• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ಧದ ಮೂರು ಭ್ರಷ್ಟಾಚಾರ ಪ್ರಕರಣಗಳು: ಸಂಪೂರ್ಣ ವಿವರ

|

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಲಂಚ, ವಂಚನೆ ಮತ್ತು ನಂಬಿಕೆ ದ್ರೋಹದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇಸ್ರೇಲ್‌ನ ರಾಜಕೀಯ ಚಿತ್ರಣವನ್ನೇ ಬದಲಿಸಿರುವ ಈ ಪ್ರಕರಣ ದೇಶದ ಕಾನೂನು ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವದ ಸ್ಥಿತಿಗತಿಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.

ಈ ಭ್ರಷ್ಟಾಚಾರ ಪ್ರಕರಣ ನೆತನ್ಯಾಹು ಅವರದೇ ಪಕ್ಷದೊಳಗೆ ಬಿರುಕು ಉಂಟಾಗಲು ಕಾರಣವಾಗಿದೆ. ಮುಂದಿನ ತಿಂಗಳು ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ಇಸ್ರೇಲ್‌ನಲ್ಲಿ ಕಳೆದ ಎರಡು ವರ್ಷಗಳಲ್ಲಿ ನಡೆಯುತ್ತಿರುವ ನಾಲ್ಕನೆಯ ಚುನಾವಣೆಯಾಗಿದೆ.

2016ರಿಂದಲೂ ನೆತನ್ಯಾಹು ಪ್ರಕರಣದ ತನಿಖೆ ನಡೆಯುತ್ತಿದೆ. 2018ರ ಫೆಬ್ರವರಿಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸುವಂತೆ ಪೊಲೀಸರು ಔಪಚಾರಿಕ ಶಿಫಾರಸು ನೀಡಿದ್ದರು. 2019ರ ನವೆಂಬರ್‌ನಲ್ಲಿ ದೋಷಾರೋಪಣೆ ಹೊರಿಸಲಾಯಿತು. 2020ರ ಮೇ ತಿಂಗಳಲ್ಲಿ ವಿಚಾರಣೆ ಶುರುವಾಗಿತ್ತು. ಆದರೆ ಕೊರೊನಾ ವೈರಸ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಅನೇಕ ಬಾರಿ ವಿಚಾರಣೆ ವಿಳಂಬವಾಗಿತ್ತು.

ಭ್ರಷ್ಟಾಚಾರ ಕೇಸ್: ವಿಚಾರಣೆ ಎದುರಿಸಿ ದಾಖಲೆ ಬರೆದ ಇಸ್ರೇಲ್ ಪ್ರಧಾನಿ

ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣಗಳನ್ನು 1000, 2000 ಮತ್ತು 4000 ಎಂದು ಕರೆಯಲಾಗುತ್ತಿದೆ. ನೆತನ್ಯಾಹು ಅವರನ್ನು ಕೇಸ್ 3000 ಎಂಬ ನಾಲ್ಕನೆಯ ಪ್ರಕರಣದಿಂದ ದೋಷಮುಕ್ತಗೊಳಿಸಲಾಗಿದೆ. ಜರ್ಮನ್ ನಿರ್ಮಿತ ಜಲಾಂತರ್ಗಾಮಿ ನೌಕೆಗಳನ್ನು ಸರ್ಕಾರ ಖರೀದಿ ಮಾಡಿದ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗಿದ್ದ ಭ್ರಷ್ಟಾಚಾರದ ಆರೋಪ ಪ್ರಕರಣವಿದು. ಮುಂದೆ ಓದಿ.

ಏನಿದು ಕೇಸ್ 1000?

ಏನಿದು ಕೇಸ್ 1000?

ಇಬ್ಬರು ಉದ್ಯಮಿಗಳಾದ ಹಾಲಿವುಡ್ ನಿರ್ಮಾಪಕ ಅರ್ನಾನ್ ಮಿಲ್ಚನ್ ಮತ್ತು ಆಸ್ಟ್ರೇಲಿಯಾದ ಕೋಟ್ಯಧಿಪತಿ ಜೇಮ್ಸ್ ಪ್ಯಾಕರ್ ಅವರಿಂದ 2007 ರಿಂದ 2016ರ ಅವಧಿಯಲ್ಲಿ ಸಿಗಾರ್‌ಗಳು ಮತ್ತು ಶಾಂಪೇನ್ ಸೇರಿದಂತೆ ಸುಮಾರು $300,000 ಮೊತ್ತದ ಉಡುಗೊರೆಯನ್ನು ನೆತನ್ಯಾಹು ಸ್ವೀಕರಿಸಿದ ಆರೋಪ ಎದುರಿಸುತ್ತಿದ್ದಾರೆ.

ಇದಕ್ಕೆ ಪ್ರತಿಯಾಗಿ ನೆತನ್ಯಾಹು ಅವರು ಮಿಲ್ಚನ್ ಅವರಂತಹ ವಲಸಿಗ ಇಸ್ರೇಲಿಗಳಿಗೆ ವಿದೇಶದಿಂದ ತವರಿಗೆ ಮರಳಿದ ಬಳಿಕ ತೆರಿಗೆ ವಿನಾಯಿತಿಯ ಅವಧಿಯನ್ನು ದುಪ್ಪಟ್ಟುಗೊಳಿಸುವುದು ಸೇರಿದಂತೆ ವಿವಿಧ ಅನುಕೂಲಗಳನ್ನು ಕಲ್ಪಿಸಲು ಹಣಕಾಸು ಸಚಿವಾಲಯ ಮತ್ತು ಇತರ ಕಡೆ ಒತ್ತಡ ಹೇರಿದ್ದರು.

ಮಿಲ್ಚನ್ ಅವರು ಅಮೆರಿಕದ ವೀಸಾ ಪಡೆದುಕೊಳ್ಳಲು ಸಹಾಯ ಮಾಡಲು ಅಮೆರಿಕ ಸರ್ಕಾರದ ಜತೆ ಲಾಬಿ ನಡೆಸಿದ್ದರು. ಮತ್ತು ಮಿಲ್ಚನ್ ಮಾಲೀಕತ್ವದ ಪಾಲು ಹೊಂದಿರುವ ಟೆಲಿವಿಷನ್ ಚಾನೆಲ್ ಒಂದರ ವಿಲೀನ ಒಪ್ಪಂದಕ್ಕೂ ನೆತನ್ಯಾಹು ನೆರವಾಗಿದ್ದರು ಎಂದು ಆರೋಪಿಸಲಾಗಿದೆ.

ಪ್ಯಾಕರ್ ಅವರಿಗೆ ಪಡೆದ ಉಡುಗೊರೆಗಳಿಗೆ ಪ್ರತಿಯಾಗಿ ನೆತನ್ಯಾಹು ಯಾವ ಉಪಕಾರ ಮಾಡಿದ್ದರು ಎಂಬ ಆರೋಪಗಳಿಲ್ಲ. ನೆತನ್ಯಾಹು, ಮಿಲ್ಚನ್ ಮತ್ತು ಪ್ಯಾಕರ್ ಅವರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಅವರಿಬ್ಬರೂ ವಿಚಾರಣೆಯಲ್ಲಿ ಭಾಗಿಯಾಗಿಲ್ಲ. ನೆತನ್ಯಾಹು ಪತ್ನಿ ಸಾರಾ ಕೂಡ ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ. ಆದರೆ ವಿಚಾರಣೆಯಲ್ಲಿ ಆರೋಪಿಯನ್ನಾಗಿಸಿಲ್ಲ.

ಏನಿದು ಕೇಸ್ 2000?

ಏನಿದು ಕೇಸ್ 2000?

ಇಸ್ರೇಲ್‌ನ ಮುಂಚೂಣಿ ಪತ್ರಿಕೆಗಳಲ್ಲಿ ಒಂದಾದ 'ಯೆಡಿಯಟ್ ಅಹರೊನೊಟ್'ನ ಪ್ರಕಾಶಕ ಅರ್ನೊನ್ ಮೊಜೆಸ್ ಅವರೊಂದಿಗೆ 2014ರಲ್ಲಿ ವಿನಿಮಯ ಒಪ್ಪಂದವೊಂದರ ಬಗ್ಗೆ ನೆತನ್ಯಾಹು ಚರ್ಚಿಸಿದ್ದರು. ನೆತನ್ಯಾಹು ಅವರಿಗೆ ಪತ್ರಿಕೆಯಿಂದ ವ್ಯಾಪಕ ಬೆಂಬಲದ ವರದಿಗಳು ಪ್ರಕಟವಾಗಬೇಕಿತ್ತು. ಆದರೆ ನೆತನ್ಯಾಹು ಅವರ ಬೆಂಬಲಿಗರೇ ಆಗಿದ್ದ ಶೆಲ್ಡನ್ ಅಡೆಲ್ಸೊನ್ ಮಾಲೀಕತ್ವದ ಎದುರಾಳಿ ಪತ್ರಿಕೆ 'ಇಸ್ರೇಲ್ ಹಯೋಮ್'ನ ಬಲವನ್ನು ತಗ್ಗಿಸಲು ಕಾನೂನುಗಳನ್ನು ಹೇರುವುದನ್ನು ಪರಿಗಣಿಸಲು ನೆತನ್ಯಾಹು ಒಪ್ಪಿಕೊಂಡಿದ್ದರು. ಆದರೆ ಆ ಭರವಸೆಯನ್ನು ನೆತನ್ಯಾಹು ಅನುಸರಿಸಿರಲಿಲ್ಲ. ಮೊಜೆಸ್ ಕೂಡ ಆರೋಪವನ್ನು ನಿರಾಕರಿಸಿದ್ದಾರೆ.

ಇಸ್ರೇಲ್ ಸರ್ಕಾರ ಪತನ: ಹೊಸ ಚುನಾವಣೆಗೆ ನಾಂದಿ, ಎರಡು ವರ್ಷದಲ್ಲಿ ನಾಲ್ಕನೇ ಚುನಾವಣೆ!

ಏನಿದು ಕೇಸ್ 4000?

ಏನಿದು ಕೇಸ್ 4000?

ಟೆಲಿಕಾಂ ದಿಗ್ಗಜ ಶೌಲ್ ಎಲೊವಿಚ್ ಮತ್ತು ಅವರ ಪತ್ನಿ ಐರಿಸ್ ಅವರು 2012 ರಿಂದ 2017ರ ಅವಧಿಯವರೆಗೆ ನೆತನ್ಯಾಹು ಮತ್ತು ಅವರ ಕುಟುಂಬಕ್ಕೆ ಅನೇಕ ನೆರವುಗಳನ್ನು ನೀಡಿದ್ದರು. ಎಲೋವಿಚ್ ಅವರ ಉದ್ಯಮ ಚಟುವಟಿಕೆಗಳಿಗೆ ಅಡ್ಡಿಪಡಿಸದಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿತ್ತು. ಎಲೋವಿಚ್ ಅವರು ತಮ್ಮ ಸುದ್ದಿ ವೆಬ್‌ಸೈಟ್‌ 'ವಲ್ಲಾ'ದಲ್ಲಿ ನೆತನ್ಯಾಹು ಹಾಗೂ ಅವರ ಕುಟುಂಬದವರು ತಮ್ಮ ಪರವಾದ ವರದಿಗಳನ್ನು ಪ್ರಕಟಿಸಲು ಅವಕಾಶ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಪ್ರಧಾನಿ ನೆತನ್ಯಾಹು, ಅವರ ವಿವಿಧ ವ್ಯವಹಾರ ಹಿತಾಸಕ್ತಿಗಳಿಗೆ ಅಡ್ಡಿಪಡಿಸದೆ ಸುಗಮ ಕಾರ್ಯಾಚರಣೆಗೆ ಅನುಕೂಲಗಳನ್ನು ಕಲ್ಪಿಸಿಕೊಟ್ಟಿದ್ದರು.

ನೆತನ್ಯಾಹು ರಾಜೀನಾಮೆ ಏಕಿಲ್ಲ?

ನೆತನ್ಯಾಹು ರಾಜೀನಾಮೆ ಏಕಿಲ್ಲ?

ನೆತನ್ಯಾಹು ಅವರು ಕಾನೂನಿನ ಪ್ರಕಾರ ಅಧಿಕಾರದಿಂದ ಕೆಳಕ್ಕಿಳಿಯುವ ಅಗತ್ಯವಿಲ್ಲ. ಸರ್ಕಾರದ ಇತರೆ ಸಚಿವರ ವಿರುದ್ಧ ಪ್ರಬಲ ಆರೋಪ ಕೇಳಿ ಬಂದಾಗ ಅವರು ರಾಜೀನಾಮೆ ನೀಡಬೇಕು. ಆದರೆ ಪ್ರಧಾನಿಯು ಶಿಕ್ಷೆಗೆ ಒಳಗಾಗುವವರೆಗೂ ಅಧಿಕಾರದಲ್ಲಿಯೇ ಮುಂದುವರಿಯಬಹುದು.

ತಮ್ಮ ವಿರುದ್ಧದ ಆರೋಪಗಳು ಸಂಚಿನ ರೂಪವಾಗಿವೆ. ತಮ್ಮನ್ನು ಆಯ್ಕೆ ಮಾಡಿರುವ ಜನರ ಇಚ್ಛೆಗೆ ವಿರುದ್ಧವಾಗಿ ಅಧಿಕಾರದಿಂದ ಕೆಳಕ್ಕೆ ಇಳಿಸಲು ಚುನಾಯಿತರಾಗದ ರಾಜಕಾರಣಿಗಳ ಕುತಂತ್ರ ಇದು ಎಂದು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ತಮ್ಮನ್ನು ಅಧಿಕಾರದಿಂದ ಇಳಿಸಲು ಮತ ಪೆಟ್ಟಿಗೆಗೆ ಮಾತ್ರ ಸಾಧ್ಯ ಎಂದಿದ್ದಾರೆ.

ಧಿಕ್ಕಾರ ಕೂಗಲು ಪ್ರಧಾನಿ ನಿವಾಸದ ಎದುರೇ ಸಾವಿರಾರು ಜನ!

ಮಾತು ಮರೆತ ನೆತನ್ಯಾಹು

ಮಾತು ಮರೆತ ನೆತನ್ಯಾಹು

ನೆತನ್ಯಾಹು ಅವರ ಪೂರ್ವಾಧಿಕಾರಿ ಎಹುಡ್ ಒಲ್ಮೆರ್ಟ್ ಅವರು 2008ರಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿದ್ದರು. ಆಗ ಸ್ವತಃ ನೆತನ್ಯಾಹು ಅವರು ಒಲ್ಮೆರ್ಟ್ ರಾಜೀನಾಮೆಗೆ ಪಟ್ಟುಹಿಡಿದಿದ್ದರು. ಪ್ರಧಾನಿ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಲು ಅವರಿಗೆ ಆಗುವುದಿಲ್ಲ ಎಂದು ನೆತನ್ಯಾಹು ವಾದಿಸಿದ್ದರು. ಆದರೆ ದಶಕದ ಬಳಿಕ ತಮ್ಮದೇ ವಾದವನ್ನು ಮರೆತಿರುವ ನೆತನ್ಯಾಹು, ಅಧಿಕಾರ ತ್ಯಜಿಸಲು ನಿರಾಕರಿಸಿದ್ದಾರೆ. ಈ ಮೂಲಕ ಕಚೇರಿಯಲ್ಲಿಯೇ ಇದ್ದು ವಿಚಾರಣೆ ಎದುರಿಸುತ್ತಿರುವ ಮೊದಲ ಪ್ರಧಾನಿ ಎನಿಸಿಕೊಂಡಿದ್ದಾರೆ.

ನೆತನ್ಯಾಹುವಿಗೆ ಶಿಕ್ಷೆ ಆಗುತ್ತದೆಯೇ?

ನೆತನ್ಯಾಹುವಿಗೆ ಶಿಕ್ಷೆ ಆಗುತ್ತದೆಯೇ?

ಒಂದು ವೇಳೆ ನೆತನ್ಯಾಹು ವಿರುದ್ಧದ ಆರೋಪಗಳು ಸಾಬೀತಾಗಿ ಶಿಕ್ಷೆ ವಿಧಿಸಿದರೆ ಏಳು ವರ್ಷ ಜೈಲು ಶಿಕ್ಷೆಗೆ ಗುರಿಯಾಗಬಹುದು. ಆದರೆ ಮುಂದಿನ ತಿಂಗಳುಗಳು, ಅಥವಾ ವರ್ಷ ಕಳೆದರೂ ನ್ಯಾಯಾಧೀಶರು ತೀರ್ಪು ಪ್ರಕಟಿಸುವುದು ಅನುಮಾನ. ಈಗಾಗಲೇ ವಿವಿಧ ಕಾರಣಗಳಿಂದ ವಿಚಾರಣೆ ವಿಳಂಬವಾಗಿದೆ. ನ್ಯಾಯಾಲಯ ಈಗ ಪ್ರತಿದಿನ ಕಲಾಪ ನಡೆಸುತ್ತಿಲ್ಲ. ಚುನಾವಣೆ ಮುಗಿಯುವವರೆಗೂ ವಿಚಾರಣೆ ನಡೆಸಬಾರದೆಂಬ ನೆತನ್ಯಾಹು ಪರ ವಕೀಲರ ಮನವಿಯನ್ನು ನ್ಯಾಯಾಧೀಶರು ಪರಿಗಣಿಸುತ್ತಿದ್ದಾರೆ.

ಚುನಾವಣೆ ಮೇಲೆ ವಿಚಾರಣೆಯ ಪ್ರಭಾವ ಏನು?

ಚುನಾವಣೆ ಮೇಲೆ ವಿಚಾರಣೆಯ ಪ್ರಭಾವ ಏನು?

ಚುನಾವಣೆಯಲ್ಲಿನ ಮತದಾನದ ಪದ್ಧತಿ ಮೇಲೆ ಈ ವಿಚಾರಣೆ ಪ್ರಮುಖವಾಗಿ ಪರಿಣಾಮ ಬೀರುವುದಿಲ್ಲ ಎಂದು ಅನೇಕ ವಿಶ್ಲೇಷಕರು ಹೇಳಿದ್ದಾರೆ. ನೆತನ್ಯಾಹು ವಿರುದ್ಧದ ಆರೋಪ ಅನೇಕ ಸಮಯದಿಂದ ಸಾರ್ವಜನಿಕವಾಗಿ ಚರ್ಚೆಯಲ್ಲಿದೆ. ವಿಚಾರಣೆ ಆರಂಭಕ್ಕೂ ಮುನ್ನವೇ ಜನರು ತಮ್ಮದೇ ನಿಲುವುಗಳನ್ನು ಹೊಂದಿದ್ದಾರೆ.

ನೆತನ್ಯಾಹು ಅವರ ಪಕ್ಷ ಲಿಕುಡ್‌ನಲ್ಲಿ ಒಡಕು ಮೂಡಿದೆ. ಅವರ ಮಾಜಿ ಸಹವರ್ತಿಗಳಲ್ಲಿ ಒಬ್ಬರಾದ ಗಿಡಿಯೊನ್ ಸಾರ್ ತಮ್ಮದೇ 'ನ್ಯೂ ಹೋಪ್' ಎಂಬ ಗುಂಪು ಮಾಡಿಕೊಂಡಿದ್ದಾರೆ. ನೆತನ್ಯಾಹು ಅವರ ವೈಯಕ್ತಿಕ ನಡವಳಿಕೆಯಿಂದ ಅಸಂತುಷ್ಟರಾದ ಲಿಕುಡ್ ಮತದಾರರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಚುನಾವಣೆಯಲ್ಲಿ ನೆತನ್ಯಾಹು ಅವರಿಗಿಂತ ಸಾರ್ ಹಿಂದಿದ್ದಾರೆ. ನೆತನ್ಯಾಹು ವಿರುದ್ಧವಿರುವ ಇತರೆ ಪಕ್ಷಗಳಿಂದ ಅವರು ಮತಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಹೀಗಾಗಿ ಸಾರ್ ಅವರು ಸಮ್ಮಿಶ್ರ ಸರ್ಕಾರ ರಚಿಸಿ ಅಧಿಕಾರಕ್ಕೆ ಬರುವ ಅವಕಾಶಗಳು ಕಡಿಮೆಯಾಗುತ್ತಿವೆ.

English summary
Israel Prime Minister Benjamin Netanyahu is facing trial in three corruption cases. Here is details of allegations and trials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X