ಪರಿಚಯ; ಮಾತು, ಬರಹದಲ್ಲಿ ಪ್ರಖರವಾಗಿರುವ ಸಂಜಯ್ ರಾವತ್ ಯಾರು?
ಶಿವಸೇನಾ ಸಂಸದ ಸಂಜಯ್ ರಾವತ್ ಎಂದರೆ ಬಿಜೆಪಿಯ ಘಟಾನುಘಟಿಗಳನ್ನು ಮಾತಿನಲ್ಲೇ ಹುರಿದು ಮುಕ್ಕುತ್ತಿದ್ದ ವ್ಯಕ್ತಿತ್ವವೇ ಮೊದಲು ನೆನಪಿಗೆ ಬರುವುದು. ಈಗ ಸಂಜಯ್ ರಾವತ್ ಅವರನ್ನು ಪಾತ್ರ ಚಾಲ್ ಭೂ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಆಗಸ್ಟ್ 4ರವರೆಗೆ ಕಸ್ಟಡಿಗೆ ಪಡೆದಿದೆ.
ಜುಲೈ 31ರಂದು ರಾವತ್‌ರನ್ನು ಇಡಿ ಮೊದಲು ವಶಕ್ಕೆ ತೆಗೆದುಕೊಂಡಿತು. ಆ ಸಂದರ್ಭದಲ್ಲೂ ಸಂಜಯ್ ರಾವತ್, 'ಜುಕೇಗಾ ನಹೀ' ಎಂದು ಖ್ಯಾತ ಪುಷ್ಪಾ ಹಿಂದಿ ಸಿನಿಮಾ ಡೈಲಾಗ್ ಹೊಡೆದಿದ್ದರು. ಈ ಡೈಲಾಗ್ ಸಂಜಯ್ ರಾವತ್ ರಾಜಕೀಯ ಜೀವನದ ಇಡೀ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ.
ಶಿವಸೇನಾ ಮುಖ್ಯಸ್ಥ ಹಾಗು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾಧ್ಯಮಗೋಷ್ಠಿ ನಡೆಸಿ ಸಂಜಯ್ ರಾವತ್‌ಗೆ ಬೆಂಬಲ ವ್ಯಕ್ತಪಡಿಸಿದರು. ಈ ರೀತಿ ಕೇಂದ್ರ ತನಿಖಾ ದಳದ ತನಿಖೆ ಎದುರಿಸುತ್ತಿರುವ ರಾಜಕಾರಣಿಗಳಿಗೆ ಅವರ ಪಕ್ಷದ ಮುಖ್ಯಸ್ಥರಿಂದ ಬಹಿರಂಗವಾಗಿ ಬೆಂಬಲ ವ್ಯಕ್ತವಾಗುವುದು ಅಪರೂಪ.
ಉದ್ಧವ್ ಠಾಕ್ರೆಯನ್ನು ರೂಪಿಸಿದ್ದು ಸಂಜಯ್ ರಾವತ್ ಅವರಾ, ಅಥವಾ ಸಂಜಯ್ ರಾವತ್‌ರನ್ನು ರೂಪಿಸಿದ್ದು ಉದ್ಧವ್ ಠಾಕ್ರೆಯಾ ಎಂದು ಅನಿಸುವಷ್ಟರ ಮಟ್ಟಿಗೆ ಅವರಿಬ್ಬರದ್ದು ಗಾಢ ಸಂಬಂಧ ಇದೆ. ಹಾಗೆಯೇ, ಬಿಜೆಪಿ ಮತ್ತು ಶಿವಸೇನಾ ಮಧ್ಯೆ ಬಿರುಕು ಮೂಡಲು ಮತ್ತು ಎಂವಿಎ ಮೈತ್ರಿಕೂಟ ರಚನೆಯಾಗುವುದರ ಹಿಂದೆ ಸಂಜಯ್ ಪಾತ್ರ ಇದೆ.

ಪತ್ರಕರ್ತನಾಗಿ ಆರಂಭ
60 ವರ್ಷದ ಸಂಜಯ್ ರಾವತ್ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಅಲಿಬಾಗ್‌ನ ಚೌಂದಿ ಎಂಬ ಗ್ರಾಮದವರು. ಎಂಬತ್ತರ ದಶಕದಲ್ಲಿ ಅವರು ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ನಲ್ಲಿ ಪತ್ರಿಕಾ ಪ್ರಸರಣ ಮತ್ತು ಮಾರಾಟ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಲೋಕಪ್ರಭ ವಾರಪತ್ರಿಕೆಯಲ್ಲಿ ರಿಪೋರ್ಟರ್ ಆಗಿ ಕೆಲಸ ಮಾಡತೊಡಗಿದರು. ಅಲ್ಲಿಂದ ಸಂಜಯ್ ರಾವತ್ ಪ್ರಜ್ವಲಿಸಲು ಆರಂಭಿಸಿದರು.
ಅವರ ಕ್ರೈಂ ರಿಪೋರ್ಟಿಂಗ್ ಬಹಳ ಹೆಸರು ಮಾಡಿತು. ಲೋಕಸತ್ತಾ ದಿನಪತ್ರಿಕೆಯಲ್ಲಿ ಅವರ ವರದಿಗಳು ಪ್ರಕಟವಾಗತೊಡಗಿದವು. ಅನೇಕ ತನಿಖಾ ವರದಿಗಳನ್ನು ಬರೆದರು. ಬಹಳ ದಿಟ್ಟ ಪತ್ರಕರ್ತರೆಂದು ಹೆಸರು ಮಾಡಿದರು. ಅನೇಕ ರಾಜಕಾರಣಿಗಳು, ಭೂಗತಲೋಕದ ಪಾತಕಿಗಳನ್ನೂ ಅವರು ಬಿಡುತ್ತಿರಲಿಲ್ಲ.
ರಂಜನ್, ಮಾರ್ಮಿಕ್ ಇತ್ಯಾದಿ ಪತ್ರಿಕೆಗಳಿಗೂ ಸಂಜಯ್ ರಾವತ್ ವರದಿಗಳನ್ನು ಕೊಡುತ್ತಿದ್ದರು. ಬಾಳಾ ಠಾಕ್ರೆ ಮತ್ತವರ ಸಹೋದರ ಶ್ರೀಕಾಂತ್ ಅವರು 1960ರಲ್ಲಿ ಆರಂಭಿಸಿದ್ದ ಮಾರ್ಮಿಕ್ ಒಂದು ರೀತಿಯಲ್ಲಿ ಶಿವಸೇನಾ ಉಗಮಕ್ಕೆ ಕಾರಣವಾಗಿತ್ತು. ಇಲ್ಲಿ ಸಂಜಯ್ ರಾವತ್ ಬಾಳಾ ಠಾಕ್ರೆ ಮತ್ತು ಶ್ರೀಕಾಂತ್ ಠಾಕ್ರೆಗೆ ಹತ್ತಿರವಾದರು. ಅದರಲ್ಲೂ ಶ್ರೀಕಾಂತ್ ಠಾಕ್ರೆಗೆ ರಾವತ್ ಬಹಳ ಆಪ್ತರಾದರು.
ಆಗ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಇಬ್ಬರೂ ಶಿವಸೇನಾದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಯುವ ನಾಯಕರು. ಇಬ್ಬರಿಗೂ ಸಂಜಯ್ ರಾವತ್ ಆಪ್ತರಾದರು.
1989ರಲ್ಲಿ ಮರಾಠಿ ದಿನಪತ್ರಿಕೆ ಸಾಮ್ನಾ ಆರಂಭವಾಯಿತು. ಇದು ಶಿವಸೇನಾದ ಮುಖವಾಣಿ. 1992ರಲ್ಲಿ ಸಂಜಯ್ ರಾವತ್ ಎಕ್ಸಿಕ್ಯೂಟಿವ್ ಎಡಿಟರ್ ಆದರು. ಈಗಲೂ ಕೂಡ ಸಾಮ್ನಾ ಪತ್ರಿಕೆಯಲ್ಲಿ ಸಂಜಯ್ ರಾವತ್ ಸಂಪಾದಕರಾಗಿದ್ದಾರೆ.

ಬಿಜೆಪಿ ವಿರುದ್ಧ ನಿಂತದ್ದು
ಸಂಜಯ್ ರಾವತ್ ಬಿಜೆಪಿ ವಿರುದ್ಧ ಪುಂಖಾನುಪುಂಖವಾಗಿ ಟೀಕೆ ಮಾಡುವುದನ್ನು ನಾವು ಇತ್ತೀಚೆಗೆ ಹೆಚ್ಚು ಗಮನಿಸಿದ್ದೇವೆ. ಸಾಮ್ನಾ ಪತ್ರಿಕೆಯಲ್ಲಿ ಕೇಂದ್ರ ಸರಕಾರದ ಬಹುತೇಕ ನೀತಿಗಳನ್ನು ಟೀಕಿಸುವುದರ ಹಿಂದಿನ ಶಕ್ತಿಯೇ ಸಂಜಯ್ ರಾವತ್.
ಶಿವಸೇನಾ ಎಂವಿಎ ಮೈತ್ರಿಕೂಟದಲ್ಲಿ ಇದ್ದ ಕಾರಣಕ್ಕೆ ಸಂಜಯ್ ರಾವತ್ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಲ್ಲ. ಅವರು ಈ ಹಿಂದೆಯೂ ಸಾಮ್ನಾದಲ್ಲಿ ಬಿಜೆಪಿ ವಿರುದ್ಧ ಪ್ರಬಲ ವಾಗ್ದಾಳಿ ಮಾಡುತ್ತಾ ಬಂದಿದ್ದರು.
ಬಿಜೆಪಿ-ಶಿವಸೇನಾ ಮೈತ್ರಿ ಸರಕಾರ ಅಸ್ತಿತ್ವದಲ್ಲಿದ್ದಾಗ ಸಾಮ್ನಾದ ಸಂಪಾದಕೀಯದಲ್ಲಿ ಸರಕಾರದ ಕೆಲ ನೀತಿಗಳನ್ನು ವಿರೋಧಿಸಿ ವಿಮರ್ಶೆ ಬರೆಲಾಗುತ್ತಿತ್ತು.

ಶಿವಸೇನಾ-ಬಿಜೆಪಿ ಬಿರುಕಿಗೆ ರಾವತ್ ಕಾರಣ?
2019ರಲ್ಲಿ ಶಿವಸೇನಾ ಮತ್ತು ಬಿಜೆಪಿ ಮೈತ್ರಿ ಕಡಿತಗೊಂಡಿತು. ಇದರ ಹಿಂದಿನ ಶಕ್ತಿ ಸಂಜಯ್ ರಾವತ್ ಅವರೇ ಎಂದೆನ್ನಲಾಗುತ್ತಿದೆ. ಸಂಜಯ್ ರಾವತ್ ರಾಜಕೀಯವಾಗಿ ಎನ್‌ಸಿಪಿ ಪರ ಒಲವಿದ್ದವರೇ. ಈ ಹಿಂದೆ 2009ರ ಲೋಕಸಭಾ ಚುನಾವಣೆಯಲ್ಲಿ ಶಿವಸೇನಾ ಮತ್ತು ಎನ್‌ಸಿಪಿ ಮಧ್ಯೆ ಚುನಾವಣಾ ಮೈತ್ರಿಗೆ ರಾವತ್ ಪ್ರಯತ್ನಿಸಿದ್ದರು. ಆದರೆ ಅದು ಕೈಗೂಡಲಿಲ್ಲ.
ಎಂವಿಎ ಮೈತ್ರಿ ಸರಕಾರ ಬಂದಾಗ ಸಂಜಯ್ ರಾವತ್ ಬಿಜೆಪಿಗರನ್ನು ಇನ್ನಷ್ಟು ದೂರ ತಳ್ಳಿದರು. ಏಕನಾಥ್ ಶಿಂಧೆ ಆರೋಪಿಸುವ ಪ್ರಕಾರ, ಶಿವಸೇನಾದ ಅನೇಕ ಶಾಸಕರನ್ನೂ ಉದ್ಧವ್ ಠಾಕ್ರೆಯಿಂದ ದೂರ ತಳ್ಳುವ ಕೆಲಸ ರಾವತ್ ಮಾಡುತ್ತಿದ್ದರೆನ್ನಲಾಗಿದೆ. ಅಂದರೆ, ಉದ್ಧವ್ ಠಾಕ್ರೆಯನ್ನು ಭೇಟಿ ಮಾಡಲು ಶಿವಸೇನಾ ಶಾಸಕರಿಗೆ ಅವಕಾಶ ನೀಡುತ್ತಿರಲಿಲ್ಲ. ಇದರಿಂದ ಠಾಕ್ರೆಗೆ ಪಕ್ಷದ ಶಾಸಕರ ಅನಿಸಿಕೆಗಳೇನು ಎಂಬುದು ತಿಳಿಯದಂತಾಗಿತ್ತು ಎಂದು ಶಿಂಧೆ ಹೇಳುತ್ತಾರೆ.

ರಾವತ್ ವಿವಾದಗಳು
ಸಂಜಯ್ ರಾವತ್ ಬರವಣಿಗೆಯಲ್ಲಿ ಬಹಳ ಪ್ರಖರತೆ ಇತ್ತು. ಅವರ ಮಾತೂ ಅಷ್ಟೇ ಹರಿತವಿತ್ತು. ಟೀಕಿಸುವುದರಲ್ಲಿ ರಾವತ್ ಎತ್ತಿದ ಕೈ. ಬಿಜೆಪಿ ಶಿವಸೇನಾ ಮೈತ್ರಿ ಇದ್ದಾಗ ಇವರು ಬಿಜೆಪಿ ವಿರುದ್ಧ ಬರೆಯುತ್ತಿದ್ದ ರೀತಿ ಸೋಜಿಗವೆನಿಸುತ್ತಿತ್ತು. ರಾವತ್ ಅವರನ್ನು ಹದ್ದುಬಸ್ತಿನಲ್ಲಿಡುವಂತೆ ಬಿಜೆಪಿ ನಾಯಕರು ಠಾಕ್ರೆಗೆ ಹೇಳುವಂತಾಗಿತ್ತು.
ಹಾಗೆಯೇ, ಸಾಮ್ನಾ ಪತ್ರಿಕೆಯಲ್ಲಿ ಸಂಜಯ್ ರಾವತ್ ಆಡಿದ್ದೇ ಆಟ. ಅವರಿಗೆ ಪೂರ್ಣ ಸ್ವಾತಂತ್ರ್ಯ ನೀಡಬೇಡಿ ಎಂದೂ ಶಿವಸೇನಾದ ಕೆಲ ನಾಯಕರು ಠಾಕ್ರೆ ಬಳಿ ಮನವಿ ಮಾಡಿಕೊಂಡಿದ್ದರಂತೆ.
2015ರಲ್ಲಿ ಅವರು, ಮುಸ್ಲಿಮರಿಗೆ ವೋಟಿಂಗ್ ಹಕ್ಕು ನಿರಾಕರಿಸಬೇಕು ಎಂದು ಹೇಳಿ ವಿವಾದಕ್ಕೆ ಒಳಗಾಗಿದ್ದರು. ಮುಸ್ಲಿಮರನ್ನು ಮತ ಬ್ಯಾಂಕ್ ಅಗಿ ಪರಿಗಣಿಸಲಾಗಿದೆ. ಇದರಿಂದ ಅವರ ಏಳ್ಗೆ ಆಗುತ್ತಿಲ್ಲ. ಕೆಲ ಕಾಲದವರೆಗೆ ಅವರಿಗೆ ವೋಟಿಂಗ್ ಹಕ್ಕು ನಿರಾಕರಿಸಬೇಕು ಎಂಬುದು ಸಂಜಯ್ ರಾವತ್ ವಾದವಾಗಿತ್ತು.
ಈಗ ಪಾತ್ರ ಚಾಲ್ ಭೂ ಹಗರಣದಲ್ಲಿ ಇಡಿ ಕಸ್ಟಡಿಯಲ್ಲಿದ್ದಾರೆ. ಝುಕೇಗಾ ನಹೀ ಎಂದು ಹೇಳುತ್ತಿದ್ದ ಸಂಜಯ್ ರಾವತ್ ಈಗ ವಿಭಿನ್ನ ಪರಿಸ್ಥಿತಿಯಲ್ಲಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications