• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಂವೀಯವರ ಸಾಮಾಜಿಕ ಕಾಳಜಿ ಕೇವಲ ಭಾಷಣಕ್ಕೆ ಸೀಮಿತವೇ?

By ಪಿಎಸ್ ರಂಗನಾಥ್, ಮಸ್ಕತ್
|

ಕುಂವೀ ಎಂದೇ ಖ್ಯಾತರಾಗಿರುವ ಕುಂಬಾರ ವೀರಭದ್ರಪ್ಪ ಅವರು ಕನ್ನಡದ ಹೆಸರಾಂತ ಸಾಹಿತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿ ಪುರಸ್ಕಾರ ಪಡೆದ ಮಹನೀಯರು. ಇವರ ಹಲವು ಕಥೆ ಕಾದಂಬರಿಗಳು ಸಿನಿಮಾಗಳಾಗಿ ಬಂದಿರುವುದು ಎಲ್ಲರಿಗೂ ತಿಳಿದ ವಿಷಯ.

ಇವರು ಶಿಕ್ಷಕ ವೃತ್ತಿಯಲ್ಲಿದ್ದು ಈ ಸಾಧನೆ ಮಾಡಿರುವುದು ಗಮನಾರ್ಹ. ಎಷ್ಟೊಂದು ಜನ, ತಾವಾಯಿತು ತಮ್ಮ ಕೆಲಸವಾಯಿತು ಅಂತ ತಮ್ಮ ಸೇವೆಯಲ್ಲಿ ಮಗ್ನರಾಗಿ ನಿವೃತ್ತಿ ಹೊಂದಿದ್ದಾರೆ. ಆದರೆ ಇವರು ಹಾಗಲ್ಲ. ಒಂದಿಲ್ಲೊಂದು ಸಾಹಿತ್ಯ ಕೃಷಿಯಲ್ಲಿ ತೊಡಗಿ ಹೊಸ ಹೊಸ ಕೃತಿಗಳನ್ನು ಹೊರತಂದಿದ್ದಾರೆ.

ಹಿಂದಿ ಹೇರಿಕೆ ವಿರೋಧಿಸಿ ಟ್ವಿಟ್ಟರ್ ನಲ್ಲಿ ಭಾರಿ ಅಭಿಯಾನ

ಅಂದಹಾಗೆ, ಇವರು ಸೇವೆ ಸಲ್ಲಿಸಿದ್ದು ಕರ್ನಾಟಕದಲ್ಲಲ್ಲ. ಬದಲಿಗೆ ಪಕ್ಕದ ಆಂಧ್ರದ ಗಡಿನಾಡಿನ ರಾಯಲಸೀಮ ಪ್ರಾಂತ್ಯದ ಕನ್ನಡ ಶಾಲೆಗಳಲ್ಲಿ. ಇವರು ತಮ್ಮ ವೃತ್ತಿ ಅನುಭವದಲ್ಲಿ ಸೇವೆ ಸಲ್ಲಿಸಿದ ಗಡಿನಾಡಿನ ಆಂಧ್ರದ ಹಳ್ಳಿಗಳಲ್ಲಿ ತಾವು ಕಂಡ ಅನುಭವಗಳನ್ನ ರೋಚಕವಾಗಿ ವರ್ಣಿಸಿ ಹಲವಾರು ಕಥೆ ಕಾದಂಬರಿಗಳನ್ನ ರಚಿಸಿದ್ದಾರೆ.

ಕುಂ. ವೀರಭದ್ರಪ್ಪ ಹೊಸ ಕಾದಂಬರಿ 'ಕತ್ತೆಗೊಂದು ಕಾಲ'

ಆದರೆ, ಈ ಅನುಭವ ಅವರ ಕಥೆ ಕಾದಂಬರಿಗಳ ಸರಕಾಗಿದ್ದಾವೆಯೇ ಹೊರತು, ಈ ಭಾಗದ ಅಭಿವೃದ್ದಿಗೆ ಏನೂ ಉಪಯೋಗವಾಗಲಿಲ್ಲ. ಈವತ್ತಿನ ತನಕ ಈ ಭಾಗದ ಅಭಿವೃದ್ದಿಗಾಗಿ, ಕನ್ನಡ ಶಾಲೆಗಳ ಉಳಿವಿಗಾಗಿ, ಇಲ್ಲಿನ ಕನ್ನಡಿಗರಿಗೆ ಸರ್ಕಾರಿ ಸೌಲಭ್ಯಕ್ಕಾಗಿ, ಕುಂವೀಯವರು ಯಾವುದೇ ಹೋರಾಟ ಮಾಡಲಿಲ್ಲ. ಸರ್ಕಾರಕ್ಕೆ ಮನವಿ ಮಾಡಿ, ಒತ್ತಡ ಹೇರಿ, ಈ ಗಡಿ ನಾಡಿನ ಹಳ್ಳಿಗಳಿಗೆ ಸೌಲಭ್ಯ ದೊರಕಿಸಿಕೊಡಲಿಲ್ಲ. ತಮ್ಮ ವೃತ್ತಿ ಜೀವನದ ಸಮಯದಲ್ಲೂ ಸಹ ಅಂತಹ ಸಾಮಾಜಿಕ ಬದಲಾವಣೆಗಾಗಿ ಪ್ರಯತ್ನ ನಡೆಸಿಲ್ಲ. ಆ ಹಳ್ಳಿಗಳು ಆಗ ಹೇಗಿದ್ದವೂ ಈಗಲೂ ಹಾಗೆಯೆ ಇವೆ.

ಕರ್ನಾಟಕದೊಂದಿಗೆ ಅವಿನಾಭಾವ ಸಂಬಂಧ

ಕರ್ನಾಟಕದೊಂದಿಗೆ ಅವಿನಾಭಾವ ಸಂಬಂಧ

ನಿಮಗೆ ಗೊತ್ತಿರುವ ಹಾಗೆ, ಕರ್ನೂಲ್ ಜಿಲ್ಲೆಯ ಎಮ್ಮಿಗನೂರು ಆಲೂರು, ಆದೋನಿ, ಅನಂತಪುರ ಜಿಲ್ಲೆಯ, ಗುಂತಕಲ್, ರಾಯದುರ್ಗ, ಕಲ್ಯಾಣದುರ್ಗ ಇನ್ನು ಮುಂತಾದ ತಾಲೂಕಿನ ಹಳ್ಳಿಗಳು ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳು. ರಾಜ್ಯ ವಿಭಜನೆಯ ನಂತರ ಈ ತಾಲೂಕುಗಳು ಆಂಧ್ರ ಪ್ರದೇಶಕ್ಕೆ ಸೇರ್ಪಡೆಯಾದವು. ಕರ್ನಾಟಕ ರಾಜ್ಯದಿಂದ ಬೇರ್ಪಟ್ಟರೂ ಸಹ, ಇಲ್ಲಿನ ಜನ ಕರ್ನಾಟಕದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ವ್ಯಾವಹಾರಿಕ ಕಾರಣಗಳಿಗೆ ಪಕ್ಕದ ಬಳ್ಳಾರಿ ಜಿಲ್ಲೆಯನ್ನು ಅವಲಂಬಿಸಿದ್ದಾರೆ. ಹಾಗೂ ಉದ್ಯೋಗಾವಕಾಶದ ಕಾರಣದಿಂದ ಕರ್ನಾಟಕದ ಬಳ್ಳಾರಿ, ಬೆಂಗಳೂರು ಸೇರಿದಂತೆ ಹಲವಾರು ಕಡೆ ಸಾವಿರಾರು ಜನ ನೆಲೆಸಿದ್ದಾರೆ.

ಎಲ್ಲಕ್ಕೂ ಕರ್ನಾಟಕದ ಮೇಲೆ ಅವಲಂಬನೆ

ಎಲ್ಲಕ್ಕೂ ಕರ್ನಾಟಕದ ಮೇಲೆ ಅವಲಂಬನೆ

ನಿಜ ಹೇಳಬೇಕೆಂದರೆ, ಆಂಧ್ರದ ಈ ಗಡಿನಾಡಿನ ಹಳ್ಳಿಗಳಿಗೂ ಅದಕ್ಕೆ ಹೊಂದಿಕೊಂಡಿರುವ ನಮ್ಮ ಕರ್ನಾಟಕದ ಹಳ್ಳಿಗಳಿಗೂ ಬಹಳ ವ್ಯತ್ಯಾಸವೇನೂ ಇಲ್ಲ. ಬಳ್ಳಾರಿ ತಾಲೂಕಿನ ಸುತ್ತಮುತ್ತಲಿನ ಪರಿಸರದ ಹಾಗೆಯೇ ಇಲ್ಲೂ ಇದೆ. ಲಿಂಗಾಯಿತರು, ಕುರುಬರು, ಬೇಡರು, ನಾಯಕರು, ಗೊಲ್ಲರು, ಮುಂತಾದ ಎಲ್ಲ ಹಿಂದುಳಿದವರು, ಅಲ್ಪಸಂಖ್ಯಾಂತರು ಸೇರಿದಂತೆ ಬಳ್ಳಾರಿ ತಾಲೂಕಿನಲ್ಲಿರುವಂತೆ ಎಲ್ಲ ಜಾತಿ ಜನಾಂಗದವರೂ ಅಲ್ಲಿಯೂ ಇದ್ದಾರೆ. ಈ ಎರಡು ಪ್ರದೇಶಗಳನ್ನು ಗಡಿ ರೇಖೆ ಮಾತ್ರ ವಿಭಜಿಸಿದೆ, ಮಿಕ್ಕುಳಿದಂತೆ ಎಲ್ಲದಕ್ಕೂ ಕರ್ನಾಟಕವನ್ನೇ ಅವಲಂಬಿಸಿದ್ದಾರೆ.

ಗೌರಿ ಹತ್ಯೆ ಪ್ರಜಾಪ್ರಭುತ್ವವನ್ನು ಕತ್ತಲಲ್ಲಿರಿಸಿದೆ: ಕುಂ.ವೀರಭದ್ರಪ್ಪ

ಆಂಧ್ರದಲ್ಲೂ ಕನ್ನಡಿಗರ ಅಭಿಮಾನ

ಆಂಧ್ರದಲ್ಲೂ ಕನ್ನಡಿಗರ ಅಭಿಮಾನ

ಆಂಧ್ರದಲ್ಲಿದ್ದರೂ, ಇಲ್ಲಿನ ಜನರ ಕನ್ನಡ ಅಭಿಮಾನವೇನು ಕಡಿಮೆಯಾಗಿಲ್ಲ. ಈ ಗಡಿ ಪ್ರದೇಶಗಳಲ್ಲಿ, ಬಹುತೇಕ ಕನ್ನಡ ಮಾತನಾಡುವ ಕುಟುಂಬಗಳು ಇದ್ದ ಕಾರಣದಿಂದ ಇಲ್ಲಿನ ಆಂಧ್ರ ಸರ್ಕಾರಗಳು, ಸ್ವಾತಂತ್ರ್ಯ ಪೂರ್ವದಿಂದಲೇ ಇದ್ದ ಕನ್ನಡ ಶಾಲೆಗಳನ್ನು ಹಾಗೆಯೆ ಉಳಿಸಿಕೊಂಡು ಮತ್ತು 60-80ರ ದಶಕದಲ್ಲಿ ಕೆಲ ಹೊಸ ಕನ್ನಡ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಿ ಇಲ್ಲಿನ ಜನರ ಮಾತೃಭಾಷೆ ಕನ್ನಡದ ಮೂಲಕವೇ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ನೀಡುತ್ತ ಬಂದಿದ್ದಾರೆ.

ಕನ್ನಡ ಮಾಧ್ಯಮದವರಿಗೆ ಮೀಸಲಾತಿ ಇಲ್ಲ

ಕನ್ನಡ ಮಾಧ್ಯಮದವರಿಗೆ ಮೀಸಲಾತಿ ಇಲ್ಲ

ಆದರೆ, ಕರ್ನಾಟಕದ ಸರ್ಕಾರ ಗಡಿನಾಡು ಕನ್ನಡಿಗರನ್ನು ದಶಕಗಳಿಂದಳೂ ಅಲಕ್ಷಿಸುತ್ತ ಬಂದಿದ್ದರಿಂದ, ಜನರಿಗೆ ಕರ್ನಾಟಕದ ಸರ್ಕಾರದ ಮೇಲೆ ಯಾವುದೇ ವಿಶ್ವಾಸ ಉಳಿದಿಲ್ಲ. ಹತ್ತನೇ ತರಗತಿಯವರಿಗೂ ಕನ್ನಡ ಮಾಧ್ಯಮದಲ್ಲಿ ಕಲಿತರೂ, ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ದೊರೆಯುತ್ತಿಲ್ಲ. ಉನ್ನತ ವ್ಯಾಸಂಗಕ್ಕೆ ಮೀಸಲಾತಿ ಇಲ್ಲ. ಸರ್ಕಾರಿ ಹಾಸ್ಟೆಲ್ ಗಳಲ್ಲಿ ಪ್ರವೇಶವಿಲ್ಲ. ದುಬಾರಿ ಶುಲ್ಕ ತೆತ್ತು ಬಳ್ಳಾರಿಯಲ್ಲಿ ಖಾಸಗಿ ವಿದ್ಯಾ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ಖಾಸಗಿ ಹಾಸ್ಟೆಲ್ ಗಳಲ್ಲಿ ಉಳಿದುಕೊಂಡು ಓದಿ ಪದವಿ ಪಡೆದರೂ ಉದ್ಯೋಗ ಖಾತರಿಯಿಲ್ಲ.

ಗೂಳ್ಯಂ ಸರಕಾರಿ ಪ್ರಾಥಮಿಕ ಶಾಲೆ

ಗೂಳ್ಯಂ ಸರಕಾರಿ ಪ್ರಾಥಮಿಕ ಶಾಲೆ

ಉದಾಹರಣೆಗೆ, ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರು ತಾಲೂಕಿನ ಗೂಳ್ಯಂ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಒಂದು ಶತಮಾನ ಪೂರೈಸಿದೆ. ಶತಮಾನದ ಹೊಸ್ತಿಲನ್ನು ಕಂಡಂತಹ ಇಂತಹ ಕನ್ನಡ ಶಾಲೆಗಳನ್ನು ಮುಚ್ಚಲು ಕೆಲ ಪಟ್ಟ ಭದ್ರ ಹಿತಾಸಕ್ತಿಯುಳ್ಳ ಜನರು ಶತಪ್ರಯತ್ನ ಮಾಡುತಿದ್ದಾರೆ. ಊರಿನ ಕನ್ನಡ ಯುವಕ ಸಂಘದ ಸದಸ್ಯರು ಗಡಿನಾಡಿನಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಹರ ಸಾಹಸ ಪಡುತಿದ್ದಾರೆ.

ಗೂಳ್ಯಂನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 480ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಬಳ್ಳಾರಿಯು, ಗೂಳ್ಯಂನಿಂದ ಸುಮಾರು 40 ಕಿ.ಮೀ. ದೂರವಿದ್ದು, ಸಾರಿಗೆ ವ್ಯವಸ್ಥೆ ಇಲ್ಲದೆ ಹೆಣ್ಣುಮಕ್ಕಳ ಶಿಕ್ಷಣ ಅರ್ಧಕ್ಕೆ ಮೊಟಕಾಗುವಂತಾಗಿದೆ. ಹೆಚ್ಚಿನ ಶಿಕ್ಷಣಕ್ಕೆ ಬಳ್ಳಾರಿಗೆ ಹೋಗಿಬರಲು, ಸರ್ಕಾರಿ ಬಸ್ಸಿನ ಅವಶ್ಯಕತೆಯೂ ಇದೆ. ವಿದ್ಯಾರ್ಥಿಗಳು ಸಾರಿಗೆ ಸೌಲಭ್ಯ ಹಾಗೂ ಉಚಿತ ಬಸ್‍ಪಾಸ್ ಒದಗಿಸಿಕೊಡುವಂತೆ ಬೇಡಿಕೆ ಇದೆ.

ಒಂದು ಕಿ.ಮೀ. ದಾಟಲು ಹರಸಾಹಸ

ಒಂದು ಕಿ.ಮೀ. ದಾಟಲು ಹರಸಾಹಸ

ಬಳ್ಳಾರಿಯಿಂದ ಗೂಳ್ಯಂಗೆ ಬರಲು ಎರಡು ಮಾರ್ಗಗಳಿವೆ. ಒಂದು, ಹಾಲಹರವಿ ಮುಖಾಂತರ ನಲವತ್ತು ಕಿ.ಮೀ. ದೂರ. ಎರಡನೆಯದು, ಬಸರಕೋಡು ಮುಖಾಂತರ ಮೂವತ್ತು ಕಿ.ಮಿ ದೂರ. "ಬಸರಕೋಡು ಗ್ರಾಮವು ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲೂಕಿನಲ್ಲಿದೆ. ಗೂಳ್ಯಂ ಗ್ರಾಮವು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ. ಈ ಎರಡೂ ಗ್ರಾಮಗಳ ಮಧ್ಯೆ ವೇದಾವತಿ ನದಿಯು(ಹಗರಿ) ಹರಿದು ಹೋಗುತ್ತದೆ ಬಸರಕೋಡಿನಿಂದ ಗೂಳ್ಯಂ ಗ್ರಾಮಕ್ಕೆ ಹೋಗುವ ವಾಹನಗಳಾಗಲೀ ಪಾದಚಾರಿಗಳಾಗಲೀ, ಈ ನದಿಯ ನೀರಿನಲ್ಲಿ ಒಂದು ಕಿ.ಮೀ. ಅಂತರವನ್ನು ಕ್ರಮಿಸಬೇಕಾಗುತ್ತದೆ. ಜೊತೆಗೆ ಹಗರಿಯು ಮರಳು (ಉಸುಕಿ)ನಿಂದ ಕೂಡಿರುವುದರಿಂದ ಈ ಒಂದು ಕಿ.ಮೀ. ದಾರಿಯನ್ನು ಕಾಲ್ನಡಿಗೆಯಿಂದ ದಾಟಿ ಹೋಗಲು ಹರಸಾಹಸ ಪಡಬೇಕು. ಕಾಲುಸಿಕ್ಕಿ ಹಾಕಿಕೊಳ್ಳುತ್ತದೆ. ವೃದ್ಧರು, ಮಕ್ಕಳು ಮತ್ತು ಮಹಿಳೆಯರು ಈ ಒಂದು ಕಿ.ಮೀ. ದಾಟುವುದರಲ್ಲಿ ಸುಸ್ತಾಗಿ ಹೋಗುತ್ತಾರೆ.

ಸೇತುವೆ ಕನಸು ಇನ್ನೂ ನನಸಾಗಿಲ್ಲ

ಸೇತುವೆ ಕನಸು ಇನ್ನೂ ನನಸಾಗಿಲ್ಲ

ಕರ್ನಾಟಕದ ಪಕ್ಕದ ಹಳ್ಳಿಗಳಿಗೆ ದಿನನಿತ್ಯ ನೂರಾರು ಜನ ಬಸರಕೋಡು ಹಗರಿ ನದಿಯ ಮುಖಾಂತರವೇ ಸಾಗಬೇಕಾಗಿದೆ. ಆಂಧ್ರದ ಕರ್ನೂಲು ಜಿಲ್ಲೆಯಿಂದ ಗೂಳ್ಯಂ ಮಾರ್ಗವಾಗಿ ಬಳ್ಳಾರಿಗೆ ಬರುವ ಅನೇಕ ಬಡಜನರು ಸರ್ಕಾರಿ ಆಸ್ಪತ್ರೆ ಹಾಗೂ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹಗರಿಯನ್ನು ದಾಟಿ ಬರಬೇಕು. ಹಾಗೂ ಗೂಳ್ಯಂ ಈ ಭಾಗದ ಜನತೆಗೆ ಪುಣ್ಯಕ್ಷೇತ್ರವಾಗಿರುವುದರಿಂದ ವರ್ಷಕ್ಕೊಮ್ಮೆ ಜರುಗುವ ಶರಣ ಶ್ರೀ ಗಾದಿಲಿಂಗಪ್ಪ ತಾತನವರ ಜಾತ್ರಾ ಸಂದರ್ಭದಲ್ಲಿ ಸಾವಿರಾರು ಜನರು ಈ ನದಿಯನ್ನು ದಾಟಿಕೊಂಡು ಹೋಗಬೇಕಾಗುತ್ತದೆ. ಆದ್ದರಿಂದ ಈ ನದಿಗೆ ಅಡ್ಡವಾಗಿ ಒಂದು ಸೇತುವೆಯನ್ನು ನಿರ್ಮಾಣ ಮಾಡಬೇಕೆಂಬುದು ಈ ಭಾಗದ ಜನತೆಯ ಬಹುವರ್ಷಗಳ ಬೇಡಿಕೆಯಾಗಿದೆ. ಅನೇಕ ವರ್ಷಗಳ ಹಿಂದೆಯೇ ಈ ಸೇತುವೆ ನಿರ್ಮಾಣಕ್ಕೆ ಯೋಜನೆ ಮಾಡಿದ್ದರೂ ಅದು ನೆನೆಗುದಿಗೆ ಬಿದ್ದಿದೆ.

ಕುಂವೀ ಮತ್ತು ಗೂಳ್ಯಂ ನಂಟು

ಕುಂವೀ ಮತ್ತು ಗೂಳ್ಯಂ ನಂಟು

ಈಗ ಮೂಲ ಆಶಯಕ್ಕೆ ಬರೋಣ. ಅಂದಾಜು ಹದಿನೈದು ವರುಷಗಳ ಕಾಲ ಕುಂವೀಯವರು ಆಂಧ್ರದ ಗೂಳ್ಯಂನಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ತದ ನಂತರ ಹತ್ತಿರದ ಕೆಲ ಕನ್ನಡ ಶಾಲೆಗಳಿಗೆ ವರ್ಗಾವಣೆ ಮಾಡಿಸಿಕೊಂಡು, ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು. ಗೂಳ್ಯಂನಲ್ಲಿ ಹದಿನೈದು ವರ್ಷಗಳ ಕಾಲ ಕೆಲಸ ಮಾಡಿದ್ದರೂ, ಕನ್ನಡ ಸಾಹಿತ್ಯದಲ್ಲಿ ಬಹಳ ಹೆಸರುಗಳಿಸಿ, ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದರೂ ಸಹಿತ ಗೂಳ್ಯಂನ ಜನರಿಗೆ ಕುಂವಿಯವರ ಮೇಲೆ ಬಹಳಷ್ಟು ಅಸಮಾಧಾನವಿದೆ.

ಮಕ್ಕಳಿಗೆ ಶಿಕ್ಷಣ ನೀಡುವ ಸಮಯದಲ್ಲಿ ತಿಂಗಳುಗಳ ಕಾಲ ರಜೆ ಹಾಕಿ, ಧಾರವಾಡ, ಬೆಂಗಳೂರು ಮೈಸೂರು ಮತ್ತಿತರ ಕಡೆ ಹೊರಟು ಬಿಡುತಿದ್ದರು. ಇವರ ಬಹುತೇಕ ಸಮಯ, ಕಥೆ, ಕಾದಂಬರಿ, ಸಿನಿಮಾ ಸಾಹಿತ್ಯ ಬರೆಯುವುದರಲ್ಲಿ ಮೀಸಲಿಡುತಿದ್ದರಿಂದ. ಮಕ್ಕಳಿಗೆ ಸರಿಯಾಗಿ ಪಾಠ ಮಾಡುತ್ತಿರಲಿಲ್ಲ ಹಾಗೂ ಉತ್ತಮ ಶಿಕ್ಷಣ ಕೊಡಲಿಲ್ಲ ಎನ್ನುವ ಅಪವಾದವಿದೆ. ಇದರಿಂದಾಗಿಯೆ, ಊರವರ ಜತೆ ಕೆಲ ಸಮಯ ಜಗಳಗಳಾಗಿದ್ದುಂಟು.

ಕುಂವೀ ಸಾಹಿತ್ಯ, ಪಾಂಡಿತ್ಯದ ಬದನೆಕಾಯಿ

ಕುಂವೀ ಸಾಹಿತ್ಯ, ಪಾಂಡಿತ್ಯದ ಬದನೆಕಾಯಿ

ಅವರ ವಿಧ್ಯಾರ್ಥಿಗಳು ಹೇಳುವಂತೆ "ಅವರ ಸಾಹಿತ್ಯ, ಪಾಂಡಿತ್ಯ ನಮ್ಮ ಶಿಕ್ಷಣಕ್ಕೆ ಉಪಯೋಗವಾಗಲಿಲ್ಲ. ನಮ್ಮ ಊರು, ನಮ್ಮ ಜನರ ಕಥೆಗಳನ್ನು ಬರೆದು ಬರೆದು ಅದರಿಂದ ಹೆಸರು ಗಳಿಸಿದರೇ ವಿನಃ ನಮ್ಮ ಊರುಗಳಿಗೆ ನಮ್ಮ ಜನರಿಗೆ ಕಿಂಚಿತ್ತು ಉಪಯೋಗವಾಗಲಿಲ್ಲ. ಇವರ ಶಿಕ್ಷಕ ವೃತ್ತಿಯಲ್ಲಿ ಸಾವಿರಾರು ಜನ ವಿಧ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಆದರೆ, ಅದರಲ್ಲಿ ನೂರು ಜನ ತಮ್ಮ ಗುರುವಿನ ದೆಸೆಯಿಂದ ನಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದೇವೆ ಎಂದು ಹೇಳಲು ಸಿಗುವುದಿಲ್ಲ ಎನ್ನುತ್ತಾರೆ.

ಕುಂವೀ ಪ್ರಚಂಡ ಭಾಷಣ ಯಾರಿಗೆ ಬೇಕು?

ಕುಂವೀ ಪ್ರಚಂಡ ಭಾಷಣ ಯಾರಿಗೆ ಬೇಕು?

ನಮ್ಮಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿವೆ, ತಾವು ಕರ್ತ್ಯವ್ಯ ಗೈದ ಕನ್ನಡ ಶಾಲೆಗಳನ್ನು ಮುಚ್ಚುವ ಹಂತಕ್ಕೆ ಬಂದು ನಿಂತಿವೆ. ಊರಿನ ಜನ ಗುಳೆ ಹೊರಟುಹೋಗಿದ್ದಾರೆ. ರಾಯಲಸೀಮಾದ ನಮ್ಮ ಗ್ರಾಮಗಳಲ್ಲಿ ಫ್ಯಾಕ್ಷನಿಸಂ ಬಗ್ಗೆ ಅವರಿಗೆ ಅರಿವಿದೆ. ಈಗ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಕುಂವೀಯವರು ಪ್ರಚಂಡ ಭಾಷಣ ಮಾಡುತ್ತಾರಲ್ಲ, ಅವರು ನಿಜವಾದ ವಿಚಾರವಾದಿಯಾಗಿದ್ದರೆ, ನಮ್ಮ ಜನರ ದೈನಂದಿನ ಕಷ್ಟ ಕೋಟಲೆಗಳ ಮೇಲೆ ಕಥೆ ಕಾದಂಬರಿ ಬರೆದು ಹೆಸರು ಮಾಡುವುದಲ್ಲ, ನಮಗೆ ಹೆಗಲು ಕೊಟ್ಟು ನಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡಿಸಲಿ. ಅದು ಬಿಟ್ಟು ಬೇಕಾಬಿಟ್ಟಿ ಮಾತನಾಡಿದರೆ ಏನು ಪ್ರಯೋಜನ.

ಕಳೆದ ಎಂಟಂತ್ತು ವರ್ಷಗಳಿಂದ ಕುಂವೀ ಯವರು, ಸಭೆ ಸಮಾರಂಭಗಳಲ್ಲಿ, ರಾಜಕೀಯ ಪಕ್ಷವೊಂದನ್ನು ಗುರಿ ಮಾಡಿಕೊಂಡು ಒಂದಲ್ಲ ಒಂದು ಹೇಳಿಕೆಗಳನ್ನು ನೀಡುತ್ತ ಬಂದಿದ್ದಾರೆ. ಬಹುಶಃ ಇಂತಹ ಹೇಳಿಕೆಗಳಿಂದ ಅವರಿಗೆ ಪ್ರಚಾರ ಸಿಗುತ್ತದೆ ಎಂದು ಭಾವಿಸಿದ್ದರೆ, ಅದು ಅವರ ಭ್ರಮೆ. ತಮ್ಮ ಕಥೆಗಳಲ್ಲಿ ಬರೆದಂತೆ, ರಾಯಲಸೀಮ ಪ್ರಾಂತ್ಯದ ಹಳ್ಳಿ ಜನರ ಜೀವನ ಮಟ್ಟ ಸುಧಾರಣೆ ಮಾಡುವುದರ ಬಗ್ಗೆ, ಅವರಿಗೆ ಉತ್ತಮ ಶಿಕ್ಷಣ, ಮುಂತಾದ ಸೌಲಭ್ಯಗಳ ದೊರಕಿಸುವುದರ ಬಗ್ಗೆ ಹೋರಾಟ ಮಾಡಲೇ ಇಲ್ಲ. ಇಲ್ಲಿನ ಕನ್ನಡಿಗರ ಕಷ್ಟಗಳನ್ನ ಕೇಳಲೇ ಇಲ್ಲ. ವಾಗಿಲಿ, ಗೂಳ್ಯಂ ಮುಂತಾದ ಊರುಗಳಲ್ಲಿ ಕುಂವೀಯವರು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ, ಅಲ್ಲಿಗೆ ಒಂದು ಸಾರಿ ಭೇಟಿ ನೀಡಿದರೆ ಅಲ್ಲಿನ ಜನರ ಸಂಕಷ್ಟ ಗಳ ಬಗ್ಗೆ ಗೊತ್ತಾಗುತ್ತದೆ.

ಕುಂವೀ ಅವರಿಗೆ ನಿಜವಾಗಲೂ ಕಾಳಜಿ ಇದ್ದರೆ

ಕುಂವೀ ಅವರಿಗೆ ನಿಜವಾಗಲೂ ಕಾಳಜಿ ಇದ್ದರೆ

ಕುಂವೀ ಯವರು ಸೇವೆ ಸಲ್ಲಿಸಿದ ಗೂಳ್ಯಂನ ಕನ್ನಡ ಶಾಲೆ ಮುಚ್ಚುವ ಹಂತಕ್ಕೆ ಬಂದು ನಿಂತಿದೆ. ಕರ್ನಾಟಕ ಮತ್ತು ಆಂಧ್ರವನ್ನು ಬೆಸೆಯುವ ಹಗರಿ ನದಿ ಸೇತುವೆ ಕಟ್ಟುವ ಯೋಜನೆ ದಶಕಗಳಿಂದಲೂ ನೆನೆಗುದಿಗೆ ಬಿದ್ದಿದೆ. ಇಲ್ಲಿನ ಜನಕ್ಕೆ, ಬಳ್ಳಾರಿ ಗೂಳ್ಯಂಗೆ ನೇರ ಬಸ್ ಸೌಲಭ್ಯಕ್ಕಾಗಿ ಒತ್ತಾಯಿಸುತಿದ್ದಾರೆ. ವಿದ್ಯಾರ್ಥಿಗಳಿಗಾಗಿ, ಉಚಿತ ಬಸ್ ಬಾಸ್ ಬೇಡಿಕೆ ಇದೆ. ಕನ್ನಡ ಶಾಲೆಗೆ ಕನ್ನಡ ಮಾಧ್ಯಮದ ಪುಸ್ತಕಗಳ ಬೇಡಿಕೆಯಿದೆ. ಇಂತಹ ಹಲವಾರು ಸಮಾಜಮುಖಿ ಕಾರ್ಯಗಳಿಗೆ ಕುಂವೀಯವರು ಹೆಗಲು ಕೊಡಬಹುದಲ್ಲವೇ?

ಇವರಿಗೆ ನಿಜಕ್ಕೂ ಸಾಮಾನ್ಯ ಜನರ ಮೇಲಿನ ಕಾಳಜಿ ಇದ್ದರೆ, ಬಳ್ಳಾರಿ ತಾಲೂಕಿಗೆ ಅಂಟಿಕೊಂಡಂತೆ, ಗೂಳ್ಯಂನಂತಹ ಹಲವಾರು ಕುಗ್ರಾಮಗಳಿವೆ, ಅಲ್ಲಿನ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆಯಲಿ. ಬೇಕಾಬಿಟ್ಟಿ ಹೇಳಿಕೆಕೊಟ್ಟು ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವುದರಿಂದ ಏನು ಪ್ರಯೋಜನವಿದೆ?

(ವಿ.ಸೂ : ಇಲ್ಲಿ ಹಂಚಿಕೊಂಡಿರುವ ಅನಿಸಿಕೆಗಳು ಸಂಪೂರ್ಣವಾಗಿ ಲೇಖಕರವು.)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
What Kum Veerabhadrappa has done to Karnataka? What has he done to Kannada schools where he taught in Gulyam in the border of Karnataka? Why is he making unnecessary statements? Asks P S Ranaganath from Muscat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more