Ugadi 2024: ಏಕೆ ಹೀಗಾಯ್ತು ಈ ಬಾರಿ..? ಎಲ್ಲಿ ಹೋಯಿತು ಯುಗಾದಿಯ ಆ ಸಂಭ್ರಮ..?
ಯುಗಾದಿ ಎನ್ನುವುದು ಮನುಷ್ಯರಾದ ನಮಗೆ ಹಬ್ಬವಾದರೆ ಪ್ರಕೃತಿಗೊಂದು ಮರುಹುಟ್ಟು.. ಆದರೆ ಈ ಬಾರಿಯ ಯುಗಾದಿ ಇತ್ತ ಮನುಷ್ಯರಿಗಾಗಲೀ ಅತ್ತ ಪ್ರಕೃತಿಗಾಗಲೀ ಪುಳಕ ತಂದಿಲ್ಲ. ಕಾರಣ ಮಳೆ ಸುರಿದು ನಿಸರ್ಗ ತಂಪಾಗದೆ ಬಿಸಿಲಿಗೆ ಒಣಗಿ ಕೆಂಪಾಗುತ್ತಿದೆ.. ತಂಗಾಳಿ ಬೀಸಬೇಕಾದ ಸಮಯದಲ್ಲಿ ಬಿಸಿಗಾಳಿ ಎಲ್ಲರನ್ನು ಸುಡುತ್ತಿದೆ... ಏಕೆ ಹೀಗೆ? ನಿಜವಾಗಿ ಯುಗಾದಿಯ ವಾತಾವರಣ ಹೀಗಿರುತ್ತಿತ್ತಾ?.
ಸಾಮಾನ್ಯವಾಗಿ ಯುಗಾದಿ ಹೊತ್ತಿಗೆ ಒಂದೋ ಎರಡೋ ಮಳೆ ಸುರಿಯುತ್ತಿತ್ತು. ಬಿಸಿಲ ಪ್ರಖರತೆ ಇದ್ದರೂ ತಂಗಾಳಿ ಬೀಸುತ್ತಿತ್ತು. ಅರಣ್ಯದತ್ತ ಮುಖ ಮಾಡಿದರೆ ಪ್ರಕೃತಿಯಲ್ಲಿನ ಪುಳಕ ಕಣ್ಣಿಗೆ ರಾಚುತ್ತಿತ್ತು. ಗಿಡ ಮರಗಳು ಚಿಗುರಿ ಹಸಿರೆಲೆಗಳಿಂದ ಕಂಗೊಳಿಸುತ್ತಿದ್ದರೆ, ಬೇವು ಮಾವುಗಳು ಹೂ ಕಾಯಿಗಳಿಂದ ಆಕರ್ಷಿಸುತ್ತಿದ್ದವು. ಇನ್ನು ಮಲೆನಾಡಿನಲ್ಲಂತೂ ಕಾನನದ ಕುಸುಮಗಳ ಸುವಾಸನೆ, ಅದರ ಮೇಲೆ ಮಕರಂದ ಹೀರುವ ಜೇನು ನೊಣಗಳ ಝೇಂಕಾರ ಕರ್ಣಾನಂದ ನೀಡುತ್ತಿತ್ತು.

ಹಾಗೆನೋಡಿದರೆ ಯುಗಾದಿ ಎನ್ನುವುದು ನಿಸರ್ಗಕ್ಕೊಂದು ಮರುಹುಟ್ಟು ಅಷ್ಟೇ ಅಲ್ಲ ಮುಂದೆ ಬರಲಿರುವ ಎಲ್ಲಾ ಹಬ್ಬಗಳಿಗೂ ಇದು ಮುನ್ನುಡಿ. ಯುಗಾದಿಯಲ್ಲಿ ಬಾರ್ಹಸ್ಪತ್ಯಮಾನ, ಚಾಂದ್ರಮಾನ, ಸೌರಮಾನ ಎಂಬ ಮೂರು ರೀತಿಯ ಆಚರಣೆಯಿದೆ. ಹಾಗೆಯೇ ದೇಶದಾದ್ಯಂತ ಇದರ ಆಚರಣೆ ವಿಭಿನ್ನವಾಗಿದೆ. ಉತ್ತರ ಭಾರತದಲ್ಲಿ ಬಾರ್ಹಸ್ಪತ್ಯಮಾನದಲ್ಲಿ ಯುಗಾದಿಯನ್ನು ಆಚರಿಸಿದರೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಚಾಂದ್ರಮಾನ ಹಾಗೂ ಸೌರಮಾನ ಯುಗಾದಿಯನ್ನು ಆಚರಿಸುವ ಪದ್ಧತಿಯಿದೆ. ಇನ್ನು ನಾವು ಆಚರಿಸುವ ಚಾಂದ್ರಮಾನ ಮತ್ತು ಸೌರಮಾನ ಯುಗಾದಿಯನ್ನು ಗಮನಿಸಿದರೆ ಒಂದು ಚಂದ್ರ ಮತ್ತೊಂದು ಸೂರ್ಯನನ್ನು ಅವಲಂಭಿಸಿರುವುದು ಎದ್ದು ಕಾಣಿಸುತ್ತದೆ.
ಚಾಂದ್ರಮಾನ ಯುಗಾದಿಯ ವಿಶೇಷತೆ ಏನು?
ಚಾಂದ್ರಮಾನ ಯುಗಾದಿ ಕುರಿತಂತೆ ಹೇಳುವುದಾದರೆ, ಚಂದ್ರನ ಚಲನೆಯನ್ನು ಆಧರಿಸಿ ಸಾಮಾನ್ಯವಾಗಿ ಅಮಾವಾಸ್ಯೆ-ಹುಣ್ಣಿಮೆಯನ್ನು ಮತ್ತು ಇವುಗಳ ಆಧಾರದಲ್ಲಿ ತಿಂಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಪದ್ಧತಿಯೇ ಚಾಂದ್ರಮಾನವಾಗಿದೆ. ಈ ಪದ್ಧತಿಯಲ್ಲಿ ಚಂದ್ರನ ಚಲನೆಯಲ್ಲಿ ವ್ಯತ್ಯಾಸವಾಗುವುದರಿಂದ ಚಾಂದ್ರಮಾನ ಯುಗಾದಿ ಕೂಡ ನಿರ್ಧಿಷ್ಟ ದಿನಾಂಕದಲ್ಲಿ ಬಾರದಿರುವುದನ್ನು ನಾವು ಕಾಣಬಹುದಾಗಿದೆ.

ಆದರೆ ಸೌರಮಾನ ಯುಗಾದಿ ಹಾಗಿಲ್ಲ ಇದು ಮೇಷ ರಾಶಿಗೆ ಸೂರ್ಯ ಪ್ರವೇಶಿಸುವ ದಿನದಂದು ಆಚರಿಸಲಾಗುತ್ತದೆ. ಭೂಮಿಯ ಚಲನೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದಿರುವುದರಿಂದ ಸಾಮಾನ್ಯವಾಗಿ ನಿಗದಿತ ಸಮಯದಲ್ಲಿ ಅಂದರೆ ಏಪ್ರಿಲ್ 14ರಂದು ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಪ್ರತಿವರ್ಷದ ಚೈತ್ರಮಾಸದಲ್ಲಿ ಬರುವ ಮೊದಲ ದಿನವನ್ನು ಸಂವತ್ಸರಾದಿ ಪಾಡ್ಯಮಿ ಎಂದು ಪರಿಗಣಿಸಿ ಯುಗಾದಿಯನ್ನು ವರ್ಷದ ಮೊದಲ ಹಬ್ಬವಾಗಿ ಚೈತ್ರಮಾಸ ಶುದ್ಧಪಾಡ್ಯಮಿಯಂದು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಕರಾವಳಿ ಭಾಗದಲ್ಲಿ ಸೌರಮಾನ ಯುಗಾದಿಯನ್ನು ಆಚರಿಸುವುದು ರೂಢಿಯಲ್ಲಿದೆ.
ಹೊಸ ಕಾರ್ಯಾರಂಭಕ್ಕೆ ಯುಗಾದಿ ಶುಭ
ಭಾರತದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ, ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವರ್ಷದಲ್ಲಿ ಬರುವ ಮೂರೂವರೆ ದಿನಗಳ ಶುಭಗಳಿಗೆ ಅತ್ಯಂತ ಶ್ರೇಷ್ಠಾವಾದದು ಎಂದು ಹೇಳಲಾಗಿದೆ. ಇದರಲ್ಲಿ ಯುಗಾದಿಯೂ ಒಂದಾಗಿದ್ದು, ಯುಗಾದಿ ದಿನದಂದು ಕೈಗೊಳ್ಳುವ ಕಾರ್ಯಗಳು ಯಶಸ್ವಿಯಾಗುತ್ತವೆ ಎಂಬ ನಂಬಿಕೆ ಜನವಲಯದಲ್ಲಿದೆ.
ಹೀಗಾಗಿ ಸಾಮಾನ್ಯವಾಗಿ ಯುಗಾದಿ ಹಬ್ಬದ ದಿನದಂದು ಹೊಸ ಕಾರ್ಯ ಚಟುವಟಿಕೆ, ಹೊಸ ಪದಾರ್ಥಗಳ ಖರೀದಿ ಸೇರಿದಂತೆ ಹಲವು ಕೆಲಸ ಕಾರ್ಯಗಳನ್ನು ಆರಂಭಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಯುಗಾದಿ ಆಚರಣೆ ವೇದಗಳ ಕಾಲದಿಂದಲೂ ನಡೆದು ಬಂದಿದ್ದು, ಈ ಕುರಿತಂತೆ ಅಥರ್ವಣ ವೇದ, ಶತಪಥ ಬ್ರಾಹ್ಮಣ, ಧರ್ಮಸಿಂಧು, ನಿರ್ಣಯ ಸಿಂಧು ಮುಂತಾದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಯುಗಾದಿಯ ಬಗ್ಗೆ ಉಲ್ಲೇಖವಿರುವುದನ್ನು ಕಾಣಬಹುದಾಗಿದೆ.
ಬೇವು ಬೆಲ್ಲ ತಿನ್ನುವ ಸಂಪ್ರದಾಯವೇಕೆ?
ಶ್ರೀರಾಮನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಬಂದು ರಾಮರಾಜ್ಯವಾಳಲು ಪ್ರಾರಂಭಿಸಿದ್ದು, ಶಾಲಿವಾಹನ ಶಕೆ ಆರಂಭವಾದದ್ದು ಕೂಡ ಯುಗಾದಿ ದಿನವೇ ಎಂದು ಹೇಳಲಾಗುತ್ತಿದೆ. ಯುಗಾದಿ ಹಬ್ಬದ ಆಚರಣೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಿಭಿನ್ನವಾಗಿರುವುದನ್ನು ನಾವು ಕಾಣಬಹುದಾದರೂ ಸಾಮಾನ್ಯವಾಗಿ ಹಬ್ಬದ ದಿನದಂದು ಸೂರ್ಯೋದಯಕ್ಕೂ ಮುನ್ನ ಅಂದರೆ ಮುಂಜಾನೆ ಎದ್ದು ಮಂಗಳ ಸ್ನಾನ ಮಾಡಿ ಶ್ರೀರಾಮನನ್ನು ಸ್ಮರಣೆ ಮಾಡಿ ಹೊಸಬಟ್ಟೆ ತೊಟ್ಟು ಮನೆಯನ್ನೆಲ್ಲ ಮಾವು-ಬೇವು ಎಲೆಗಳ ತೋರಣದಿಂದ ಸಿಂಗರಿಸಿ ಹೊಸವರ್ಷವನ್ನು ಬರಮಾಡಿಕೊಳ್ಳುವುದು ಎಲ್ಲೆಡೆಯೂ ಕಂಡು ಬರುತ್ತದೆ.
ಇನ್ನು ಯುಗಾದಿಯಲ್ಲಿ ಬೇವು ಬೆಲ್ಲವನ್ನು ತಿಂದು ವರ್ಷಪೂರ್ತಿ ಜೀವನದಲ್ಲಿ ಬರುವ ಕಷ್ಟಸುಖಗಳನ್ನು ಸಮಾನಾಗಿ ಎದುರಿಸುವ ಶಕ್ತಿಯನ್ನು ನೀಡುವಂತೆ ಬೇಡಿಕೊಳ್ಳಲಾಗುತ್ತದೆ. ಜತೆಗೆ ಹೋಳಿಗೆ, ಪಾಯಸ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ತಯಾರಿಸಿ ಮನೆಯವರೆಲ್ಲರೂ ಸಾಮೂಹಿಕ ಭೋಜನ ಮಾಡಿ ಎಲ್ಲರೂ ಒಟ್ಟಾಗಿ ಒಂದಾಗಿ ಬದುಕ ಬೇಕೆನ್ನುವುದನ್ನು ಇದು ಸಾರುತ್ತದೆ. ಬದಲಾದ ಕಾಲಘಟ್ಟದಲ್ಲಿ ಹಬ್ಬಗಳ ಆಚರಣೆಯಲ್ಲಿ ಒಂದಷ್ಟು ಬದಲಾವಣೆಗಳು ಆಗುತ್ತಿವೆ.
ಯುಗಾದಿಯ ಹರುಷಕ್ಕಾಗಿ ಪ್ರಾರ್ಥಿಸೋಣ
ಒತ್ತಡದ ಬದುಕಿನಲ್ಲಿ ಮೊದಲಿನಂತೆ ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸಿ ಹಬ್ಬದೂಟ ಮಾಡುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರವರು ಅವರವರ ಅನುಕೂಲಕ್ಕೆ ತಕ್ಕಂತೆ ಹಬ್ಬಾಚರಣೆ ಮಾಡುತ್ತಿದ್ದಾರೆ. ಆದರೆ ಈ ಬಾರಿ ಒಂದೆಡೆ ಬರ, ಮತ್ತೊಂದೆಡೆ ನೀರಿಗೆ ಹಾಹಾಕಾರ, ಮಗದೊಂದೆಡೆ ತಲೆಸುಡುವ ಬಿಸಿಲು, ಇದರಾಚೆಗೆ ಗಗನಕ್ಕೇರಿದ ಹೂ, ಹಣ್ಣು, ತರಕಾರಿ ಇನ್ನಿತರ ಪದಾರ್ಥಗಳ ಬೆಲೆಗಳು ಇಂತಹ ಸಂಕಷ್ಟದಲ್ಲಿಯೂ ಜನ ಯುಗಾದಿಯನ್ನು ಸ್ವಾಗತಿಸುತ್ತಿದ್ದಾರೆ. ಅದು ಏನೇ ಇರಲಿ ಯುಗಾದಿ ಎಲ್ಲರ ಬದುಕಿಗೆ ಹರುಷ ತರಲೆಂದು ಬಯಸೋಣ.
-
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಇರಾನ್ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ರಷ್ಯಾ ಬೆಂಬಲ? ಇಲ್ಲಿವೆ ಪ್ರಮುಖಾಂಶಗಳು -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ











Click it and Unblock the Notifications