Banana Palya: ಸುಲಭವಾಗಿ ಥಟ್ ಅಂತ ಮಾಡಿ ಬಾಳೆಕಾಯಿ ಪಲ್ಯ
ದೋಸೆ, ಚಪಾತಿ, ರೊಟ್ಟಿ ಜೊತೆಗೆ ಅಥವ ಊಟಕ್ಕೆ ಯಾವ ಪಲ್ಯ ಮಾಡುವುದು ಎಂಬ ಚಿಂತೆ ಬಿಡಿ. ಅತ್ಯಂತ ಆರೋಗ್ಯಯುತವಾದ ಮತ್ತು ಉತ್ತಮ ರುಚಿಯ ಬಾಳೆಕಾಯಿ ಪಲ್ಯವನ್ನು ಸುಲಭವಾಗಿ ಥಟ್ ಅಂತ ಮಾಡಬಹುದು. ಕಡಿಮೆ ಮಸಾಲೆ ಬಳಕೆ ಮಾಡಿಕೊಂಡು ಬೇಗನೆ ಮನೆಯಲ್ಲಿ ಈ ಪಲ್ಯವನ್ನು ಮಾಡಬಹುದು.
ಮೊದಲು ಎರಡು ಅಥವ ಮೂರು ಬಾಳೆಕಾಯಿ ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ. ಬಾಳೆಕಾಯಿ ಕಪ್ಪಾಗುವುದನ್ನು ತಡೆಯಲು ಅದನ್ನು ನೀರಿನಲ್ಲಿ ಹಾಕಿಟ್ಟುಕೊಳ್ಳಿ. ಬಾಳೆಕಾಯಿ ಬೇಗ ಬೇಯುವ ಕಾರಣ ಮೊದಲು ಮಸಾಲೆ ರೆಡಿ ಮಾಡಿಕೊಂಡು ಬಳಿಕ ಹೆಚ್ಚಿಕೊಂಡು ನೇರವಾಗಿ ಪಲ್ಯ ಮಾಡಬಹುದು. ಬಾಳೆಕಾಯಿ ಹಾಗೆ ಹೆಚ್ಚಿಟ್ಟುಕೊಂಡರೆ ಅದು ಕಪ್ಪಗಾಗುತ್ತದೆ.

ಈಗ ಪಲ್ಯಕ್ಕೆ ಮಸಾಲೆ ರೆಡಿ ಮಾಡಿಕೊಳ್ಳೋಣ. ಕೆಂಪು ಅಥವ ಹಸಿರು ಎರಡು ಮಾದರಿ ಮಸಾಲೆ ಮಾಡಿಕೊಳ್ಳಬಹುದು. ಮಿಕ್ಸಿ ಜಾರಿಗೆ ಸ್ವಲ್ಪ ಕಾಯಿ/ ಕೊಬ್ಬರಿ, ಈರುಳ್ಳಿ ಚಿಕ್ಕ ಪೀಸ್, ಬೆಳ್ಳುಳ್ಳಿ, ಟೊಮೆಟೋ ಚಿಕ್ಕಪೀಸ್, ಶುಂಠಿ, ಹಸಿಮೆಣಸಿನಕಾಯಿ ಹಾಕಿ ರುಬ್ಬಿಕೊಳ್ಳಿ. ಗರಂ ಮಸಾಲೆ, ಪೆಪ್ಪರ್ ಪೌಡರ್ ಮೂಲಕವೂ ಕೆಂಪು ಪೇಸ್ಟ್ ತಯಾರಿಸಿಕೊಳ್ಳಬಹುದು.
ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ, ಶೇಂಗಾ ಬೀಜ, ಗೊಡಂಬಿ ಹಾಕಿಕೊಳ್ಳಿ. ಒಗ್ಗರಣೆ ಕೆಂಪಾದ ಮೇಲೆ ಹೆಚ್ಚಿಟ್ಟುಕೊಂಡ ಬಾಳೆಕಾಯಿ ಹಾಕಿ. ಸ್ವಲ್ಪ ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಹುಣಸೆ ಹಣ್ಣು/ ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
ಹದವಾದ ಉರಿಯಲ್ಲಿ ಬಾಳೆಕಾಯಿಯನ್ನು ಚೂರು ನೀರು ಹಾಕಿ ಬೇಯಿಸಿಕೊಳ್ಳಿ. ಬೇಯುವಾಗಲೇ ರೆಡಿ ಮಾಡಿಕೊಂಡ ಮಸಾಲೆ ಪೇಸ್ಟ್ ಹಾಕಿಕೊಳ್ಳಿ. ಸುಮಾರು 10 ನಿಮಿಷದಲ್ಲಿ ಬಾಳೆಕಾಯಿ ಚೆನ್ನಾಗಿ ಬೇಯುತ್ತದೆ. ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಾಳೆಕಾಯಿ ಪಲ್ಯ ರೆಡಿ.
ಕುಕ್ಕರ್‌ನಲ್ಲಿಯೂ ಎರಡು ವಿಷಲ್ ಕೂಗಿಸುವ ಮೂಲಕ ಬಾಳೆಕಾಯಿಯನ್ನು ಬೇಯಿಸಿಕೊಳ್ಳಬಹುದು. ಪಲ್ಯಕ್ಕೆ ಇಂಗು, ಬೆಳುಳ್ಳಿಯನ್ನು ಸಹ ಬಳಕೆ ಮಾಡಬಹುದು. ಈರುಳ್ಳಿ, ಟೊಮೆಟೋವನ್ನು ಹಾಕಿದರೆ ರುಚಿ ಹೆಚ್ಚಾಗಿರುತ್ತದೆ.
ಬಾಳೆಕಾಯಿ ಹೆಚ್ಚಿನ ಫೈಬರ್ ಅನ್ನು ಹೊಂದಿದೆ. ವಿಟಮಿನ್ ಬಿ 6, ವಿಟಮಿನ್-ಸಿ ನಂತಹ ಪೋಷಕಾಂಶವನ್ನು ಒಳಗೊಂಡಿದೆ. ಜೀರ್ಣಕ್ರಿಯ ಉತ್ತಮವಾಗಿಸಲು ಇದು ಸಹಕಾರಿಯಾಗಿದೆ. ವಾರದಲ್ಲಿ ಒಂದು ದಿನ ಬಾಳೆಕಾಯಿ ತಿನ್ನುವುದು ಆರೋಗ್ಯಕ್ಕೂ ಒಳ್ಳೆಯದು. ಇದರ ಪಲ್ಯ ಮಾಡುವುದು ಅತ್ಯಂತ ಸುಲಭವೂ ಆಗಿದೆ.
ದಿನಕ್ಕೊಂದು ಬಾಳೆಹಣ್ಣು ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಮಧುಮೇಹಿಗಳು ಬಾಳೆಹಣ್ಣು ತಿನ್ನುವುದಿಲ್ಲ. ಬಾಳೆಕಾಯಿ ಬಾಳೆಹಣ್ಣಿಗಿಂತ ಕಡಿಮೆ ಸಕ್ಕರೆ ಮಟ್ಟವನ್ನು ಹೊಂದಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಇದು ಸಹಾಯಕವಾಗಿದೆ. ಬಾಳೆಕಾಯಿ ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ. ಇದರಲ್ಲಿರುವ ಪೋಷಕಾಂಶಗಳು ರಕ್ತದೊತ್ತಡದ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಹಳ್ಳಿಗಳಲ್ಲಿ ಜನರು ಹೆಚ್ಚಾಗಿ ಬಾಳೆಕಾಯಿ, ಬಾಳೆದಿಂಡು ಉಪಯೋಗ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲಿಯೂ ಜನರು ಹೆಚ್ಚಾಗಿ ಬಾಳೆಕಾಯಿ ಖಾದ್ಯವನ್ನು ಮಾಡುತ್ತಾರೆ. ಮನೆಯಲ್ಲಿ ಬಾಳೆಕಾಯಿ ಇದ್ದರೆ ರುಚಿಕರವಾದ ಪಲ್ಯವನ್ನು ಮಾಡಿ ಊಟ, ತಿಂಡಿಗೆ ಬಳಕೆ ಮಾಡಿಕೊಳ್ಳಬಹುದು.












Click it and Unblock the Notifications