ಬುದ್ಧ ಪೂರ್ಣಿಮಾ ಯಾವತ್ತು? ದಿನಾಂಕ, ಮಹತ್ವದ ವಿವರ ಇಲ್ಲಿದೆ

ವೈಶಾಖ ಪೂರ್ಣಿಮೆ ಎಂದೂ ಕರೆಯಲ್ಪಡುವ ಬುದ್ಧ ಪೂರ್ಣಿಮೆ ಬೌದ್ಧಧರ್ಮದ ಅನುಯಾಯಿಗಳಿಗೆ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಮೇ 1 ರಂದು ಈ ವರ್ಷದ ಬುದ್ದ ಪೂರ್ಣಿಮಾ ದಿನವನ್ನು ಆಚರಿಸಲಾಗುತ್ತದೆ. ಬೌದ್ಧಧರ್ಮವನ್ನು ವಿಶ್ವದ ಮೂರನೇ ಅತಿದೊಡ್ಡ ಧರ್ಮವೆಂದು ಪರಿಗಣಿಸಲಾಗಿದೆ. ಹಾಗಾಗಿ ಈ ದಿನವು ಅಪಾರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ.

ಈ ಸಂದರ್ಭದಲ್ಲಿ ಭಕ್ತರು ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ. ದಾನ ಧರ್ಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಪೂಜಾ ಪ್ರಾರ್ಥನೆಗಳಲ್ಲಿ ಭಾಗಿಯಾಗುತ್ತಾರೆ. ಬೌದ್ಧರು ಗೌತಮ ಬುದ್ಧನ ಬೋಧನೆಗಳನ್ನು ಅನುಸರಿಸುತ್ತಾರೆ.

Buddha Purnima 2026

ಬುದ್ಧ ಪೂರ್ಣಿಮಾ 2026 ಮುಹೂರ್ತ:

ಹಿಂದೂ ಕ್ಯಾಲೆಂಡರ್ ಪ್ರಕಾರ, ವೈಶಾಖ ಪೂರ್ಣಿಮೆ ಏಪ್ರಿಲ್ 30 ರಂದು ರಾತ್ರಿ 9:12 ಕ್ಕೆ ಪ್ರಾರಂಭವಾಗಿ ಮೇ 1, 2026 ರಂದು ರಾತ್ರಿ 10:52 ಕ್ಕೆ ಮುಕ್ತಾಯಗೊಳ್ಳುತ್ತದೆ.

ಸ್ನಾನ ಮುಹೂರ್ತ:

ಬೆಳಿಗ್ಗೆ 4:15 ರಿಂದ ಬೆಳಿಗ್ಗೆ 4:58 ರವರೆಗೆ
ಬೆಳಿಗ್ಗೆ 5:41 ರಿಂದ ಬೆಳಿಗ್ಗೆ 10:39 ರವರೆಗೆ

ಬುದ್ಧ ಪೂರ್ಣಿಮೆಯನ್ನು ಹೇಗೆ ಆಚರಿಸಲಾಗುತ್ತದೆ?:

ಈ ದಿನದಂದು ಬೌದ್ಧಧರ್ಮದ ಅನುಯಾಯಿಗಳು ಧಮ್ಮಪದ ಮತ್ತು ತ್ರಿಪಿಟಕಗಳಂತಹ ಪವಿತ್ರ ಗ್ರಂಥಗಳನ್ನು ಪಠಿಸುತ್ತಾರೆ.ಬೋಧಗಯಾದಲ್ಲಿ, ಭಕ್ತರು ಜ್ಞಾನೋದಯವನ್ನು ಸಂಕೇತಿಸುವ ಪವಿತ್ರ ಬೋಧಿ ವೃಕ್ಷವನ್ನು ಪೂಜಿಸುತ್ತಾರೆ. ಮನೆ ಮತ್ತು ದೇವಾಲಯಗಳನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ಜನರು ಬುದ್ಧನ ಬೋಧನೆಗಳ ಜಪ, ಧ್ಯಾನ ಮತ್ತು ಚಿಂತನೆಯಲ್ಲಿ ತೊಡಗುತ್ತಾರೆ.

ಹಿಂದೂ ಸಂಪ್ರದಾಯಗಳಲ್ಲಿ, ಈ ದಿನ ಭಕ್ತರು ಸತ್ಯನಾರಾಯಣ ಪೂಜೆಯನ್ನು ಮಾಡುತ್ತಾರೆ. ಲಕ್ಷ್ಮೀ ದೇವಿಯನ್ನು ಪೂಜಿಸುತ್ತಾರೆ ಮತ್ತು ಚಂದ್ರನಿಗೆ ಅರ್ಘ್ಯ ಬಿಡುತ್ತಾರೆ. ಉಪವಾಸ ಮತ್ತು ದಾನಧರ್ಮದಲ್ಲಿ ತೊಡಗಿ ಕೊಳ್ಳುತ್ತಾರೆ.

Narasimha Jayanti: ನರಸಿಂಹ ಜಯಂತಿ ಯಾವತ್ತು? ದಿನಾಂಕ, ಮಹತ್ವದ ವಿವರ ಇಲ್ಲಿದೆ
Narasimha Jayanti: ನರಸಿಂಹ ಜಯಂತಿ ಯಾವತ್ತು? ದಿನಾಂಕ, ಮಹತ್ವದ ವಿವರ ಇಲ್ಲಿದೆ

ವಿಷ್ಣುವಿನ ಅವತಾರವಾಗಿ ಗೌತಮ ಬುದ್ಧ:

ಕೆಲವು ಧಾರ್ಮಿಕ ಗ್ರಂಥಗಳು ಗೌತಮ ಬುದ್ಧನನ್ನು ವಿಷ್ಣುವಿನ ಒಂಭತ್ತನೇ ಅವತಾರವೆಂದು ಉಲ್ಲೇಖಿಸುತ್ತವೆ. ಐತಿಹಾಸಿಕವಾಗಿ, ಬುದ್ಧನು ಕ್ರಿ.ಪೂ 563 ರಲ್ಲಿ ಕಪಿಲವಸ್ತುವಿನಲ್ಲಿ ಶಾಕ್ಯ ಕುಲದ ರಾಣಿ ಮಹಾಮಾಯ ಮತ್ತು ರಾಜ ಶುದ್ಧೋದನನಿಗೆ ಜನಿಸಿದನು. ಅವನ ಮೂಲ ಹೆಸರು ಸಿದ್ಧಾರ್ಥ.

ಬುದ್ಧನ ಜೀವನದ ಪ್ರಮುಖ ಘಟನೆಗಳು:

ಬುದ್ಧ ಪೂರ್ಣಿಮೆಯ ದಿನವೇ ಬುದ್ಧನ ಜೀವನದಲ್ಲಿನ ಮೂರು ಪ್ರಮುಖ ಘಟನೆಗಳು ಘಟಿಸುತ್ತವೆ. ಇದೇ ಕಾರಣಕ್ಕೆ ಈ ದಿನವನ್ನು 'ತ್ರಿವಳಿ ಆಶೀರ್ವಾದ ಹಬ್ಬ' ಎಂದೂ ಕರೆಯಲಾಗುತ್ತದೆ.

ಜನನ: ಗೌತಮ ಬುದ್ದ ವೈಶಾಖ ಪೂರ್ಣಿಮೆಯಂದು ಲುಂಬಿನಿಯಲ್ಲಿ ಜನಿಸಿದರು.

ಜ್ಞಾನೋದಯ: 35 ನೇ ವಯಸ್ಸಿನಲ್ಲಿ, ಬೋಧಗಯಾದ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾಗುತ್ತದೆ.

ಮಹಾಪರಿನಿರ್ವಾಣ: 80 ನೇ ವಯಸ್ಸಿನಲ್ಲಿ, ಅವರು ಅದೇ ದಿನ ಕುಶಿನಗರದಲ್ಲಿ ಅಂತಿಮ ಮುಕ್ತಿ ಪಡೆದುಕೊಳ್ಳುತ್ತಾರೆ.

ಬೌದ್ಧ ಧರ್ಮದ ಮೂಲ: ಬೌದ್ಧಧರ್ಮವು ಸುಮಾರು 2,600 ವರ್ಷಗಳ ಹಿಂದೆ ಗೌತಮ ಬುದ್ಧನ ಬೋಧನೆಗಳೊಂದಿಗೆ ಹುಟ್ಟಿಕೊಂಡ ಪ್ರಾಚೀನ ಭಾರತೀಯ ಧರ್ಮವಾಗಿದೆ. ಅವರ ಜೀವನ ಅನುಭವಗಳು ಮತ್ತು ತತ್ತ್ವಶಾಸ್ತ್ರದ ಆಧಾರದ ಮೇಲೆ, ಈ ಧರ್ಮವು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಾದ್ಯಂತ ಹರಡಿತು. ಈ ಧರ್ಮಕ್ಕೆ ವಿಶ್ವಾದ್ಯಂತ ಲಕ್ಷಾಂತರ ಅನುಯಾಯಿಗಳಿದ್ದಾರೆ.

ಗೌತಮ ಬುದ್ಧನ ಜೀವನ ಕತೆ:

ನೇಪಾಳದ ಇಂದಿನ ಲುಂಬಿನಿಯಲ್ಲಿರುವ ಕಪಿಲವಸ್ತು-ಪುರ ರಾಜ್ಯದಲ್ಲಿ ರಾಜ ಶುದ್ಧೋದನ ಮತ್ತು ರಾಣಿ ಮಾಯಾ ದಂಪತಿಗಳಿಗೆ ಜನಿಸಿದ ಮಗುವೇ ಸಿದಾರ್ಥ. ಮಗು ಹೆರಿಗೆಯಾದ ಏಳು ದಿನಗಳ ನಂತರ ತಾಯಿ ನಿಧನರಾಗುತ್ತಾರೆ. ನಂತರ ತಾಯಿಯ ಸಹೋದರಿ ಮಹಾಪಜಾಪತಿ ಸಿದಾರ್ಥನನ್ನು ಸಲಹುತ್ತಾರೆ.

ರಾಜಕುಮಾರ ಸಿದ್ಧಾರ್ಥನಿಗೆ ಯಾರೂ ಒಡಹುಟ್ಟಿದವರು ಇರಲಿಲ್ಲ.ಹಾಗಾಗಿ ಮುಂದೆ ಸಿದ್ದಾರ್ಥನೇ ರಾಜ್ಯಭಾರವನ್ನು ವಹಿಸಿಕೊಳ್ಳಬೇಕು ಎನ್ನುವುದು ತಂದೆಯ ಮನದಾಸೆಯಾಗಿತ್ತು.ಆದರೆ ಸಿದ್ದಾರ್ಥ ಸಾಮಾನ್ಯ ಮಗುವಲ್ಲ, ಪ್ರಸಿದ್ಧ ಮತ್ತು ಪ್ರಬುದ್ಧ ಧಾರ್ಮಿಕ ನಾಯಕನಾಗುತ್ತಾನೆ ಎನ್ನುವುದು ಜ್ಯೋತಿಷಿ ಹೇಳಿಕೆಯಾಗಿತ್ತು.

ಹಾಗಾಗಿ ರಾಜನು ತನ್ನ ಮಗನನ್ನು ಅರಮನೆಯಲ್ಲಿಯೇ ಇರಿಸಿಹೊರಗಿನ ಪ್ರಪಂಚದ ಸಂವಹನವನ್ನೇ ತಪ್ಪಿಸುತ್ತಾನೆ. ಅರಮನೆಯಲ್ಲಿಯೇ ಎಲ್ಲಾ ಲೌಕಿಕ ಸುಖಗಳನ್ನು ಆತನಿಗೆ ನೀಡಲಾಯಿತು. ರಾಜಕುಮಾರ ಸಿದ್ಧಾರ್ಥನು ತನ್ನ ಜೀವನದ ಆರಂಭದಲ್ಲಿಯೇ ವಿವಾಹವಾದನು. ಅವನ ಹೆಂಡತಿಯ ಹೆಸರು ಯಶೋಧರ.

ಒಂದು ದಿನ, ಅವನು ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಹೊರ ನಗರಕ್ಕೆ ಪ್ರವಾಸ ಮಾಡಿದನು. ಈ ಸಂದರ್ಭದಲ್ಲಿ ಭಿಕ್ಷುಕ, ಕುಷ್ಠರೋಗಿ ಮತ್ತು ಮೃತ ದೇಹ, ಮತ್ತು ಒಬ್ಬ ಬ್ರಾಹ್ಮಣ ಅವನ ಕಣ್ಣಿಗೆ ಬೀಳುತ್ತಾರೆ.

ಈ ವೇಳೆ ಬ್ರಾಹ್ಮಣರ ಶಾಂತ ಮತ್ತು ಶಾಂತಿಯುತ ನಡವಳಿಕೆಯು ಇತರ ಮೂರರಲ್ಲಿ ಅಡಗಿರುವ ನೋವು ಅಥವಾ ದುಃಖಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎನ್ನುವುದು ಅರಿವಿಗೆ ಬರುತ್ತದೆ.

ರಾಜಕುಮಾರ ಸಿದ್ದಾರ್ಥನಿಗೆ 29 ವರ್ಷ ವಯಸ್ಸಾಗಿದ್ದಾಗ, ಅವನ ಹೆಂಡತಿ ಯಶೋಧರೆ ರಾಹುಲ ಎಂಬ ಮಗನಿಗೆ ಜನ್ಮ ನೀಡುತ್ತಾಳೆ. ರಾಹುಲನ ಜನನದ ಒಂದು ವಾರದ ನಂತರ, ಸಿದ್ಧಾರ್ಥನು ಅರಮನೆಯನ್ನು ತೊರೆದು ಜೀವನದ ಸತ್ಯವನ್ನು ಹುಡುಕಲು ಹೊರಡುತ್ತಾನೆ.

ತನ್ನನ್ನು ತಾನು ತೀವ್ರ ಕಠಿಣ ಪರಿಶ್ರಮಗಳಿಗೆ ಒಳಪಡಿಸಿಕೊಂಡನು, ನಿರಂತರ ಧ್ಯಾನದ ಮೂಲಕ ಹಸಿವಿನಿಂದ ಜ್ಞಾನೋದಯವನ್ನು ಪಡೆಯುವುದು ಸರಿಯಾದ ಮಾರ್ಗವಲ್ಲ ಎಂದು ಅರಿತುಕೊಂಡನು .

ಜ್ಞಾನೋದಯದ ಹಾದಿ:

ಅಂತಿಮವಾಗಿ, ಸಿದ್ಧಾರ್ಥನು ಮಧ್ಯಮ ಮಾರ್ಗದ ಮೂಲಕ, ದುಃಖವನ್ನು ಕೊನೆಗೊಳಿಸಲು ಎಂಟು ಉದಾತ್ತ ಸತ್ಯಗಳಿವೆ ಎಂದು ಕಂಡುಕೊಂಡನು. ಸಿದ್ಧಾರ್ಥ ಗೌತಮನು ಅಂತಿಮವಾಗಿ ಭಾರತದ ಇಂದಿನ ಬೋಧಗಯದಲ್ಲಿರುವ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವನ್ನು ಪಡೆದನು. ಅವನು ತನ್ನ ಮೊದಲ ಧರ್ಮೋಪದೇಶವನ್ನು ಸಾರನಾಥದಲ್ಲಿರುವ (ವಾರಣಾಸಿಯ ಬಳಿ) ಈ ಬೋಧಿ ವೃಕ್ಷದ ಬಳಿ ಬೋಧಿಸಿದನು. ನಂತರ ಸಿದ್ದಾರ್ಥ ಗೌತಮ ಬುದ್ದ ಎಂದೇ ಪ್ರಸಿದ್ದಿಯಾಗುತ್ತಾನೆ.

ಗೌತಮ ಬುದ್ಧ ಕಂಡುಕೊಂಡ ನಾಲ್ಕು ಉದಾತ್ತ ಸತ್ಯಗಳನ್ನು ಆಧರಿಸಿದ ಬೌದ್ಧಧರ್ಮ: ಅವುಗಳೆಂದರೆ

ದುಃಖ ಅಸ್ತಿತ್ವದಲ್ಲಿದೆ ಎಂಬ ಸತ್ಯ
ಆ ದುಃಖಕ್ಕೆ ಒಂದು ಕಾರಣವಿದೆ ಎನ್ನುವ ಸತ್ಯ
ದುಃಖಕ್ಕೆ ಕೊನೆಯಿದೆ ಎನ್ನುವ ಸತ್ಯ
ದುಃಖದ ಅಂತ್ಯಕ್ಕೆ ಕಾರಣವಾಗುವ ಮಾರ್ಗದ ಸತ್ಯ

ಕರ್ನಾಟಕದಲ್ಲಿ ಬೌದ್ಧ ಚೈತ್ಯಾಲಯಗಳು:

ರಾಜ್ಯದ ಹಲವು ಭಾಗಗಳಲ್ಲಿ ಬೌದ್ಧ ಚೈತ್ಯಾಲಯಗಳು, ವಿಹಾರಗಳು ಮತ್ತು ಸ್ತೂಪಗಳು ಪತ್ತೆಯಾಗಿವೆ. ಪ್ರಮುಖ ಬೌದ್ಧ ಚೈತ್ಯಾಲಯ ಮತ್ತು ಕೇಂದ್ರಗಳು ಇಲ್ಲಿವೆ.

ಸನ್ನತಿ: ಕಲಬುರ್ಗಿಯ ಚಿತ್ತಾಪುರ ತಾಲೂಕಿನ ನದಿಯ ದಡದಲ್ಲಿರುವ ಸನ್ನತಿ ಅತ್ಯಂತ ಪ್ರಮುಖ ಬೌದ್ಧ ಕೇಂದ್ರವಾಗಿದೆ. ಇಲ್ಲಿಯ ಕನಗನಹಳ್ಳಿ ಎಂಬಲ್ಲಿ ಬೃಹತ್ ಸ್ತೂಪಗಳು, ಚೈತ್ಯಾಲಯಗಳ ಅವಶೇಷಗಳು ಮತ್ತು ಅಶೋಕನ ಶಿಲಾಶಾಸನಗಳು ದೊರೆತಿವೆ.

ಬನವಾಸಿ: ಉತ್ತರ ಕನ್ನಡ ಜಿಲ್ಲೆಯ ಬನವಾಸಿಯು ಪ್ರಾಚೀನ ಕಾಲದಲ್ಲಿ ಬೌದ್ಧ ಧರ್ಮದ ಪ್ರಮುಖ ಕೇಂದ್ರವಾಗಿತ್ತು. ಇಲ್ಲಿ ಬೌದ್ಧ ವಿಹಾರಗಳು ಮತ್ತು ಚೈತ್ಯಾಲಯಗಳ ಅವಶೇಷಗಳು ಲಭ್ಯವಾಗಿವೆ.

ಬ್ರಹ್ಮಗಿರಿ: ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯಲ್ಲಿ ಬೌದ್ಧ ಸ್ತೂಪ ಮತ್ತು ವಿಹಾರಗಳ ಅವಶೇಷಗಳು ದೊರೆತಿವೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+