World Sight Day 2023; ಕಣ್ಣಿನ ಕಾಳಜಿಗೆ ಸಲಹೆಗಳು
ಅಕ್ಟೋಬರ್ 12 ಅನ್ನು 'ವಿಶ್ವ ದೃಷ್ಟಿ ದಿನ'ವಾಗಿ ಆಚರಣೆ ಮಾಡಲಾಗುತ್ತದೆ. ಕಣ್ಣುಗಳ ಸುರಕ್ಷತೆಗೆ ಪ್ರತಿಯೊಬ್ಬರೂ ಆದ್ಯತೆ ನೀಡುವಂತೆ ಅರಿವು ಮೂಡಿಸುವುದು ವಿಶ್ವ ದೃಷ್ಟಿ ದಿನದ ಪ್ರಮುಖ ಗುರಿಯಾಗಿದೆ.
ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೈ. ರಮೇಶ್ ಬಾಬು ಅವರು ದೇವರು ಮನುಷ್ಯನಿಗೆ ನೀಡಿದ ಅದ್ಭುತ ಕೊಡುಗೆಗಳಲ್ಲಿ ಕಣ್ಣು ಸಹ ಒಂದಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯು ಕಣ್ಣಿನ ಆರೈಕೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದ್ದಾರೆ. 'ವಿಶ್ವ ದೃಷ್ಟಿ ದಿನ 2023' ಅಂಗವಾಗಿ ವಿಶೇಷ ಲೇಖನ ಇಲ್ಲಿದೆ.

ಜಾಗತಿಕವಾಗಿ ಕುರುಡುತನ ಮತ್ತು ದೃಷ್ಟಿ ಹೀನತೆಯ ಬಗ್ಗೆ ಜನ ಜಾಗೃತಿ ರೂಪಿಸಲು 2000ರ ಅಕ್ಟೋಬರ್ 12ರಿಂದ ಪ್ರತಿ ವರ್ಷ ವಿಶ್ವ ದೃಷ್ಟಿ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸಾಮಾನ್ಯವಾಗಿ ಕುರುಡುತನದ ಸಮಸ್ಯೆಗಳನ್ನು ತಡೆಗಟ್ಟಬಹುದಾದರೂ, ಹೆಚ್ಚಿನ ಸಂದರ್ಭಗಳಲ್ಲಿ ಸರಿಯಾದ ಚಿಕಿತ್ಸೆ ಪಡೆಯದ ಕಾರಣ, ಕ್ರಮೇಣ ದೃಷ್ಟಿ ಹೀನತೆಗೆ ಕಾರಣವಾಗುತ್ತವೆ.
ಸಾರ್ವಜನಿಕರು ಈ ದಿಶೆಯಲ್ಲಿ ಪೌಷ್ಟಿಕಕಾಂಶವುಳ್ಳ ಆಹಾರವನ್ನು ಸೇವಿಸಬೇಕು, ಊಟದಲ್ಲಿ ಹಸಿರು ತರಕಾರಿಗಳು, ಹಳದಿ ಮತ್ತು ಕೆಂಪು ಹಣ್ಣುಗಳು ಹಾಗೂ ಸ್ಥಳೀಯವಾಗಿ ಸಾಮಾನ್ಯವಾಗಿ ದಿನನಿತ್ಯ ಸಿಗುವ ತರಕಾರಿ ಮತ್ತು ಕಾಯಿಪಲ್ಲೆಗಳನ್ನು ದೈನಂದಿನ ಆಹಾರದಲ್ಲಿ ಸೇವಿಸುವುದಕ್ಕೆ ಮಹತ್ವ ನೀಡಬೇಕು.
ಕಣ್ಣಿನ ಸೋಂಕು ವಿಟಮಿನ್ 'ಎ' ಅನ್ನಾಂಗದ ಕೊರತೆ, ಅಪೌಷ್ಠಿಕತೆ, ಕಣ್ಣಿನ ಅಕ್ಷಿಪಟಿಲದ ಗಾಯ, ಅನುವಂಶಿಕ ನ್ಯೂನತೆ ಮುಂತಾದವುಗಳು ಕಣ್ಣಿನ ದೃಷ್ಟಿ ಹಾನಿಯಾಗಲು ಕಾರಣವಿರುತ್ತದೆ. ಕಣ್ಣಿಗೆ ಸಂಬಂಧಿಸಿದಂತೆ ಯಾವುದೇ ಸೋಂಕು ಕಂಡುಬಂದರೆ ನಿಗದಿತವಲ್ಲದ ಔಷಧಿಗಳನ್ನು ಹಾಕಬಾರದು, ಬದಲಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು.
ಡಯಾಬಿಟಿಕ್ ರೆಟಿನೋಪತಿ ಮತ್ತು ಸದ್ದಿಲ್ಲದೇ ಕಣ್ಣಿನ ದೃಷ್ಟಿಯನ್ನು ಹಾನಿ ಮಾಡುವ ಗ್ಲಾಕೋಮದಂತಹ ರೋಗಗಳನ್ನು ನಿಯಮಿತವಾಗಿ ಪರೀಕ್ಷಿಸುವ ಮೂಲಕ ದೃಷ್ಟಿಯನ್ನು ಸಂರಕ್ಷಿಸುವುದು. ಸಾರ್ವಜನಿಕರು ವಕ್ರಕಾರಕ ದೋಷಗಳು ಅಂದರೆ ದೃಷ್ಟಿ ದೋಷವುಳ್ಳವರು ನಿರ್ಲಕ್ಷ್ಯವಹಿಸದೇ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ನೇತ್ರ ತಜ್ಞರ ಅಭಿಪ್ರಾಯದಂತೆ ಕನ್ನಡಕಗಳನ್ನು ಹಾಕಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕು. ಕಣ್ಣಿನ ಪೊರೆ ಕಂಡುಬಂದರೆ ಸಕಾಲದಲ್ಲಿ ವೈದ್ಯರಿಂದ ಪರೀಕ್ಷೆ ಮಾಡಿಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು.
ಮೊಬೈಲ್, ಕಂಪ್ಯೂಟರ್ ಬಳಕೆ; ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಮತ್ತು ಕಂಪ್ಯೂಟರ್ ಬಳಕೆ ದೈನಂದಿನ ಜೀವನದ ಚಟುವಟಿಕೆಗಳಾಗಿವೆ. ಅದರಲ್ಲೂ ಪೋಷಕರು ಮಕ್ಕಳಿಗೆ ಮೊಬೈಲ್ ಕೊಡುವುದನ್ನು ಆದಷ್ಟು ನಿಯಂತ್ರಿಸಿ ಮತ್ತು ಮೊಬೈಲ್‍ಗಳ ಪ್ರಕರತೆ (ಸ್ಕ್ರೀನ್ ಬೆಳಕು) ತುಂಬಾ ಕಡಿಮೆ ಇರುವಂತೆ ಕ್ರಮವಹಿಸಬೇಕು.
ಕಂಪ್ಯೂಟರ್ ಮುಂದೆ ಕಾರ್ಯನಿರ್ವಹಿಸುವಾಗ ಪ್ರತಿ 20 ನಿಮಿಷಕ್ಕೊಮ್ಮೆ ಕಂಪ್ಯೂಟರ್ ಪರದೆಯಿಂದ ಕನಿಷ್ಟ 20 ಸೆಕೆಂಡ್ ಕಾಲ ಬೇರೆಡೆಗೆ ದೃಷ್ಟಿ ಹರಿಸುವುದು ಉತ್ತಮ. ಕಣ್ಣುಗಳನ್ನು ಮುಟ್ಟುವ ಮುನ್ನ ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು.
ಹಬ್ಬಗಳ ಸಮಯದಲ್ಲಿ ಹಾಗೂ ಮನೆಯ ವಿಶೇಷ ಕಾರ್ಯಕ್ರಮಗಳಲ್ಲಿ ಪಟಾಕಿಗಳನ್ನು ಬಳಸದಂತೆ, ಅದರಲ್ಲೂ ಪ್ರಬಲವಾದ ಪಟಾಕಿಗಳನ್ನು ಮಕ್ಕಳಿಗೆ ಕೊಡದಂತೆ ಜಾಗ್ರತೆ ವಹಿಸಬೇಕು.
ಪಟಾಕಿಗಳನ್ನು ಹಾರಿಸುವಾಗ ಪ್ಲಾಸ್ಟಿಕ್ ಡಬ್ಬಿಗಳು, ತಗಡಿನ ಟಿನ್‍ಗಳು ಮುಂತಾದವುಗಳನ್ನು ಪಟಾಕಿಗಳ ಮೇಲೆ ಮುಚ್ಚಿ ಹಾರಿಸದಿರುವಂತೆ ಪಾಲಕರು ನಿಗಾವಹಿಸಬೇಕು. ಪಟಾಕಿ ಸಿಡಿತದ ಗಾಯಗಳಿಂದ ದೃಷ್ಟಿ ಕಳೆದುಕೊಳ್ಳುವುದನ್ನು ತಡೆಯಬೇಕು ಎಂದು ಡಾ. ವೈ. ರಮೇಶ್‍ಬಾಬು ಸಲಹೆ ನೀಡಿದ್ದಾರೆ.












Click it and Unblock the Notifications