ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲ್ಯದ ನೆನಪು: ಹೊರಗೆ ಮಳೆ, ಒಳಗೆ ಆಹಾ! ಪತ್ರೊಡೆ, ಕಳಲೆ

By ಶಿವರಾಜ್ ಉಡುಪ
|
Google Oneindia Kannada News

ಬೆಳಿಗ್ಗೆ ಎಂದಿನಂತೆ ಮೊಬೈಲಿನ ಅಲಾರ್ಮು ಬಡಿದುಕೊಂಡಾಗ ಹೊರಗೆ ಜಿಟಿಜಿಟಿ ಮಳೆ ಸುರೀತಿತ್ತು. ಐದು ನಿಮಿಷ ಬಿಟ್ಟು ಎದ್ರಾಯ್ತೆಂದು ಅದನ್ನ ಸುಮ್ನಾಗಿಸಿ ಮತ್ತೆ ಮುಸುಕೆಳೆದಿದ್ದೊಂದೇ ಗೊತ್ತು.

"ಗಂಟೆ ಏಳಾಗತ್ತೀಗ! ಹಾಲು ತರೋಕೆ ಹೋಗ್ತ್ಯಾ ಇಲ್ವಾ ಎಂತ?" ಅಂತ ಅಮ್ಮ ಕೆಳಗಿಂದ ಕೂಗ್ದಾಗ್ಲೇ ಎಚ್ರಾಗಿದ್ದು!

ಈ ಬೆಳಗಿನ ಜಾವದ ಸಣ್ಣ ಮಳೆ ಪ್ರಭಾವನೇ ಅಂತದ್ದು. ಸುಮ್ನೆ ಎದ್ದಿರಾದ್ರೆ ಸರಿ, ಇಲ್ಲಾಂದ್ರೆ ಯಾರಾದ್ರೂ ಏಳ್ಸೋತನ್ಕ ಅಮಲು ಹತ್ತಿದಂಗೆ ನಿದ್ದೆ ಬರಿಸೋದ್ರಲ್ಲದು ಎಕ್ಸ್‌ಪರ್ಟು.

ಬಾಲ್ಯದ ನೆನಪು : ಹಿಂಗಿದ್ರು ನೋಡ್ರಿ ಧಾರವಾಡದಾಗ ನಮ್ಮ ನದಾಫ್ ಮಾಸ್ತರು! ಬಾಲ್ಯದ ನೆನಪು : ಹಿಂಗಿದ್ರು ನೋಡ್ರಿ ಧಾರವಾಡದಾಗ ನಮ್ಮ ನದಾಫ್ ಮಾಸ್ತರು!

ಈಗೀಗ ಸ್ವಲ್ಪ ಕಡಿಮೆಯಾಗಿರಬಹುದಾದ ಮಳೆ, ಹಿಂದೆಲ್ಲ ಮಲೆನಾಡನ್ನ ಅಕ್ಷರಶಃ ಮಳೆನಾಡನ್ನಾಗಿ ಮಾಡ್ತಿತ್ತು.

ಆಗಿನ ಮಳೆ, ನಮ್ಮ ದೋಣಿ

ಆಗಿನ ಮಳೆ, ನಮ್ಮ ದೋಣಿ

ಸಣ್ಣ ಮಕ್ಳಾದ ನಮ್ಗೆಲ್ಲ ಆವಾಗ ಬೇಗ ಏಳೋದಂದ್ರೆ ದೊಡ್ಡ ಸಾಹಸವೇ. ಆವಾಗ ಮಳೆಗಾಲವನ್ನೋದು ಕರೆಕ್ಟಾಗಿ ಮೇ ಅಂತ್ಯದಲ್ಲೇ ಶುರುವಾಗಿಬಿಡ್ತಿತ್ತು. ಅಂಗ್ಳದಲ್ಲೋ ಆಚೆ ಹೊಂಡ್ದಲ್ಲೋ ನೀರು ನಿಂತ್ರೆ ಸಾಕು, ನಮ್ ದೋಣಿಗಳೆಲ್ಲ ನೀರಿಗಿಳೀತಿದ್ವು.

ಹೋದ್ವರ್ಷದ ನೋಟ್ಸುಗಳೆಲ್ಲ ದೋಣಿ, ಡಬಲ್ ದೋಣಿ, ಕತ್ರಿದೋಣಿ ಆಗಿ ನಮ್ನಮ್ಮ ಕ್ಯಾಪ್ಟನ್ಸೀಲಿ ದೇಶಾಂತರ ಹೋಗ್ತಿದ್ದ ಖುಷಿ ಈಗ ವಿಮಾನ್ದಲ್ಹೋದ್ರೂ ಬರಲ್ಲೇನೋ.

ಹಾಂ..ಹೂಂ... ಅನೋದ್ರೊಳಗೆ ಮುಂಗಾರು ಶುರುವಾಗೇಬಿಡ್ತಿತ್ತು. ಆಲಿಕಲ್ಲು ಬಿದ್ರೆಸಾಕು ಮನೇಲಿ ಬ್ಯಾಡ ಅಂತ ಬೈತಿದ್ರೂ ಕೇಳ್ದೇ ಹೆರಕಲು ಓಡ್ತಿದ್ದು ಈಗ್ಲೂ ನೆನ್ಪಾಗತ್ತೆ.

ಚೇಳಿನ ಬಾಲಕ್ಕೆ ದಾರ ಕಟ್ಟುವವರ್ಯಾರು? ಬಾಲ್ಯದ ಆಟ ಆ ಹುಡುಗಾಟ..! ಚೇಳಿನ ಬಾಲಕ್ಕೆ ದಾರ ಕಟ್ಟುವವರ್ಯಾರು? ಬಾಲ್ಯದ ಆಟ ಆ ಹುಡುಗಾಟ..!

ಕೊಡೆ 'ಡಿಶ್' ಆದದ್ದು ನೆನಪಿದೆಯೇ?

ಕೊಡೆ 'ಡಿಶ್' ಆದದ್ದು ನೆನಪಿದೆಯೇ?

ರೈನ್ಕೋಟು, ಕೊಡೆ ಅಪರೂಪವಾದ ಆ ಕಾಲ್ದಲ್ಲಿ ಮುಕ್ಕಾಲುಭಾಗ ಹುಡುಗ್ರು ಶಾಲೆಗೆ ಪ್ಲಾಸ್ಟಿಕ್ ಕೊಪ್ಪೆ ತರ್ತಿದ್ದದು ಮಾಮೂಲಿ. ಅದನ್ನ ಶಾಲೆಗೆ ಬಂದ್ಮೇಲೆ ಕೊಡ್ಕಿ ನೀರು ತೆಗ್ದು ಮಡಚಿಡೋದೆ ಒಂದು ಸಾಹಸ.

ನನಗೆ ಅಪ್ಪ ಒಂದು ಕೊಡೆ ತೆಗ್ಸಿಕೊಟ್ಟಿದ್ರೂ ಕೊಪ್ಪೆಯ ಆಕರ್ಷಣೆ ತಡೆಯಲಾಗದೇ ಹಟ ಹಿಡಿದು ತೆಗೆಸಿಕೊಂಡು ಒಂದ್ವಾರ ಹಾಕ್ಕೊಂಡು ಕೊನೆಗೆ ಅದನ್ನ ಮಡಚಿಡೋ ರಗಳೆಗೆ ಬೇಸತ್ತು ಮತ್ತೆ ಕೊಡೆಗೇ ಮರಳಿದ್ದೆ. ಜೋರುಗಾಳಿಗೆ ಕೊಡೆ ಹಿಂದುಮುಂದಾಗಿ ಕೊಪ್ಪೆಯವರೆಲ್ಲ ನಕ್ಕು, ಮುಜುಗರಕ್ಕೆ ಸಿಕ್ಕಿದ ಅನುಭವ ಕೆಲವ್ರಿಗಾದ್ರೂ ಆಗಿರತ್ತೆ!

ಮಲೆನಾಡಲ್ಲಿ ಜೋರು ಮಳೆಯಂತೆ... ನೆನಪಿನ ದೋಣಿ ತುಂಬ ಸಂಭ್ರಮದ ಸಂತೆ! ಮಲೆನಾಡಲ್ಲಿ ಜೋರು ಮಳೆಯಂತೆ... ನೆನಪಿನ ದೋಣಿ ತುಂಬ ಸಂಭ್ರಮದ ಸಂತೆ!

ಕೆಸರೆಂಬೋ ಬಾಲ್ಯದ ಆಪತ್ಬಾಂಧವ!

ಕೆಸರೆಂಬೋ ಬಾಲ್ಯದ ಆಪತ್ಬಾಂಧವ!

ಇನ್ನು ಮಣ್ಣು ರಸ್ತೇಲಿ ಜಾರಿಬೀಳೋದಂತೂ ಪ್ರತಿದಿನ ಇದ್ದಂಗಿರ್ತಿತ್ತು. ಅಪ್ಪಿತಪ್ಪಿ ಕೆಸರಿದ್ದಲ್ಲಿ ಬಿದ್ರಂತೂ ಮುಗೀತು ಯೂನಿಫಾರ್ಮಿನ ಬಟ್ಟೆಯೆಲ್ಲ ಕೆಂಪು ಕೆಂಪು ರಂಗಿನೋಕುಳಿ.

ಶಾಲೆಗೆ ಹೋಗೋಕೆ ಮನಸಿಲ್ದಿರೋರಿಗೆ, ಬೇಕಂತನೇ ಚಕ್ಕರ್ ಹಾಕೋವ್ರಿಗೆ ಇದೊಂದು ಒಳ್ಳೆ ನೆಪವಾಗ್ತಿತ್ತು. ಇದು ಜಾಸ್ತಿ ಬಳಕೆಯಾಗ್ತಿದ್ದಿದ್ದು ಯೂನಿಫಾರ್ಮ್ ಹಾಕದಿದ್ದಾಗ.

"ಜಾರಿಬಿದ್ದು ಬಟ್ಟೆ ಕೆಸ್ರಾಗಿತ್ತು ಸಾ.." ಅಂತ ಅಳುಮುಖದಲ್ಲಿ ಹೇಳ್ತಿದ್ರೆ, ಆ ಸಾರಾದ್ರೂ ಸುಮ್ನಿರ್ದೇ ಏನ್ ಮಾಡ್ತಿದ್ರು!!

ಮಳೆಗಾಲ ಎಂಬ ಜಗಳದ ಕಾರಣ

ಮಳೆಗಾಲ ಎಂಬ ಜಗಳದ ಕಾರಣ

ಕೊಡೆಗಳು ಅದ್ಲುಬದ್ಲಾಗೋದು, ಅವ್ನನ್ನ ಕರ್ಕಂಡೋದ ನನ್ನ ಬಿಟ್ಟೋದ ಅಂತೆಲ್ಲ ಜಗಳವಾಡಿ ಮಾತು ಬಿಡೋದಕ್ಕೂ ಈ ಮಳೇನೇ ಕಾರಣವಾಗ್ತಿತ್ತಲ್ವಾ?

ಹೈಸ್ಕೂಲಿಗೆ ಹೋಗ್ತಿದ್ದಾಗ ಅಪರೂಪಕ್ಕೆಲ್ಲಾದ್ರೂ ಒಂದೆರಡ್ರೂಪಾಯಿ ಸಿಕ್ರೆ ಅದ್ರಲ್ಲೇ ಸೇಂಗಾಬೀಜ ಕೊಂಡು ಜತೆಯವರೊಡನೆ ಹಂಚಿ ತಿನ್ತಾ ಬರೋದ್ರಲ್ಲಿನ ಖುಷಿ, ಸ್ವಾದ ಈಗಿನ ಎಷ್ಟು ಸ್ಟಾರಿನ ಹೋಟ್ಲಲ್ಲೂ ಸಿಗಲಾರದು ಅನ್ಸುತ್ತೆ.

ಆಹಾ ಬಲು ರುಚಿಯ ಹಣ್ಣುಗಳು!

ಆಹಾ ಬಲು ರುಚಿಯ ಹಣ್ಣುಗಳು!

ತಿನ್ನೋ ವಿಷಯಕ್ಕೆ ಬಂದ್ರೂ ಮಳ್ಗಾಲ ಫೇವರೈಟು. ಕೌಳಿಕಾಯಿ, ಹುಲಿಗೆಹಣ್ಣು, ಅಂಕೋಲೆ ಹಣ್ಣುಗಳಿಂದ ಹಿಡಿದು ಅನಾನಸು ಹಲಸಿನವರೆಗೂ ತಿಂದಷ್ಟು ಹಣ್ಣು ಸಿಗ್ತಿದ್ವು ಆಗ.

ಮಲ್ನಾಡಿನ ಮಳೆಗಾಲದ ತಿನಿಸುಗಳ ಬಗ್ಗೆ ಬರೆಯೋವಾಗ ಕಳಲೆ ಕೆಸುಗಳ ಬಗ್ಗೆ ಬರೀದಿದ್ರೆ ಅದು ಪೂರ್ತಿನೇ ಅಲ್ಲಾಂತ!

ಹೊರಗೆ ಮಳೆ, ಒಳಗೆ ಪತ್ರೊಡೆ, ಕಳಲೆ!

ಹೊರಗೆ ಮಳೆ, ಒಳಗೆ ಪತ್ರೊಡೆ, ಕಳಲೆ!

ಕಳಲೆ ಹುಳಿ, ಪಲ್ಯ ಮತ್ತೆ ಮರಗೆಸದ ಪತ್ರೊಡೆಗಳು ಮಳೆಗಾಲದ ಬ್ರಾಂಡ್ ರೆಸಿಪಿಗಳನ್ಬಹುದು. ಪ್ರತಿ ಮನೇಲೂ ಪತ್ರೊಡೆಪ್ರಿಯರು ಒಬ್ಬರಾದ್ರೂ ಇರ್ತಾರೆ.

ಈ ಕೆಸು ಅಥವಾ ಕೆಸ ಅನ್ನೋದು ಮಲ್ನಾಡಿನ ಕೆಲ ಕಾರ್ಮಿಕರ ಆಪತ್ಬಾಂಧವ ತರಕಾರಿ ಕೂಡ. ಮನೇಲಿ ಬೇರೇನೂ ಇಲ್ದಿದ್ದಾಗ, ತೋಟದಿಂದ ಕೆಸುವಿನ ಬಳ್ಳಿ ತಂದು ಹುಳಿ ಮಾಡೋದು ಮಾಮೂಲು. ದಿಂಡಿನ್ಕಾಯಿ ಗೊಜ್ಜು, ಅಪ್ಪೆಸಾರೂ ಮಳೆಗಾಲದ ವೈಶಿಷ್ಟ್ಯಾನೆ. ಇರ್ಲಿ ಬಿಡಿ, ಏನೋ ಹೇಳಕ್ಹೋಗಿ ಇನ್ನೇನೋ ಬಂದಂಗಾಯ್ತಲ್ವಾ.

ಸಾರಗಳ ಮೇಲಿನ ಸರ್ಕಸ್

ಸಾರಗಳ ಮೇಲಿನ ಸರ್ಕಸ್

ಮಳೆ ಜೋರಾದ್ರೆ ಸಾಕು, ಇದ್ದಬಿದ್ದ ಹಳ್ಳಗಳೆಲ್ಲ ತುಂಬಿ ಹರೀತಿದ್ವು. ಈಗಿನಂತೆ ಎಲ್ಲೆಲ್ಲೂ ಮೋರಿ ಸೇತುವೆಗಳಿಲ್ಲದ ಸಮಯ ಆಗ.

ದೊಡ್ಡೋರು ಯಾರಾದ್ರೂ ಹಳ್ಳ ದಾಟ್ಸೋಕೆ ಬಂದೇಬರ್ತಿದ್ರು. ಅವರಿಗೂ ದಾಟೋಕಾಗದಷ್ಟು ನೀರು ಬಂತಂದ್ರೆ ಅವತ್ತು ಶಾಲೆಗೆ ರಜಾನೇ!

ಕೆಲವಕ್ಕೆ ಅಡ್ಡಲಾಗಿ 'ಸಾರ' ಎಂದು ಒಂದೆರಡು ಗಳಗಳನ್ನೋ, ಅಡಿಕೆ ಮರನ್ನೋ ಹಾಕಿಡ್ತಿದ್ರು. ಕಾಲಿಟ್ರೆ ಒಂದು ಮೇಲೆ ಇನ್ನೊಂದು ಕೆಳಗೆ ಹೋಗುವ ಇವುಗಳ ಮೇಲೆ ಬ್ಯಾಲೆನ್ಸ್ ಮಾಡ್ತ ಹೋಗೋದೂ ಒಂದು ಸರ್ಕಸ್ಸೇ ಸರಿ.

ಹಳ್ಳ ತುಂಬುವ ಸಂಭ್ರಮ

ಹಳ್ಳ ತುಂಬುವ ಸಂಭ್ರಮ

ತುಂಬಿ ಹರಿಯೋ ಹಳ್ಳಗಳಲ್ಲಿ ಅನಾಹುತಗಳಾಗೋದು ಇವತ್ತಿಗೂ ನಿಂತಿಲ್ಲವನ್ನೋದೇ ವಿಷಾದ. ಹೊಳೆ ಅನ್ನೋದನ್ನ ಕಾಣುವುದೇ ಅಪರೂಪವಾಗಿದ್ದ ನಮಗೆ ಹಳ್ಳಗಳೇ ಹೊಳೆ, ಸಮುದ್ರ ಎಲ್ಲವೂ ಆಗ್ತಿದ್ವು.

ಹಳ್ಳ ತುಂಬಿ ತೋಟದ ಮೇಲೆ ಬಂದಾಗ ದೊಡ್ಡವರಿಗೆಲ್ಲ ಚಿಂತೆಯಾದ್ರೆ ನಮಗೆಲ್ಲ ಅದನ್ನ ನೋಡೋದೇ ಖುಷಿ!! ಹಳ್ಳದ ಆಸುಪಾಸಿನ ಬಿರುಕುಗಳಿಂದ ಏಳುತ್ತಿದ್ದ ಜಲದ ನೀರು ನೋಡೋ ಆಕರ್ಷಣೆ ಇನ್ನೂ ಇದೆ ಅನ್ನಬಹುದು.

ಹಸಿರಾಗಿದೆ ನೆನಪುಗಳು

ಹಸಿರಾಗಿದೆ ನೆನಪುಗಳು

ಇಂಬ್ಳ ಕಚ್ಚಿ ಗೊತ್ತಾಗ್ದೇ ಶಾಲೆಗ್ಹೋದ್ಮೇಲೆ ರಕ್ತನೋಡಿ ಫಜೀತಿಯಾಗಿದ್ದು, ಹವಾಯ್ ಚಪ್ಲಿ ಹಾಕ್ಕೊಂಡು ಬೆನ್ನಿಗೆಲ್ಲ ಕೆಸ್ರು ಹಾರಿಸ್ಕೊಂಡಿದ್ದು ಇವೆಲ್ಲ ನೆನಪಾದ್ರೆ ಈಗ್ಲೂ ನಗು ಬರುತ್ತೆ.

ನಿತ್ಯವೂ ಕ್ಯಾಂಡಲ್ ಲೈಟ್ ಡಿನ್ನರ್!

ನಿತ್ಯವೂ ಕ್ಯಾಂಡಲ್ ಲೈಟ್ ಡಿನ್ನರ್!

ಬರೆಯೋಕ್ಹೋದ್ರೆ ಎಷ್ಟೋ ನೆನಪುಗಳಿವೆ. ನಾನೊಂದಿಷ್ಟು ಬರೆದೆ. ನೀವೊಂದಿಷ್ಟು ಬರೀರಿ. ಬೋರೆನಿಸಿದ್ರೆ ಮರೀರಿ ಆಯ್ತಾ! ಅಗೋ ಮತ್ತೆ ಮಳೆ ಶುರುವಾಯ್ತು, ಕರೆಂಟಿನ್ನೂ ಬಂದಿಲ್ಲ ಇವತ್ತು ರಾತ್ರಿನೂ ಕತ್ಲೂಟನೇ ಗತಿಯಿರ್ಬೇಕು! ಬರ್ಲಾ....

English summary
Unforgettable memories of childhood: Shivaraj Udupa shared his childhood memories with the Malnad monsoon, life, school and special dishes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X