ಮೈಸೂರಿನಲ್ಲಿ ದಸರಾ ಗಜಪಡೆಗಳ ತಾಲೀಮು

ವೀರನಹೊಸಹಳ್ಳಿಯಿಂದ ನಗರಕ್ಕೆ ಆಗಮಿಸಿದ ಬಳಿಕ ಕೆಲವು ದಿನಗಳ ಕಾಲ ಗಜಪಡೆಗಳನ್ನು ಅರಮನೆಯಿಂದ ಸಯ್ಯಾಜಿರಾವ್ ರಸ್ತೆಗಾಗಿ ಬನ್ನಿಮಂಟಪದವರೆಗೆ ನಡೆಸಿಕೊಂಡು ಹೋಗಿ ಬರಲಾಗುತ್ತಿತ್ತು. ಇದು ಕಾಡಿನ ನಡುವೆಯಿದ್ದ ಗಜಪಡೆಗಳಿಗೆ ಪಟ್ಟಣದ ಜನಜಂಗುಳಿ, ವಾಹನಗಳ ಕಿರಿಕಿರಿಯ ಪರಿಚಯಿಸುವ ಕೆಲಸವಾಗಿತ್ತು. ಇದೀಗ ಜಂಬೂಸವಾರಿಯಲ್ಲಿ ಪ್ರಮುಖ ಪಾತ್ರವಹಿಸುವ ಹಾಗೂ 750 ಕೆ.ಜಿ.ಗಿಂತಲೂ ಹೆಚ್ಚು ಭಾರವಿರುವ ಅಂಬಾರಿಯನ್ನು ಹೊರಲು ತಯಾರು ಮಾಡುವ ಉದ್ದೇಶದಿಂದ ಅಷ್ಟೇ ಭಾರವಿರುವ ಮರಳನ್ನು ಬಲರಾಮನಿಗೆ ಹೊರಿಸುವ ಮೂಲಕ ಅಭ್ಯಾಸ ನಡೆಯುತ್ತಿದೆ.
ಬಲರಾಮನ ಮೇಲೆ ಭಾರದ ಮರಳಿನ ಚೀಲಗಳನ್ನು ಕಟ್ಟಿ ನಡೆಸುವ ತಾಲೀಮು ಕೂಡ ವಿಶಿಷ್ಟವಾಗಿದೆ. ಮೊದಲನೇ ದಿನವೇ ಅಷ್ಟೊಂದು ಭಾರವನ್ನು ಹೊರಿಸದೆ ಪ್ರತಿ ದಿನ ಇಂತಿಷ್ಟೆ ಎಂದು ಭಾರವನ್ನು ಹೆಚ್ಚಿಸುತ್ತಾ ಕೊನೆಗೆ ಅಂಬಾರಿಗೆ ಸಮಾನಾದ ಭಾರವನ್ನು ಹೊರಿಸುವ ಮೂಲಕ ಚಿನ್ನದ ಅಂಬಾರಿ ಹೊರಲು ತಯಾರು ಮಾಡಲಾಗುತ್ತದೆ.
ತಾಲೀಮು ಹೀಗಿದೆ : ಈ ರೀತಿಯ ಮರಳು ತಾಲೀಮನ್ನು ನಿರ್ದಿಷ್ಟ ದಿನದಂದು ಬೆಳಿಗ್ಗೆ ಸುಮುಹೂರ್ತದಲ್ಲಿ ಆರಂಭಿಸಲಾಗುತ್ತದೆ. ಮೊದಲಿಗೆ ಬಲರಾಮ ಮಂಡಿಯೂರಿ ಮಲಗುತ್ತದೆ. ಆಗ ಸುಮಾರು ಮುನ್ನೂರು ಕೆ.ಜಿ. ಭಾರದ "ಗಾದಿ ಹಮ್ದಾ" ಎಂದು ಕರೆಯುವ ಮರಳು ತುಂಬಿದ ಚೀಲವನ್ನು ಅದರ ಬೆನ್ನ ಮೇಲೆ ಹಾಸಿ ಮಾರುದ್ದದ ಹಗ್ಗದಿಂದ ಆನೆಯ ಹೊಟ್ಟೆ ಭಾಗಕ್ಕೆ ಸುತ್ತಿ ಬಿಗಿಯಾಗಿ ಕಟ್ಟಲಾಗುತ್ತದೆ. ಬಳಿಕ ಗೋಣಿ ಚೀಲಗಳನ್ನು ಹಾಸಿ ಅದರ ಮೇಲೆ ಕಬ್ಬಿಣದ ತೊಟ್ಟಿಲನ್ನು ಕಟ್ಟಲಾಗುತ್ತದೆ. ಇದು ಸುಲಭದ ಕೆಲಸವಲ್ಲ. ಆದರೂ ಹತ್ತಕ್ಕೂ ಹೆಚ್ಚು ಮಾವುತರು ಇದನ್ನು ಮಾಡಿ ಮುಗಿಸುತ್ತಾರೆ. ಆ ನಂತರ ತೊಟ್ಟಿಯಲ್ಲಿ ಮರಳು ಚೀಲಗಳನ್ನು ಇಡಲಾಗುತ್ತದೆ. ಪ್ರತಿ ದಿನವೂ ಚೀಲಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗಲಾಗುತ್ತದೆ.
ಈ ರೀತಿಯ ಭಾರವನ್ನು ಬಲರಾಮ ಮಾತ್ರವಲ್ಲದೆ, ಅಭಿಮನ್ಯು, ಅರ್ಜುನ, ಗಜೇಂದ್ರ, ಮತ್ತು ಶ್ರೀರಾಮ ಮುಂತಾದ ಆನೆಗಳಿಗೂ ಕಟ್ಟಿ ಸುಮಾರು ಹದಿನೈದು ದಿನಗಳ ಕಾಲ ಸರತಿಯ ಸಾಲಿನಲ್ಲಿ ತಾಲೀಮು ನಡೆಸಲಾಗುತ್ತದೆ. ಸುಮಾರು ನೂರು ಕೆಜಿಯಿಂದ ಆರಂಭವಾಗುವ ತಾಲೀಮು 750 ಕೆಜಿಗೆ ತಂದು ನಿಲ್ಲಿಸಲಾಗುತ್ತದೆ. ಅರಮನೆ ಆವರಣದಿಂದ ಆರಂಭವಾಗುವ ಈ ತಾಲೀಮು ಸುಮಾರು 6 ಕಿ.ಮೀ.ರಷ್ಟು ದೂರವಿರುವ ಬನ್ನಿಮಂಟಪದವರೆಗೆ ದಿನನಿತ್ಯ ನಡೆಯುತ್ತದೆ. ಹದಿನೈದು ದಿನಗಳ ನಂತರ ಮರದ ಅಂಬಾರಿಯನ್ನು ಕಟ್ಟಿ ತಾಲೀಮು ನಡೆಯುತ್ತದೆ.
ಸೆ.14ರಂದು ಎರಡನೇ ಗಜಪಡೆ ಆಗಮನ : ಈಗಾಗಲೇ ಗಜಪಡೆಯ ಮೊದಲ ತಂಡ ಆಗಮಿಸಿ ತಾಲೀಮುನಲ್ಲಿ ನಿರತರಾಗಿದ್ದರೆ, ದಸರಾ ಜಂಬೂಸವಾರಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನೇರವೇರಿಸುವ ಗಜಪಡೆಯ ಎರಡನೆಯ ತಂಡ ಸೆಪ್ಟಂಬರ್ 14ರಂದು ಆಗಮಿಸಲಿದೆ. ಈ ತಂಡದಲ್ಲಿ ಹರ್ಷ, ವಿಕ್ರಮ, ಕಾವೇರಿ, ಗೋಪಿ, ಕೋಕಿಲಾ ಹಾಗೂ ಕಾಂತಿ ಸೇರಿದಂತೆ ಒಟ್ಟು ಆರು ಆನೆಗಳಿವೆ. ಇವುಗಳೆಲ್ಲಾ ಒಟ್ಟಾಗಿ ಅರಮನೆಯಿಂದ ಬನ್ನಿಮಂಟಪದವರೆಗೆ ಬೆಳಿಗ್ಗೆ 8ಕ್ಕೆ ಹಾಗೂ ಸಂಜೆ 6ಕ್ಕೆ ಎರಡು ಬಾರಿ ತಾಲೀಮು ನಡೆಸಲಿವೆ.












Click it and Unblock the Notifications