Fisherman: ಗಾಳ ಹಾಕಿದ ವ್ಯಕ್ತಿಗೆ ಸಿಕ್ಕಿದ್ದು ₹83 ಲಕ್ಷ ಹಣ!
ನದಿಗಳಲ್ಲಿ, ಸಮುದ್ರಗಳಲ್ಲಿ ಹಳೆಯ ವಸ್ತುಗಳನ್ನು ಹೊರತೆಗೆಯಲು ಇತ್ತೀಚೆಗೆ ಮ್ಯಾಗ್ನೆಟ್ ಫಿಶಿಂಗ್ ಎನ್ನುವ ಟೆಕ್ನಾಲಜಿ ಬಳಕೆ ಮಾಡಲಾಗುತ್ತಿದೆ. ಈ ರೀತಿ ಮ್ಯಾಗ್ನೆಟ್ ಫಿಶಿಂಗ್ ಮಾಡುವ ಜೋಡಿಗೆ ಅದೃಷ್ಟ ಒಲಿದುಬಂದಿದ್ದು ಬರೋಬ್ಬರಿ ₹83 ಲಕ್ಷ ಹಣ ಸಿಕ್ಕಿದೆ.
ನ್ಯೂಯಾರ್ಕ್ ನಗರದ ದಂಪತಿಗಳಿಗೆ ಈ ಹಣ ದೊರಕಿದ್ದು ಈ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ನೀರು ತುಂಬಿರುವ ಎರಡು ಬ್ಯಾಗ್‌ಗಳಲ್ಲಿ $100,000 ಸಿಕ್ಕಿದ್ದು, ಅಚ್ಚರಿಗೊಂಡಿದ್ದಾರೆ.

ಜೇಮ್ಸ್ ಕೇನ್ ಮತ್ತು ಬಾರ್ಬಿ ಅಗೋಸ್ಟಿನಿ ಮಾಧ್ಯಮಗಳಿಗೆ ಈ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. ಶುಕ್ರವಾರ ಕ್ವೀನ್ಸ್ ಕೊಳದಲ್ಲಿ ಹೂತು ಹೋಗಿದ್ದ ನೂರು ಡಾಲರ್ ಮೌಲ್ಯದ ನೋಟುಗಳ ರಾಶಿ ತುಂಬಿದ್ದ ಬ್ಯಾಗ್‌ಗಳನ್ನು ನೋಡಿ ಅಚ್ಚರಿಗೊಂಡಿದ್ದಾರೆ.
ವೈರಲ್ ಆಗಿರುವ ವೀಡಿಯೋದಲ್ಲಿ ದಂಪತಿಗಳು ಕೆಸರು ತುಂಬಿದ ಬಾಕ್ಸ್‌ನಲ್ಲಿ ಡಾಲರ್ ಬಿಲ್‌ಗಳು ಇರುವುದನ್ನು ನೋಡಬಹುದು. ಈ ಮೊದಲು ಈ ದಂಪತಿಗಳು ಅನೇಕ ರೀತಿಯ ವಸ್ತುಗಳನ್ನು ಈ ರೀತಿ ನದಿ, ಹೊಳೆಗಳಿಂದ ಹೊರತೆಗೆದಿದ್ದಾರೆ. ಆದರೆ ಈ ರೀತಿ ಹಣ ಸಿಕ್ಕಿರುವುದು ಇದೇ ಮೊದಲು ಎಂದು ಹೇಳಿದ್ದಾರೆ.
ಈ ಹಣ ಸಿಕ್ಕ ನಂತರ ದಂಪತಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಹಣದ ನಿಜವಾದ ಮಾಲೀಕರನ್ನು ಪತ್ತೆಹಚ್ಚಲು ಸಾಧ್ಯವಾಗದ ಕಾರಣ, ದಂಪತಿಗಳಿಗೆ ಹಣವನ್ನು ಇಟ್ಟುಕೊಳ್ಳಬಹುದು ಎಂದು ಹೇಳಿದ್ದಾರೆ. ದುರದೃಷ್ಟವಶಾತ್, ನೋಟುಗಳು ಒದ್ದೆಯಾಗಿದ್ದು ಬಹಳವಾಗಿ ನಾಶವಾಗಿವೆ ಎಂದು ಕೇನ್ ಹೇಳಿದ್ದಾರೆ.
ಮ್ಯಾಗ್ನೆಟ್ ಫಿಶಿಂಗ್ ಆರಂಭ
ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಬೇಸರವಾಗುತ್ತಿದ್ದರಿಂದ ಈ ಜೋಡಿ ಮ್ಯಾಗ್ನೆಟ್ ಮೀನುಗಾರಿಕೆಯನ್ನು ಪ್ರಾರಂಭಿಸಿದ್ದಾಗಿ ಹೇಳಿದ್ದಾರೆ. ಇದನ್ನು ಅವರು ಬಡವರ ನಿಧಿ ಬೇಟೆ ಎಂದು ಕರೆಯುತ್ತೇವೆ ಎಂದಿದ್ದಾರೆ.
ಎರಡನೇ ವಿಶ್ವ ಯುದ್ಧದ ಸಂದರ್ಭದ ಗ್ರೆನೇಡ್‌ಗಳು ಮತ್ತು 19 ನೇ ಶತಮಾನದ ಗನ್‌ಗಳಿಂದ ಹಿಡಿದು ಮೋಟಾರ್‌ಸೈಕಲ್ ಮತ್ತು ವಿದೇಶಿ ನಾಣ್ಯಗಳು, ಮುತ್ತುಗಳು ಮತ್ತು ಚಿನ್ನದ ಆಭರಣಗಳನ್ನು ಹೊಂದಿರುವ ಪರ್ಸ್‌ನವರೆಗೆ ಅನೇಕ ವಸ್ತುಗಳನ್ನು ಅವರು ಕಂಡುಕೊಂಡಿದ್ದಾರೆ. ಅವರ ಯೂಟ್ಯೂಬ್ ಚಾನಲ್ 4,000 ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ ಮತ್ತು ಸುಮಾರು 1.4 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ.
ಆಯಸ್ಕಾಂತಗಳೊಂದಿಗೆ ಮೀನುಗಾರಿಕೆ ಮಾಡುವ ಜನರು ಇತ್ತೀಚಿನ ತಿಂಗಳುಗಳಲ್ಲಿ ಇತರ ಆಶ್ಚರ್ಯಕರ ಆವಿಷ್ಕಾರಗಳನ್ನು ಮಾಡಿದ್ದಾರೆ. ಭಾರತದಲ್ಲಿ ಈ ಮ್ಯಾಗ್ನೆಟ್ ಮೀನುಗಾರಿಕೆ ಇನ್ನೂ ಹೆಚ್ಚಾಗಿ ಪ್ರಚಲಿತವಾಗಿಲ್ಲ, ಆದರೆ ವಿದೇಶದಲ್ಲಿ ಅನೇಕ ಮಂದಿ ಇದನ್ನು ಹವ್ಯಾಸ ಮಾಡಿಕೊಂಡಿದ್ದಾರೆ.












Click it and Unblock the Notifications