ದಸರಾದಲ್ಲಿ ಇಣುಕಿದ ಬೊಫೋರ್ಸ್ ಫಿರಂಗಿ!
ಮೈಸೂರು, ಅ. 7: ಈ ಬಾರಿ ದಸರಾ ಅಂಬಾರಿ ಮೆರವಣಿಗೆಯ ವೇಳೆ ಸೇನೆಯ ಬೊಫೋರ್ಸ್ ಟ್ಯಾಂಕ್‌ಗಳು ಹಾಗೂ ದೇಸಿ ನಿರ್ಮಿತ 'ತೇಜಸ್' ಯುದ್ಧ ವಿಮಾನಗಳು ಪಾಲ್ಗೊಳ್ಳುವ ಮೂಲಕ ದೆಹಲಿಯ ಗಣರಾಜ್ಯೋತ್ಸವ ಪೆರೇಡ್ ನೆನಪಿಸಲಿವೆ ಎಂದು ದಸರಾ ಸ್ತಬ್ಧಚಿತ್ರ ಉಪಸಮಿತಿ ಅಧ್ಯಕ್ಷ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಗೊ. ಮಧುಸೂಧನ್ ಹೇಳಿದರು.
ನಗರದ ವಾರ್ತಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಸರಾ ಅಂಬಾರಿ ಮೆರವಣಿಗೆಯನ್ನು ದಕ್ಷಿಣ ಭಾರತದ ಗಣರಾಜ್ಯೋತ್ಸವ ಪೆರೇಡ್ ಆಗಿಸುವ ಹಾಗೂ ಸಾರ್ವಜನಿಕರನ್ನು ಸೆಳೆಯುವ ನಿಟ್ಟಿನಲ್ಲಿ ಸರ್ಕಾರ ಸೈನ್ಯದೊಂದಿಗೆ ಚರ್ಚಿಸಿದ ಫಲವಾಗಿ ಮೊದಲ ಬಾರಿಗೆ ಜಂಬೂಸವಾರಿಯಲ್ಲಿ ಈ ಆಧುನಿಕ ಯುದ್ಧಾಸ್ತ್ರಗಳ ವೀಕ್ಷಣೆಯ ಭಾಗ್ಯ ದೊರೆತಿದೆ ಎಂದು ಹೇಳಿದರು.
ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಕೊಪ್ಪಳ ಜಿಲ್ಲೆ ಹೊರತುಪಡಿಸಿ ರಾಜ್ಯದ 28 ಜಿಲ್ಲೆಗಳನ್ನು ಪ್ರತಿನಿಧಿಸುವ ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿದ್ದು, ನಾಡಿನ ಭವ್ಯ ಇತಿಹಾಸ, ಪರಂಪರೆ ಹಾಗೂ ಸಾಧನೆಗಳನ್ನು ಬಿಂಬಿಸಲಿವೆ. ಇದರೊಂದಿಗೆ ಪ್ರವಾಸೋದ್ಯಮ ಇಲಾಖೆ, ವಾರ್ತಾ ಇಲಾಖೆ, ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ, ಎಂಎಸ್‌ಐಎಲ್ ಹಾಗೂ ಯೋಗನಗರಿ, ಸ್ತಬ್ಧಚಿತ್ರ ಉಪಸಮಿತಿ, ಕನಕ ನೌಕರರ ಒಕ್ಕೂಟ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ಆಕರ್ಷಕ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಅವರು ತಿಳಿಸಿದರು.
ವಾರ್ತಾ ಇಲಾಖೆ 75 ವರ್ಷ ತುಂಬಿರುವ ಕನ್ನಡ ಚಲನಚಿತ್ರರಂಗದ ಸಾರ್ಥಕ ಇತಿಹಾಸವನ್ನು ಬಿಂಬಿಸುವ ಅಮೃತ ಮಹೋತ್ಸವ ಸ್ತಬ್ದಚಿತ್ರವನ್ನು, ಪ್ರವಾಸೋದ್ಯಮ ಇಲಾಖೆ ಅಂದು ಕಲ್ಲಿನ ರಥ; ಇಂದು ಸುವರ್ಣ ರಥ ಹೆಸರಿನ ಸ್ತಬ್ಧಚಿತ್ರ, ದಸರಾ ಸ್ತಬ್ಧಚಿತ್ರ ಉಪಸಮಿತಿ ಮಹಾಮಾನವತಾವಾದಿ ಅಂಬೇಡ್ಕರ್ ಮತ್ತು ಹರಳಯ್ಯ ಜೀವನದ ಚಿತ್ರಗಳು ಹಾಗೂ ಸರ್ವಧರ್ಮ ಸಮನ್ವಯ ಕುರಿತಾದ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಿವೆ ಎಂದರು.
ಇನ್ನು ಕನಕ ನೌಕರರ ಒಕ್ಕೂಟ ಸಂಗೊಳ್ಳಿ ರಾಯಣ್ಣನ ಸ್ತಬ್ಧಚಿತ್ರವನ್ನು, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ತಾಯಿಯ ಎದೆಹಾಲು ಅತ್ಯುತ್ತಮ ಆಹಾರ ಎಂಬ ಸಂದೇಶ ಹೊತ್ತ ಚಿತ್ರ ಹಾಗೂ ಎಂಎಸ್‌ಐಎಲ್ ಸ್ಯಾಂಡಲ್ ವುಡ್ ಮತ್ತು ಆಯಿಲ್ ಕುರಿತಾದ ಸ್ತಬ್ಧಚಿತ್ರ ಪ್ರದರ್ಶಿಸಲಿವೆ ಎಂದು ಅವರು ಮಾಹಿತಿ ನೀಡಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಸಾಗಿಬರುವ ಸ್ತಬ್ಧಚಿತ್ರದಲ್ಲಿ ಕನ್ನಡ ಶಬ್ದಕೋಶ ಬರೆದ ಆಂಗ್ಲವ್ಯಕ್ತಿ ಕಿಟೆಲ್ ಅವರ ಚಿತ್ರವನ್ನೊಳಗೊಂಡ ಸಮಗ್ರ ಚಿತ್ರಣ ಇರಲಿದೆ ಎಂದರು.
ಸ್ತಬ್ಧಚಿತ್ರ ಉಪಸಮಿತಿ ವತಿಯಿಂದ ಮೈಸೂರಿನ ಯದುವಂಶದ 8 ಮಂದಿ ಮಹಾರಾಜರು, 6 ಮಂದಿ ದಿವಾನರು ಹಾಗೂ 9 ಮಂದಿ ಕಲಾವಿದರ ಜೀವನ ವಿವರಣೆಗಳನ್ನು ಒಳಗೊಂಡ ಚಿತ್ರಗಳನ್ನು ನಗರದ 12 ಕಡೆ ಬಿತ್ತರಿಸಲಾಗಿದೆ. ಕಲಾವಿದರಲ್ಲಿ 1857ರಿಂದ 1947ರವರೆಗೆ ಸುಮಾರು 90 ವರ್ಷಗಳಷ್ಟು ಸುದೀರ್ಘ ಕಾಲ ಮೈಸೂರು ಅರಸರ ಆಸ್ಥಾನ ನರ್ತಕಿಯಾಗಿದ್ದ ಜಟ್ಟಿ ತಾಯಮ್ಮ ಅವರ ಜೀವನಗಾಥೆಯ ಚಿತ್ರವೂ ಸೇರಿದೆ ಎಂದರು.
ಕಲಾವಿದರಿಗೆ ಬಹುಮಾನ: ಈ ಹಿಂದೆ ದಸರಾ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದ ಸ್ತಬ್ಧಚಿತ್ರಗಳಿಗೆ ನೀಡಲಾಗುತ್ತಿದ್ದ ಬಹುಮಾನವನ್ನು ಸಂಬಂಧಿಸಿದ ಜಿಲ್ಲಾ ಪಂಚಾಯ್ತಿಗಳಿಗೆ ನೀಡಲಾಗುತ್ತಿತ್ತು. ಆದರೆ ಈ ವರ್ಷ ಆ ಸ್ತಬ್ಧಚಿತ್ರ ತಯಾರಿಸಿದ ಕಲಾವಿದರಿಗೆ ನೀಡುವ ಮೂಲಕ ಅವರನ್ನು ಗೌರವಿಸಲಾಗುತ್ತಿದೆ. ಉತ್ತಮ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನವಾಗಿ 25 ಸಾವಿರ, ದ್ವಿತೀಯ ಬಹುಮಾನವಾಗಿ 15 ಸಾವಿರ ಹಾಗೂ ತೃತೀಯ ಬಹುಮಾನವಾಗಿ 10ಸಾವಿರ ರು.ಗಳನ್ನು ನೀಡಲಾಗುತ್ತಿದೆ ಹಾಗೂ ಇದರೊಂದಿಗೆ ತಲಾ 2.5 ಸಾವಿರ ಬಹುಮಾನವನ್ನೊಳಗೊಂಡ ನಾಲ್ಕು ಸಮಾಧಾನಕರ ಬಹುಮಾನ ನೀಡಲಾಗುತ್ತಿದೆ ಎಂದು ಹೇಳಿದರು.
ಪೂರಕ ಓದಿಗೆ:
ಗ್ಯಾಲರಿ : ಮೈಸೂರಲ್ಲಿ ಜನಪದ ಜಾತ್ರೆ
ಸುದ್ದಿಗೋಷ್ಠಿಯಲ್ಲಿ ದಸರಾ ಸ್ತಬ್ಧಚಿತ್ರ ಉಪಸಮಿತಿ ಉಪಾಧ್ಯಕ್ಷ ಮುರಳೀಧರ್, ಸದಸ್ಯರಾದ ಗೋಪಾಲ್, ಸತೀಶ್ ಹಾಗೂ ವಾರ್ತಾ ಇಲಾಖೆ ಜಂಟಿನಿರ್ದೇಶಕ ಕೆ ಎಸ್ ಬೇವಿನಮರದ್, ಉಪನಿರ್ದೇಶಕ ಎ ಆರ್ ಪ್ರಕಾಶ್ ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications