ಮೈಸೂರಿನಲ್ಲಿ ಗಜಪಡೆಯ ತಾಲೀಮು ಹೇಗಿರುತ್ತೆ ಗೊತ್ತಾ?
ಮೈಸೂರು, ಅಕ್ಟೋಬರ್ 13 : ವಿಶ್ವವಿಖ್ಯಾತ ಮೈಸೂರು ದಸರಾ ಎಂದ ತಕ್ಷಣ ಜನರ ಕಣ್ಣಮುಂದೆ ಬರುವುದು ಜಂಬೂ ಸವಾರಿ. 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತ ಅರ್ಜುನ ರಾಜಗಾಂಭೀರ್ಯದ ಹೆಜ್ಜೆ ಹಾಕುತ್ತಾ ತಾಯಿ ಚಾಮುಂಡೇಶ್ವರಿ ಹೊತ್ತು ನಡೆಯುತ್ತಾನೆ. ಉಳಿದ ಆನೆಗಳು ಅದನ್ನು ಹಿಂಬಾಲಿಸುತ್ತವೆ.
ಈ ಬಾರಿಯ ದಸರಾದಲ್ಲಿಯೂ ಅಂಬಾರಿ ಹೊರುವ ಜವಾಬ್ದಾರಿ ಅರ್ಜುನನದ್ದು. ಅದರ ಹಿಂದೆ-ಮುಂದೆ ಶಿಸ್ತು ಬದ್ಧವಾಗಿ ಬಲರಾಮ, ಅಭಿಮನ್ಯು, ವಿಕ್ರಮ, ಕಾವೇರಿ, ಚೈತ್ರ, ಹರ್ಷ, ಪ್ರಶಾಂತ, ಗೋಪಿ, ಗೋಪಾಲಸ್ವಾಮಿ, ದುರ್ಗಾಪರಮೇಶ್ವರಿ, ಕೆಂಚಾಂಬ ಆನೆಗಳನ್ನು ಒಳಗೊಂಡ ಗಜಪಡೆ ಸಾಗುತ್ತದೆ.[ಪ್ರಖ್ಯಾತ ಮೈಸೂರು ದಸರಾ ಲಾಂಛನ ಬಿಡುಗಡೆ]

ವಿಜಯದ ದಶಮಿ ದಿನ ನಡೆಯುವ ಜಂಜೂ ಸವಾರಿಯ ಒಂದು ದಿನದ ಐತಿಹಾಸಿಕ ಕ್ಷಣಕ್ಕೆ ಹಲವಾರು ತಿಂಗಳುಗಳ ಶ್ರಮವಿದೆ. ಆನೆ ಶಿಬಿರಗಳಿಂದ ಎರಡು ತಂಡವಾಗಿ ಮೈಸೂರಿಗೆ ಆಗಮಿಸುವ ಗಜಪಡೆ ತಿಂಗಳಾನುಗಟ್ಟಲೆ ನಗರದಲ್ಲಿ ತಾಲೀಮು ನಡೆಸುತ್ತವೆ. ಈ ತಾಲೀಮು ಹೇಗೆ ನಡೆಯುತ್ತದೆ ಎನ್ನುವುದು ಕುತೂಹಲದ ವಿಷಯ.
ಮೈಸೂರಿಗೆ ಆಗಮಿಸುವ ಗಜಪಡೆಗಳೊಂದಿಗೆ ಅವುಗಳನ್ನು ನೋಡಿಕೊಳ್ಳಲೆಂದೇ ಮಾವುತರು, ಕಾವಾಡಿಗಳ ಕುಟುಂಬಗಳು ಬಂದಿರುತ್ತವೆ. ಈ ಕುಟುಂಬಗಳಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮತ್ತು ಮಕ್ಕಳಿಗೆ ಟೆಂಟ್ ಶಾಲೆಯ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಕೆಲವು ತಿಂಗಳ ಮಟ್ಟಿಗೆ ಇವರಿಗೆ ಮೈಸೂರು ನಗರವೇ ತವರು ಮನೆ.[ದೇವರ ಪ್ರೀತಿಗೆ ಪಾತ್ರರಾಗಬೇಕೆ? ಹಾಗಾದ್ರೆ ದಸರಾ ಪೂಜೆ ಹೀಗಿರಲಿ]
ಮೈಸೂರಿನ ಅರಮನೆ ಆವರಣದಲ್ಲಿ ಬೀಡು ಬಿಡುವ ಈ ಗಜಪಡೆಗಳಿಗೆ ದಿನನಿತ್ಯ ವಿವಿಧ ಬಗೆಯ ಬೂರಿ ಭೋಜನ. ದಿನಕ್ಕೆರಡು ಬಾರಿ ತಾಲೀಮು. ಜಂಬೂ ಸವಾರಿಯಲ್ಲಿ 750 ಕೆಜಿ ತೂಕದ ಅಂಬಾರಿ ಹೊರುವ ಅರ್ಜುನನಿಗೆ ವಿಶೇಷ ಸತ್ಕಾರಗಳು ನಡೆಯುತ್ತವೆ.
ಮೈಸೂರಿಗೆ ದಸರಾ ಸಮಯದಲ್ಲಿ ಆಗಮಿಸುವ ಪ್ರವಾಸಿಗರು ಗಜಪಡೆಗಳ ಸ್ನಾನ, ಭೋಜನ ಮುಂತಾದವುಗಳನ್ನು ನೋಡಿ ಸಂತಸ ಪಡುತ್ತಾರೆ. ಬೆಳಗ್ಗೆ ಹಾಗೂ ಸಂಜೆ ನಗರದ ಮುಖ್ಯ ರಸ್ತೆಯಲ್ಲಿ ಗಜಪಡೆಗಳು ಸಾಗುತ್ತಿದರೆ ಅದನ್ನು ನೂರಾರು ಜನರು ನೋಡಿ ಖುಷಿಪಡುತ್ತಾರೆ. ದಸರಾ ಮುಗಿಯುವ ತನಕ ಅರಮನೆ ನಗರಿಯಲ್ಲಿ ಗಜಪಡೆಗಳೇ ಮಖ್ಯ ಆಕರ್ಷಣೆ.












Click it and Unblock the Notifications