ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯದಶಮಿ : ಮೈಸೂರು ಸಂಸ್ಕೃತಿಯ ವಿಜಯೋತ್ಸವದ ಕ್ಷಣಗಳು

By Staff
|
Google Oneindia Kannada News

*ಟಿ.ಎಂ. ಸತೀಶ್‌

ಕರ್ನಾಟಕದಲ್ಲಿ ನವರಾತ್ರಿ ಮೈಸೂರು ದಸರಾ ಎಂದೇ ಪ್ರಸಿದ್ಧ. ವಿಜಯದಶಮಿಯ ದಿನ ನಡೆಯುವ ಜಂಬೂಸವಾರಿಯಂತೂ ನಯನ ಮನೋಹರ. ಮೈಸೂರು ದಸರಾ ... ಎಷ್ಟೊಂದು ಸುಂದರ... ಚೆಲ್ಲಿದೆ ನಗೆಯಾ ಪನ್ನೀರಾ... ಎಂಬ ಹಾಡು ಮೈಸೂರು ದಸರದ ವೈಭವವನ್ನು ತಿಳಿಸುತ್ತದೆ.

1610ರಿಂದಲೂ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿರುವ ನಾಡಹಬ್ಬವಾದ ದಸರೆ ಒಡೆಯರ ಆಳ್ವಿಕೆಯ ಕಾಲದಲ್ಲಿ ವಿಶ್ವವಿಖ್ಯಾತಿಯನ್ನೇ ಪಡೆದಿತ್ತು. ಯಾವುದೇ ಪ್ರಚಾರ, ಅಬ್ಬರವಿಲ್ಲದೆಯೂ ಅದು, ಜಗದ್ವಿಖ್ಯಾತವೆನಿಸಿತ್ತು. ವಿಜಯದಶಮಿಯ ದಿನ ಮೈಸೂರು ಮಹಾರಾಜರು, ಸರ್ವಾಲಂಕೃತವಾದ ಚಿನ್ನದ ಅಂಬಾರಿಯಲ್ಲಿ ಕುಳಿತು, ಮೈಸೂರು ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿ ಬನ್ನಿ ಮಂಟಪಕ್ಕೆ ಬರುತ್ತಿದ್ದ ದೃಶ್ಯ ವರ್ಣಿಸಲಸದಳ ಎನ್ನುತ್ತಾರೆ ಹಳೆಯ ಮೈಸೂರಿಗರು. ಈ ವೈಭವವನ್ನು ಕಣ್ಣಾರೆ ಕಾಣಲು ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದರು.

ಈಗಿನಂತೆ ಆಗ ಪತ್ರಿಕೆಗಳಲ್ಲಿ ದಸರೆಯ ಅಬ್ಬರದ ಪ್ರಚಾರವಿರಲಿಲ್ಲ. ಆಕಾಶವಾಣಿ, ದೂರದರ್ಶನಗಳ ವೀಕ್ಷಕ ವಿವರಣೆ ಇರಲಿಲ್ಲ. ಆದರೂ ದೇಶ ವಿದೇಶದ ಜನರನ್ನು ತನ್ನತ್ತ ಸೆಳೆಯುವಲ್ಲಿ ಈ ಜಂಬೂ ಸವಾರಿ ಯಶಸ್ವಿಯಾಗಿತ್ತು. ಆದರೆ ಇಂದು ಅಬ್ಬರದ ಪ್ರಚಾರ ಇದ್ದರೂ, ಹಿಂದಿನ ದಸರೆಯ ವೈಭವ ಇತ್ತೀಚಿನ ವರ್ಷಗಳಲ್ಲಿ ಕಂಡು ಬರುತ್ತಿಲ್ಲ. ಹಿಂದಿನ ವೈಭವದ ಕುರುಹಾಗಿ ಇಂದೂ ಕರ್ನಾಟಕ ಸರಕಾರ ಈ ಉತ್ಸವವನ್ನು ತಪ್ಪದೆ ಆಚರಿಸುತ್ತದೆ.

ಪಥ ಸಂಚಲನ : ಇಂದು ಗಲಭೆ, ಬಂದ್‌, ಸಂಘರ್ಷಗಳು ನಡೆದ ಪ್ರದೇಶದಲ್ಲಿ ಜನರಿಗೆ ಧೈರ್ಯ ಹೇಳಲು ಹೇಗೆ ಪೊಲೀಸರು ಶಾಂತಿ - ಪಥ ಸಂಚಲನೆ ನಡೆಸುತ್ತಾರೋ ಹಾಗೆಯೇ ಹಿಂದೆ ತಮ್ಮ ಪುರಜನರಿಗೆ ರಕ್ಷಣಾ ಬಲದ ಸಾಮರ್ಥ್ಯ ತೋರಿಸಲು ಈ ಮೆರವಣಿಗೆ ನಡೆಯುತ್ತಿತ್ತು. ಯಾವುದೇ ಶತ್ರು ಪಡೆ ತಮ್ಮ ರಾಜ್ಯದ ಮೇಲೆ ದಾಳಿ ಮಾಡಿದರೂ, ಅದನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ತಮ್ಮಲ್ಲಿದೆ ಎಂದು ಸಾರಲು ಜಂಬೂ ಸವಾರಿಯ ಹಿಂದೆ ಚದುರಂಗ ಬಲದ ಮೆರವಣಿಗೆಯೂ ನಡೆಯುತ್ತಿತ್ತು.

ಪುರಜನರೆದುರು, ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿ ದೇಶವನ್ನು ಕಾಯುವ ಯೋಧರಿಗೆ ಬಿರುದು ಬಾವಲಿಗಳನ್ನು ನೀಡಿ ಸನ್ಮಾನಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಸರಸ್ವತಿಯ ಪೂಜೆಯಂದು ಪಂಡಿತರು, ವಿದ್ವಾಂಸರು ಕವಿಗಳಿಗೆ ಸನ್ಮಾನ ನಡೆಯುತ್ತಿತ್ತು.

ಇಂದು ಮಹಾರಾಜರ ಬದಲಾಗಿ, ಸಾಹಿತ್ಯ, ಸಂಸ್ಕೃತಿ ಪರಂಪರೆಯ ಹಿರಿಯರಿಂದ ಈ ಉತ್ಸವದ ಉದ್ಘಾಟನೆ ನಡೆಯುತ್ತದೆ. ದಶಮಿಯ ಜಂಬೂಸವಾರಿಯಲ್ಲಿ ಮಹಾರಾಜರು ಕೂರುತ್ತಿದ್ದ ಚಿನ್ನದ ಅಂಬಾರಿಯಲ್ಲಿ ಇಂದು ದೇವಿ ಚಾಮುಂಡಾಂಬಿಕೆಯ ಮೂರ್ತಿಯನ್ನು ಕೂರಿಸಲಾಗುತ್ತದೆ. ಈ ಮೆರವಣಿಗೆ ಹಿಂದಿನಿಂದ ನಡೆದು ಬಂದ ಸಂಪ್ರದಾಯದಂತೆಯೇ ನಡೆಯುತ್ತದೆ. ಆದರೆ ಆ ವೈಭವ ಇಲ್ಲ.

ಸ್ತಬ್ಧಚಿತ್ರಗಳ ಸರಣಿ : ಗಾಂಭೀರ್ಯದಿಂದ ಅಂಬಾರಿ ಹೊತ್ತು ಹೆಜ್ಜೆ ಹಾಕುವ ಆನೆಯ ಹಿಂದೆ ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳು ಸಿದ್ಧಪಡಿಸುವ ಸ್ತಬ್ಧ ಚಿತ್ರಗಳು ಸಾಗುತ್ತವೆ. ಇದಕ್ಕೆ ಬಹುಮಾನವೂ ಉಂಟು. ಆನೆ, ಕುದುರೆ, ಒಂಟೆಯ ಗಾಡಿಗಳು, ರಾಜರು ಬಳಸುತ್ತಿದ್ದ ವಿವಿಧ ಆಯುಧಗಳು, ಸಂಪ್ರದಾಯದ ಉಡುಪು ತೊಟ್ಟ ರಾವುತರು, ವಾಹನಗಳು, ಅರಮನೆಯ ವಾದ್ಯಗೋಷ್ಠಿ ತಂಡದ ಜತೆ ಸಾಗುತ್ತದೆ. ನಾಡಿನ ಜನಪದ ಕಲಾವಿದರು, ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ, ತಾಳ ಮದ್ದಳೆ, ನಂದಿಕೋಲು ಕುಣಿತ, ಹುಲಿ ವೇಷ, ಕೀಲು ಕುದುರೆ, ಕೋಲಾಟವೇ ಮುಂತಾದ ಹಲವು ಬಗೆಯ ಜಾನಪದ ನೃತ್ಯಗಳು ಮೆರವಣಿಗೆಯಲ್ಲಿ ಸಾಗುತ್ತವೆ. ಪಂಜಿನ ಮೆರವಣಿಗೆಯೂ ನಡೆಯುತ್ತದೆ. ರಾಜರು ನಡೆಸುತ್ತಿದ್ದ ಕುಸ್ತಿ ಪಂದ್ಯಗಳೂ, ದಸರಾ ಕ್ರೀಡಾಕೂಟವೂ ನಡೆಯುತ್ತದೆ.

ಮೆರವಣಿಗೆಯ ಕೊನೆಯಲ್ಲಿ ಬನ್ನಿ ಮಂಟಪಕ್ಕೆ ಬಂದು, ಬಾಳೆಯ ಕಂದನ್ನು ಕತ್ತರಿಸುವ ಮೂಲಕ ಎಲ್ಲರಿಗೂ ಬನ್ನಿ ಪತ್ರೆ ಹಂಚಿ ಹೊನ್ನೋ ... ಹೊನ್ನು.. ಎಂದು ಶುಭ ಕೋರುವುದು ಕನ್ನಡಿಗರ ಸಂಪ್ರದಾಯ. (ದಶಮಿಯ ದಿನ ದೊರೆತ ಶಮಿಪತ್ರೆಯನ್ನು ಚಿನ್ನದ ಒಡೆವೆಗಳ ಸಂಪುಟದಲ್ಲೂ ಇಡುತ್ತಾರೆ. ಹೀಗೆ ಮಾಡಿದರೆ, ಚಾಮುಂಡೇಶ್ವರಿಯ ಕೃಪೆಯಿಂದ ಮನೆಯಲ್ಲಿ ಬಂಗಾರ ಹೆಚ್ಚುತ್ತದೆ ಎನ್ನುವುದು ನಂಬಿಕೆ) ಮೆರವಣಿಗೆ ಸಾಗುವ ರಸ್ತೆಗಳ ಅಂಗಡಿ - ಮನೆಗಳ ಮಾಲಿಕರು ವಿದ್ಯುತ್‌ ದೀಪಗಳಿಂದ ತಮ್ಮ ಅಂಗಡಿ ಮನೆಗಳನ್ನು ಸಿಂಗರಿಸುತ್ತಾರೆ. ಮಾನಿನಿಯರು, ಮನೆಯ ಮುಂದಿನ ರಸ್ತೆಯನ್ನು ಗುಡಿಸಿ, ಸಾರಿಸಿ, ಸುಂದರವಾದ ವರ್ಣಮಯ ರಂಗೋಲಿ ಹಾಕಿ ಜಂಬೂಸವಾರಿಯನ್ನು ಸ್ವಾಗತಿಸುತ್ತಾರೆ. ಇಡೀ ನಗರವೇ ಬೆಳಕಿನಿಂದ ಕಂಗೊಳಿಸುವ ಈ ಬೆಳಕಿನ ಮೈಸೂರು ದಸರೆಯನ್ನು ಜೀವನದಲ್ಲೊಮ್ಮೆ ನೋಡಲೇ ಬೇಕು.

ಮುಖಪುಟ / ಮೈಸೂರು ದಸರಾ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X