ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧ್ವನಿ ಮತ್ತು ಬೆಳಕಿನಲ್ಲಿ ಕರ್ನಾಟಕ ಗತವೈಭವ

By ವರದಿ: ಪ್ರಕಾಶ್,ಅಬ್ಬೂರು, ಮೈಸೂರು
|
Google Oneindia Kannada News

karnataka's history glitters in dasaraಮೈಸೂರು, ಅ.6: ಮೈಸೂರು ದಸರಾ ಮಹೋತ್ಸವ ಸಮಿತಿ ಹಾಗೂ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಮಂತ್ರಾಲಯಗಳ ಸಂಯುಕ್ತ ಆಶ್ರಯದಲ್ಲಿ ಮೈಸೂರು ಕ್ರಾಫರ್ಡ್ ಭವನದ ಎದುರು ಇರುವ ಓವೆಲ್ ಮೈದಾನದಲ್ಲಿ ಅಕ್ಟೋಬರ್ 5 ರಿಂದ 11ರವರೆಗೆ ಪ್ರತಿದಿನ ಸಂಜೆ 7 ರಿಂದ ರಾತ್ರಿ 9.30 ರವರೆಗೆ "ಕರ್ನಾಟಕ ವೈಭವ" ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಮೈಸೂರಿನ ಸುಮಾರು 100 ಕಲಾವಿದರು ಮತ್ತು ರಂಗಕರ್ಮಿಗಳು ಭಾಗವಹಿಸಲಿದ್ದಾರೆ. ಕ್ರೀಡಾಂಗಣದಲ್ಲಿ 10-12 ರಂಗಮಂಚದ ಮೇಲೆ ನಡೆಸುವ ಈ ಬೃಹತ್ ಕಾರ್ಯಕ್ರಮ, ಸ್ಥಳೀಯ ಕಲಾವಿದರು ಹಾಗೂ ಸಂಗೀತ ಮತ್ತು ನಾಟಕ ವಿಭಾಗದ ತಾಂತ್ರಿಕ ವರ್ಗದ ಸಂಯುಕ್ತ ಕಾರ್ಯಾಚರಣೆಯಲ್ಲಿ ಪ್ರೇಕ್ಷಕರಿಗೆ ರೋಮಾಂಚನಕಾರಿ ಅನುಭವವನ್ನು ನೀಡುತ್ತದೆ.

ಈ ಬೃಹತ್ ಕಾರ್ಯಕ್ರಮವು ಕರ್ನಾಟಕದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಭಾರತದ ಇತಿಹಾಸದ ಹಿನ್ನೆಲೆಯಲ್ಲಿ ಮೂಡಿಬರಲಿದೆ. ಅಶೋಕನಿಂದ ಆರಂಭಗೊಂಡು ಕದಂಬ, ಚಾಲುಕ್ಯ , ರಾಷ್ಟ್ರಕೂಟ, ಹೊಯ್ಸಳ, ವಿಜಯನಗರ ಸಾಮ್ರಾಜ್ಯಗಳ ವೈಭವಗಳ ಇಣುಕು ನೋಟ ನೀಡುತ್ತದೆ. ಕದಂಬ ಮಯೂರಶರ್ಮನಿಂದ ಕನ್ನಡ ರಾಜ್ಯ ಸ್ಥಾಪನೆ, ಗಂಗದೊರೆ ದುರ್ವೀನಿತನ ಪಾಂಡಿತ್ಯ ಪ್ರೌಢಿಮೆ, ಚಾಲುಕ್ಯ ಇಮ್ಮಡಿ ಪುಲಿಕೇಶಿ, ಹರ್ಷವರ್ಧನ ಚಕ್ರವರ್ತಿಯ ಎದುರು ಸೆಣಸಿ ಗೆದ್ದ ಬಗೆ, ರಾಷ್ಟ್ರಕೂಟ ಅಮೋಘವರ್ಷನ ತ್ಯಾಗ, ಪ್ರಜಾನುರಾಗ, ಹೊಯ್ಸಳ ವಿಷ್ಣುವರ್ಧನ-ಶಾಂತಲೆಯರಿಂದ ಜಗದ್ವಿಖ್ಯಾತ ಬೇಲೂರು ಚೆನ್ನಕೇಶವ ದೇವಸ್ಥಾನ ನಿರ್ಮಾಣ, ವಿಜಯನಗರದ ದಸರಾ ವೈಭವ, ಕೃಷ್ಣದೇವರಾಯನ ಪಟ್ಟಾಭಿಷೇಕ ಮೊದಲಾದ ಸನ್ನಿವೇಶಗಳು ಗತಕಾಲಕ್ಕೆ ಕೊಂಡೊಯ್ಯುತ್ತವೆ.

ಭರತ - ಬಾಹುಬಲಿಯ ಪ್ರಸಂಗದ ಕಲಾತ್ಮಕ ನಿರೂಪಣೆ, ಶಂಕರ, ರಾಮಾನುಜ, ಮಧ್ವ , ಬಸವೇಶ್ವರ, ಅಕ್ಕಮಹಾದೇವಿ, ಕನಕ, ಪುರಂದರರ ಧಾರ್ಮಿಕ ಪರಂಪರೆಯ ನಿರೂಪಣೆ ಕರ್ನಾಟಕದ ಹಿರಿಮೆಯನ್ನು ಸಾರುತ್ತದೆ. ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ಎದುರು ಟಿಪ್ಪುಸುಲ್ತಾನ್, ಕಿತ್ತೂರು ರಾಣಿ ಚೆನ್ನಮ್ಮ ಇವರುಗಳ ಹೋರಾಟ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಘಟನೆಗಳಾದ ಜಲಿಯನ್ ವಾಲಾಬಾಗ್, ದಂಡಿಯಾತ್ರೆ ಚಲೇಜಾವ್ ಚಳುವಳಿಗಳಿಗೆ ಕರ್ನಾಟಕ ಸ್ಪಂದನ ದೃಶ್ಯರೂಪದಲ್ಲಿ ಒಡಮೂಡಿವೆ. ಪಂಪ, ರನ್ನ, ಜನ್ನ, ನಾರಾಣಪ್ಪ , ಹರಿಹರ, ಸರ್ವಜ್ಞರ ಸಾಹಿತ್ಯಕ ಪರಂಪರೆಯ ಗರಿಮೆಯನ್ನು ಕಾರ್ಯಕ್ರಮ ನಿರೂಪಿಸುತ್ತದೆ. ಈ ಕಾರ್ಯಕ್ರಮ ಆಕರ್ಷಕ ನೃತ್ಯ, ಭಾವಪೂರ್ಣ ನಾಟಕ ದೃಶ್ಯಗಳು ಮತ್ತು ಇಂಪಾದ ಸಂಗೀತದ ಅಪೂರ್ವ ಕಲಾಸಂಗಮ.

2000 ವರ್ಷಗಳ ಇತಿಹಾಸ, ಸಾಂಸ್ಕೃತಿಕತೆ, ಧಾರ್ಮಿಕ ಪರಂಪರೆ, ಕಾವ್ಯ ಮಹಾಕಾವ್ಯ , ಕಲಾ ವೈಭವದ ಚಿತ್ರಣವನ್ನು ವಿವಿಧ ರಂಗಮಂಚಗಳ ವಿನ್ಯಾಸ ಹಾಗೂ ಮನೋಜ್ಞ ಅಭಿನಯದ ಮೂಲಕ ಕಲಾಸಕ್ತರಿಗೆ ಹಾಗೂ ಇತಿಹಾಸ ಪ್ರಿಯರಿಗೆ ಉಣಬಡಿಸುವ ವಿಶಿಷ್ಟ ರಂಗಪ್ರಯೋಗವಾಗಿದೆ. ಸಂಗೀತ - ನೃತ್ಯ ಸಂಯೋಜನೆ ರಾಷ್ಟ್ರ ಅಂತರಾಷ್ಟ್ರ ಖ್ಯಾತಿಯ ಕಲಾವಿದರೊಂದಿಗೆ ಮೇಳೈಸಿ, ಇತಿಹಾಸದ ಘಟನೆಗಳಿಗೆ ರಂಜನೆಯನ್ನು ಒದಗಿಸಿ ಪ್ರೇಕ್ಷಕರ ಮನಸ್ಸನ್ನು ಉಲ್ಲಸಿತಗೊಳಿಸುವ ವಿನೂತನ ಪ್ರಯೋಗವಾಗಿದ್ದು , ನಾಡಿನ ಅರಸರ ವೈಭವದ ನೆನಪಿನ ಸಿಂಚನವನ್ನು ಜನತೆಗೆ ಪ್ರೋಕ್ಷಿಸುವ ಪ್ರಯತ್ನವಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:
ಗ್ಯಾಲರಿ : ಮೈಸೂರಲ್ಲಿ ಜನಪದ ಜಾತ್ರೆ

ಕವಿಗೋಷ್ಠಿ ಸಮಾರೋಪಕ್ಕೆ ರಾಷ್ಟ್ರಕವಿಗಳ ಉಪಸ್ಥಿತಿ
ದಸರಾದಲ್ಲಿ ಕನ್ನಡ ಚಿತ್ರರಂಗಕ್ಕೆ 'ಅಮೃತ ಸಿಂಚನ'
ದಸರಾ ಅರಳು ಕವಿಗೋಷ್ಠಿ ಕಾವ್ಯ ಸುಧೆ
ನಾದಲೋಕದಲ್ಲಿ ಮಿಂದೆದ್ದ ಮೈಸೂರು ಜನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X