• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುನೀತ್...ಪ್ರೀತಿಯಿಂದ ಅಪ್ಪು ಅಂತ ಕರೆಯೋಕೆ ಏನೋ ಚಂದ!

By ಸುನೀತಾ ಬಿ
|
Google Oneindia Kannada News

'ಗೊಂಬೆ ಹೇಳುತೈತೇ ಮತ್ತೆ ಹೇಳುತೈತೇ ನೀನೇ ರಾಜ್‌ಕುಮಾರಾ...' ಈ ಹಾಡು ಕೇಳಿದರೆ ಕಣ್ಮುಂದೆ ಮೊದಲು ಬರೋದು ಡಾ.ರಾಜಕುಮಾರ ಅವರ ಕಿರಿಯ ಪ್ರೀತಿಯ ಪುತ್ರ ಅಪ್ಪು. ಅಪ್ಪು ಅನ್ನೋ ಹೆಸರಲೇ ಪ್ರೀತಿ ಇದೆ. ಪ್ರೀತಿಯಿಂದ ಅಪ್ಪು ಅಂತ ಕರೆಯೋಕೆ ಏನೋ ಚಂದ. ಚಿಕ್ಕಮಕ್ಕಳನ್ನು ಮಾತನಾಡಿಸಿದಂತೆ ಅನುಭವ. ಇವರು ಆಕಾಶದಷ್ಟೇ ವಿಶಾಲವಾದ ಹೃದಯವುಳ್ಳ ನಟಸಾರ್ವಭೌಮ. ನೊಂದ ಜೀವಗಳಿಗೆ ಪರಮಾತ್ಮ. ಯಾರೇ ಕೂಗಾಡಲಿ ಅಣ್ಣಾಬಾಂಡ್ ಧೀರ ರಣ ವಿಕ್ರಮ. ನಗುಮುಖದ ಮೇರು ನಟ. ದೊಡ್ಮನೆಯ ಪ್ರೀತಿಯ ಪುತ್ರ. ಸಾಗರದಷ್ಟು ಅಭಿಮಾನಿ ಬಳಗವನ್ನು ಹೊಂದಿದ ವೀರ ಕನ್ನಡಿಗ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ ಎಂದು ಹೇಳಲು ಕಣ್ತುಂಬಿ ಬರುತ್ತಿದೆ.

ಬಾಲ್ಯದಿಂದಲೂ ತಂದೆಯೊಂದಿಗೆ ಹಲವಾರು ಸಿನಿಮಾಗಳಲ್ಲಿ ನಟಿಸಿ, ತಂದೆಯಂತೆ ಗುರುತಿಸಿಕೊಂಡವರು ಪುನೀತ್ ರಾಜ್‌ಕುಮಾರ್. ಪವರ್ ಸ್ಟಾರ್ ಎಂಬಂತೆ ಪವರ್ ಫುಲ್ ಆಗಿದ್ದ ಪುನೀತ್ ರಾಜಕುಮಾರ್ ದೈಹಿಕವಾಗಿ ಸದೃಢವಾಗಿದ್ದ ವ್ಯಕ್ತಿ. ಕನ್ನಡ ಚಿತ್ರರಂಗಕ್ಕೆ ಇನ್ನೂ ಹಲವಾರು ಸಿನಿಮಾಗಳನ್ನು ನೀಡಲು ಮಹದಾಸೆ ಹೊಂದಿದ್ದ ಪೃಥ್ವಿ. ತಮ್ಮ ದೇಹ ಸದೃಢವಾಗಿಡಲು ಜಿಮ್‌ನಲ್ಲಿ ಗಂಟೆಗಳ ಕಾಲ ವರ್ಕೌಟ್ ಮಾಡ್ತಾಯಿದ್ದ ವಂಶಿ. ಚಂದನವನದಲ್ಲಿ ಎಲ್ಲರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದ ಅಭಿ ಅವರ ನೃತ್ಯ ಕೌಶಲ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಬೆರಗಾಗದವರಿಲ್ಲ. ಆದರೆ ವಿಧಿಯಾಟಕ್ಕೆ ಅವರು ಇಂದು ಬಲಿಯಾಗಿದ್ದಾರೆ. ಅವರ ಅಕಾಲಿಕ ಮರಣಕ್ಕೆ ಅಭಿಮಾನಿಗಳ ಬಳಗದ ಹೃದಯ ಒಡೆದು ಹೋಗಿದೆ.

 ಸುದ್ದಿ ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ

ಸುದ್ದಿ ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ನೇಹಿತರಿಗೆ, ಆಪ್ತರಿಗೆ ಪುನೀತ್ ರಾಜಕುಮಾರ್ ಅವರು ಇನ್ನಿಲ್ಲ ಅನ್ನೋ ವಿಚಾರವನ್ನು ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಆಸ್ಪತ್ರೆಯ ಮುಂದೆ ಅಭಿಮಾನಿಗಳ ಸಾಗರವೇ ನೆರೆದಿದೆ. ತಮ್ಮ 46ನೇ ವಯಸ್ಸಿನಲ್ಲೇ ಅಪ್ಪು, ಅಭಿ ಇನ್ನಿಲ್ಲ ಅನ್ನೋದನ್ನು ಯಾರಿಗೂ ಕೂಡ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಾತು ಬಾರದಂತಾಗಿದೆ, ಕಣ್ಣುಗಳು ತುಂಬಿಕೊಳ್ಳುತ್ತಿವೆ. ಹೃದಯ ಭಾರವಾಗಿದೆ. ಯಾರಿಗೂ ಹೇಳಿಕೊಳ್ಳದ ಸ್ಥಿತಿ. ಯಾರಿಗೂ ಸಮಾಧಾನ ಮಾಡದಷ್ಟು ದುಖ:. ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಮುಂದೆ ಇಂಥ ದೃಶ್ಯಗಳು ಕರಳು ಹಿಂಡುವಂತಿವೆ.

 ವಿಕ್ರಂ ಆಸ್ಪತ್ರೆಯ ಮುಂದೆ ಫ್ಯಾನ್ಸ್

ವಿಕ್ರಂ ಆಸ್ಪತ್ರೆಯ ಮುಂದೆ ಫ್ಯಾನ್ಸ್

ಡಾ. ರಾಜ್ ಕುಟುಂಬದ ಕಿರಿಯ ಪುತ್ರ ಪುನೀತ್ ರಾಜ್‌ಕುಮಾರ್ ಬಾರದೂರಿಗೆ ಹೋಗುತ್ತಿದ್ದಂತೆ ಇಡೀ ಸ್ಯಾಂಡಲ್‌ವುಡ್ ವಿಕ್ರಂ ಆಸ್ಪತ್ರೆಯ ಮುಂದೆ ನೆರೆದಿದೆ. ನೂರಾರು ಅಭಿಮಾನಿಗಳು ಪುನೀತ್ ನೋಡಲು ಜಮಾಯಿಸಿದ್ದಾರೆ. ಜೊತೆಗೆ ಹಲವಾರು ನಿರ್ದೇಶಕರು, ನಿರ್ಮಾಪಕರು, ನಟ-ನಟಿಯರು, ಆಪ್ತರು, ಸಚಿವರು, ಜನಪ್ರತಿನಿಧಿಗಳು ತಮ್ಮ ಕೆಲಸಗಳನ್ನು ಮೊಟಕುಗೊಳಿಸಿ ಬೆಂಗಳೂರಿನ ಕಡೆಗೆ ಆಗಮಿಸುತ್ತಿದ್ದಾರೆ. ಪುನೀತ್ ರಾಜಕುಮಾರ್ ದೊಡ್ಮನೆಯ ಕಿರಿಯ ಮಗ. ಡಾ.ರಾಜಕುಮಾರ್ ಅವರ ಪ್ರೀತಿಯ ಪುತ್ರ. ಚಿಕ್ಕ ವಯಸ್ಸಿನಿಂದಲೂ ಸಿನಿಮಾರಂಗದಲ್ಲಿ ಅಭಿನಯಿಸಿ ಮನೆ ಮಾತಾಗಿರುವ ಜಾಕಿ. ಕನ್ನಡ ಚಿತ್ರರಂಗಕ್ಕೆ ಹಲವಾರು ಸಿನಿಮಾಗಳನ್ನು ನೀಡಿದ ಸ್ಟಾರ್ ನಟ. ಬಾಲನಟನಾಗಿ ಈವರೆಗೂ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಜನ ಮೆಚ್ಚಿದ ನಾಯಕರಾಗಿದ್ದಾರೆ. ಸಿನಿಮಾದಲ್ಲಿ ಫಿಟ್ ಆಂಡ್ ಫೈನ್ ಆಗಿದ್ದ ಪುನೀತ್ ರಾಜಕುಮಾರ್ ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ. ಇಂದು ಬೆಳಿಗ್ಗೆ 11.30 ಸುಮಾರಿಗೆ ಹೃದಯಾಘಾತದಿಂದ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಪ್ಪು ಆರೋಗ್ಯ ಗಂಭೀರವಾಗಿದ್ದರಿಂದ ಚಿಕಿತ್ಸೆ ಫಲಿಸದೇ ಮೇರು ನಟ ಇಂದು ವಿಧಿವಶರಾಗಿದ್ದಾರೆ.

ಸಾವಿನಲ್ಲೂ ಸಾರ್ಥಕತೆ ಮೆರೆದ ಅಪ್ಪು ತಂದೆಯಂತೆ ನೇತ್ರದಾನ ಮಾಡಿದ್ದಾರೆ. ಅಪ್ಪು ಅವರ ಅಕಾಲಿಕ ಮರಣಕ್ಕೆ ಇಡೀ ಸ್ಯಾಂಡಲ್‌ವುಡ್ ಕಂಬನಿ ಮಿಡಿದಿದೆ. ರಾಜ್ಯಾದ್ಯಂದ ಇರುವ ಅಪ್ಪು ಅವರ ಅಭಿಮಾನಿಗಳು ದಿಗ್ಬ್ರಾಂತರಾಗಿದ್ದಾರೆ. ಅಪ್ಪು ಅವರ ಅಗಲಿಕೆಯನ್ನ ಅಭಿಮಾನಿಗಳು ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಪುನೀತ್ ಅಗಲಿಕೆ ನೆನೆದು ಆಪ್ತರು ಭಾವುಕರಾಗಿದ್ದಾರೆ.

ಬಾಲನಟ ಅಭಿ

ದೊಡ್ಮನೆಯ ಕಿರಿಯ ಮಗ ಪ್ರೀತಿಯ ಅಪ್ಪು ಭಾರತೀಯ ಚಿತ್ರನಟ, ಹಿನ್ನೆಲೆ ಗಾಯಕ ಮತ್ತು ಖಾಸಗಿ ಮನರಂಜನಾ ವಾಹಿನಿಗಳ ರಿಯಾಲಿಟಿ ಶೋ, ಗೇಮ ಶೋ ನಿರೂಪಕರೂ ಹೌದು. ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲನಟರಾಗಿ ವಸಂತ ಗೀತ(1980), ಭಾಗ್ಯದಾತ (1981), ಚಲಿಸು ಮೋಡಗಳು (1982), ಎರಡು ನಕ್ಷತ್ರಗಳು (1983) ಮತ್ತು ಬೆಟ್ಟದ ಹೂವು (1985) ಸಿನಿಮಾಗಳಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದಾರೆ. ಅವರು ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ನಟನೆಗೆ ರಾಷ್ಟ್ರದ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ವೈಯಕ್ತಿಕ ಜೀವನ

1975, ಮಾರ್ಚ್ 17 ರಂದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ಜನಿಸಿದರು. ಪುನೀತ್, ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ದಂಪತಿಯ ಕಿರಿಯ ಮಗ. ನಟರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಸಹೋದರರು. ಪುನೀತ್ ಆರು ವರ್ಷದವರಿದ್ದಾಗ, ಅವರ ಕುಟುಂಬ ಬೆಂಗಳೂರಿಗೆ ತೆರಳಿತು. ಅವರು ಹತ್ತು ವರ್ಷ ವಯಸ್ಸಿನ ತನಕ ಅವರ ತಂದೆ ಅವರನ್ನು ಮತ್ತು ಅವರ ಸಹೋದರಿ ಪೂರ್ಣಿಮಾರನ್ನು ಚಲನಚಿತ್ರದ ಸೆಟ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಪುನೀತ್ ಡಿಸೆಂಬರ್ 1 ,1999 ರಂದು ಅಶ್ವಿನಿ ರೇವಂತ್ ರನ್ನು ವಿವಾಹವಾದರು. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ ಧೃತಿ ಮತ್ತು ವಂದಿತಾ. ಇವರ ಮೊದಲ ಹೆಸರು ಲೋಹಿತ್.

ಅವರ ಮೃತದೇಹವನ್ನು ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ತೆಗೆದುಕೊಂಡು ಹೋಗುತ್ತಿದ್ದು, ಅಲ್ಲಿ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಜೊತೆಗೆ ಬೆಂಗಳೂರಿನಲ್ಲಿ ಜನ ಸ್ವಘೋಷಿತ ಬಂದ್ ಮಾಡಿದ್ದು, ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿದ್ದಾರೆ.

English summary
Puneeth Rajkumar Death; Actor dies due to heart attack in bengaluru today. Here is the special tribute on Power star Puneeth Rajkumar. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion