ಪಂಜಾಬ್ ಸಿಎಂ ಅಭ್ಯರ್ಥಿ ಘೋಷಿಸದ ಕಾಂಗ್ರೆಸ್: ಸುಳಿಯಲ್ಲಿ ಸಿಧು-ಚನ್ನಿ
ಚಂಡೀಗಢ, ಜನವರಿ 20: ಪಂಜಾಬ್‌ನಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ನಡುವೆ ರಾಜ್ಯದಲ್ಲಿ ಬೇರೆ ಬೇರೆ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಎಎಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಎಂದು ಘೋಷಣೆ ಮಾಡಿದೆ. ಅಕಾಲಿದಳ ಸುಖ್‌ಬೀರ್ ಬಾದಲ್‌ರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುತ್ತಿದೆ. ಆದರೆ ಆಡಳಿತರೂಢ ಕಾಂಗ್ರೆಸ್ ಮಾತ್ರ ಸಿಎಂ ಅಭ್ಯರ್ಥಿಯನ್ನು ಇನ್ನೂ ಕೂಡಾ ಘೋಷಣೆ ಮಾಡಿಲ್ಲ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಈಗಾಗಲೇ ಕೆಲವು ಶಾಸಕರು ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿರನ್ನೇ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿ ಎಂದು ಹೈಕಮಾಂಡ್‌ಗೆ ಆಗ್ರಹ ಮಾಡಿದ್ದಾರೆ. ಆದರೆ ಈ ಬಗ್ಗೆ ಪಕ್ಷ ಮಾತ್ರ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಕೂಡಾ ಈ ಮುಖ್ಯಮಂತ್ರಿ ಅಭ್ಯರ್ಥಿ ರೇಸ್‌ನಲ್ಲಿ ಇದ್ದಾರೆ. ಇನ್ನು ಈ ನಡುವೆ ಈಗಾಗಲೇ ಕಾಂಗ್ರೆಸ್ ಚರಣ್‌ಜೀತ್ ಸಿಂಗ್ ಚನ್ನಿಯೇ ತಮ್ಮ ಮುಂದಿನ ಸಿಎಂ ಅಭ್ಯರ್ಥಿ ಎಂಬಂತೆ ಬಿಂಬಿಸುವ ಕೆಲವು ಕಾರ್ಯಗಳನ್ನು ಮಾಡಿದೆ. ಅದರಲ್ಲಿ ಮುಖ್ಯವಾದುದ್ದು ಯಾರು ಉತ್ತಮ ಮುಖ್ಯಮಂತ್ರಿ ಎಂದು ನಟ ಸೋನು ಸೂದ್ ಹೇಳುವ ವಿಡಿಯೋ ಶೇರ್ ಮಾಡಿರುವುದು ಆಗಿದೆ.

ಸಿಧು-ಚನ್ನಿ: ಯಾರು ಕಾಂಗ್ರೆಸ್ ಸಿಎಂ ಅಭ್ಯರ್ಥಿ?
ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯ ಕುರಿತು ಚರ್ಚೆಯು ಬಿಸಿಯಾಗುತ್ತಿದ್ದಂತೆ, ಈ ಎಲ್ಲಾ ಗೊಂದಲಗಳ ನಡುವೆ ಕಾಂಗ್ರೆಸ್‌ನ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷದ ನಾಯಕ ಹರೀಶ್ ಚೌಧರಿ, "ಪಂಜಾಬ್‌ನಲ್ಲಿ ಚರಣ್‌ಜಿತ್ ಸಿಂಗ್ ಚನ್ನಿ, ನವಜೋತ್ ಸಿಂಗ್ ಸಿಧು ಮತ್ತು ಸುನೀಲ್ ಜಾಖರ್ ಅವರಂತಹ ಮೂರು ಪ್ರಮುಖ ಮುಖಗಳನ್ನು ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೊಂದಿದೆ. 111 ದಿನಗಳಲ್ಲಿ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಸಾರ್ವಜನಿಕ ಕಲ್ಯಾಣದ ಮೇಲೆ ಕೇಂದ್ರೀಕರಿಸಿ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಹಾಗಾಗಿ 2017ಕ್ಕಿಂತ 2022ರಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ," ಎಂದು ತಿಳಿಸಿದ್ದಾರೆ.

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಸ್ಪರ್ಧೆ
"2017 ರ ವಿಧಾನಸಭಾ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ ಹೆಚ್ಚು ಮತಗಳನ್ನು ಈ ಬಾರಿ ಕಾಂಗ್ರೆಸ್ ಪಡೆಯಲಿದೆ," ಎಂದು ಕೂಡಾ ಕಾಂಗ್ರೆಸ್ ಪಕ್ಷದ ವಕ್ತಾರ ಹರೀಶ್ ಚೌಧರಿ ಹೇಳಿದ್ದಾರೆ. "ನವಜೋತ್ ಸಿಂಗ್ ಸಿಧು ಎತ್ತಿರುವ ಪ್ರತಿಯೊಂದು ವಿಷಯವನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಪಂಜಾಬ್‌ನಲ್ಲಿ ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಪಕ್ಷವು ಸದ್ಯಕ್ಕೆ ನಿರ್ಧರಿಸಿದೆ. ಪ್ರಸ್ತುತ ಚರಣ್‌ಜೀತ್ ಸಿಂಗ್ ಚನ್ನಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯೂ ಹೌದು ರಾಜ್ಯದ ಮುಖ್ಯಮಂತ್ರಿಯೂ ಹೌದು. ಚರಣ್‌ಜೀತ್ ಸಿಂಗ್ ಚನ್ನಿ ಪಂಜಾಬ್‌ನಾದ್ಯಂತ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಾರೆ," ಎಂದು ತಿಳಿಸಿದ್ದಾರೆ.

ಸಿಧು, ಚನ್ನಿ ನಡುವೆ ಭಿನ್ನಾಭಿಪ್ರಾಯ ಇದೆಯೇ?
ನವಜೋತ್ ಸಿಂಗ್ ಸಿಧು ಮತ್ತು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ನಡುವೆ ಭಿನ್ನಾಭಿಪ್ರಾಯ ಇರುವುದನ್ನು ಹರೀಶ್ ಚೌಧರಿ ನಿರಾಕರಿಸಿದ್ದಾರೆ. ಪಕ್ಷದೊಳಗೆ "ಎಲ್ಲಾ ಚೆನ್ನಾಗಿದೆ" ಎಂದು ಹೇಳಿದ್ದಾರೆ. ಕಾಂಗ್ರೆಸ್‌ನಲ್ಲಿ ಹಲವಾರು ಭಿನ್ನಾಭಿಪ್ರಾಯಗಳು ಸರ್ಕಾರ ರಚನೆ ಆದಾಗಿನಿಂದ ಹುಟ್ಟುತ್ತಲೇ ಇದೆ. ಈಗಾಗಲೇ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಮಾತ್ರವಲ್ಲದೇ ಬೇರೆಯೇ ಪಕ್ಷವನ್ನು ರಚನೆ ಮಾಡಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಈ ನಡುವೆ ಪಕ್ಷದ ಸಿದ್ಧಾಂತ, ನಿಲುವಿಗೆ ವಿರುದ್ಧವಾಗಿ ಸಿಧು ಹೇಳಿಕೆಯನ್ನು ನೀಡುತ್ತಿರುತ್ತಾರೆ.

ಎಎಪಿ ಸಿಎಂ ಅಭ್ಯರ್ಥಿ ಬಗ್ಗೆ ಚೌಧರಿ ಹೇಳಿದ್ದು ಹೀಗೆ
ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಭಗವಂತ್ ಮನ್‌ರನ್ನು ಎಎಪಿ ಆಯ್ಕೆ ಮಾಡಿದೆ. ಈ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಮುಖಂಡ ಹರೀಶ್ ಚೌಧರಿ, "ಆಮ್ ಆದ್ಮಿ ಪಕ್ಷವು ಪಂಜಾಬ್‌ನಲ್ಲಿ ಯಾವುದೇ ಬೆಂಬಲವನ್ನು ಹೊಂದಿಲ್ಲ ಎಂದು ಈಗಾಗಲೇ ಒಪ್ಪಿಕೊಂಡಿದೆ. ಅವರ ಕರೆ ಪ್ರತಿಕ್ರಿಯೆ, ಜನರ ಅಭಿಪ್ರಾಯ ಎಂಬ ವಿಚಾರ ಎಲ್ಲವೂ ಪ್ರಶ್ನಾರ್ಹವಾಗಿದೆ. ಆ ಎಲ್ಲಾ ಕರೆ ಪ್ರತಿಕ್ರಿಯೆಗಳು ಮತ್ತು ಕರೆ ಡೇಟಾವನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಇರಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸುತ್ತದೆ," ಎಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಾರ್ಚ್ 10 ರಂದು ಪಂಚ ರಾಜ್ಯಗಳ ಮತ ಎಣಿಕೆ ನಡೆಯಲಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications