ಬಾರ್ಬಿ ಡಾಲ್‌ ಜೊತೆ! ನವ-ರಾ-ತ್ರಿ ಬೊಂಬೆ-ಗ-ಳ ಪೂಜೆ

*ವಿಶಾಖ ಎನ್‌.

ದಸರಾ ಹತ್ತಿರ ಬಂದರೂ ನವರಾತ್ರಿ ಬೊಂಬೆಗಳಿಗೆ ಇನ್ನೂ ಹೊಸ ಬಟ್ಟೆ ಹಾಕಿಲ್ಲ. ಅವು ಷೋಕೇಸಲ್ಲಿ ಹಾಗೇ ನಗುತ್ತಲೇ ನಿಂತಿವೆ.

‘ಹೋದ ವರ್ಷ ಜನವರಿಯಲ್ಲಿ, ನಮ್ಮ ಮದ್ವೇಲಿ ಸಂಪ್ರದಾಯ ಅಂತ ಅಮ್ಮ ಬೊಂಬೆಗಳನ್ನ ಕೊಟ್ಟಿದ್ಲು. ನಂಗೆ ಮರೆತೇ ಹೋಗಿತ್ತು. ಮೊನ್ನೆ ಎದುರುಮನೆ ಆ್ಯಂಟಿ ಹೇಳಿದಾಗಲೇ ಗೊತ್ತಾಗಿದ್ದು. ಮೂಲೆಮನೆ ಆ್ಯಂಟಿ ಬೊಂಬೆ ಇಡ್ತಾರಲ್ವ. ಅವರಿಗೇ ಬೊಂಬೆ ಕೊಟ್ಟು ಬರ್ತೀನಿ. ಅದಕ್ಕೆ ಅಲಂಕಾರ ಮಾಡೋಕೆ ನಾನು ಟೈಮೆಲ್ಲಿಂದ ತರ್ಲಿ’ - ಮೊನ್ನೆ ಬಸ್ಸಿನಲ್ಲಿ ಕೇಳಿಬಂದ ಒಬ್ಬಾಕೆಯ ಮಾತುಗಳಿವು.

ಯಾಂತ್ರಿಕ ಬದುಕು. ಟೈಮಿಲ್ಲ. ಹಾಗಂತ ಪೂಜೆ ಬಿಡೋಕೂ ಆಗಲ್ಲ. ಷೋಕೇಸಲ್ಲಿ ಇಟ್ಟಿರೋ ಬಾರ್ಬಿ ಡಾಲ್‌ ಜೊತೆ, ಹರಕಲು ಬಟ್ಟೆ ಹಾಕಿಕೊಂಡ ನವರಾತ್ರಿ ಬೊಂಬೆಗಳ ಪೂಜೆ! ಇಲ್ಲವೇ ಗಂಡುಬೊಂಬೆಗೆ ಬ್ಯಾಗಿ ಪ್ಯಾಂಟ್‌, ಹೆಣ್ಣುಬೊಂಬೆಗೆ ವೆಲ್‌ವೆಟ್‌ ಸೀರೆ. ಹಬ್ಬದಲ್ಲೂ ಗುರುತರ ಬದಲಾವಣೆಗಳು ಮುಗುಮ್ಮಾಗಿ ನಡೆದುಹೋಗಿವೆ.

ಮೂಲ ಉದ್ದೇಶ : ಬಾಲ್ಯವಿವಾಹ ಆಚರಣೆಯಲ್ಲಿದ್ದ ಕಾಲದಲ್ಲಿ ಬೊಂಬೆ ಕೂರಿಸೋ ಸಂಪ್ರದಾಯ ಸಂಸಾರದ ನೊಗ ಹೊತ್ತ ಪುಟ್ಟ ಮನಸ್ಸುಗಳಿಗೆ ಪಾಠ ಕಲಿಸುತ್ತಿತ್ತು. ರಾಮಾಯಣ- ಭಾರತಗಳ ಪ್ರಮುಖ ಪಾತ್ರಗಳು, ಪತಿವ್ರತೆಯರು, ಸದ್ಗುಣ ಸಂಪನ್ನ ರಾಜರು, ಯೋಧರು, ಸಾಮಾಜಿಕ ವ್ಯವಸ್ಥೆ- ಎಲ್ಲವನ್ನೂ ಬೊಂಬೆಗಳೇ ಸಾರುತ್ತಿದ್ದವು. ಬೊಂಬೆಗಳ ಮುಂದೆ ಒಂಬತ್ತು ದಿನಗಳೂ ಮಕ್ಕಳಿಗೆ ಕಥಾ ಪಾನಕ. ಜೀವನದರ್ಶನ, ಕರ್ತವ್ಯ, ಧರ್ಮ, ಆಧ್ಯಾತ್ಮ, ಪಾತಿವ್ರತ್ಯ, ಆದರ್ಶ .... ಹೀಗೆ ಪಾನಕ ಕುಡಿದಷ್ಟೂ ಕಲಿಯುವ ಪಾಠಗಳು. ಬೊಂಬೆ ಇಡುತ್ತಿದ್ದ ಮೂಲ ಉದ್ದೇಶವೂ ಇದೇ ಆಗಿತ್ತು.

ಈವತ್ತು ಚನ್ನಪಟ್ಟಣದ ಮರದ ಚಂದದ ಬೊಂಬೆಗಳ ಜಾಗೆಯನ್ನು ಪ್ಲಾಸ್ಟಿಕ್‌- ರಬ್ಬರ್‌ ಬೊಂಬೆಗಳು ತುಂಬಿವೆ. ತಿರುಪತಿ ಮತ್ತಿತರ ದೇವಾಲಯಗಳಲ್ಲಿ, ಕರಕುಶಲ ಕಲಾ ಕೇಂದ್ರಗಳಲ್ಲಿ ಸಿಗುವ ನವರಾತ್ರಿ ಬೊಂಬೆಗಳಿಗೆ ಎರಡು ಮೂರು ವರ್ಷಗಳಲ್ಲೇ ತೊನ್ನು ಬರಲು ಶುರುವಾಗುತ್ತದೆ. ಅಲ್ಲಿಗೆ ಬೊಂಬೆಗಳು ಅಟ್ಟ ಸೇರುತ್ತವೆ. ಹೊಸ ಬೊಂಬೆಗಳನ್ನ ತರುವ ಯೋಚನೆ ಮಾಡಲೂ ಪುರಸೊತ್ತಿಲ್ಲ.

ಇಂಥಾದರಲ್ಲೂ ಕೊನೆ ಮನೆ ಆ್ಯಂಟಿ ಸಜ್ಜದ ಮೇಲಿಂದ ದೊಡ್ಡ ಪೆಟ್ಟಿಗೆ ಇಳಿಸಿ, ದಿವಿನಾಗಿ ಇರಿಸಿದ ಅವರ ಮುತ್ತಾತನ ಕಾಲದ ನೂರಾರು ತರಾವರಿ ಮರದ ಬೊಂಬೆಗಳನ್ನು ತೆಗೆದು, ಡಬ್ಬಗಳು- ಸ್ಟೂಲುಗಳು- ಬೆಂಚುಗಳು- ಮಣೆಗಳಿಂದ ಮೆಟ್ಟಿಲುಗಳನ್ನ ಮಾಡಿ, ಬಿಳಿ ಬಟ್ಟೆ ಮೇಲೆ ಅಚ್ಚುಕಟ್ಟಾಗಿ ಜೋಡಿಸುವಾಗ, ಹಬ್ಬ ಇನ್ನೂ ಉಳಿದುಕೊಂಡಿದೆಯಲ್ಲಾ ಅನ್ನಿಸುತ್ತದೆ.

ಮುಖಪುಟ / ಮೈಸೂರು ದಸರಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+