
"ನಾನು ವಿಜಯವಾಣಿಗೆ ಒಂದು ಲೇಖನ ಬರೆದಿದ್ದೆ. ಅದರಲ್ಲಿ ಬರೆದಿದ್ದ ಸಾಲು ಏನೆಂದರೆ, ಐದೈದು ಸಲ ಗೆದ್ದರೂ ತಮ್ಮ ಕ್ಷೇತ್ರಕ್ಕೆ ಐದು ಪೈಸೆಯ ಕೆಲಸ ಮಾಡಿರುವುದಿಲ್ಲ. ಜನಪತಿನಿಧಿಗಳಾಗಿ ಐದಾರು ಸಲ ಆಯ್ಕೆಯಾದರೂ ಯಾವುದೇ ಕೆಲಸ ಮಾಡದವರಿಗೆ ನಾನು ಹಾಗೆ ಬರೆದಿದ್ದೆ. ಅದರಲ್ಲಿ ತಪ್ಪೇನಿದೆ? ಮತ್ತು ಯಾವ ವ್ಯಕ್ತಿಯ ಪ್ರಸ್ತಾವ ಇದೆ?"
-ಹೀಗೆ ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆಯವರು ಪ್ರಶ್ನೆಗೆ ಮತ್ತೊಂದು ಪ್ರಶ್ನೆ ಎಸೆದರು. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ನಿರ್ದಿಷ್ಟ ಚಿಂತನೆಯ ಹಾಗೂ ಆಲೋಚನೆಯವರು ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೂಲಿಬೆಲೆ ಬದಲಾಗಿದ್ದಾರೆ ಹಾಗೂ ದುಡ್ಡಿಗೆ ಮಾರಾಟ ಆಗಿದ್ದಾರೆ ಎಂಬುದು ಆಕ್ಷೇಪ.
ಆಚಾರವಿಲ್ಲದ ನಾಲಗೆ, ನೀಚ ಬುದ್ಧಿಯ ಬಿಡು ನಾಲಗೆ : ಸೂಲಿಬೆಲೆ ಸಂದರ್ಶನ
ಜತೆಗೆ ಕೇಂದ್ರದಲ್ಲಿ ಕೌಶಲಾಭಿವೃದ್ಧಿ ಖಾತೆಯ ರಾಜ್ಯ ಸಚಿವರೂ ಆಗಿರುವ, ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರನ್ನು ಗುರಿ ಮಾಡಿಕೊಂಡು ಇಂಥದ್ದೊಂದು ಲೇಖನ ಹಾಗೂ ಹೇಳಿಕೆಯನ್ನು ಚಕ್ರವರ್ತಿ ಸೂಲಿಬೆಲೆ ಮಾಡಿದ್ದಾರೆ ಎಂಬುದು ಕೂಡ ಮತ್ತೊಂದು ಆಕ್ಷೇಪ. ಅಸಲಿಗೆ ಆಗಿದ್ದೇನು ಎಂಬುದರ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಅವರ ಸಂದರ್ಶನವನ್ನು ಒನ್ಇಂಡಿಯಾ ಕನ್ನಡ ಮಾಡಿದೆ.
ಪ್ರಶ್ನೋತ್ತರಗಳಿಗಾಗಿ ಮುಂದೆ ಓದಿ.

ಪ್ರಶ್ನೆ: ಅನಂತಕುಮಾರ ಹೆಗಡೆ ಬಗ್ಗೆ ನೀವು ಏನು ಹೇಳಿದಿರಿ?
ಚಕ್ರವರ್ತಿ ಸೂಲಿಬೆಲೆ: ಐದು- ಐದು ಬಾರಿ ಗೆದ್ದರೂ ತಮ್ಮ ಕ್ಷೇತ್ರಕ್ಕೆ ಐದು ಪೈಸೆ ಉಪಯೋಗವಿಲ್ಲ ಅಂತ ನಾನು ಬರೆದಿದ್ದು ವಿಜಯವಾಣಿಯ ಅಂಕಣದಲ್ಲಿ. ಅದು ಯಾರೆಲ್ಲ ಕೆಲಸ ಮಾಡಿಲ್ಲವೋ ಅವರೆಲ್ಲರಿಗೂ ಅನ್ವಯಿಸಿ ಬರೆದದ್ದು. ಅದು ನಿಮಗೆ ತಾಗುತ್ತದೆ ಅಂದರೆ ನಾನೇನು ಮಾಡಲಿ? ಯಾರಿಗೆಲ್ಲ ತಾಗುತ್ತದೋ ತಾಗಲಿ ಎಂದು ಸುಮ್ಮನಾದೆ.
ಇನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಷಣ ಮಾಡಿಯೇ ಗೆಲ್ಲುತ್ತೇವೆ ಎಂದು ಪ್ರತಿ ಸಲ ಹೊರಡುವುದು ಸರಿಯಾ? ಪ್ರಜಾಪ್ರಭುತ್ವ ವ್ಯವಸ್ಥೆ ಇದು. ಮಾತಿಗಿಂತ ಹೆಚ್ಚಾಗಿ ಜನರೆದುರು ನಿಮ್ಮ ಕೆಲಸವನ್ನು ಹೇಳಿ ಅಂತ ಬರೆದೆ. ಇದರಲ್ಲಿ ಯಾವುದು ತಪ್ಪು? ಯಾರನ್ನು ಉದ್ದೇಶಿಸಿ ಬರೆದ ಸಾಲುಗಳು ಇವು ಎಂದು ನೀವೇ ನಿರ್ಧರಿಸಿ.

ಪ್ರಶ್ನೆ: ಹೊಸದಿಗಂತದಲ್ಲಿ ಬರೆದ ಲೇಖನದಲ್ಲಿ ಮೋದಿಯವರಿಗೆ ಮುಜುಗರ ಆಗುವಂಥ ಅಂಶ ಇದ್ದವಂತೆ?
ಚಕ್ರವರ್ತಿ ಸೂಲಿಬೆಲೆ: ಸಮೀಕ್ಷೆಗಳು ಹಾಗೂ ಪಕ್ಷದಲ್ಲಿ ಗುಜರಾತ್ ನಲ್ಲಿ ಬಿಜೆಪಿ ಭಾರೀ ಬಹುಮತ ಗಳಿಸುತ್ತದೆ ಎನ್ನುತ್ತಿದ್ದರು. ಆದರೆ ಅಲ್ಲಿ ಆಡಳಿತ ವಿರೋಧಿ ಅಲೆ ಇದ್ದದ್ದು ನಿಜ. ಇನ್ನು ನರೇಂದ್ರ ಮೋದಿಯವರನ್ನು ತುಂಬ ವರ್ಷದಿಂದ ನೋಡಿಕೊಂಡು ಬಂದಿದ್ದೀನಿ. ಅವರ ಚುನಾವಣಾ ಭಾಷಣಗಳನ್ನು ಉತ್ತರಪ್ರದೇಶ, ದೆಹಲಿ, ಬಿಹಾರ...ಇಲ್ಲೆಲ್ಲ ಹತ್ತಿರದಿಂದ ಗಮನಿಸಿದ್ದೀನಿ.
ಗೆಲುವು ಸುಲಭ ಎಂಬ ವಾತಾವರಣದಲ್ಲಿ ಮೋದಿ ಅವರ ಭಾಷಣದ ವೈಖರಿಯೇ ಬೇರೆ. ಹಾಗಲ್ಲದ ವೇಳೆಯಲ್ಲಿನ ವೈಖರಿಯೇ ಬೇರೆ. ಎರಡನೇ ಹಂತದ ಚುನಾವಣಾ ಪ್ರಚಾರದ ಕೊನೆಗೆ ಮೋದಿ ಅವರು ಅಂಥ ಆಕ್ರಮಣಕಾರಿಯಾಗಿ ಮಾತಿಗೆ ಇಳಿಯದಿದ್ದರೆ ಗುಜರಾತ್ ನಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದೇ ಕಷ್ಟವಿತ್ತು. ಅಲ್ಲಿನ ಪ್ರಯಾಸದ ಗೆಲುವು ಮೋದಿ ಅವರ ಶ್ರಮದಿಂದಲೇ ಅಂತ ನಾನು ಬರೆದಿದ್ದೆ. ಫಲಿತಾಂಶದ ನಂತರ ಅನೇಕರು ಫೋನ್ ಮಾಡಿ, ನಿಮ್ಮ ಮಾತು ಸರಿ ಅಂದರು.

ಪ್ರಶ್ನೆ: ಈಚೆಗೆ ನಿಮಗೆ ಜೆಡಿಎಸ್ ಮೇಲೆ ಪ್ರೀತಿ ಹೆಚ್ಚಾದಂತೆ ಇದೆಯಲ್ಲಾ?
ಚಕ್ರವರ್ತಿ ಸೂಲಿಬೆಲೆ: ಅಭಿವೃದ್ಧಿ, ಏಳ್ಗೆ ಬಗ್ಗೆ ಮಾತನಾಡುವ ಎಲ್ಲ ಪಕ್ಷ ಹಾಗೂ ರಾಜಕಾರಣಿಯ ಹಿಂದೆ ನಾವಿರುತ್ತೀವಿ. ಮೋದಿ ಅವರ ಬಗ್ಗೆ ಕೂಡ ನಮ್ಮ ಆಕ್ಷೇಪ ಇದೆ. ಗುಜರಾತ್ ನಲ್ಲಿ ವಿಕಾಸ- ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಆದರೆ ಕರ್ನಾಟಕಕ್ಕೆ ಬಂದರೆ ಆ ಮಾತೇ ಇಲ್ಲ. ನನ್ನ ಕನಸಿನ ಕರ್ನಾಟಕ ಎಂಬುದನ್ನು ಯುವ ಬ್ರಿಗೇಡ್ ಶುರು ಮಾಡಿದಾಗ ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.
ಎರಡು ತಿಂಗಳ ನಂತರ ಎಲ್ಲರೂ ಆ ವಿಚಾರ ಮಾತಾಡುತ್ತಿದ್ದಾರೆ. ನಾಲ್ಕೂವರೆ ವರ್ಷ ರಾಜ್ಯದಲ್ಲಿ ಆಡಳಿತ ನಡೆಸಿ, ಗಬ್ಬೆಬ್ಬಿಸಿದ ಒಬ್ಬ ಸಿದ್ದರಾಮಯ್ಯರನ್ನು ಹೊರತುಪಡಿಸಿ, ಇನ್ಯಾರೇ ಈ ವಿಚಾರ ತೆಗೆದುಕೊಂಡು ಮಾತನಾಡಿದರೂ ನಮ್ಮದೇನೂ ಆಕ್ಷೇಪ ಇಲ್ಲ. ಆದರೆ ಅಧಿಕಾರದಲ್ಲಿದ್ದೂ, ನಾಲ್ಕೂವರೆ ವರ್ಷ ಏನೂ ಮಾಡದೆ, ಈಗ ಕನಸಿನ ಬಗ್ಗೆ ಮಾತನಾಡಬಾರದು. ಕುಮಾರಸ್ವಾಮಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ. ಸಂತೋಷ. ಈಗ ಯಡಿಯೂರಪ್ಪನವರು ಅಭಿವೃದ್ಧಿ ವಿಚಾರ ಎತ್ತುತ್ತಿದ್ದಾರೆ. ಇದೇ ತಾನೆ ನಮ್ಮ ಉದ್ದೇಶ. ಇನ್ನು ನಾನು ಯಾವುದೇ ರಾಜಕೀಯ ಪಕ್ಷದ ಪರ ಖಂಡಿತಾ ಇಲ್ಲ.

ಪ್ರಶ್ನೆ: ನಿಮ್ಮ ಇತ್ತೀಚೆಗಿನ ಲೇಖನ ಬಂದ ನಂತರ ಬಹಳ ಮಂದಿ ಯುವ ಬ್ರಿಗೇಡ್ ಬಿಟ್ಟು ಹೋಗುತ್ತಿದ್ದಾರಂತಲ್ಲಾ?
ಚಕ್ರವರ್ತಿ ಸೂಲಿಬೆಲೆ: ಪ್ರತಿ ಸಲ ಸೈದ್ಧಾಂತಿಕ ಭಿನ್ನಾಭಿಪ್ರಾಯ ಬರುವುದು ಅದಾಗಲೇ ಸಂಘಟನೆ ಒಳಗಿರುವ ಹಳಬರಿಂದ. ಅದಕ್ಕೆ ಅನುಮೋದನೆ ಸಿಗುವುದು ಹೊಸಬರಿಂದ. ಇನ್ನು ನನ್ನ ವಿರೋಧ ಯಾವತ್ತಿಗೂ ದೇಶ ವಿರೋಧಿ ಆಲೋಚನೆಗಳಿಂದ. ಅಂಥ ಆಲೋಚನೆ ನಾನು ಬಹಳ ಮೆಚ್ಚುವ ಮೋದಿಯಂಥ ನಾಯಕರಿಂದ ಬಂದರೂ ವಿರೋಧ ಮಾಡೇ ಮಾಡುತ್ತೇವೆ. ಅಂಥ ಯಾವ ಬೆಳವಣಿಗೆಯೂ ಆಗಿಲ್ಲ.

ಪ್ರಶ್ನೆ: ಹಣ ಪಡೆದಿದ್ದೀರಿ, ನಿಮ್ಮ ನಿಷ್ಠೆ ಬದಲಾಗಿದೆ ಎಂಬೆಲ್ಲ ಆರೋಪಗಳು ನಿಮ್ಮ ಮೇಲೆ ಕೇಳಿಬರುತ್ತಿವೆಯಲ್ಲಾ?
ಚಕ್ರವರ್ತಿ ಸೂಲಿಬೆಲೆ: ಇಂಥ ಆರೋಪಗಳನ್ನು ಯಾರು, ಏಕೆ ಮಾಡುತ್ತಾರೆ ಎಂಬುದನ್ನು ಜನರು ಬಹಳ ಬೇಗ ನಿರ್ಧಾರ ಮಾಡುತ್ತಾರೆ. ನಾನು ಯಾವುದೋ ಒಂದು ನಿರ್ದಿಷ್ಟ ಪಕ್ಷದ ವಕ್ತಾರನಲ್ಲ ಎಂಬುದನ್ನು ಇಂಥ ಆರೋಪಗಳು ಪದೇ ಪದೇ ಸಾಬೀತುಪಡಿಸುತ್ತವೆ. ಈಗಿನ ಗಲಾಟೆಯಂಥದ್ದು ನನಗೆ ಹೊಸದಲ್ಲ.
ಸೋಷಿಯಲ್ ಮೀಡಿಯಾಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ನಿಷ್ಪಕ್ಷಪಾತವಾಗಿ, ನಿಸ್ವಾರ್ಥವಾಗಿ ಮತ್ತು ಪ್ರಾಮಾಣಿಕವಾಗಿ ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ. ಇನ್ನೊಂದು ಮಾತು ಗೊತ್ತಾ? ಇವೆಲ್ಲ ಆರೋಪ- ಆಕ್ಷೇಪದ ಮಧ್ಯೆಯೇ ನಮ್ಮ ಮೇಲೆ ವಿಶ್ವಾಸ ಹೆಚ್ಚಾಗುತ್ತದೆ.

ಪ್ರಶ್ನೆ: ನಿಮ್ಮ ಮೇಲಿನ ಆರೋಪಗಳು ಬೆಂಕಿಯಾದರೆ, ಅದು ಮತ್ತಷ್ಟು ಹರಡಲು ಸೋಷಿಯಲ್ ಮೀಡಿಯಾ ಬಿರುಗಾಳಿ ಆಗಿದೆಯಾ?
ಚಕ್ರವರ್ತಿ ಸೂಲಿಬೆಲೆ: ಮೊದಲನೆಯದಾಗಿ ಬೆಂಕಿಯೇ ಇಲ್ಲ. ಇನ್ನು ಬೀಸುತ್ತಿರುವುದು ನಮ್ಮ ಪಾಲಿಗೆ ತಂಗಾಳಿಯಂತೆ. ಇಂಥವುಗಳಿಂದ ಯುವ ಬ್ರಿಗೇಡ್ ಹಾಗೂ ನನ್ನ ಶಕ್ತಿ ಹೆಚ್ಚಾಗಿದೆ. ಫೇಸ್ ಬುಕ್ ನಲ್ಲಿ ಬೈದವರು ಯಾರೂ ಅಖಾಡಕ್ಕೆ ಇಳಿಯುವಂಥವರಲ್ಲ. ಮತ್ತು ಅವರ ಹತ್ತಿರದ ಊರುಗಳಲ್ಲಿ ನನ್ನ ಕಾರ್ಯಕ್ರಮಗಳಿದ್ದರೆ ಗಾಡಿಗಳು ಮಾಡಿಕೊಂಡು ಅಂಥವರೇ ಬರುತ್ತಾರೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!