'ನಾನೇ CEO' ಎಂದು ದರ್ಪ ತೋರಿದ ಬಾಸ್‌ಗೆ ಕೋರ್ಟ್ ಶಾಕ್; ಮಹಿಳಾ ಉದ್ಯೋಗಿಗೆ ₹2.7 ಲಕ್ಷ ಪರಿಹಾರ!
ಕಚೇರಿಯಲ್ಲಿ ಮೇಲಧಿಕಾರಿಗಳ ದರ್ಪ, ಉದ್ಯೋಗಿಗಳ ಮೇಲಿನ ದೌರ್ಜನ್ಯ ಹಾಗೂ ಕೆಲಸದ ಸ್ಥಳದಲ್ಲಿ ನಡೆಯುವ ಕಿರುಕುಳದ ಘಟನೆಗಳು ಆಗಾಗ್ಗೆ ಬೆಳಕಿಗೆ ಬರುತ್ತವೆ. ಇಂತಹದ್ದೇ ಪ್ರಕರಣವೊಂದು ಬ್ರಿಟನ್‌ನಲ್ಲಿ ನಡೆದಿದ್ದು, ತನ್ನ ಬಾಸ್‌ನ ವರ್ತನೆಯನ್ನು ಪ್ರಶ್ನಿಸಿದ ಮಹಿಳಾ ಉದ್ಯೋಗಿಯನ್ನೇ ಕೆಲಸದಿಂದ ವಜಾಗೊಳಿಸಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ಉದ್ಯೋಗದಾತ ಸಂಸ್ಥೆಗೆ ನ್ಯಾಯಾಲಯ ದಂಡ ವಿಧಿಸಿದೆ.
ಬ್ರಿಟನ್‌ನ ಮರ್ಸಿಸೈಡ್‌ನ ವಿರಾಲ್‌ನಲ್ಲಿರುವ 'ದಿ ಕಾರ್ರಿಡ್ಜ್ ಸೆಂಟರ್' (The Carrbridge Centre) ಎಂಬ ಚಾರಿಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಜೂಲಿ ಮೇಯ್ಸ್ ಎಂಬ ಮಹಿಳೆಗೆ ಅನ್ಯಾಯವಾಗಿ ಕೆಲಸದಿಂದ ವಜಾಗೊಳಿಸಿದ್ದಕ್ಕಾಗಿ £2,160.81 (ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು ₹2.7 ಲಕ್ಷ) ಪರಿಹಾರ ನೀಡುವಂತೆ ಉದ್ಯೋಗ ನ್ಯಾಯಮಂಡಳಿ ಆದೇಶಿಸಿದೆ.

'ದಿ ಇಂಡಿಪೆಂಡೆಂಟ್' ವರದಿಯ ಪ್ರಕಾರ, ಸಂಸ್ಥೆಯ ಸಿಇಒ ಮ್ಯಾಥ್ಯೂ ಗಿಬ್ಸ್ ಅವರ ವರ್ತನೆಯ ಬಗ್ಗೆ ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಸಿಇಒ, ಮಹಿಳೆಯ ಮುಖಕ್ಕೆ ಕೂಗುತ್ತಾ, 'ನಾನೇ ಸಿಇಒ' (I am the CEO) ಎಂದು ಪದೇಪದೆ ಹೇಳಿದ್ದರು ಎನ್ನಲಾಗಿದೆ.
ಸಿಇಒ ವಿರುದ್ಧ ಗಂಭೀರ ಆರೋಪ
ಜೂಲಿ ಮೇಯ್ಸ್ ಅವರು 2022ರ ಜನವರಿ 4ರಂದು ಸಂಸ್ಥೆಯಲ್ಲಿ ಸಮುದಾಯ ಬೆಂಬಲ ಕಾರ್ಯಕರ್ತೆಯಾಗಿ ಕೆಲಸಕ್ಕೆ ಸೇರಿದ್ದರು. ದುರ್ಬಲ ಕುಟುಂಬಗಳು, ಮಕ್ಕಳು ಹಾಗೂ ವೃದ್ಧರಿಗೆ ಸಮುದಾಯ ಬೆಂಬಲ, ತುರ್ತು ಆಹಾರ ನೆರವು ಮತ್ತು ಅಗತ್ಯ ಸೇವೆಗಳಿಗೆ ಸಂಪರ್ಕ ಕಲ್ಪಿಸುವ ಕೆಲಸ ಮಾಡುತ್ತಿದ್ದರು.
ಆದರೆ, ಸಂಸ್ಥೆಯ ಸಿಇಒ ಮ್ಯಾಥ್ಯೂ ಗಿಬ್ಸ್ ಅವರ ವರ್ತನೆಯಿಂದಾಗಿ ಉದ್ಯೋಗಿಗಳಿಗೆ ತೊಂದರೆಯಾಗುತ್ತಿತ್ತು ಎಂದು ಮೇಯ್ಸ್ ಆರೋಪಿಸಿದ್ದರು. ಅವರು ಆಗಾಗ್ಗೆ ಉದ್ಯೋಗಿಗಳ ಮೇಲೆ ಕೂಗುವುದು, ಅಸಭ್ಯ ಪದಗಳನ್ನು ಬಳಸುವುದು, ಪೆಟ್ಟಿಗೆಗಳನ್ನು ಎಸೆಯುವುದು ಮತ್ತು ಸ್ವಯಂಸೇವಕರೊಂದಿಗೆ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದರು ಎಂದು ನ್ಯಾಯಮಂಡಳಿಗೆ ತಿಳಿಸಿದ್ದರು.
'ನಾನೇ ಸಿಇಒ' ಎಂದು ಮುಖಕ್ಕೆ ಕೂಗಿದ್ದ ಬಾಸ್!
2024ರ ಜುಲೈ 18ರಂದು ಮೇಯ್ಸ್ ಅವರು ಸಂಸ್ಥೆಯ ಇಬ್ಬರು ಟ್ರಸ್ಟಿಗಳ ಸಭೆಯಲ್ಲಿ ಸಿಇಒ ವರ್ತನೆಯ ಬಗ್ಗೆ ದೂರು ನೀಡಿದ್ದರು. ಈ ರೀತಿಯ ವರ್ತನೆಯಿಂದ ಹಿಂದೆ ದೌರ್ಜನ್ಯ ಅನುಭವಿಸಿರುವ ಸ್ವಯಂಸೇವಕರು ಹಾಗೂ ಸೇವೆ ಪಡೆಯುವವರಲ್ಲಿ ಮಾನಸಿಕ ಆಘಾತ ಉಂಟಾಗಬಹುದು ಎಂದು ಎಚ್ಚರಿಸಿದ್ದರು.
ಇದಾದ ಬಳಿಕ ಆಗಸ್ಟ್ 21ರಂದು ಮತ್ತೊಂದು ಘಟನೆ ನಡೆದಿದೆ. ಸಂಸ್ಥೆಯ ಕೇಂದ್ರದ ಪ್ರವೇಶ ದ್ವಾರದಲ್ಲಿ ಕ್ರೇಟ್‌ಗಳನ್ನು ಇಟ್ಟಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸೇವೆ ಪಡೆಯುವ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಈ ವಿಚಾರವಾಗಿ ಸಿಇಒ ಸ್ವಯಂಸೇವಕರ ಮೇಲೆ ಕೋಪಗೊಂಡು ನಿಂದಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಮಧ್ಯಪ್ರವೇಶಿಸಲು ಮುಂದಾದ ಮೇಯ್ಸ್ ಅವರ ಮೇಲೆಯೂ ಗಿಬ್ಸ್ ಕಿರುಚಾಡಿದ್ದಾರೆ. 'ನಾನೇ ಸಿಇಒ' ಎಂದು ಪದೇಪದೆ ಅವರ ಮುಖಕ್ಕೆ ಕೂಗಿದ್ದಾರೆ ಎಂದು ನ್ಯಾಯಮಂಡಳಿಯಲ್ಲಿ ತಿಳಿಸಲಾಗಿದೆ. ಈ ಘಟನೆಯಿಂದ ತೀವ್ರವಾಗಿ ನೊಂದಿದ್ದ ಮೇಯ್ಸ್, ಕೇಂದ್ರದಿಂದ ಹೊರಬಂದು ಕಾರಿನಲ್ಲಿ ಕುಳಿತು ಅತ್ತಿದ್ದರು. ನಂತರ ಅವರನ್ನು ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿತ್ತು.
ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿದ್ದೇಕೆ?
2024ರ ಸೆಪ್ಟೆಂಬರ್ 4ರಂದು ಸಂಸ್ಥೆಯ ಟ್ರಸ್ಟಿಗಳಿಗೆ ಅನಾಮಧೇಯ ದೂರುವೊಂದು ಬಂದಿತ್ತು. ಸಮುದಾಯ ಸಭೆಯೊಂದರಲ್ಲಿ ಮೇಯ್ಸ್ ಅವರು ಸಿಇಒ ವಿರುದ್ಧ ದೂರು ನೀಡಿದ್ದಾರೆ ಎಂಬ ಆರೋಪ ಅದರಲ್ಲಿ ಇತ್ತು. ಇದರಿಂದ ಮೇಯ್ಸ್ ಅವರು ಸಿಇಒ ಅವರನ್ನು ಹುದ್ದೆಯಿಂದ ಕೆಳಗಿಳಿಸುವ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ ಎಂದು ಟ್ರಸ್ಟಿಗಳು ಶಂಕಿಸಿದ್ದರು.
ಸೆಪ್ಟೆಂಬರ್ 12ರಂದು ನಡೆದ ವಿಚಾರಣಾ ಸಭೆಯಲ್ಲಿ ಮೇಯ್ಸ್ ಅವರು ಸಿಇಒ ಅವರ ಆಕ್ರಮಣಕಾರಿ ವರ್ತನೆ ಹಾಗೂ ಸಾರ್ವಜನಿಕರ ಎದುರು ನಡೆಸಿದ್ದ ಅನುಚಿತ ವರ್ತನೆಯ ಬಗ್ಗೆ ಮತ್ತೆ ಪ್ರಸ್ತಾಪಿಸಿದ್ದರು. ಆದರೆ, ಸಮುದಾಯ ಸಭೆಯಲ್ಲಿ ಅವರು ಏನು ಮಾತನಾಡಿದ್ದರು ಎಂಬುದರ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡದೆ ಟ್ರಸ್ಟಿಗಳು ಪ್ರಶ್ನಿಸಿದ್ದರು.
ನಂತರ ಸಂಸ್ಥೆಯ ಆಡಳಿತ ಮಂಡಳಿ ವಿರುದ್ಧ ಗುಂಪು ರಚಿಸಿ ಸಿಇಒ ಅವರನ್ನು ತೆಗೆದುಹಾಕಲು ಪ್ರಯತ್ನಿಸಿದ್ದಾರೆ ಎಂಬ ಆರೋಪದಡಿ, 2024ರ ಸೆಪ್ಟೆಂಬರ್ 30ರಂದು ಮೇಯ್ಸ್ ಅವರನ್ನು ಗಂಭೀರ ದುರ್ವರ್ತನೆಯ (Gross Misconduct) ಕಾರಣ ನೀಡಿ ಕೆಲಸದಿಂದ ವಜಾಗೊಳಿಸಲಾಯಿತು. ಅವರು ಮೇಲ್ಮನವಿ ಸಲ್ಲಿಸಿದರೂ ನಿರ್ಧಾರ ಬದಲಾಗಲಿಲ್ಲ.
ನ್ಯಾಯಮಂಡಳಿ ಹೇಳಿದ್ದೇನು?
ಈ ಪ್ರಕರಣದ ವಿಚಾರಣೆ ನಡೆಸಿದ ಲಿವರ್‌ಪೂಲ್ ಉದ್ಯೋಗ ನ್ಯಾಯಮಂಡಳಿಯ ನ್ಯಾಯಾಧೀಶ ಅಲನ್ ಜಾನ್ಸನ್ ಅವರು, ಮೇಯ್ಸ್ ಅವರನ್ನು ಕೆಲಸದಿಂದ ವಜಾಗೊಳಿಸಿರುವುದು ಅನ್ಯಾಯ ಎಂದು ತೀರ್ಪು ನೀಡಿದರು.
ಸಂಸ್ಥೆಯು ತನಿಖೆಯ ವೇಳೆ ಸಂಗ್ರಹಿಸಿದ ಸಾಕ್ಷ್ಯಗಳನ್ನು ಸಮರ್ಪಕವಾಗಿ ಪರಿಶೀಲಿಸಿಲ್ಲ. ಅನಾಮಧೇಯ ವ್ಯಕ್ತಿಯೊಬ್ಬರು ನೀಡಿದ ಆರೋಪಗಳನ್ನೇ ಟ್ರಸ್ಟಿಗಳು ಹೆಚ್ಚಾಗಿ ಅವಲಂಬಿಸಿದ್ದರು. ಸಮುದಾಯ ಸಭೆಯಲ್ಲಿ ಮೇಯ್ಸ್ ನಿಜವಾಗಿಯೂ ಏನು ಹೇಳಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನ ಮಾಡಿರಲಿಲ್ಲ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿತು.
ಆದರೆ, ಉದ್ಯೋಗಿಯು ಸಂರಕ್ಷಿತ ಬಹಿರಂಗಪಡಿಸುವಿಕೆ (Protected Disclosure) ಮಾಡಿದ್ದಕ್ಕಾಗಿ ವಜಾಗೊಳಿಸಲಾಗಿದೆ ಎಂಬ ಅವರ ಮತ್ತೊಂದು ಆರೋಪವನ್ನು ನ್ಯಾಯಮಂಡಳಿ ಎತ್ತಿಹಿಡಿಯಲಿಲ್ಲ. ಅಂತಿಮವಾಗಿ ಅನ್ಯಾಯದ ವಜಾಗೊಳಿಸುವಿಕೆಗೆ ಸಂಬಂಧಿಸಿದಂತೆ ಜೂಲಿ ಮೇಯ್ಸ್ ಅವರಿಗೆ £2,160.81, ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು ₹2.7 ಲಕ್ಷ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.


Click it and Unblock the Notifications
