Year Ender 2022 : ಭಾರತದ ಪ್ರಮುಖ 5 ದುರಂತಗಳು
2022ಕ್ಕೆ ವಿದಾಯ ಹೇಳುವ ಸಮಯ ಬಂದಿದೆ. ಈ ವರ್ಷ ಭಾರತದಲ್ಲಿ ಹಲವಾರು ದುರಂತಗಳು ನಡೆದಿವೆ. ನೂರಾರು ಜನರು ಮೃತಪಟ್ಟು, ಹಲವಾರು ಜನರು ಗಾಯಗೊಂಡಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ. ಹಲವಾರು ಗಣ್ಯರು ಈ ವರ್ಷ ನಮ್ಮನ್ನು ಅಗಲಿದ್ದಾರೆ.
ಮಳೆ, ಭೂ ಕುಸಿತ, ಹಳಿ ತಪ್ಪಿದ ರೈಲು, ಗುಜರಾತ್ ಸೇತುವೆ ದುರಂತ ಸೇರಿದಂತೆ ಹಲವಾರು ದುರಂತಗಳು ನಡೆದಿವೆ. ಇದರ ಜೊತೆಗೆ ಕೋವಿಡ್ ಸಹ ಈ ವರ್ಷವೂ ಹಲವರ ಸಾವಿಗೆ ಕಾರಣವಾಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕೋವಿಡ್ ಪ್ರಭಾವ ಈ ವರ್ಷ ಕಡಿಮೆಯಾಗಿದೆ.
ಡಿಸೆಂಬರ್ 14 ಮಾಹಿತಿಯಂತೆ ಅಮೆರಿಕ ಬಿಟ್ಟರೆ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿರುವ ದೇಶ ಭಾರತ. ಕೋವಿಡ್ ಸೋಂಕಿನ ವಿರುದ್ಧದ ಲಸಿಕೆ ನೀಡುವುದರಲ್ಲಿಯೂ ಭಾರತ ಮುಂದಿದೆ. ಎರಡು ಡೋಸ್ ಸಂಪೂರ್ಣ ಲಸಿಕೆ ಪಡೆದವರ ಸಂಖ್ಯೆ ದೇಶದಲ್ಲಿ ಅಧಿಕವಾಗಿದೆ.
ಕೋವಿಡ್ ಪರಿಸ್ಥಿತಿ ಸುಧಾರಣೆಯಾದ ಬಳಿಕ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಸಂಚಾರ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆ ಕಂಡು ಬರುತ್ತಿದೆ. ಅಂತರರಾಷ್ಟ್ರೀಯ ವಿಮಾನ ಸೇವೆಗಳು ಆರಂಭವಾಗಿದೆ. 2022ರಲ್ಲಿ ಭಾರತದಲ್ಲಿ ನಡೆದ ಪ್ರಮುಖ ದುರಂತಗಳ ಸಂಕ್ಷಿಪ್ತ ಮಾಹಿತಿ ಈ ವರದಿಯಲ್ಲಿದೆ...

ಮೊರ್ಬಿ ಸೇತುವೆ ದುರಂತ
ಗುಜರಾತ್ ರಾಜ್ಯದ ಮೊರ್ಬಿಯಲ್ಲಿ ನಡೆದ ಸೇತುವೆ ಕುಸಿತ ಈ ವರ್ಷದ ಪ್ರಮುಖ ದುರಂತದಲ್ಲಿ ಒಂದು. ಮೊರ್ಬಿಯಲ್ಲಿ ಮಚು ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಶತಮಾನದಷ್ಟು ಹಳೆಯದಾದ ತೂಗು ಸೇತುವೆ ಕುಸಿತಗೊಂಡಿತು. ಈ ಘಟನೆಯಲ್ಲಿ ಸುಮಾರು 135 ಜನರು ಸಾವನ್ನಪ್ಪಿದ್ದರು, 180 ಜನರು ಗಾಯಗೊಂಡರು. ಗುಜರಾತ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಡೆದ ಈ ದುರಂತ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಸಾಕ್ಷಿಯಾಯಿತು. ಸೇತುವೆಯನ್ನು ನವೀಕರಣಗೊಳಿಸಿ ಉದ್ಘಾಟನೆ ಮಾಡಿದ 5 ದಿನಗಳಲ್ಲಿಯೇ ಈ ದುರಂತ ನಡೆಯಿತು.

ಮಣಿಪುರದಲ್ಲಿ ಭೂ ಕುಸಿತ
ಮಣಿಪುರದಲ್ಲಿ ನಡೆದ ಭೂ ಕುಸಿತವೂ ಈ ವರ್ಷದ ಪ್ರಮುಖ ದುರಂತದಲ್ಲಿ ಒಂದು. ನೋನೆ ಜಿಲ್ಲೆಯ ಟುಫುಲ್ ಯಾರ್ಡ್‌ನ ರೈಲ್ವೆ ಕಾಮಗಾರಿ ಸ್ಥಳದಲ್ಲಿ ಸಂಭವಿಸಿದ ಭೂಕುಸಿತದಲ್ಲಿ 58 ಜನರು ಸಾವನ್ನಪ್ಪಿದರು, 3 ನಾಪತ್ತೆಯಾದರು. ಮೃತಪಟ್ಟವರಲ್ಲಿ ಯೋಧರು, ಸಾಮಾನ್ಯ ಜನರು ಸಹ ಸೇರಿದ್ದಾರೆ.

ಬಿಕನೇರ್ ರೈಲು ದುರಂತ, 9 ಸಾವು
ರೈಲು ನಂಬರ್ 15633 ಗುವಾಹಟಿ-ಬಿಕನೇರ್ ಎಕ್ಸ್‌ಪ್ರೆಸ್ ಪಶ್ಚಿಮ ಬಂಗಾಳದ ಜಲ್‌ಪೈಗುರಿ ಜಿಲ್ಲೆಯ ದೊಮೊಹಾನಿ ಬಳಿ ಹಳಿ ತಪ್ಪಿತು. ಘಟನೆಯಲ್ಲಿ 9 ಜನರು ಸಾವನ್ನಪ್ಪಿದರು, 50 ಮಂದಿ ಗಾಯಗೊಂಡರು. ಒಟ್ಟು 12 ಬೋಗಿಗಳು ಹಳಿ ತಪ್ಪಿದ್ದವು. 2019ರ ಬಳಿಕ ನಡೆದ ಮತ್ತು 2022ರಲ್ಲಿ ನಡೆದ ಮೊದಲ ರೈಲು ದುರಂತವಾಗಿದೆ.

ಜಾರ್ಖಂಡ್ ಕೇಬಲ್ ಕಾರ್ ದುರಂತ
ಜಾರ್ಖಂಡ್ ರಾಜ್ಯದ ದಿಯೋಘರ್ ಜಿಲ್ಲೆಯ ತ್ರಿಕುಟ್ ಬೆಟ್ಟಗಳ ನಡುವೆ ಕೇಬಲ್ ಕಾರ್‌ಗಳು ಡಿಕ್ಕಿಯಾದವು. ಮೂವರು ಈ ದುರಂತದಲ್ಲಿ ಸಾವನ್ನಪ್ಪಿದರು ಮತ್ತು ಹಲವಾರು ಜನರು ಗಾಯಗೊಂಡರು. ಬೆಟ್ಟಗಳ ನಡುವೆ ಕೇಬಲ್ ಕಾರ್‌ನಲ್ಲಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಲು ಸೇನಾಪಡೆ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ಆರಂಭಿಸಿತು. ಸುಮಾರು 2 ದಿನಗಳ ಕಾರ್ಯಾಚರಣೆ ಬಳಿಕ 36 ಜನರನ್ನು ರಕ್ಷಣೆ ಮಾಡಲಾಯಿತು.

ವೈಷ್ಣೋದೇವಿ ದೇವಾಲಯದ ಕಾಲ್ತುಳಿತ
2022ರ ಜನವರಿ 1ರಂದು ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿತು. ಗೇಟ್ ನಂಬರ್ 3ರಲ್ಲಿ ನಡೆದ ದುರಂತದಲ್ಲಿ 12 ಭಕ್ತಾದಿಗಳು ಸಾವನ್ನಪ್ಪಿದರು, 16 ಭಕ್ತರು ಗಾಯಗೊಂಡರು. ಕೋವಿಡ್ ಪರಿಸ್ಥಿತಿ ಬಳಿಕ ವೈಷ್ಣೋದೇವಿ ಯಾತ್ರೆ ಆರಂಭವಾದ ಬಳಿಕ ಅದರಲ್ಲೂ ಹೊಸ ವರ್ಷದ ಮೊದಲ ದಿನವೇ ನಡೆದ ದುರಂತ ಇದಾಗಿದೆ.












Click it and Unblock the Notifications