ಮೇಣದ ದೀಪಗಳಿಗೆ ಸೆಡ್ಡು ಹೊಡೆಯುತ್ತಿವೆ ಜಾನಪದ ಲೋಕದ ಮಣ್ಣಿನ ಹಣತೆ
ರಾಮನಗರ, ನವೆಂಬರ್ 14: ಮನಸ್ಸಿನ ಕತ್ತಲೆಯನ್ನು ಕಳೆದು ಅರಿವಿನ ಬೆಳಕನ್ನು ಹೊತ್ತಿಸುವ ವಿಶೇಷ ಹಬ್ಬವಾದ ದೀಪಾವಳಿ ದಿನದಂದು "ಪ್ರತಿ ಮನೆಗಳಲ್ಲಿ ಬೆಳಕು ಚೆಲ್ಲುವ ಸಾಂಪ್ರದಾಯಿಕ ಹಣತೆಗಳನ್ನು ತಲತಲಾಂತರದಿಂದ ತಯಾರಿಸುತ್ತಿದ್ದಾರೆ. ದೀಪಾವಳಿ ಹಬ್ಬಕ್ಕೆಂದೇ ಹಲವು ಬಗೆಯ ವಿಶೇಷ ಮಣ್ಣಿನ ದೀಪಗಳು ರಾಮನಗರದ ಜಾನಪದ ಲೋಕದಲ್ಲಿ ತಯಾರುಗುತ್ತಿವೆ.
ನಾಡಿಗೆ ಜನಪದರ ಸಂಸ್ಕೃತಿಯನ್ನು ಸಾರುತ್ತಿರುವ ಜಾನಪದ ಲೋಕದಲ್ಲಿ ಅನುಸೂಯಮ್ಮ ತಯಾರು ಮಾಡುವ ಮಣ್ಣಿನ ದೀಪಗಳಿಗೆ ದೀಪಾವಳಿ ಬಂದರೆ ಎಲ್ಲಿಲ್ಲದ ಬೇಡಿಕೆ ಶುರುವಾಗುತ್ತದೆ. ಇವರು ಬಗೆಬಗೆಯ ಮಣ್ಣಿನ ಹಣತೆಗಳನ್ನು ಸುಲಲಿತವಾಗಿ ತಯಾರು ಮಾಡುತ್ತಾರೆ. ಪೂರ್ವಿಕರಿಂದ ಬಳುವಳಿವಾಗಿ ಬಂದ ಈ ಕುಂಬಾರಿಕೆ ಕಲೆಯನ್ನು ಇವರು 42 ವರ್ಷಗಳಿಂದಲೂ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ.

ಮಣ್ಣಿನ ಹಣತೆಗಳಿಗೆ ಭಾರಿ ಬೇಡಿಕೆ
ಬೆಳಕಿನ ಹಬ್ಬ ದೀಪಾವಳಿ ಬಂದಾಗ ಇಲ್ಲಿನ ನೈಸರ್ಗಿಕ ಮಣ್ಣಿನ ಹಣತೆಗಳಿಗೆ ಭಾರಿ ಬೇಡಿಕೆ ಬರುತ್ತದೆ. ರಾಜ್ಯದ ವಿವಿದೆಡೆಯಿಂದ ಜಾನಪದ ಲೋಕಕ್ಕೆ ಬರುವ ಪ್ರವಾಸಿಗರು ಅನುಸೂಯಮ್ಮ ತಯಾರು ಮಾಡುವ ಹಣತೆಗಳನ್ನು ಕೊಂಡುಕೊಳ್ಳುತ್ತಾರೆ. ಇದಲ್ಲದೆ ಆಂಧ್ರ, ತಮಿಳುನಾಡು, ಕೇರಳ ಸೇರಿದಂತೆ ವಿವಿದ ರಾಜ್ಯಗಳಿಂದ ಬರುವ ಪ್ರವಾಸಿಗರ ಮನೆಯಲ್ಲಿ ಇಂದಿಗೂ ಇವರು ತಯಾರು ಮಾಡುವ ಹಣತೆಗಳು ಉರಿಯುತ್ತಿವೆ ಎಂದರೆ ಅತಿಶಯೋಕ್ತಿಯಲ್ಲ.

ಬಗೆಬಗೆಯ ಹಣತೆಗಳು ಪ್ರವಾಸಿಗರ ಮನ ಗೆಲ್ಲುತ್ತಿವೆ
ಅನುಸೂಯಮ್ಮ ಅವರ ಕೈಯಲ್ಲಿ ಅರಳುವ ಮ್ಯಾಜೀಕ್ ದೀಪ, ಅಂಬಾರಿ ದೀಪ, ನವಿಲು ದೀಪ, ಗಣೇಶ ದೀಪ, ಆನೆ ದೀಪ, ನವ ದೀಪ, ಮಡಿಲು ದೀಪ, ಲಕ್ಷ್ಮಿ ದೀಪ ಹೀಗೆ ಹಲವಾರು ಬಗೆಬಗೆಯ ಹಣತೆಗಳು ಪ್ರವಾಸಿಗರ ಮನ ಸೂರೆಗೊಳಿಸುತ್ತಿವೆ, ಅಲ್ಲದೇ ಅವರ ಮನೆ ಬೆಳಗುತ್ತಿವೆ.

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ
ಇತ್ತೀಚಿನ ಜಾಗತಿಕರಣಕ್ಕೆ ಸಿಲುಕಿ ಮಣ್ಣಿನ ಹಣತೆಗಳಿಗೆ ಬೇಡಿಕೆ ಕಡಿಮೆಯಾಗಿದೆ. ಪಿಂಗಾಣಿ, ಸ್ಟೀಲ್, ಮೇಣದಬತ್ತಿ ಮತ್ತಿತರ ಹಣತೆಗಳು ಮಾರುಕಟ್ಟೆ ಪ್ರವೇಶ ಮಾಡಿದ್ದರಿಂದ, ಮಣ್ಣಿನ ಸಾಂಪ್ರದಾಯಿಕ ಹಣತೆಗಳಿಗೆ ಬೇಡಿಕೆ ಕಸಿದಿವೆ. ಕೊರೊನಾ ಬಂದಾಗಿನಿಂದ ಹಣತೆಯನ್ನು ಕೇಳುವವರೆ ಇಲ್ಲದಾಗಿದೆ. ಈ ನಡುವೆ ಅನುಸೂಯಮ್ಮ ತಯಾರು ಮಾಡುವ ವಿವಿಧ ಮಣ್ಣಿನ ದೀಪಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ದೇಶೀ ಹಣತೆಗಳನ್ನು ಕೊಂಡುಕೊಳ್ಳೋಣ
ಒಟ್ಟಾರೆ ನಾಡಿಗೆ ಜಾನಪದ ಸಂಸ್ಕೃತಿ ಸಾರುತ್ತಿರುವ ಜಾನಪದ ಲೋಕ ದೇಶೀ ವಸ್ತುಗಳಿಗೆ ಪ್ರೋತ್ಸಾಹಿಸುತ್ತಿದೆ. ಸ್ಥಳೀಯ ಕಲಾವಿದೆ ಅನುಸೂಯಮ್ಮ ಮಣ್ಣಿನಿಂದ ತಯಾರು ಮಾಡಿದ ದೇಶೀ ಹಣತೆಗಳನ್ನು ಕೊಂಡು ಪ್ರತಿ ಮನೆಯಲ್ಲೂ ದೀಪಾವಳಿ ಹಬ್ಬವನ್ನು ಆಚರಿಸೋಣ ಎನ್ನುತ್ತಾರೆ ಹಣತೆ ಖರೀದಿಸಿದ ಪ್ರವಾಸಿಗರು.












Click it and Unblock the Notifications