ವಿಶ್ವ ವನ್ಯಜೀವಿ ದಿನ: ಕಣ್ಮನಸೆಳೆವ ವನ್ಯಪ್ರಪಂಚದ 10 ಚಿತ್ರಗಳು
Recommended Video

ಎಲ್ಲೆಲ್ಲೂ ಹಸಿರು ತುಂಬಿ, ತುಳುಕುತ್ತಿರುವ ಕಾನನ, ಜುಳು ಜುಳು ಜಲಧಾರೆ, ತರಹೇವಾರಿ ಭಂಗಿಯಲ್ಲಿ ಓಡಾಡುತ್ತಿರುವ ಮೃಗಗಳು, ಮರದ ಮೇಲೆ ತಪ್ಪಸ್ಸು ಮಾಡುತ್ತಿರುವಂತೆ ಕೂತ ಗೂಬೆ, ಮರಿಗೆ ಗುಟುಕು ನೀಡುತ್ತಿರುವ ಹಕ್ಕಿ, ಮೈಮುರಿಯುತ್ತಿರುವ ಹುಲಿ, ಛಂಗನೆ ನೆಗೆಯುತ್ತಿರುವ ಜಿಂಕೆ... ಇದೇನು ಡಿಸ್ಕವರಿ ಚಾನೆಲ್ ನ ದೃಶ್ಯದ ವಿವರಣೆಯಲ್ಲ. ದಟ್ಟ ಕಾನನದಲ್ಲಿ ಪ್ರತಿ ದಿನವೂ ಕಂಡು ಬರುವ, ಕನ್ಣಿಗೆ ತಂಪು ನೀಡುವ ಅಮೋಘ ದೃಶ್ಯ.
ಇಂದು ವಿಶ್ವದಾದ್ಯಂತ 'ವಿಶ್ವ ವನ್ಯಜೀವಿ ದಿನ' ವನ್ನು ಆಚರಿಸಲಾಗುತ್ತಿದೆ. ಜೀವ ವೈವಿಧ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಮಾರ್ಚ್ 3 ಅನ್ನು ವಿಶ್ವ ವನುಜೀವಿ ದಿನವನ್ನಾಗಿ ಆಚರಿಸಲಯ ಥೈಲಾಂಡ್ ದೇಶ 2013 ರಲ್ಲಿ ಕರೆ ನೀಡಿತು. ಇದಕ್ಕೆ ವಿಶ್ವ ಸಂಸ್ಥೆಯ ಸಾಮಾನ್ಯ ಸಂಬೆಯಲ್ಲಿ ಒಮ್ಮತದಿಂದ ಸಮ್ಮತಿ ಸೂಚಿಸಲಾಗಿತ್ತು.
ತನ್ನಿಮಿತ್ತ ಪ್ರತಿ ವರ್ಷ ಒಂದೊಂದು ಧ್ಯೇಯವಾಕ್ಯವನ್ನಿಟ್ಟುಕೊಂಡು ವನ್ಯಜೀವಿ ದಿನ ಆಚರಿಸಲಾಗುತ್ತಿದೆ. Big cats: predators under threat ಎಂಬುದು ಈ ವರ್ಷದ ಧ್ಯೇಯ ವಾಕ್ಯ.
ವನ್ಯಜೀವಿ ದಿನದ ಹಿನ್ನೆಲೆಯಲ್ಲಿ ವನ್ಯಪ್ರಪಂಚದ ಅಮೋಘ ಸೌಂದರ್ಯದ ಪ್ರತೀಕವೆನ್ನಿಸಿದ 10 ಸುಂದರ ಚಿತ್ರಗಳು ನಿಮಗಾಗಿ ಇಲ್ಲಿವೆ....

ಪೋಸ್ ಕೊಡೋಕೆ ನಂಗೂ ಬರತ್ತೆ..!
ಕೋಲ್ಕತ್ತದ ಅಲಿಪೋರ್ ವನ್ಯಧಾಮದಲ್ಲಿ ಕಂಡ ಬಿಳಿ ಹುಲಿ ಇದು! ಏನ್ ನಿಮ್ಗೆ ಮಾತ್ರಾನಾ ಫೋಟೋಕ್ಕೆ ಪೋಸ್ ಕೊಡೋಕ್ ಬರೋದು, ನಂಗೂ ಬರತ್ತೆ ನೋಡಿ ಎಂದು ನಾಲಿಗೆ ಹೊರಚಾಚುತ್ತಿರುವ ಈ ವ್ಯಾಘ್ರನ ಚಿತ್ರ ಕ್ಲಿಕ್ಕಿಸಿದ್ದು ಅಶೋಕ್ ಭೌಮಿಕ್!

ಅಮ್ಮ ಎಲ್ಲಿ? ಇನ್ನೂ ಬಂದಿಲ್ಲ!
ಜರ್ಮನಿಯ ನ್ಯೂವೀಯ್ಡ್ ಎಂಬಲ್ಲಿ ಗಂಡು ಸಿಂಹವೊಂದು ಮರಿ ಸಿಂಹದೊಂದಿಗೆ ಕುಳಿತ ದೃಶ್ಯ. ತಾಯಿ ಸಿಂಹಕ್ಕಾಗಿ ಮರಿ ಕಾದು ಕುಳಿತಂತೆ ಕಾಣುವ ಈ ಸುಂದರ ದೃಶ್ಯವನ್ನು ಕ್ಲಿಕ್ಕಿಸಿದ ಛಾಯಾಗ್ರಾಹಕರಿಗೊಂದು ಸಲಾಮು!

ಜೋ ಜೋ ಜೋಕಾಲಿ...
ಕೋಲ್ಕತ್ತಾದ ಅಲಿಪೋರ್ ವನ್ಯಧಾಮದಲ್ಲಿ ಚಿಂಪಾಂಜಿಯೊಂದು ಉಯ್ಯಾಲೆಯಾಡುತ್ತ ಮೋಜು ಮಾಡಿದ್ದು ಹೀಗೆ!

ಅಮ್ಮಾ ನಿನ್ನ ತೋಳಿನಲ್ಲಿ...
ದೆಹಲಿಯ ವನ್ಯಧಾಮವೊಂದರಲ್ಲಿ ಆಗಷ್ಟೇ ಜನಿಸಿದ ಮರಿಗೆ ಹಾಲು ನೀಡುತ್ತಿರುವ ತಾಯಿ ಜಿಂಕೆ. ತಾಯಿ ಪ್ರೀತಿಯ ಅಗಾಧತೆಯ ಪ್ರತೀಕವೆನ್ನಿಸಿದ ಈ ಚಿತ್ರವನ್ನು ಕ್ಲಿಕ್ಕಿಸಿದ್ದು ಅತುಲ್ ಯಾದವ್.

ನೀ ನನಗೆ ನಾ ನಿನಗೆ...!
ಕೋಲ್ಕತ್ತಾದ ವನ್ಯಧಾಮವೊಂದರಲ್ಲಿ ಕಂಡ ಈ ಎರಡು ಗಿಳಿಗಳು ನೀ ನನಗೆ ನಾ ನಿನಗೆ ಎಂದು ಹಾಡುತ್ತಿವೆ. ಕುಂಚದಿಂದ ಬಣ್ಣ ಬಳಿದಂತೆ ಕಾಣುವ ಈ ಸುಂದರ ಗಿಳಿಗಳು ಸೃಷ್ಟಿ ವಿಸ್ಮಯದ ಪ್ರತೀಕವೆನ್ನಿಸಿವೆ.

ನಮ್ಮ ಸಂಸಾರ ಆನಂದ ಸಾಗರ!
ದೆಹಲಿಯ ಪಾರ್ಲಿಮೆಂಟ್ ಲೈಬ್ರೆರಿ ಕಟ್ಟಡದ ಬಳಿ ಕಂಡ ನವಿಲಿನ ಸಂಸಾರದ ದೃಶ್ಯ. ಗರಿಬಿಚ್ಚಿ ನಿಂತ ಗಂಡು ನವಿಲಿನೆದುರು ಹೆಣ್ಣು ನವಿಲು ಮತ್ತು ಮರಿಗಳು ಪೋಸು ನೀಡುತ್ತಿವೆ.

ಬಂಗಾಳದ ಹುಲಿ!
ವಿಶ್ವದಲ್ಲೇ ಅತ್ಯಂತ ಪ್ರಸಿದ್ಧಿ ಪಡೆದ, ಶಕ್ತಿಯುತ ಬಂಗಾಳಿ ಹುಲಿಯೊಂದು ಕೋಲ್ಕತ್ತಾದ ಅಲಿಪೋರ್ ವನ್ಯಧಾಮದಲ್ಲಿ ಬಿಸಿಲಿಗೆ ಮೈಯೊಡ್ಡಿ ಕುಳಿತಿದೆ. ಈ ದೃಶ್ಯವನ್ನು ಆಶ್ಚರ್ಯಚಕಿತರಾಗಿ ಕಣ್ತುಂಬಿಸಿಕೊಳ್ಳುತ್ತಿರುವ ದೃಶ್ಯ.

ಅಮ್ಮಾ ಎಂದರೆ ಏನೋ ಹರುಷವು...
ಜರ್ಮನಿಯ ಲಿಪ್ಜಿಗ್ ನಲ್ಲಿ ಆಗಷ್ಟೇ ಹುಟ್ಟಿದ ಮರಿಯನ್ನು ಗೋರಿಲ್ಲಾವೊಂದು ಮುದ್ದಿಸುತ್ತಿರುವ ಈ ಅಮೋಘ ದೃಶ್ಯ, ವನ್ಯಜೀವಿಗಳಲ್ಲೂ ಇರುವ ಮಾನವೀಯ ಅಂತಃಕರಣವನ್ನು ಪ್ರತಿನಿಧಿಸುತ್ತದೆ.

ಟೆಡ್ಡಿ ಬೇರ್ ಬೇಕಾ?!
ಚೀನಾದ ವನ್ಯಧಾಮವೊಂದರಲ್ಲಿ ಪಾಂಡಾವೊಂದು ತನ್ನ ಮರಿಗಳೊಂದಿಗೆ ಆಟವಾಡುತ್ತಿರುವ ಕ್ಯೂಟ್ ಕ್ಯೂತ್ ದೃಶ್ಯ!

ಆನೆ ನಡೆದಿದ್ದೇ ದಾರಿ..!
ಚೆನ್ನೈನ ವಂದಲೂರ್ ಬಳಿಯ ಅರಿಗ್ನರ್ ಅಣ್ಣಾ ವನ್ಯಧಾಮದಲ್ಲಿ ಒಂಟಿ ಸಲಗವೊಂದು ಮರದ ಚಿಕ್ಕ ಟೋಕೆಯನ್ನು ಕೀಳುತ್ತಿರುವ ದೃಶ್ಯ.












Click it and Unblock the Notifications