸಲಾಗುತ್ತದೆ. 750 ಕೆಜಿ ಚಿನ್ನದ ಅಂಬಾರಿ ಹೊರುವ ಅರ್ಜುನ ಮತ್ತು ಇತರ ಆನೆಗಳಿಗೆ ಸದ್ಯ ಭಾರ ಹೊರುವ ಮತ್ತು ಸಿಡಿಮದ್ದಿನ ತಾಲೀಮು ಆರಂಭವಾಗಿದೆ. ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ಆನೆಗಳಿಗೂ ಈ ತಾಲೀಮು ಮಾಡಿಸಲಾಗುತ್ತದೆ.

ಭಾರ ಕಟ್ಟುವುದು ಸುಲಭದ ಕೆಲಸವಲ್ಲ
ಭಾರ ಹೊರುವ ತಾಲೀಮಿನ ವೇಳೆ ಆನೆಗಳ ಬೆನ್ನಿಗೆ ಭಾರ ಕಟ್ಟುವುದು ಸುಲಭದ ಕೆಲಸವಲ್ಲ. ಉಸುಕಿನ ಮೂಟೆಗಳನ್ನು ಆನೆಗಳ ಬೆನ್ನಿನ ಮೇಲೆ ಹೊರಿಸಿ ಭಾರವನ್ನು ಅನುಭವಕ್ಕೆ ತರುವ ಪ್ರಕ್ರಿಯೆ ನಿಜಕ್ಕೂ ಅದ್ಭುತವಾಗಿದೆ. ಭಾರವನ್ನು ಕಟ್ಟಸು ಸುಮಾರು ಒಂದೂವರೆ ತಾಸು ಬೇಕಾಗುತ್ತದೆ. ಅನುಭವವಿಲ್ಲದವರು ಈ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ.

ತೆಂಗಿನ ನಾರು ತುಂಬಿದ ಗೋಣಿ ಚೀಲ
ಆನೆಗಳಿಗೆ ಭಾರ ಹೊರಿಸುವುದು ಕಷ್ಟದ ಕೆಲಸ. ನೈಪುಣ್ಯ ಮತ್ತು ಅನುಭವವಿರುವ ಮಾವುತರು ಮತ್ತು ಕಾವಾಡಿಗಳು ಈ ಕೆಲಸ ಮಾಡುತ್ತಾರೆ. ನಮ್ದಾ ಎಂದು ಕರೆಯುವ ಹೊದಿಕೆಯನ್ನು ಮೊದಲು ಆನೆಯ ಬೆನ್ನಿನ ಮೇಲೆ ಹೊದಿಸಲಾಗುತ್ತದೆ. ಈ ನಮ್ದಾವನ್ನು ಗೋಣಿಚೀಲ ಮತ್ತು ಬಿಳಿ ಕಾಟನ್ ಬಟ್ಟೆಯಿಂದ ಹೊಲೆದಿರುತ್ತಾರೆ. ಇದರಲ್ಲಿ ತೆಂಗಿನ ನಾರು ತುಂಬಿಸಿರುತ್ತಾರೆ.

ಗಾದಿ ಎಂಬ ದೊಡ್ಡ ಹೊರೆ
ನಮ್ದಾದ ಮೇಲೆ 'ಗಾದಿ' ಎಂದು ಕರೆಯುವ ಚೌಕಾಕಾರದ ದೊಡ್ಡ ಹೊರೆಯನ್ನು ಹೊರಿಸಲಾಗುತ್ತದೆ. ಈ ಗಾದಿಯ ತೂಕ ಸುಮಾರು 300 ಕೆಜಿ ತೂಕವಿರುತ್ತದೆ. ಈ ದೊಡ್ಡ ಗೋಣಿ ಚಿಲದಲ್ಲಿ ತುಂಬಿರುವುದು ಕೆರೆಯಲ್ಲಿ ಬೆಳೆಯುವ ಜೊಂಡು ಹುಲ್ಲು. ಇದನ್ನು ಸುಮಾರು ಸುಮಾರು 80 ರಿಂದ 90 ಅಡಿ ಉದ್ದದ ಹಗ್ಗದಿಂದ ಬಿಗಿಯಲಾಗುತ್ತದೆ.

ತೊಟ್ಟಿಲ ರೀತಿಯ ವಸ್ತು ಇಡುತ್ತಾರೆ
'ಗಾದಿ' ಮೇಲೆ ಮತ್ತೊಂದು ಬಟ್ಟೆಯನ್ನು ಹೊದಿಸಲಾಗುತ್ತದೆ. ಅದಕ್ಕೆ ಮಾವುತರು 'ಛಾಪು' ಎಂದು ಕರೆಯುತ್ತಾರೆ. ಇದನ್ನು ಸಹ ತೆಂಗಿನ ನಾರನ್ನು ತುಂಬಿ ಹತ್ತಿ ಬಟ್ಟೆಯಿಂದ ಹೊಲೆದಿರುತ್ತಾರೆ. ಚಾಪಿನ ಮೇಲೆ ತೊಟ್ಟಿಲ ರೀತಿಯ ದೊಡ್ಡ ವಸ್ತುವನ್ನು ಇಡಲಾಗುತ್ತೆ. ಇದಕ್ಕೆ ಮಾವುತರು ಕರೆಯುವುದು 'ಚಾರ್ಜಾಮಾ' ಎಂದು. ಈ ಮೂರನ್ನು ಸೇರಿಸಿ ಆನೆಯ ಹಿಂಭಾಗದಿಂದ 'ದುಮುಚಿ' ಎಂಬ ರಬ್ಬರ್ ಮತ್ತು ಆನೆಯ ಹೊಟ್ಟೆ ಭಾಗಕ್ಕೆ ಚೆಸ್ಟ್ ಲೆಗ್ ರಬ್ಬರ್ ಹಗ್ಗ ಬಿಗಿಯಲಾಗುತ್ತದೆ.

ಮರಳಿನ ಮೂಟೆಯನ್ನು ಹೊದಿಸಲಾಗುತ್ತದೆ
ಚಾರ್ಜಾಮಾದ ಮೇಲೆ ಸುಮಾರು 75 ರಿಂದ 80 ಕೆಜಿ. ತೂಕವಿರುವ ಮರಳಿನ ಮೂಟೆಗಳನ್ನು ಹೊರಿಸಲಾಗುತ್ತದೆ. ಇದು ಭಾರ ಹೊರುವ ತಾಲೀಮು. ಸುಮಾರು 600 ಕೆಜಿಯಷ್ಟು ತೂಕವನ್ನು ಹೆಚ್ಚಿಸಿ ಅಭ್ಯಾಸ ಮಾಡಿಸಲಾಗುತ್ತದೆ.
ಜಂಬೂ ಸವಾರಿಯ ದಿನ ಹತ್ತಿರ ಬರುತ್ತಿದ್ದಂತೆ ಈ ಭಾರವನ್ನು 800 ಕೆಜಿಯಷ್ಟು ಭಾರ ಹೊರುವಂತೆ ತಯಾರು ಮಾಡಲಾಗುತ್ತದೆ.

ಪ್ರತಿದಿನ ನಡೆಯುತ್ತೆ ತಾಲೀಮು
ಮರಳಿನ ಮೂಟೆ ಹೊತ್ತ ಆನೆಗಳು ಪ್ರತಿದಿನ ಅರಮನೆಯಿಂದ ಹೊರಟು ಬನ್ನಿಮಂಟಪದ ತನಕ ಹೋಗಿ ಬರುತ್ತವೆ. ಸುಮಾರು 5 ಕಿ.ಮೀ. ತಾಲೀಮು ನಡೆಸುತ್ತವೆ. ಈ ತಾಲೀಮಿನಿಂದಾಗಿ ಜಂಬೂ ಸವಾರಿ ದಿನ ಆನೆಗಳು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತವೆ. ಈ ರೀತಿಯ ತಾಲೀಮು ಪ್ರತಿವರ್ಷ ನಡೆಯುತ್ತದೆ.

ಮರದ ಅಂಬಾರಿ ಮೂಲಕ ತಾಲೀಮು
750 ಕೆಜಿ ಚಿನ್ನದ ಅಂಬಾರಿ ಹೊರುವ ಅರ್ಜುನನಿಗೆ ಮರದ ಅಂಬಾರಿಯನ್ನು ಹೊರಿಸಿ ಅಭ್ಯಾಸ ಮಾಡಿಸಲಾಗುತ್ತದೆ. ಈ ಹೊಣೆಗಾರಿಕೆಯನ್ನು ಅರ್ಜುನ ಮಾತ್ರವಲ್ಲ, ಇತರ ಬಲಿಷ್ಠ ಆನೆಗಳಿಗೂ ಮಾಡಿಸಲಾಗುತ್ತದೆ. ಕಾರಣ ಯಾವುದೇ ಪರಿಸ್ಥಿತಿ ಎದುರಿಸಲು ಈ ರೀತಿಯ ತಯಾರಿ ಮಾಡಿಸಲಾಗುತ್ತದೆ.

ಸಿಡಿಮದ್ದಿನ ಅಭ್ಯಾಸವೇಕೆ?
ದಸರಾ ಜಂಬೂಸವಾರಿ ಸಂದರ್ಭದಲ್ಲಿ ಗಜಪಡೆಗಳು ಶಬ್ದಕ್ಕೆ ಹೆದರಿ ಓಡದಂತೆ ಭಾರೀ ಸದ್ದಿನ ಸಿಡಿ ಮದ್ದುಗಳನ್ನು ಸಿಡಿಸುವ ಮೂಲಕವೂ ಅಭ್ಯಾಸ ಮಾಡಲಾಗುತ್ತಿದೆ. ಆನೆಗಳ ಮುಂದೆ ಫಿರಂಗಿ ಸಿಡಿಸಿ ಧೈರ್ಯವಾಗಿ ನಿಲ್ಲುವಂತೆ ತರಬೇತಿ ನೀಡಲಾಗುತ್ತಿದೆ. ಕೆಲವು ಆನೆಗಳು ಮೊದಲಿಗೆ ಹೆದರಿದರೂ ನಂತರ ಹೊಂದಿಕೊಳ್ಳುತ್ತವೆ.












Click it and Unblock the Notifications