ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಣಿ ಅವಂತಿಬಾಯಿ: ಬ್ರಿಟಿಷರ ವಿರುದ್ಧ ವೀರ ಹೋರಾಟ

|
Google Oneindia Kannada News

ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಸುಮಾರು ನೂರೈವತ್ತು ವರ್ಷಗಳಲ್ಲಿ ಅದೆಷ್ಟೋ ಜನರ ಬಲಿದಾನವಾಗಿದೆ. ವೀರೋಚಿತ ಸೋಲುಗಳಾಗಿವೆ. ರೋಚಕ ಕ್ರಾಂತಿಗಳಾಗಿವೆ. ಇತಿಹಾಸ ಪುಟದಲ್ಲಿ ಕೆಲವೇ ಸ್ವಾತಂತ್ರ್ಯ ಹೋರಾಟಗಾರರ ಹೆಸರು ದಾಖಲಾಗಿದೆ. ಇನ್ನೂ ಹಲವರು ವೀರ ಯೋಧರು, ಹೋರಾಟಗಾರರ ಹೆಸರು ನಮ್ಮ ಸ್ಮರಣೆಯಿಂದ ಜಾರಿ ಹೋಗುತ್ತಿದೆ.

ಲೋಧಿ ರಾಜಪೂತರ ರಾಣಿ ಅವಂತಿಬಾಯಿ ಅಂಥ ಒಬ್ಬ ಅಪ್ರತಿಮ ಹೋರಾಟಗಾರ್ತಿ. 19ನೇ ಶತಮಾನದಲ್ಲಿ ಬದುಕಿದ್ದ ಆವಂತಿಬಾಯಿ ನಮ್ಮ ರಾಣಿ ಚೆನ್ನಮ್ಮ, ರಾಣಿ ಲಕ್ಷ್ಮೀಬಾಯಿ ಮೊದಲಾದವರ ಸಾಲಿಗೆ ನಿಲ್ಲುವ ರಾಣಿ.

ನಾಲ್ಕು ಸಾವಿರ ಸೈನಿಕರನ್ನಿಟ್ಟುಕೊಂಡು ಬ್ರಿಟಿಷ್ ಸೇನೆಯನ್ನೇ ಸೋಲಿಸಿದವರು ರಾಣಿ ಆವಂತಿಬಾಯಿ. ಇವರ ಸಾಹಸ, ಬಲಿದಾನ, ದೇಶಭಕ್ತಿ, ಛಲ ಎಲ್ಲವೂ ಮಾದರಿಯಾಗುವಂಥದ್ದು. ಇಂಥ ಹಲವಾರು ನಾಯಕರು, ಜನಸಾಮಾನ್ಯರ ಪ್ರತಿರೋಧದ ಫಲವಾಗಿ ಬ್ರಿಟಿಷರು ಭಾರತದಲ್ಲಿ ಹೆಚ್ಚು ಕಾಲ ಇರಲು ಸಾಧ್ಯವಾಗಲಿಲ್ಲ ಎಂಬುದು ವಾಸ್ತವ ಸಂಗತಿ.

ಇದೀಗ ನಮ್ಮ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ವರ್ಷ. ಈ ಸಂದರ್ಭದಲ್ಲಿ ಹೆಚ್ಚು ಪ್ರಚಲಿತದಲ್ಲಿ ಇಲ್ಲದ ಹೋರಾಟಗಾರರನ್ನು ಸ್ಮರಿಸುವ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಣಿ ಆವಂತಿಬಾಯಿ ಯಾರು? ಅವರ ಹೋರಾಟಗಳೇನು? ಅವರ ಬಲಿದಾನ ಹೇಗಾಯ್ತು ಇತ್ಯಾದಿ ವಿವರ ಇಲ್ಲಿದೆ.

ರಾಣಿ ಅವಂತಿಬಾಯಿ ಯಾರು?

ರಾಣಿ ಅವಂತಿಬಾಯಿ ಯಾರು?

ಮಧ್ಯಪ್ರದೇಶದ ಸಿವನಿ ಜಿಲ್ಲೆಯ ಮಂಕೆಹಾಡಿ ಗ್ರಾಮದಲ್ಲಿ ಜಮೀನ್ದಾರರ ಕುಟುಂಬದಲ್ಲಿ 1831 ಆಗಸ್ಟ್ 16ರಂದು ಜನಿಸಿದವರು ಆವಂತಿಬಾಯಿ. ಬಹಳ ಚಿಕ್ಕ ವಯಸ್ಸಿನಲ್ಲೇ ಕುದುರೆ ಸವಾರಿ, ಬಿಲ್ವಿದ್ಯೆ, ಕತ್ತಿವರಸೆ ಕಲಿತ ವೀರಳಾಗಿದ್ದರು.

ಮಧ್ಯಪ್ರದೇಶದ ರಾಮಗಡ್ (ಈಗಿನ ಡಿಂಡೋರಿ ಜಿಲ್ಲೆ) ಸಂಸ್ಥಾನದ ರಾಜಾ ಲಕ್ಷ್ಮಣ ಸಿಂಗ್ ಮಗ ವಿಕ್ರಮಾದಿತ್ಯ ಸಿಂಗ್ ಲೋಧಿ ಅವರನ್ನು ಆವಂತಿಬಾಯಿ ವರಿಸಿದರು. ಆಗ ವಯಸ್ಸು ೧೮ ವರ್ಷ.

ಕೆಲ ವರ್ಷಗಳ ಬಳಿಕ ವಿಕ್ರಮಾದಿತ್ಯ ಸಿಂಗ್ ಲೋಧಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಸಂಸ್ಥಾನದ ಹೊಣೆ ಅವಂತಿಬಾಯಿ ಹೆಗಲಿಗೆ ಬಂದಿತು. ಆವಂತಿಬಾಯಿ ತಮ್ಮ ಆಡಳಿತ ಚಾತುರ್ತಯತೆಯಿಂದ ನಾಡನ್ನು ಸುಭಿಕ್ಷತೆಯತ್ತ ಸಾಗಿಸಿದರು.

ಕಡ್ಡಿ ಆಡಿಸಿದ ಬ್ರಿಟಿಷರು

ಕಡ್ಡಿ ಆಡಿಸಿದ ಬ್ರಿಟಿಷರು

ಅಗ ರಾಮಗಡವು ಬ್ರಿಟಿಷರ ಅಧೀನದಲ್ಲಿದ್ದ ಸಂಸ್ಥಾನ. ಆಗ ಬ್ರಿಟಿಷರದ್ದು ವಿಚಿತ್ರ ನೀತಿ ಇತ್ತು. ತಮ್ಮಿಚ್ಛೆಯ ಪ್ರಕಾರ ಸಂಸ್ಥಾನವನ್ನು ವಶಕ್ಕೆ ಪಡೆಯುವ ಅಧಿಕಾರ ರೂಪಿಸಿಕೊಂಡಿದ್ದರು. ಡಾಕ್ಟ್ರೈನ್ ಆಫ್ ಲ್ಯಾಪ್ಸ್ (Doctrine of Lapse) ಎಂದು ಕರೆಯಲಾಗುವ ಆ ನೀತಿಯ ಪ್ರಕಾರ ಈಸ್ಟ್ ಇಂಡಿಯಾ ಕಂಪನಿಯ ಅಡಿಯಲ್ಲಿ ಇರುವ ಭಾರತೀಯ ರಾಜರ ಆಡಳಿತ ಪ್ರದೇಶಗಳಲ್ಲಿ ಆಡಳಿತ ನಡೆಸುವವರು ಅಸಮರ್ಥರಿದ್ದರೆ ಅಥವಾ ಪುರುಷ ಉತ್ತರಾಧಿಕಾರಿ ಇಲ್ಲದಿದ್ದರೆ ಆ ಪ್ರದೇಶವನ್ನು ಬ್ರಿಟಿಷ್ ಇಂಡಿಯಾ ಆಡಳಿತಕ್ಕೆ ಒಳಪಡಿಸಬಹುದು.

ಹೀಗಾಗಿ, ರಾಮಗಡದಲ್ಲಿ ವಿಕ್ರಮಾದಿತ್ಯ ಸಿಂಗ್ ಲೋಧಿ ಅಸ್ವಸ್ಥರಾದ ಕಾರಣ ಹಾಗು ಗಂಡು ಸಂತಾನ ಇಲ್ಲದ ಕಾರಣ ಆ ಸಂಸ್ಥಾನವನ್ನು ಬ್ರಿಟಿಷ್ ಇಂಡಿಯಾ ಆಡಳಿತಕ್ಕೆ ಒಳಪಡಿಸಲು ಬ್ರಿಟಿಷರು ಮುಂದಾದರು. ಆಗ ಆವಂತಿಬಾಯಿ ತನ್ನ ಇಬ್ಬರು ಗಂಡು ಮಕ್ಕಳಾದ ಅಮನ್ ಸಿಂಗ್ ಮತ್ತು ಶೇರ್ ಸಿಂಗ್ ಅವರನ್ನು ರಾಜ್ಯದ ಉತ್ತರಾಧಿಕಾರಿಗಳಾಗಿ ಮಾಡಲು ಯತ್ನಿಸಿದರು. ಆದರೆ, ಈ ಹುಡುಗರು ಇನ್ನೂ ಅಪ್ರಾಪ್ತ ವಯಸ್ಸಿನವರಾದ ಕಾರಣಕ್ಕೆ ಬ್ರಿಟಿಷರು ಅದನ್ನು ಒಪ್ಪಲಿಲ್ಲ. 1851 ಸೆಪ್ಟೆಂಬರ್ 13ರಂದು ಬ್ರಿಟಿಷರು ರಾಮಗಡವನ್ನು ವಶಕ್ಕೆ ಪಡೆದುಕೊಂಡರು.

1857ರ ದಂಗೆಯಲ್ಲಿ ಆವಂತಿಬಾಯಿ

1857ರ ದಂಗೆಯಲ್ಲಿ ಆವಂತಿಬಾಯಿ

ಬ್ರಿಟಿಷರ ವಿರುದ್ಧ 1857ರಲ್ಲಿ ಭಾರತದಲ್ಲಿ ದೊಡ್ಡ ದಂಗೆಯೆ ಎದ್ದಿತ್ತು. ಬ್ರಿಟಿಷ್ ಸೇನೆಯಲ್ಲಿದ್ದ ಭಾರತೀಯ ಸೈನಿಕರನೇಕರು ಬಂಡಾಯ ಎದ್ದು ಬ್ರಿಟಿಷರ ವಿರುದ್ಧವೇ ದಂಗೆ ಎದ್ದಿದ್ದರು. ಅದು ಸಿಪಾಯಿ ದಂಗೆಯಾಯಿತು. ಹಾಗೆಯೇ, ಇನ್ನೂ ಹಲವು ಸಂಸ್ಥಾನಗಳು ಬ್ರಿಟಿಷರ ವಿರುದ್ಧ ಯುದ್ಧ ನಡೆಸಿದರು. ಆವಂತಿಬಾಯಿ ಕೂಡ ತನ್ನ ಚಿಕ್ಕ ಸೇನೆಯನ್ನು ಬಳಸಿ ಬ್ರಿಟಿಷರ ಮೇಲೆ ಏರಿ ಹೋಗಿದ್ದರು.

ನಾಲ್ಕು ಸಾವಿರ ಸೈನಿಕರಿದ್ದ ಸೇನೆಯನ್ನು ಕಟ್ಟಿಕೊಂಡು ಆವಂತಿಬಾಯಿ ಬ್ರಿಟಿಷರ ಮೇಲೆ ಯುದ್ಧ ಮಾಡಿದರು. ಮಾಂಡ್ಲಾ ಬಳಿಯ ಖೇರಿ ಎಂಬ ಗ್ರಾಮದಲ್ಲಿ ಈಸ್ಟ್ ಇಂಡಿಯಾ ಕಂಪನಿ ಮತ್ತು ಆವಂತಿಬಾಯಿ ಮಧ್ಯೆ ದೊಡ್ಡ ಯುದ್ಧವೇ ನಡೆಯಿತು. ಇದರಲ್ಲಿ ಅವಂತಿ ಬಾಯಿ ಗೆದ್ದರು.

ವೀರೋಚಿತ ಹೋರಾಟ ಮತ್ತು ಬಲಿದಾನ

ವೀರೋಚಿತ ಹೋರಾಟ ಮತ್ತು ಬಲಿದಾನ

ಮಾಂಡ್ಲಾ ಬಳಿ ಸೋಲನುಭವಿಸಿದ ಬ್ರಿಟಿಷರು ಪ್ರತೀಕಾರ ತೀರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ರಾಮಗಡ್ ಮೇಲೆ ದಾಳಿ ನಡೆಸಿದ ಬ್ರಿಟಿಷರು ಅಲ್ಲಿ ಅವಂತಿಬಾಯಿಯ ಸೇನೆಯನ್ನು ಸೋಲಿಸಿದರು.

ದೇವಹಗರಗಡದವರೆಗೂ ಆವಂತಿಬಾಯಿ ಹಿಂದಕ್ಕೆ ಸರಿಯಬೇಕಾಯಿತು. ಆದರೆ, ಯುದ್ಧದಲ್ಲಿ ಸೋತರೂ ಅವಂತಿಬಾಯಿ ಸೋಲೊಪ್ಪಲು ಸಿದ್ಧರಿರಲಿಲ್ಲ. ದೇವಹರಗಡದಿಂದ ತಪ್ಪಿಸಿಕೊಂಡ ಆವಂತಿಬಾಯಿ ಬ್ರಿಟಿಷರ ವಿರುದ್ಧ ಗೆರಿಲ್ಲಾ ರಣತಂತ್ರದ ಮೂಲಕ ದಾಳಿಗಳನ್ನು ಮಾಡತೊಡಗಿದರು. ಅದರೆ, ಬ್ರಿಟಿಷ್ ಸೇನೆ ಬಹಳ ಬಲಿಷ್ಠವಾಗಿತ್ತು. ತನ್ನನ್ನು ಸುತ್ತುವರಿದ ಬ್ರಿಟಿಷ್ ಸೇನೆ ಜೊತೆ ಆವಂತಿಬಾಯಿಗೆ ಹೆಚ್ಚು ಯುದ್ಧ ಮಾಡಲು ಅಗಲಿಲ್ಲ.

ಆದರೆ, ವಿದೇಶೀ ಆಕ್ರಮಣಕಾರರ ಕೈಯಲ್ಲಿ ಸಾಯುವುದಕ್ಕೆ ಆವಂತಿಬಾಯಿಗೆ ಮನಸು ಬರಲಿಲ್ಲ. 1858, ಮಾರ್ಚ್ 10ರಂದು ಅವರು ಆತ್ಮಾಹುತಿಯಾದರು.

ಜಾನಪದ ಕಥೆಯಾಗಿ ಉಳಿದ ಅವಂತಿ

ಜಾನಪದ ಕಥೆಯಾಗಿ ಉಳಿದ ಅವಂತಿ

ಬ್ರಿಟಿಷರ ವಿರುದ್ಧ ವೀರೋಚಿತ ಹೋರಾಟ ತೋರಿದ ಅವಂತಿಬಾಯಿ ಇತಿಹಾಸ ಪುಟದಲ್ಲಿ ದಾಖಲಾಗದೇ ಹೋದದ್ದು ವಿಪರ್ಯಾಸ. ಆದರೆ, ಸ್ಥಳೀಯ ಜಾನಪದ ಕಥೆಯಾಗಿ ಜನಮಾನಸದಲ್ಲಿ ಉಳಿದುಹೋದರು.

ಆದಾಗ್ಯೂ ಮಧ್ಯಪ್ರದೇಶದ ಜಬಲ್‌ಪುರ್‌ನಲ್ಲಿ ಬಾರ್ಗಿ ಅಣೆಕಟ್ಟು ಯೋಜನೆಯ ಒಂದು ಭಾಗಕ್ಕೆ ಆವಂತಿಬಾಯಿ ಹೆಸರಿಡಲಾಗಿದೆ. 1988 ಮತ್ತು 2001ರಲ್ಲಿ ಅವರ ಹೆಸರಿನಲ್ಲಿ ಎರಡು ಅಂಚೆಗಳನ್ನು ಹೊರತರಲಾಗಿದೆ.

(ಒನ್ಇಂಡಿಯಾ ಸುದ್ದಿ)

Recommended Video

BJP ಈ 6 ಸಂಸದರಿಗೆ ಮುಂದಿನ ಚುನಾವಣೆಯಲ್ಲಿ ನೋ ಟಿಕೆಟ್? | *Politics | OneIndia Kannada

English summary
Rani Avantibai the queen of Ramgarh who once defeated British during the 1857 revolt. But lost in the battle later, and killed herself ultimately.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X