ಪುಷ್ಪಲೋಕದಲ್ಲಿ ಸೆಲ್ಫಿ ಪ್ರಿಯರ ಸುಂದರ ವಿಹಾರ: ಏಲ್ಲಿದು..ಏನಿದು?
ಚಾಮರಾಜನಗರ, ನವೆಂಬರ್ 16: ಇದು ಸೆಲ್ಫಿ ಯುಗ ಈಗ ಏನೇ ಕಂಡರೂ ಅದರೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳುವುದೊಂದು ಫ್ಯಾಷನ್ ಆಗಿದೆ. ಜತೆಗೆ ತಾವು ತೆಗೆದ ಫೋಟೋವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಾಕಿ ಲೈಕ್ ಎಷ್ಟಾಗಿದೆ? ಕಾಮೆಂಟ್ ಎಷ್ಟು ಬಂದಿದೆ ಎಂದು ಲೆಕ್ಕ ಹಾಕುವುದು, ತಮ್ಮ ಫೋಟೋ, ವೀಡಿಯೋಗಳು ವೈರಲ್ ಆಗಬೇಕೆಂದು ಬಯಸುವುದು ಟ್ರೆಂಡ್ ಆಗಿದೆ. ಹೀಗಾಗಿಯೇ ವಸ್ತುಪ್ರದರ್ಶನ, ಫಲಪುಷ್ಪಪ್ರದರ್ಶನ ಮುಂತಾದ ಸ್ಥಳಗಳಲ್ಲಿ ಸೆಲ್ಫಿ ಪ್ರಿಯರಿಗಾಗಿಯೇ ಸೆಲ್ಫಿ ಪಾಯಿಂಟ್ ಗಳನ್ನು ತೆರೆಯುವುದು ಹೊಸ ಬೆಳವಣಿಗೆಯಾಗಿದೆ.
ಮೊದಲೆಲ್ಲ ನೆಚ್ಚಿನ ನಟ ನಟಿಯರು, ವಿಐಪಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಇದೀಗ ಮೊಬೈಲ್ ಕೈಗೆ ಬಂದ ನಂತರ ಗಿಡ, ಮರ, ಹೂ, ಪ್ರಾಣಿ, ಪಕ್ಷಿ, ಬೆಟ್ಟಗುಡ್ಡ ಹೀಗೆ ಎಲ್ಲ ಕಡೆಗಳಲ್ಲೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಮಾಮೂಲಿಯಾಗಿದೆ. ಅದರಲ್ಲೂ ಪ್ರವಾಸಿ ಕೇಂದ್ರಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರ ಸಂಖ್ಯೆ ದೊಡ್ಡಮಟ್ಟದಲ್ಲಿರುತ್ತದೆ. ಅದರಲ್ಲೂ ತುಂಬಾ ಜನಕ್ಕೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳುವುದೇ ಒಂದು ಗೀಳಾಗಿದೆ ಎಂದರೆ ತಪ್ಪಾಗಲಾರದು. ಇಂತಹವರು ಎಲ್ಲಿಗೆ ಹೋದರೂ ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಾರೆ, ಹೀಗಿರುವಾಗ ಅವರ ಕಣ್ಣಿಗೆ ಅರಳಿ ನಿಂತ ಸೂರ್ಯಕಾಂತಿ, ಚೆಂಡು, ಸೇವಂತಿಗೆ ಹೂಗಳ ಬಯಲು ಕಾಣಿಸಿದರೆ ಸುಮ್ಮನೆ ಇರುತ್ತಾರಾ?

ಜಮೀನು ಯಾರದಾದರೇನು? ಹೂ ಬೆಳೆಸಿದವರು ಯಾರಾದರೇನು? ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರು ನಾವಾಗಬೇಕಷ್ಟೆ ಎನ್ನುತ್ತಾ ಜಮೀನಿಗೆ ದೌಡಾಯಿಸಿ ಒಂದಿಷ್ಟು ಫೋಟೋ ಕ್ಲಿಕ್ಕಿಸಿಕೊಂಡು ಹೋಗುತ್ತಾರೆ. ಕೆಲವು ರೈತರು ಅಯ್ಯೋ ಫೋಟೋ ತೆಗೆದುಕೊಂಡು ಹೋದರೆ ಹೋಗಲಿ ಅಂಥ ಸುಮ್ಮನಾಗುತ್ತಾರೆ. ಆದರೆ ಎಲ್ಲೋರು ಆ ರೀತಿ ಇರೋಕೆ ಸಾಧ್ಯವಿಲ್ಲ. ಹೀಗಾಗಿ ಫೋಟೋ ತೆಗೆಯುವ ವೇಳೆ ಗಿಡಗಳನ್ನು ತುಳಿದು ಹಾಳು ಮಾಡುತ್ತಾರೆಂದು ಜಮೀನಿನ ಒಳಗೆ ಪ್ರವೇಶ ನೀಡುವುದೇ ಇಲ್ಲ. ಮತ್ತೆ ಕೆಲವರು ಎಷ್ಟು ಫೋಟೋನಾದ್ರು ತೆಗೆದುಕೊಳ್ಳಿ ನಮಗೆ ಒಂದಿಷ್ಟು ಅದಕ್ಕೆ ಹಣಕೊಡಿ ಅಂಥ ಶುಲ್ಕ ವಿಧಿಸಿ ಜಮೀನಿನಲ್ಲಿ ಕಾಯುತ್ತಾ ಕುಳಿತು ಬಿಡುತ್ತಾರೆ.
ಸುಂದರ ಹೂಗಳ ಲೋಕದಲ್ಲಿ ವಿಹಾರ
ಸಾವಿರಾರು ರೂಪಾಯಿ ಖರ್ಚುಮಾಡಿಕೊಂಡು ಪ್ರವಾಸಿ ಮಾಡುವವರು ಐವತ್ತೋ ನೂರೋ ರೂಪಾಯಿಯ ಮುಖ ನೋಡಿಕೊಂಡು ಫೋಟೋ ತೆಗೆಯದೆ ಮುಂದೆ ಹೋಗುವುದಿಲ್ಲ ಶುಲ್ಕ ಕೊಟ್ಟು ಒಂದಷ್ಟು ಫೋಟೋ ಕ್ಲಿಕ್ಕಿಸಿಕೊಂಡು ಹೋಗುತ್ತಾರೆ. ಇಂತಹವರಿಂದ ಹೂ ಬೆಳೆದ ರೈತರಿಗೂ ಒಂದಷ್ಟು ಖರ್ಚಿಗೆ ಕಾಸು ಆಗುತ್ತದೆ. ಸುಮಾರು ಐದಾರು ವರ್ಷಗಳ ಹಿಂದೆ ರೈತರು ಚಾಮರಾಜನಗರ ಜಿಲ್ಲೆಯಲ್ಲಿ ಚೆಂಡುಹೂ, ಸೂರ್ಯಕಾಂತಿ ಮೊದಲಾದ ಹೂಗಳನ್ನು ಬೆಳೆಯುತ್ತಿದ್ದರು. ಅದರಲ್ಲೂ ಗುಂಡ್ಲುಪೇಟೆ ತಾಲೂಕು ವ್ಯಾಪ್ತಿ ಕೇರಳಕ್ಕೆ ಹೊಂದಿಕೊಂಡಂತೆ ಇರುವುದರಿಂದ ಈ ಮಾರ್ಗಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿದ್ದರು.
ದೂರದಿಂದ ಬರುವ ಪ್ರವಾಸಿಗರು ಇಲ್ಲಿ ಬೆಳೆದ ಹೂಗಳನ್ನು ನೋಡಿ ಖುಷಿ ಪಟ್ಟು ಫೋಟೋ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದರು. ಕೆಲವರು ಜಮೀನಿನ ಒಳಗೆ ಬರುತ್ತಿದ್ದುದಲ್ಲದೆ, ಗಿಡಗಳನ್ನು ಹಿಡಿದು, ತುಳಿದು ಹಾಳು ಮಾಡುತ್ತಿದ್ದರು. ಇದರಿಂದ ನೊಂದ ಗುಂಡ್ಲುಪೇಟೆ ಬಳಿಯ ಬೇಗೂರಿನಲ್ಲಿ ಸೂರ್ಯಕಾಂತಿ ಬೆಳೆದಿದ್ದ ರೈತರೊಬ್ಬರು ಹೂಗಳ ನಡುವೆ ನಿಂತು ಸೆಲ್ಫಿ ತೆಗೆಯಿಸಿಕೊಳ್ಳುವವರಿಗೆ ಶುಲ್ಕ ವಿಧಿಸಿದ್ದರು. ಆದರೆ ಪ್ರವಾಸಿಗರಿಗೂ ಕೂಡ ಸುಂದರ ಹೂಗಳ ಲೋಕದಲ್ಲಿ ವಿಹರಿಸುತ್ತಾ ಸೆಲ್ಫಿ ತೆಗೆದುಕೊಳ್ಳುವುದು ಇಷ್ಟವಾಗುವುದರಿಂದ ಹತ್ತೋ ಇಪ್ಪತ್ತೋ ನೀಡಲು ಹಿಂದೇಟು ಹಾಕದ ಕೇಳಿದಷ್ಟು ಹಣ ನೀಡಿ ಸೆಲ್ಫಿ ತೆಗೆದುಕೊಂಡು ಹೋಗಲಾರಂಭಿಸಿದ್ದರು.

ಸೆಲ್ಪಿಗೆ ಶುಲ್ಕ ವಿಧಿಸಿದ್ದೇಕೆ ರೈತರು?
ಯಾವಾಗ ಸೂರ್ಯಕಾಂತಿ ಹೂ ಬೆಳೆದಿದ್ದ ರೈತ ಸೆಲ್ಫಿಗೆ ಶುಲ್ಕ ವಿಧಿಸಿ ಹಣ ಸಂಪಾದಿಸಿದನೋ ಅದನ್ನು ನೋಡಿದ ಚೆಂಡು ಹೂವು ಬೆಳೆದ ಜಮೀನಿನ ಮಾಲಿಕರು ಕೂಡ ಅದೇ ಹಾದಿ ಹಿಡಿದಿದ್ದನು. ಹೀಗೇ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಮದ್ದೂರು, ಚನ್ನಮಲ್ಲೀಪುರ ಗ್ರಾಮಗಳ ರೈತರು ತಮ್ಮ ಜಮೀನಿನಲ್ಲಿ ಹೂಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಬೇಕಾದರೆ ಹಣ ನೀಡಿ ಎಂದು ಕೇಳಲಾರಂಭಿಸಿದರು. ಇದು ಹಾಗೆಯೇ ಮುಂದುವರೆದು ಬಂದಿದ್ದು, ಈಗಲೂ ಕೆಲವು ಕಡೆಗಳಲ್ಲಿ ಶುಲ್ಕ ನೀಡದೆ ಫೋಟೋ ತೆಗೆಯಲು ಅವಕಾಶ ಸಿಗುವುದಿಲ್ಲ.
ಹಾಗೆನೋಡಿದರೆ ರಾಷ್ಟ್ರೀಯ ಹೆದ್ದಾರಿ 766ರ ವ್ಯಾಪ್ತಿಯ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಮದ್ದೂರು, ಚನ್ನಮಲ್ಲೀಪುರ ಗ್ರಾಮದ ರೈತರು ತಮ್ಮ ಜಮೀನುಗಳಲ್ಲಿ ಸೂರ್ಯಕಾಂತಿ, ಚೆಂಡುಮಲ್ಲಿಗೆಯನ್ನು ಬೆಳೆಯುತ್ತಾರೆ. ಅವು ಹೂವು ಬಿಟ್ಟಾಗ ಕಣ್ಣು ಹಾಯಿಸಿದುದ್ದಕ್ಕೂ ಹಳದಿ ಬಣ್ಣದಿಂದ ಸುಂದರವಾಗಿ ಕಂಗೊಳಿಸುತ್ತಿವೆ. ಈ ಸುಂದರ ದೃಶ್ಯವನ್ನು ಕಂಡ ವಾಹನಗಳಲ್ಲಿ ತೆರಳುವ ಪ್ರವಾಸಿಗರು ವಾಹನವನ್ನು ನಿಲ್ಲಿಸಿ ಸೆಲ್ಫಿ ಅಥವಾ ಸಾಮೂಹಿಕ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವುದು ಮಾಮೂಲಾಗಿದೆ.
ಭೂತಾಯಿಯ ಹಸಿರು ಸೀರೆಗೆ ಚಿನ್ನದ ಝರಿ
ಈ ಹೆದ್ದಾರಿ ಕೇರಳದ ಸುಲ್ತಾನ್ ಬತ್ತೇರಿಗೆ ಸಂಪರ್ಕ ಕಲ್ಪಿಸುವುದರಿಂದ ನಿತ್ಯವೂ ಸಾವಿರಾರು ಪ್ರವಾಸಿಗರು ವಾಹನಗಳಲ್ಲಿ ಸಂಚರಿಸುತ್ತಾರೆ. ಅದರಲ್ಲೂ ದೂರದಿಂದ ಟ್ರಿಪ್ ಬರುವ ಯುವಕ, ಯುವತಿಯರಂತು ಜಮೀನು ತುಂಬಾ ಓಡಾಡಿ ತಮಗೆ ಬೇಕಾದಂತೆ ಫೋಟೋ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡುತ್ತಾರೆ. ಹೂವು ಅರಳಿದ ಸಂದರ್ಭ ಭೂತಾಯಿಯುಟ್ಟ ಹಸಿರು ಸೀರೆಗೆ ಚಿನ್ನದ ಝರಿಯಿಟ್ಟಂತೆ ಕಾಣುವ ಹಳದಿ ಬಣ್ಣದ ಹೂವುಗಳು ಕಣ್ಮನ ಸೆಳೆಯುತ್ತವೆ. ಹೀಗಾಗಿ ಅವುಗಳ ನಡುವೆ ಸೆಲ್ಪಿ ತೆಗೆಯಲು ಹಾತೊರೆಯುವುದು ಸಾಮಾನ್ಯವಾಗಿದೆ.












Click it and Unblock the Notifications