How to stay healthy in summer : ಬೇಸಿಗೆ ತಾಪಮಾನ ಹೆಚ್ಚಳ: ಆರೋಗ್ಯ ರಕ್ಷಣೆಗೆ ಈ ಸಲಹೆಗಳನ್ನು ಪಾಲಿಸಿ
ಬೇಸಿಗೆ ಋತು ಆರಂಭದಲ್ಲೇ ರಾಜ್ಯದಲ್ಲಿ ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಮೀರಿದೆ. ಮಾರ್ಚ್‌ನಿಂದ ಮೇ ತಿಂಗಳವರೆಗೆ ಬೇಸಿಗೆ ಋತು ಇರುತ್ತದೆ. ಆದರೆ ಆರಂಭದ ಎರಡು ವಾರದಲ್ಲೇ ಜನರಿಗೆ ಸುಡುವ ಬಿಸಿಲು ಕಾಡುತ್ತಿದೆ. ಆರಂಭದಲ್ಲೇ ತಾಪ ಹೆಚ್ಚಾಗಿರುವುದರಿಂದ ಈ ಬೇಸಿಗೆಯ ಕಾವು ಮತ್ತಷ್ಟು ಏರಲಿದೆ. ಬೇಸಿಗೆಯಲ್ಲಿ ಜನರು ಆರೋಗ್ಯವನ್ನು ಕಾಪಾಡಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಲವು ಸಲಹೆಗಳನ್ನು ನೀಡಿದೆ. ಬಳ್ಳಾರಿ ಜಿಲ್ಲೆಯಲ್ಲಿ ಬೇಸಿಗೆ ತಾಪಮಾನವು ಹೆಚ್ಚಾಗಿದ್ದು ಸಾರ್ವಜನಿಕರು ಮುಂಜಾಗ್ರತೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಎಲ್.ಜನಾರ್ಧನ್ ಅವರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿಯೇ ಹಲವು ರೀತಿಯ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವುದು ಸಹಜವಾಗಿದೆ. ಹೀಗಾಗಿ ಕೊರೊನಾದ ಜಾಗ್ರತೆಯೊಂದಿಗೆ ಇತರೆ ರೋಗಗಳ ಬಗ್ಗೆಯೂ ಎಚ್ಚರಿಕೆ ವಹಿಸುವುದು ಮತ್ತು ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆಯೂ ಗಮನಹರಿಸಬೇಕಾಗಿದೆ. ಕುಡಿಯುವ ನೀರು, ಮನೆ ಸುತ್ತಾ ಮುತ್ತಾ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಈ ಮೂಲಕ ಸೊಳ್ಳೆ ದಾಳಿ ತಪ್ಪಿಸಿಕೊಳ್ಳಬಹುದು. ಸಾಮಾನ್ಯವಾಗಿ ಎಲ್ಲಾ ಬೇಸಿಗೆ, ಬಿಸಿಗಾಳಿ, ಶಾಖಾಘಾತ ಸಂದರ್ಭಗಳಲ್ಲಿ ಪಾಲಿಸಬೇಕಾದ ಕೆಲವು ಅಂಶಗಳ ಬಗ್ಗೆ ಮಾಹಿತಿ ಇಲ್ಲಿದೆ...

ಬದಲಾವಣೆ ಮಾಡಬೇಕಾದ್ದೇನು?
* ಸಡಿಲವಾದ, ತೆಳು ಬಣ್ಣದ ಹತ್ತಿಯ ಬಟ್ಟೆ ಧರಿಸಿರಿ.
* ಕೈಗೆಟುಕುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಿ.
* ಆಗಾಗ್ಗೆ ನಿಧಾನವಾಗಿ ಧಾರಳವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರನ್ನು ಕುಡಿಯಿರಿ.
* ಹಣ್ಣಿನ ರಸ/ ಪಾನಕಗಳನ್ನು ಕುಡಿಯಿರಿ.
* ಹತ್ತಿಯ ನುಣುಪಾದ ಬಟ್ಟೆ / ಟಿಶ್ಯೂ ಕರವಸ್ತ್ರದಿಂದ ಬೆವರನ್ನು ಒರೆಸಿರಿ.
* ನೀರು, ಮಜ್ಜಿಗೆ / ಎಳೆನೀರು ಕುಡಿಯಬಹುದು.
* ಬೆಚ್ಚಗಿನ, ಮಸಾಲೆ ರಹಿತ, ಶುದ್ದ ಸಾತ್ವಿಕ ಆಹಾರ ಸೇವಿಸಿರಿ.
* ಗಾಳಿಯಾಡುವಂತಿರುವ ಪಾದರಕ್ಷೆ ಧರಿಸಿರಿ.
* ಮನೆಯಿಂದ ಹೊರಗಡೆ ಹೋಗುವಾಗ ಜೊತೆಯಲ್ಲಿ ತಪ್ಪದೇ ಶುದ್ದ ಕುಡಿಯುವ ನೀರನ್ನು ತೆಗೆದುಕೊಂಡು ಹೋಗಬೇಕು.

ತೊಂದರೆ ಉಂಟಾದಾಗ ಏನು ಮಾಡಬೇಕು?
* ವ್ಯಕ್ತಿ ತೊದಲು ಮಾತು ಅಥವಾ ಅರ್ಥರಹಿತವಾಗಿ ಬಡಬಡಿಸಿದ್ದಲ್ಲಿ, ಕೂಡಲೇ ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಿರಿ. ಕೆಳಗೆ ಮಲಗಿಸಿ, ಕಾಲುಗಳನ್ನು ಮೇಲಕೆತ್ತಿ ಆತ/ಆಕೆಯ ಹಣೆ, ಕತ್ತು, ಪಾದ ತೊಡೆಯ ಸಂದುಗಳನ್ನು ಒದ್ದೆ ಬಟ್ಟೆಯಿಂದ ಒರೆಸಿರಿ (ತಂಪಾದ ಅಥವಾ ಐಸ್ ನೀರಿನಿಂದ ಒರೆಸಬೇಡಿ).
* ಚರ್ಮ ಕೆಂಪಾದರೆ, ಬೆವರು ಕಡಿಮೆಯಾದರೆ, ದೇಹದ ಉಷ್ಣತೆ ಜಾಸ್ತಿಯಾದರೆ, ದೀರ್ಘವಾದ ತೀರ್ವ ಉಸಿರಾಟವಿದ್ದಲ್ಲಿ, ತುರ್ತಾಗಿ ವೈದ್ಯರನ್ನು ಸಂಪರ್ಕಿಸಿ.
* ಹತ್ತಿರದ ವೈದ್ಯರನ್ನು ಕರೆಸಿರಿ ಅಥವಾ 104ಕ್ಕೆ ಕರೆ ಮಾಡಿರಿ.
* ಆಪತ್ಕಾಲದಲ್ಲಿ ನೀವು ಕೈಗೊಳ್ಳುವ ಶೀಘ್ರ ಸಮಯೋಚಿತ ಪ್ರಜ್ಞಾಪೂರ್ವಕ ಕ್ರಮವು ಆಘಾತಕ್ಕೊಳಗಾದ ವ್ಯಕ್ತಿಯ ಪ್ರಾಣ ಉಳಿಸಬಲ್ಲದು.

ಏನು ಮಾಡಬಾರದ್ದು
ಶಾಖಾಘಾತದ ಲಕ್ಷಣಗಳು: ಸಂಭ್ರಾಂತಿ, ಅಸಂಗತ ಮಾತು, ವ್ಯತ್ಯಸ್ಥಪ್ರಜ್ಞೆ (Variable Consciousness) ಇವುಗಳಾಗಿವೆ.
* ಬಿಗಿಯಾದ, ಗಾಢ ಬಣ್ಣದ, ಸಿಂಥೆಟಿಕ್ ಬಟ್ಟೆ ಧರಿಸಬಾರದು.
* ಕುಷನ್‍ಯುಕ್ತ ಕುರ್ಚಿಯಲ್ಲಿ ಕೂಡಬೇಡಿ.
* ಸೋಡಾ, ಇತ್ಯಾದಿ ಕಾರ್ಬೋನೇಟೆಡ್ ತಂಪು ಪಾನಿಯಗಳನ್ನು ಕುಡಿಯಬೇಡಿ(ಬಾಯಾರಿಕೆಯಾದಾಗಲೆಲ್ಲಾ ಕಡ್ಡಾಯವಾಗಿ ನೀರನ್ನು ಕುಡಿಯಿರಿ).
* ಬೆವರನ್ನು ಒರೆಸಲು ಒರಟಾದ ಬಟ್ಟೆಯನ್ನು ಉಪಯೋಗಿಸಬೇಡಿ.
* ಕಾಫಿ, ಟೀ, ಅತಿ ಸಕ್ಕರೆ ಅಂಶವುಳ್ಳ ಪಾನೀಯ ಅತಿಯಾಗಿ ಸೇವಿಸಬೇಡಿ.
* ಬಿಸಿಯಾದ ಮಸಾಲೆಯುಕ್ತ ಆಹಾರ ತಿನ್ನಬೇಡಿ, ಮಾಂಸಹಾರ ವರ್ಜಿಸಿ ಮತ್ತು ಮದ್ಯಪಾನ ವರ್ಜಿಸಿ.
* ಬಿಗಿಯಾದ ಗಾಳಿಯಾಡದ ಪಾದರಕ್ಷೆ / ಶೂ ಧರಿಸಬೇಡಿ.
* ಉಷ್ಣತೆಯಿಂದ ಸುಸ್ತಾದ ವ್ಯಕ್ತಿಯನ್ನು ತುಂಬಾ ತಣ್ಣಗಿನ / ಶೀತಲೀಕರಿಸಿದ ನೀರಿನಿಂದ ಒರೆಸಬೇಡಿ. (ಇದರಿಂದ ವ್ಯಕ್ತಿಯ ದೇಹದ ಹೊರಪದರದಲ್ಲಿನ ರಕ್ತನಾಳಗಳು ಸಂಕುಚಿತಗೊಂಡು ದೇಹದ ಒಳಗಿನ ಉಷ್ಣತೆ ದೇಹದೊಳಗೆ ಬಂಧಿತವಾಗಿ ಆತನ ಅಂಗಾಂಗಗಳನ್ನು ನಿಷ್ಕ್ರಿಯಗೊಂಡು, ಹೆಚ್ಚಿನ ಹಾನಿಯಾಗಬಹುದು.)
* ವ್ಯಕ್ತಿಯ ತೊದಲು ತೊದಲಾಗಿ, ವಿಚಿತ್ರವಾಗಿ ಮಾತನಾಡಿದರೆ ಆತಂಕ ಪಡಬೇಡಿ. ಶಾಂತಿ ಸಮಾಧಾನದಿಂದ ಶೀಘ್ರವಾಗಿ ಕ್ರಮ ಕೈಗೊಳ್ಳಿರಿ.

ಶಾಖಾಘಾತಕ್ಕೆ ಚಿಕಿತ್ಸೆ
ಶಾಖಾಘಾತಕ್ಕೆ ಒಳಗಾದ ವ್ಯಕ್ತಿಯನ್ನು ನೆರಳಿರುವೆಡೆಗೆ ಸ್ಥಳಾಂತರಿಸಿ. ವ್ಯಕ್ತಿಯ ವಸ್ತ್ರಗಳನ್ನು ಸಡಿಲಗೊಳಿಸಿ, ಅಂಗಾತ ಮಲಗಿಸಿ, ಕಾಲುಗಳನ್ನು ಎತ್ತರಿಸಿ. ಸಾಮಾನ್ಯ ನೀರಿನಿಂದ ದೇಹವನ್ನು ಒರೆಸಿರಿ. ಹತ್ತಿರದ ವೈದ್ಯರನ್ನು ಕರೆಸಿರಿ.
ಎಲ್ಲಾ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ/ ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೇಸಿಗೆಯಲ್ಲಿ ಬರಬಹುದಾದ ರೋಗಗಳ ಆರೈಕೆಗಾಗಿ, ಓಆರ್‍ಎಸ್, ಐವಿ ಪ್ಲೂಯಿಡ್ಸ್ ಮತ್ತು ಜೀವರಕ್ಷಕ ಔಷಧಗಳ ದಾಸ್ತಾನು ಇಟ್ಟುಕೊಳ್ಳುವಂತೆ ಹಾಗೂ ಆರೋಗ್ಯಾಧಿಕಾರಿಗಳು ನೀರಿನ ಗುಣಮಟ್ಟದ ಪರೀಕ್ಷೆಯನ್ನು ನಿಯಮಿತವಾಗಿ ಮಾಡುವಂತೆ ಸೂಚನೆ ನೀಡಲಾಗಿದೆ ಹಾಗೂ ಹೆಚ್ಚಿನ ಮಾಹಿತಿಗಾಗಿ 24 X 7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಸಂಪರ್ಕಿಸಬಹುದು.












Click it and Unblock the Notifications