ಶಿವ..ಶಿವ..ಹರ..ಹರ..ಎನ್ನುವಂತಾದ ವಿಭೂತಿ ತಯಾರಕರ ಬದುಕು..!

ಮೊದಲೆಲ್ಲ ಶಿವರಾತ್ರಿ ಹಬ್ಬ ಹತ್ತಿರ ಬರುತ್ತಿದೆ ಎನ್ನುವಾಗ ಮನೆಯಲ್ಲಿಯೇ ವಿಭೂತಿ ತಯಾರಿಸುವ ಕುಲಕಸುಬು ಮಾಡಿ ಜೀವನ ಸಾಗಿಸುತ್ತಿದ್ದವರ ಮನದಲ್ಲಿ ಏನೋ ಒಂಥರಾ ಖುಷಿ ಅಲೆಯಾಡುತ್ತಿತ್ತು. ಅದಕ್ಕೆ ಕಾರಣವೂ ಇತ್ತು. ಅದು ಏನೆಂದರೆ ಶಿವರಾತ್ರಿ ಹಬ್ಬದಲ್ಲಿ ಹೆಚ್ಚಿನ ವಿಭೂತಿ ಬಳಕೆಯಾಗುತ್ತಿತ್ತು ಅದರಿಂದ ವಿಭೂತಿ ತಯಾರಕರಿಗೂ ಒಂದಷ್ಟು ಆದಾಯ ಬರುತ್ತಿತ್ತು. ಆದರೀಗ ಎಲ್ಲವೂ ಬದಲಾಗಿದೆ. ಯಾಂತ್ರಿಕತೆ ನಡುವೆ ಕುಲಕಸುಬು ಮಾಡುವವರ ಬದುಕು ಮೂರಾಬಟ್ಟೆಯಾಗಿದೆ.

ಇವತ್ತು ಶಿವರಾತ್ರಿ ಹತ್ತಿರವಾದರೂ ವಿಭೂತಿ ತಯಾರಿಸಿ ಬದುಕುವವರ ಮೊಗದಲ್ಲಿ ಖುಷಿಯಿಲ್ಲ. ಕಾರಣ ಅವರಿಗೆ ಈ ಬದುಕು ಸಾಕಾಗಿ ಹೋಗಿದೆ. ಬಹಳಷ್ಟು ಜನರು ಇದನ್ನು ಬಿಟ್ಟು ಬೇರೆ ಉದ್ಯೋಗ ಕಂಡುಕೊಂಡಿದ್ದಾರೆ. ಆದರೆ ಕೆಲವರು ಮಾತ್ರ ಕುಲಕಸುಬು ಹೊರತುಪಡಿಸಿ ಬೇರೆ ಕೆಲಸ ಮಾಡಲಾಗದೆ ಅದೇ ವೃತ್ತಿಯನ್ನು ಮಾಡುತ್ತಾ ಸಂಕಷ್ಟದಲ್ಲಿ ಬದುಕು ಸಾಗಿಸುವಂತಾಗಿದೆ.

Vibhuti Manufacturers Life In Trouble Because Of Modernization

ಮೈಸೂರಿನಲ್ಲಿ ವಿಭೂತಿ ತಯಾರಿಸುವ ಕಸುಬು ಮಾಡುವ ಹಿರೇಮಠ ಜನಾಂಗದ ಕೆಲವರ ಬದುಕು ಇವತ್ತು ಹೀಗೆ ಆಗಿದೆ. ಇವರು ಶಿವನ ಪೂಜೆ ಸೇರಿದಂತೆ ಹಲವು ಶುಭ ಸಮಾರಂಭಗಳಲ್ಲಿ ಬಳಕೆಯಾಗುವ ವಿಭೂತಿಯನ್ನು ತಯಾರಿಸಿ ಅದನ್ನು ಮಾರಾಟ ಮಾಡಿ ಜೀವನ ಸಾಗಿಸುಕೊಂಡು ಬರುತ್ತಿದ್ದರು. ಆದರೆ ಇವತ್ತು ಕಾರ್ಖಾನೆಗಳಲ್ಲಿ ವಿಭೂತಿ ತಯಾರಾಗಿ ಮಾರುಕಟ್ಟೆಗೆ ಬರುವುದರಿಂದ ಮನೆಯಲ್ಲಿ ತಯಾರಾಗುವ ವಿಭೂತಿಗಳಿಗೆ ಬೇಡಿಕೆ ಇಲ್ಲದಂತಾಗಿದೆ.

ಕುಲಕಸುಬು ನಂಬಿದವರಿಗೆ ಸಂಕಷ್ಟ

ಹಾಗೆನೋಡಿದರೆ ವಿಭೂತಿ ದೈವಿಕ ಕಾರ್ಯಕ್ಕೆ ಹೆಚ್ಚಾಗಿ ಬಳಕೆಯಾಗುತ್ತಿದ್ದು, ಇದನ್ನು ಹಿರೇಮಠ ಜನಾಂಗದ ಕೆಲವೇ ಕೆಲವರು ಮಾತ್ರ ತಯಾರಿಸುತ್ತಾರೆ. ಇದು ಅವರ ಕುಲಕಸುಬಾಗಿದ್ದು, ಇವತ್ತಿನ ಪರಿಸ್ಥಿತಿಯಲ್ಲಿ ವಿಭೂತಿ ತಯಾರಿಸಿ ಅದನ್ನು ಮಾರಿ ಬಂದ ಹಣದಿಂದ ಜೀವನ ಸಾಗಿಸುತ್ತಾರೆ. ಆದರೆ ಇವತ್ತು ಅವರ ಬದುಕು ಕಷ್ಟವಾಗುತ್ತಿದೆ. ಅದಕ್ಕೆ ಇವತ್ತು ನೂರಾರು ಕಾರಣಗಳು ಸಿಗುತ್ತವೆ.

ಮೈಸೂರಿನಲ್ಲಿ ವಿಭೂತಿ ತಯಾರಿಸುವ ಹಿರೇಮಠ ಜನಾಂಗದ ಬಗ್ಗೆ ಹೇಳಬೇಕೆಂದರೆ, ಮೈಸೂರು ಅರಸರ ಕಾಲದಲ್ಲಿ ಪಾರಂಪರಿಕ ನಗರಿ ಮೈಸೂರಿನಲ್ಲಿ ವಿಭೂತಿ ತಯಾರಿಸುವ ಜನಾಂಗಕ್ಕೆ ಹೆಚ್ಚಿನ ಮನ್ನಣೆ ನೀಡಲಾಗಿತ್ತು. ಅವರು ತಯಾರಿಸಿದ ವಿಭೂತಿ ಅರಮನೆಯ ಸಕಲ ಕಾರ್ಯಕ್ಕೆ ಬಳಕೆಯಾಗುತ್ತಿತ್ತು. ತದ ನಂತರದ ಕಾಲಗಳಲ್ಲಿ ವಿಭೂತಿ ಬಳಕೆ ಒಂದಷ್ಟು ಇಳಿಮುಖವಾಯಿತು. ಜತೆಗೆ ಯಂತ್ರಗಳಿಂದ ತಯಾರಾಗಿ ದೂರದಿಂದ ಬರತೊಡಗಿದವು. ಇದರಿಂದ ಕೈಯ್ಯಿಂದ ಕಷ್ಟಪಟ್ಟು ತಯಾರಿಸಿದ ವಿಭೂತಿಗಳಿಗೆ ಬೇಡಿಕೆ ಒಂದಷ್ಟು ಕಡಿಮೆಯಾಯಿತು.

Vibhuti Manufacturers Life In Trouble Because Of Modernization

ವಿಭೂತಿ ಮಾರಾಟ ಮಾಡಿ ಜೀವನ

ವಿಭೂತಿ ತಯಾರಿಸುವ ಕುಟುಂಬವನ್ನು ರಾಜ್ಯದ ಕೆಲವೇ ಕೆಲವು ಜಿಲ್ಲೆಗಳಲ್ಲಿ ಮಾತ್ರ ಕಾಣಬಹುದಾಗಿದೆ. ಮೈಸೂರಿನ ಹುಲ್ಲಹಳ್ಳಿ ಮತ್ತು ಗೌರಿಶಂಕರನಗರದಲ್ಲಿ ವಿಭೂತಿ ತಯಾರಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಾ ಬಂದಿರುವ ಕುಟುಂಬಗಳಿದ್ದು ಈಗಿನ ಆಧುನಿಕ ಪೈಪೋಟಿ ಯುಗದಲ್ಲಿ ಅವರ ಬದುಕು ಶೋಚನೀಯವಾಗಿದೆ. ಅವರ ಬದುಕು ಹೇಗಾಗಿದೆ ಎಂದರೆ ಒಂದೆಡೆ ಕುಲಕಸುಬನ್ನು ಬಿಡುವಂತಿಲ್ಲ.

ಮತ್ತೊಂದೆಡೆ ಇದನ್ನು ಮಾಡಿ ನೆಮ್ಮದಿಯಾಗಿ ಜೀವನ ಸಾಗಿಸುವಂತೆಯೂ ಇಲ್ಲದಾಗಿದೆ. ಆದರೂ ಅನಿವಾರ್ಯವಾಗಿ ತಮ್ಮ ಮನೆಯಲ್ಲೇ ತಯಾರಿಸಿ ಬಳಿಕ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಹೀಗೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ಕೊಂಡೊಯ್ದು ಮಾರಾಟ ಮಾಡಿ ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ಮೈಸೂರಿನ ಗೌರಿಶಂಕರ ನಗರದಲ್ಲಿ ತಯಾರಾಗುವ ವಿಭೂತಿಗೆ ಮೂರು ತಲೆಮಾರುಗಳ ಇತಿಹಾಸ ಇರುವುದನ್ನು ಕಾಣಬಹುದು.

ವಿಭೂತಿ ತಯಾರಕರ ಬದುಕು ಹಸನಾಗಲಿ

ವಿಭೂತಿಗೆ ಬೇಕಾದ ಕಚ್ಚಾವಸ್ತುವನ್ನು ಆಂಧ್ರದಿಂದ ತರಲಾಗುತ್ತದೆ. ಬಳಿಕ ವಿವಿಧ ನಮೂನೆಗಳಲ್ಲಿ ತಯಾರಿಸಿ ಅದನ್ನು ಕಟ್ಟುಗಳನ್ನಾಗಿ ಮಾಡಿ ಮಾರಾಟ ಮಾಡುತ್ತಾರೆ. ಆದರೆ ವ್ಯಾಪಾರಸ್ಥರು ಇವರಿಂದ ಕಡಿಮೆ ಬೆಲೆಗೆ ಖರೀದಿಸಿ ತಾವು ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಾರೆ ಎನ್ನುವುದು ಅವರ ಅಳಲಾಗಿದೆ. ಹಸುವಿನ ಸೆಗಣಿಯಿಂದ ತಯಾರಿಸಿದ ವಿಭೂತಿ ಶ್ರೇಷ್ಠವಾಗಿದೆ. ಆದರೆ ಅದರ ಬಗ್ಗೆ ಜನಕ್ಕೆ ಗೊತ್ತಿಲ್ಲ. ಬದಲಿಗೆ ಸುಂದರವಾಗಿ ಕಾಣುವ ವಿಭೂತಿಗೆ ಮೊರೆಹೋಗುವುದರಿಂದ ಯಂತ್ರಗಳಿಂದ ತಯಾರಿಸಿದ ವಿಭೂತಿಗೆ ಬೇಡಿಕೆ ಹೆಚ್ಚು. ಪರಿಣಾಮ ಕುಲಕಸುಬಾಗಿ ಮಾಡಿಕೊಂಡು ಬರುತ್ತಿರುವ ಕುಟುಂಬಗಳ ಜೀವನ ಕಷ್ಟವಾಗುತ್ತದೆ.

ಮುಜರಾಯಿ ಇಲಾಖೆ ನಮಗೆ ಪ್ರೋತ್ಸಾಹ ನೀಡಿದರೆ ಮುಂದಿನ ದಿನಗಳಲ್ಲೂ ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗಬಹುದು ಇಲ್ಲದೆ ಇದ್ದರೆ ಹೊಟ್ಟೆಪಾಡಿಗಾಗಿ ಬೇರೆ ಉದ್ಯೋಗ ಮಾಡುವುದು ಅನಿವಾರ್ಯವಾಗುತ್ತದೆ ಎಂಬುದು ವಿಭೂತಿ ತಯಾರಕರ ಮನವಿಯಾಗಿದೆ. ನಾವು ಶಿವರಾತ್ರಿ ಹಬ್ಬದ ವೇಳೆ ವಿಭೂತಿ ಬಳಿದು ಕಷ್ಟವನ್ನು ಪರಿಹರಿಸು ದೇವಾ ಎಂದು ಶಿವನಲ್ಲಿ ಬೇಡಿಕೊಳ್ಳುತ್ತೇವೆ. ರಾತ್ರಿಪೂರ್ತಿ ಜಾಗರಣೆ ಕೂತು ಒಳ್ಳೆಯದು ಮಾಡುವಂತೆ ಬೇಡಿಕೊಳ್ಳುತ್ತೇವೆ, ಆದರೆ ವರ್ಷಪೂರ್ತಿ ಜಾಗರಣೆ ಮಾಡುತ್ತಾ ವಿಭೂತಿ ತಯಾರಿಸಿ ಶಿವರಾತ್ರಿ ಹಬ್ಬದ ವೇಳೆ ನಾವು ತಯಾರಿಸಿದ ವಿಭೂತಿ ಮಾರಾಟವಾಗಿ ಒಂದಷ್ಟು ಆದಾಯ ಬರಲಿ ಎಂದು ಬೇಡಿಕೊಳ್ಳುವ ವಿಭೂತಿ ತಯಾರಕರ ನೋವು ಗೊತ್ತೇ ಆಗುವುದಿಲ್ಲ. ಇನ್ನಾದರೂ ಅವರ ಬದುಕು ಹಸನಾಗಲಿ ಎನ್ನುವುದೇ ನಮ್ಮ ಆಶಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+