
ಕೊಡಗಿನ ಹಾತೂರಿನಲ್ಲಿ ನೆಲೆ ನಿಂತಿರುವ ರೈತರ ಬೆಳೆ ಕಾಯುವ ವನಭದ್ರಕಾಳೇಶ್ವರಿ
ದಕ್ಷಿಣ ಕೊಡಗಿನಲ್ಲಿ ವೀರಾಜಪೇಟೆಯಿಂದ ಗೋಣಿಕೊಪ್ಪ ಮಾರ್ಗವಾಗಿ ತೆರಳಿದವರಿಗೆ ಮಾರ್ಗದ ಮಧ್ಯೆ ಹಾತೂರು ಕೊಳತ್ತೋಡು ಬೈಗೋಡಿನಲ್ಲಿ ರಸ್ತೆ ಬದಿಯಲ್ಲಿ ಅರಣ್ಯಕ್ಕೆ ಹೊಂದಿಕೊಂಡಂತೆ ವನಭದ್ರಕಾಳೇಶ್ವರಿ ದೇಗುಲದ ಪ್ರವೇಶ ದ್ವಾರ ಕಾಣಿಸುತ್ತದೆ. ಸಾಮಾನ್ಯವಾಗಿ ಈ ರಸ್ತೆಯಲ್ಲಿ ತೆರಳುವವರು ಈ ದೇವತೆಗೆ ನಮಿಸಿ ಮುಂದೆ ಸಾಗುತ್ತಾರೆ.
ಕೊಡಗಿಗೆ ಸುತ್ತು ಹೊಡೆದರೆ ಭಗವತಿ, ಭದ್ರಕಾಳಿ, ವನಭದ್ರಕಾಳಿ ಹೆಸರಿನ ದೇಗುಲಗಳು ಮತ್ತು ಅವುಗಳ ಎದುರು ವಾಹನಗಳನ್ನು ನಿಲ್ಲಿಸಿ ಕಾಣಿಕೆ ಹಾಕಿ ಮುಂದೆ ಸಾಗುವ ದೃಶ್ಯಗಳು ಹೆಚ್ಚಾಗಿ ಕಂಡು ಬರುತ್ತವೆ. ಈ ದೇವತೆಗಳು ಊರ ದೇವರಾಗಿದ್ದು, ಊರ ದೇವತೆಯನ್ನು ಪ್ರಾರ್ಥಿಸಿ ಮುಂದೆ ಸಾಗುವುದು ಹಿಂದಿನಿಂದ ಬಂದ ರೂಢಿಯಾಗಿದೆ.
ರಾಜಸ್ಥಾನದಲ್ಲಿ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ; ಪ್ರತಿಮೆ ವೈಶಿಷ್ಟ್ಯತೆಗಳೇನು?
ದಟ್ಟ ಕಾಡಿನಿಂದ ಕೂಡಿದ್ದ ಕಾಲದಲ್ಲಿ ಕ್ರೂರ ಪ್ರಾಣಿಗಳ ನಡುವೆ ಅರಣ್ಯದ ಹಾದಿಯಲ್ಲಿಯೇ ಸಾಗಬೇಕಾಗಿತ್ತು. ಜತೆಗೆ ಕಾಡಿಗೆ ಹೊಂದಿಕೊಂಡಂತೆ ಕೃಷಿ ಭೂಮಿಗಳು ಇದ್ದಿದ್ದರಿಂದ ಕಾಡು ಪ್ರಾಣಿಗಳ ನಡುವೆ ಬೆಳೆಯನ್ನು ಕಾಪಾಡಿಕೊಳ್ಳಬೇಕಾಗಿತ್ತು. ಈ ವೇಳೆ ತಮಗೆ ರಕ್ಷಣೆಯನ್ನು ಮಾಡುವಂತೆ ಊರ ದೇವತೆಗಳಲ್ಲಿ ಗ್ರಾಮಸ್ಥರು ಬೇಡಿಕೊಳ್ಳುತ್ತಿದ್ದರಲ್ಲದೆ, ಆಕೆ ಗ್ರಾಮರಕ್ಷಕಳಾಗಿ ಊರನ್ನು ಕಾಪಾಡುತ್ತಿದ್ದಳು.
ಇವತ್ತಿಗೂ ಊರ ದೇವತೆಗೆ ದೇಗುಲ ಕಟ್ಟಿ ಪೂಜಿಸಲಾಗುತ್ತದೆ. ಅಷ್ಟೇ ಅಲ್ಲದೆ ದೇವರ ಹೆಸರಿನಲ್ಲಿ ಊರಿನಲ್ಲಿ ಕಾಡನ್ನು ಉಳಿಸಿ ಅಲ್ಲಿರುವ ವನದೇವತೆಗೆ ಪೂಜೆ ಸಲ್ಲಿಸುವ ಸಂಪ್ರದಾಯವೂ ಕಂಡು ಬರುತ್ತದೆ. ಅದರಂತೆ ಹಾತೂರು ಕೊಳತ್ತೋಡು ಬೈಗೋಡಿನಲ್ಲಿ ನೆಲೆನಿಂತಿರುವ ವನಭದ್ರಕಾಳಿ ಸುತ್ತಲಿನ ವನ, ಗ್ರಾಮ ಮಾತ್ರವಲ್ಲದೆ, ಈ ರಸ್ತೆಯಲ್ಲಿ ಸಾಗುವವರ ರಕ್ಷಣೆ ಮಾಡುತ್ತಾ ಬರುತ್ತಿದ್ದಾಳೆ. ಈ ಮಾರ್ಗದಲ್ಲಿ ಕಾರ್ಯನಿಮಿತ್ತ ಸಾಗುವವರು ದೇಗುಲದ ಎದುರು ಪ್ರಯಾಣದಲ್ಲಿ ಯಾವುದೇ ತೊಂದರೆಯಾಗದಂತೆ ಮತ್ತು ತಾವು ತೆರಳುತ್ತಿರುವ ಕಾರ್ಯಕ್ಕೆ ಯಾವುದೇ ವಿಘ್ನ ಬಾರದೆ ಸುಗಮವಾಗಿ ನಡೆಸಿಕೊಡುವಂತೆ ಬೇಡಿಕೊಂಡು ಕಾಣಿಕೆ ಅರ್ಪಿಸಿ ಮುಂದೆ ಸಾಗುತ್ತಾರೆ.

ಕೊಕ್ಕರೆ ಅವತಾರದಲ್ಲಿ ಬಂದ ಭದ್ರಕಾಳಿ
ಈ ಸ್ಥಳದಲ್ಲಿ ವನಭದ್ರಕಾಳಿ ಬಂದು ಹೇಗೆ ನೆಲೆಸಿದಳು ಎಂಬುದರ ಬಗ್ಗೆ ಪ್ರಚಲಿತದಲ್ಲಿರುವ ಕಥೆಯ ಪ್ರಕಾರ ಹಿಂದಿನ ಕಾಲದಲ್ಲಿ ದಟ್ಟ ಅರಣ್ಯದಿಂದ ಕೂಡಿದ ಈ ಪ್ರದೇಶದ ಒಂದು ಭಾಗದಲ್ಲಿ ಭತ್ತದ ಬಯಲಿದ್ದು ಅಲ್ಲಿ ಕೃಷಿ ಮಾಡಲಾಗುತ್ತಿತ್ತು. ಒಮ್ಮೆ ಮಹಿಳೆಯೊಬ್ಬಳು ಗದ್ದೆಯಲ್ಲಿ ಕೊಯ್ಲು ಮಾಡುತ್ತಿದ್ದಾಗ ಗದ್ದೆಯಲ್ಲಿ ಚಿನ್ನದ ಬಣ್ಣದ ಕೊಕ್ಕರೆ(ಕೊಡವ ಭಾಷೆಯಲ್ಲಿ ಪೋಳೆ) ಯನ್ನು ನೋಡುತ್ತಾಳೆ. ಸಾಮಾನ್ಯವಾಗಿ ಬಿಳಿಬಣ್ಣದ ಕೊಕ್ಕರೆಗಳ ನಡುವೆ ಚಿನ್ನ ಬಣ್ಣದ ಈ ಕೊಕ್ಕರೆ ಆಕೆಯ ಗಮನಸೆಳೆಯುತ್ತದೆ.
ಆಕೆ ಈ ವಿಚಾರವನ್ನು ಗ್ರಾಮದ ಜನರಿಗೆ ತಿಳಿಸುತ್ತಾಳೆ. ಗ್ರಾಮಸ್ಥರೆಲ್ಲ ಸೇರಿ ಅದನ್ನು ಹಿಡಿದು ಬುಟ್ಟಿಯಲ್ಲಿ ಮುಚ್ಚಿಡಲು ತೀರ್ಮಾನಿಸಿ ಅದನ್ನು ಹಿಡಿಯುವ ಪ್ರಯತ್ನ ಮಾಡುತ್ತಾರೆ. ಆದರೆ ಆ ಕೊಕ್ಕರೆ ಅವರ ಕೈಗೆ ಸಿಗದೆ ತಪ್ಪಿಸಿಕೊಂಡು ಬಂದು ಈಗಿನ ವನಭದ್ರಕಾಳಿ ನೆಲೆಸಿರುವ ಕಾಡಿನಲ್ಲಿ ಮಾಯವಾಗಿ ಬಿಡುತ್ತದೆ. ಜನರಿಗೆ ಆಗ ಜ್ಞಾನೋದಯವಾಗುತ್ತದೆ. ನಮ್ಮ ಕಣ್ಣಿಗೆ ಕಾಣಿಸಿದ್ದು ಕೊಕ್ಕರೆ ಅಲ್ಲ ಕೊಕ್ಕರೆ ಅವತಾರದಲ್ಲಿ ಬಂದ ಭದ್ರಕಾಳಿ ಎಂಬುದು ಗೊತ್ತಾಗುತ್ತದೆ.

ಹದಿನಾರು ಎಕರೆ ದಟ್ಟಕಾಡಿನ ನಡುವೆ ದೇಗಲ
ಜತೆಗೆ ಆಕೆ ತಮ್ಮ ಕಷ್ಟಗಳನ್ನು ನೀಗಿಸಲು ಬಂದ ಸಾಕ್ಷಾತ್ ದೇವಿ ಎಂಬ ನಂಬಿಕೆ ಮೂಡಿ ಎಲ್ಲರೂ ಸೇರಿ ಕಾಡಿನಲ್ಲೊಂದು ಗುಡಿ ನಿರ್ಮಿಸಿ ಆಕೆಯನ್ನು ಪೂಜಿಸಲು ಆರಂಭಿಸುತ್ತಾರೆ. ಹೀಗೆ ವನದ ನಡುವೆ ನೆಲೆ ನಿಂತ ಭದ್ರಕಾಳಿ ಇವತ್ತು ವನಭದ್ರಕಾಳಿಯಾಗಿ ನೆಲೆನಿಂತು ಭಕ್ತರ ರಕ್ಷಣೆ ಮಾಡುತ್ತಿದ್ದಾಳೆ. ಸುಮಾರು ಹದಿನಾರು ಎಕರೆ ದಟ್ಟಕಾಡಿನ ನಡುವೆ ದೇಗಲವಿದ್ದು, ರಸ್ತೆಗೆ ಹೊಂದಿಕೊಂಡಂತೆ ದೇಗುಲದ ಪ್ರವೇಶ ದ್ವಾರವಿದೆ.

ಹಬ್ಬದ ಆಚರಣೆ ಹೇಗಿರುತ್ತದೆ ಗೊತ್ತಾ?
ಇಲ್ಲಿ ಎರಡು ವರ್ಷಗಳಿಗೊಮ್ಮೆ ಸುತ್ತಲಿನ ದೇವಾಲಯ ವ್ಯಾಪ್ತಿಗೊಳಪಡುವ ಕುಟುಂಬಗಳ ನೇತೃತ್ವದಲ್ಲಿ ವನಭದ್ರಕಾಳಿ ಹಬ್ಬವನ್ನು ಆಚರಿಸುತ್ತಾರೆ. ಈ ವೇಳೆ ಗ್ರಾಮಸ್ಥರು ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮದ ಜನರು ನೆರೆದು ಹೂವು, ಹಣ್ಣು, ಕಾಯಿಗಳನ್ನು ಅರ್ಪಿಸಿ ಮಳೆಬೆಳೆಯಾಗಿ ಜನಜಾನುವಾರುಗಳನ್ನು ರಕ್ಷಿಸುವಂತೆ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಈ ಹಬ್ಬದ ಆಚರಣೆಯಲ್ಲಿ ಒಂದಷ್ಟು ವಿಭಿನ್ನತೆ ಮತ್ತು ವಿಶೇಷತೆಯನ್ನು ನಾವು ಕಾಣಬಹುದಾಗಿದೆ. ಹಬ್ಬದ ದಿನದಂದು ಇಡೀ ಊರಲ್ಲಿ ಭದ್ರಕಾಳಿಯಮ್ಮೆ ಪೂಜೋ, ಇಗ್ಗುತಪ್ಪ ಪೂಜೋ, ಕಾವೇರಮ್ಮೆ ಪೂಜೋ ಎಂಬ ಘೋಷಣೆ ಮುಗಿಲು ಮುಟ್ಟುತ್ತದೆ. ದೇವರು ತಿರುವಳಗಾರನ ಮೇಲೆ ಅವಾಹನೆಗೊಳ್ಳುತ್ತದೆ. ಇನ್ನು ಹಬ್ಬದ ಸಂಪ್ರದಾಯದಂತೆ ಕೊಕ್ಕಂಡ ಕುಟುಂಬದ ಐನ್‌ಮನೆಯಿಂದ ಭದ್ರಕಾಳಿ ದೇವತೆಯ ಮೊಗವನ್ನು ಹಿಡಿದು ದೈವ ನೃತ್ಯದ ತೆರೆಯ ಮೂಲಕ ಕೊಳತ್ತೋಡು ಗ್ರಾಮ ತಲುಪಿ, ಅಲ್ಲಿ ದೈವ ನೃತ್ಯದ ನಂತರ ಭಕ್ತಾಧಿಗಳಿಂದ ಹರಕೆ ಒಪ್ಪಿಸುವ ಕಾರ್ಯ ನೆರವೇರುತ್ತದೆ.

ಪುಟ್ಟಮಕ್ಕಳಿಂದ ಪ್ರಾರ್ಥನೆ
ಇದಾದ ಬಳಿಕ ಕೊಂಗೇಪಂಡ ಐನ್‌ಮನೆಯಿಂದ ತೆರೆ ಹೊರಟು, ಭತ್ತದ ಪೈರಿನ ಮಧ್ಯೆ ನಡೆದು ಬಂದ ದೇವಿ, ಹಾತೂರಿನ ಮಹಾದೇವ ದೇವಸ್ಥಾನದ ಬಳಿ ಇರುವ ಅರಳಿ ಮರದ ಬಳಿ ಆಸೀನಳಾಗುತ್ತಾಳೆ. ದೇವಿಯ ಆಯುಧವನ್ನು ಪುಟ್ಟಮಕ್ಕಳು ಕೈಯಲ್ಲಿ ಹಿಡಿದು ದೇವಿ ನಮ್ಮನ್ನು ಕಾಪಾಡು ಎಂದು ಪ್ರಾರ್ಥಿಸುತ್ತಾರೆ. ಇದೆಲ್ಲದರ ನಡುವೆ ಅಯ್ಯಪ್ಪ ಸ್ವಾಮಿಯ ತೆರೆ ಕೇಳಪಂಡ ಐನ್‌ಮನೆಯಿಂದ ಪೈರಿನ ಮಧ್ಯೆ ನಲಿಯುತ್ತಾ, ಓಡಿಬಂದು ಭದ್ರಕಾಳಿಯ ಸಮೀಪ ನೆರೆಯುತ್ತದೆ. ಬಳಿಕ ಈ ಅರಳಿ ಮರದ ಸುತ್ತಲೂ ದೈವಗಳ ನೃತ್ಯ ನಡೆಯುತ್ತದೆ.

ಪ್ರತೀ ತಿಂಗಳು ಅಮವಾಸ್ಯೆಯಂದು ವಿಶೇಷ ಪೂಜೆ
ದೇವಾಲಯದ ಸನ್ನಿಧಿಗೆ ತೆರಳಿ ಎತ್ತರದ ದೇವರ ಕಲ್ಲಿನ ಮೇಲೆ ಹತ್ತಿ, ಗರ್ಭಗುಡಿಗೆ ಮೂರು ಸುತ್ತು ಬಂದು ನೆರೆದಿದ್ದ ಭಕ್ತಾಧಿಗಳ ಹರಕೆಯನ್ನು ವನದೇವಿ ಸ್ವೀಕರಿಸುತ್ತಾಳೆ. ಆ ನಂತರ ಭಂಡಾರ ಅರ್ಪಣೆ ಕಾರ್ಯ ನೆರವೇರುತ್ತದೆ ಬಳಿಕ ಮಹಾಪೂಜೆಯೊಂದಿಗೆ ವನಭದ್ರಕಾಳಿ ದೇವರಕಾಡು ಹಬ್ಬಕ್ಕೆ ತೆರೆ ಬೀಳುತ್ತದೆ. ಹಬ್ಬ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆಯಾದರೂ ಇಲ್ಲಿ ಪ್ರತೀ ತಿಂಗಳು ಅಮವಾಸ್ಯೆಯಂದು ಹಾಗೂ ಕೊಡಗಿನ ಹಬ್ಬ ಹರಿದಿನಗಳಂದು ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತದೆ. ಕೊಡಗಿಗೆ ಬರುವ ಪ್ರವಾಸಿಗರು ವೀರಾಜಪೇಟೆಯಿಂದ ಗೋಣಿಕೊಪ್ಪದ ಕಡೆಗೆ ತೆರಳುವ ವೇಳೆ ಮಾರ್ಗ ಮಧ್ಯೆ ಇರುವ ವನಭದ್ರಕಾಳಿಯ ದರ್ಶನ ಪಡೆಯಲು ಮರೆಯದಿರಿ.