ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಮೇಶ್ ಕುಮಾರ್: ಬಿಕ್ಕಟ್ಟುಗಳು ಬಂದಾಗೆಲ್ಲಾ ಭಾವನೆಗಳೇ ಅಸ್ತ್ರ!

|
Google Oneindia Kannada News

ಬೆಂಗಳೂರು, ಜುಲೈ 11 : ಬಿಕ್ಕಟ್ಟುಗಳು ಎದುರಾದಾಗ ಭಾವನಾತ್ಮಕ ನೆಲೆಯಲ್ಲೇ ಪರಿಹಾರ ಕಂಡುಕೊಳ್ಳುವುದರಲ್ಲಿ ನಿಸ್ಸೀಮರು ಸ್ಪೀಕರ್ ಕೆ. ಆರ್. ರಮೇಶ್ ಕುಮಾರ್.

ಕಲಾವಿದರೂ ಆಗಿದ್ದ ಹಿರಿಯ ರಾಜಕಾರಣಿ ರಮೇಶ್ ಕುಮಾರ್ ರಾಜಕೀಯದ ಹಾದಿ ಹಾಗೂ ಕಳೆದ ಒಂದು ವಾರದ ಅಂತರದಲ್ಲಿ ಅವರ ಪತ್ರಿಕಾಗೋಷ್ಠಿಯ ಮಾತುಗಳನ್ನು ಅವಲೋಕಿಸಿದರೆ ಮೇಲಿನ ಮಾತಿಗೆ ಸಾಕಷ್ಟು ಪುರಾವೆಗಳು ಸಿಗುತ್ತವೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್ ಶಾಸಕರು ರಮೇಶ್ ಕುಮಾರ್. ಸುಮಾರು 40 ವರ್ಷಗಳ ರಾಜಕೀಯ ಜೀವನದಲ್ಲಿ ಅವರು ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ. 1994ರಲ್ಲಿ ವಿಧಾನಸಭೆ ಸ್ಪೀಕರ್ ಆಗುವ ಮೂಲಕ ದೊಡ್ಡ ಮಟ್ಟಕ್ಕೆ ಪ್ರಚಾರಕ್ಕೆ ಬಂದವರು.

ಕೆರೆಗೆ ಬಂದ ನೀರು ಕಂಡು ಕಣ್ಣೀರಿಟ್ಟ ರಮೇಶ್‌ ಕುಮಾರ್ಕೆರೆಗೆ ಬಂದ ನೀರು ಕಂಡು ಕಣ್ಣೀರಿಟ್ಟ ರಮೇಶ್‌ ಕುಮಾರ್

Speaker KR Ramesh Kumar an emotional man

ಕರ್ನಾಟಕದ ಕಾಂಗ್ರೆಸ್-ಜೆಡಿಎಸ್‌ನ 16 ಶಾಸಕರ ರಾಜೀನಾಮೆ ಪ್ರಕ್ರಿಯೆ ಆರಂಭವಾದ ನಂತರ ರಮೇಶ್ ಕುಮಾರ್‌ ಸದ್ಯ ಸುದ್ದಿ ಕೇಂದ್ರದಲ್ಲಿದ್ದಾರೆ. ಅವರ ಪ್ರತಿ ಪತ್ರಿಕಾಗೋಷ್ಠಿಯನ್ನೂ ಸೂಕ್ಷ್ಮವಾಗಿ ಗಮನಿಸಬೇಕಾದ ವಾತಾವರಣ ಸೃಷ್ಟಿಯಾಗಿದೆ.

ಭಾವನಾತ್ಮಕ ಭಾಷಣ ಮಾಡಿದ ಸ್ಪೀಕರ್‌ ರಮೇಶ್ ಕುಮಾರ್ಭಾವನಾತ್ಮಕ ಭಾಷಣ ಮಾಡಿದ ಸ್ಪೀಕರ್‌ ರಮೇಶ್ ಕುಮಾರ್

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿಯೇ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಲಂಚದ ಆರೋಪ ಕೇಳಿಬಂದಿತ್ತು. ಪ್ರತಿಪಕ್ಷ ನಾಯಕರಾಗಿರುವ ಬಿ. ಎಸ್. ಯಡಿಯೂರಪ್ಪರ ಕುಖ್ಯಾತ 'ಆಪರೇಷನ ಕಮಲ'ದ ಆಡಿಯೋದಲ್ಲಿ ಸ್ಪೀಕರ್ ಹೆಸರೂ ಪ್ರಸ್ತಾಪವಾಗಿತ್ತು.

ಇದನ್ನೇ ಬಳಸಿಕೊಂಡ ರಮೇಶ್ ಕುಮಾರ್ ದುಃಖತಪ್ತ ದನಿಯಲ್ಲಿ ವಿಧಾನಸಭೆಯಲ್ಲಿ ಸುಧೀರ್ಘ ಭಾಷಣ ಮಾಡಿದ್ದನ್ನು ಜನ ಯಾವತ್ತಿಗೂ ಮರೆಯುವ ಹಾಗಿಲ್ಲ. ತಮ್ಮ ಮೇಲೆ ಎರಚಿದ ಕಳಂಕಗಳಿಗೆ ಉತ್ತರ ನೀಡುತ್ತಲೇ ಅವರು ಕಣ್ಣೀರು ಹಾಕಿದ್ದರು. "ಆರೋಪ ಹೊತ್ತುಕೊಂಡು ರಾಜಕೀಯ ಮಾಡುವುದಿಲ್ಲ. ಆರೋಪದ ಬಗ್ಗೆ ತನಿಖೆ ನಡೆಸಿ," ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದರು. ಈ ಆರೋಪದ ಬಗೆಗಿನ ತನಿಖೆ ನನೆಗುದಿಗೆ ಬಿದ್ದಿದೆ.

ನನ್ನ ಸ್ಥಿತಿ ಅತ್ಯಾಚಾರ ಸಂತ್ರಸ್ತೆಯಂತಾಗಿದೆ ಎಂದ ಸ್ಪೀಕರ್ ರಮೇಶ್ ಕುಮಾರ್ನನ್ನ ಸ್ಥಿತಿ ಅತ್ಯಾಚಾರ ಸಂತ್ರಸ್ತೆಯಂತಾಗಿದೆ ಎಂದ ಸ್ಪೀಕರ್ ರಮೇಶ್ ಕುಮಾರ್

ವಿದ್ಯಾರ್ಥಿ ದೆಸೆಯಿಂದಲೇ ಯೂತ್ ಕಾಂಗ್ರೆಸ್ ನಂಟು ಬೆಳೆಸಿಕೊಂಡು ರಾಜಕೀಯಕ್ಕೆ ಬಂದವರು ರಮೇಶ್ ಕುಮಾರ್; ಉತ್ತಮ ವಾಗ್ಮಿ ಕೂಡ. ಕರ್ನಾಟಕದಲ್ಲಿ ಸಾಹಿತ್ಯ, ಕಲೆಯಲ್ಲಿ ಆಸಕ್ತಿ ಇರುವ, ಸಾಹಿತ್ಯ ಓದಿಕೊಂಡಿರುವ ಕೆಲವೇ ರಾಜಕಾರಣಿಗಳಲ್ಲಿ ರಮೇಶ್ ಕುಮಾರ್ ಸಹ ಒಬ್ಬರು.

ಗುರುವಾರ ಸಂಜೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ "ನಾನು ಕರ್ನಾಟಕದ ಜನರ ಹಂಗಿನಲ್ಲಿ ಮಾತ್ರ ಇದ್ದೇನೆ," ಎಂದವರು ಹೇಳಿದರು.

ಹೀಗೆ, ತಮ್ಮ ಪ್ರತಿ ನಡೆಯಲ್ಲೂ ಜನಪರ ಕಾಳಜಿಯನ್ನು ತೋರಿಸುವ ಪರಿಪಾಠ ಇಟ್ಟುಕೊಂಡಿರುವ ರಮೇಶ್ ಕುಮಾರ್ ಅಷ್ಟೆ ಸಲೀಸಾಗಿ ಕಣ್ಣೀರನ್ನೂ ಹಾಕುತ್ತಾ ಬಂದಿದ್ದಾರೆ. ಇದು ಹಲವಾರು ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ ಕೂಡ.

ರಮೇಶ್ ಕುಮಾರ್ ಭಾವನಾತ್ಮಕ ಅಸ್ತ್ರಗಳು:

ಅದು ಕೆ. ಸಿ. ವ್ಯಾಲಿಯಿಂದ ಬರದ ನಾಡು ಕೋಲಾರದ ಲಕ್ಷ್ಮೀ ಸಾಗರ ಕೆರೆಗೆ ಕೊಳಚೆ ನೀರು ಮೊದಲಬಾರಿಗೆ ಪ್ರವೇಶಿಸಿದ ಸಂದರ್ಭ. ಸ್ಥಳದಲ್ಲಿದ್ದ ರಮೇಶ್ ಕುಮಾರ್, "ನಮ್ಮ ತಾಯಿ ಜ್ಞಾಪಕಕ್ಕೆ ಬರುತ್ತಿದ್ದಾಳೆ. ನನ್ನಿಂದ ಈ ರೀತಿಯ ಒಳ್ಳೆ ಕಾರ್ಯವಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ," ಎಂದು ಮಾಧ್ಯಮಗಳ ಮುಂದೆ ಬಿಕ್ಕಿ-ಬಿಕ್ಕಿ ಅತ್ತರು.

2018ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಕಂಡರು. ಕೋಲಾರದಲ್ಲಿ ಆಯೋಜಿಸಲಾಗಿದ್ದ ಕನಕಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರಮೇಶ್ ಕುಮಾರ್ ಇದ್ದಕ್ಕಿದ್ದ ಹಾಗೆ ತೀವ್ರ ಭಾವೋದ್ವೇಗಳಿಗೆ ಒಳಗಾದರು. "ಸಿದ್ದರಾಮಯ್ಯನವರ ಸೋಲು ನನ್ನ ಸಾವಿಗಿಂತ ಹೆಚ್ಚು ನೋವುಂಟು ಮಾಡಿದೆ," ಎನ್ನುತ್ತಲೇ ಕಣ್ಣೀರು ಹಾಕಿದ್ದರು.

ಹಾಗಂತ ಅವರು ಎಲ್ಲಾ ಸಮಯದಲ್ಲೂ ಕಣ್ಣೀರನ್ನೇ ಅವರು ಅಸ್ತ್ರವಾಗಿ ಬಳಸುತ್ತಾರೆ ಅಂತೇನಿಲ್ಲ. ಅದು ಎತ್ತಿನಹೊಳೆ ಯೋಜನೆ ಸುತ್ತ ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದ ಸಮಯ. ತಳಮಟ್ಟದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದ್ದಿತ್ತು.

ಚಿಕ್ಕಬಳ್ಳಾಪುರದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಮೇಶ್ ಕುಮಾರ್, "ಎತ್ತಿನಹೊಳೆ ಯೋಜನೆಯ ಜಾರಿಗೆ ತರುವ ಮೂಲಕ ಈ ಭಾಗಕ್ಕೆ ನೀರು ತರುತ್ತೇನೆ," ಎಂದು ಘೋಷಣೆ ಮಾಡಿದರು. ಅಷ್ಟೆ ಅಲ್ಲ ಕಾರ್ಯಕ್ರಮದ ಭಾಗವಾಗಿ ಹಾಕಿದ್ದ ಹೋಮಕುಂಡದ ಮೇಲೆ ಕೈ ಹಿಡಿದು ಪ್ರಮಾಣ ಮಾಡಿದರು. ಅವರ ಭಾವಾತೀರೇಕದ ಈ ನಡೆಗೆ ಜನ ಮಾರು ಹೋಗಿದ್ದರು.

ಐಎಎಸ್ ಅಧಿಕಾರಿ ಡಿ. ಕೆ. ರವಿ ಆತ್ಮಹತ್ಯೆ ಮಾಡಿಕೊಂಡಾಗ ರಾಜ್ಯಾದ್ಯಂತ ಜನರ ಭಾವಾವೇಷಗಳು ಮುಗುಲು ಮುಟ್ಟಿದ್ದ ಇನ್ನೊಂದು ಸಂದರ್ಭ. ಈ ಸಮಯದಲ್ಲಿ ಕೋಲಾರ ಭಾಗದ ಜನರು ದೊಡ್ಡ ಮಟ್ಟದಲ್ಲಿ ಆಕ್ರೋಶವನ್ನು ಬೀದಿಯಲ್ಲಿ ಪ್ರದರ್ಶಿಸಿದ್ದರು. ಬಿಕ್ಕಟ್ಟಿನ ಇಂತಹ ಸ್ಥಿತಿಯಲ್ಲಿ ರಮೇಶ್ ಕುಮಾರ್ ಆಯ್ಕೆ ಮಾಡಿಕೊಂಡಿದ್ದು ಮತ್ತದೇ ಕಣ್ಣೀರು; ಭಾವನಾತ್ಮಕ ಅಸ್ತ್ರ.

ಹೀಗೆ, ರಮೇಶ್ ಕುಮಾರ್ ರಾಜಕಾರಣದಲ್ಲಿ ಭಾವನಾತ್ಮಕ ಅಸ್ತ್ರವನ್ನು ಕಾಲಕಾಲಕ್ಕೆ ಯಶಸ್ವಿಯಾಗಿ ಪ್ರಯೋಗಿಸುತ್ತಲೇ ಬಂದಿದ್ದಾರೆ. ಕಳೆದ ಎರಡು ದಿನಗಳಲ್ಲಿ ಅವರ ಎರಡು ಪತ್ರಿಕಾಗೋಷ್ಠಿಗಳಲ್ಲೂ ಭಾವನಾತ್ಮಕ ನೆಲೆಯ ಮಾತುಗಳೇ ಹೆಚ್ಚು ಗಮನ ಸೆಳೆಯುತ್ತಿವೆ. ವ್ಯವಸ್ಥೆ ಯಾವುದೇ ಆಗಿರಲಿ, ಭಾವನೆಗಳಿಗೆ ಹೆಚ್ಚು ಬೆಲೆ ಇದೆ ಎಂಬುದನ್ನು ಹಿರಿಯ ರಾಜಕಾರಣಿ ರಮೇಶ್ ಕುಮಾರ್ ನಡತೆ ಸಾರಿ ಹೇಳುತ್ತಿದೆ.

English summary
Senior Congress leader, Srinivaspura MLA and Karnataka assembly speaker K.R.Ramesh Kumar. A brief profile of an emotional man.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X