ಅಕ್ಷರ ಜ್ಞಾನವಿಲ್ಲ, ಆದರೂ ಕಾರವಾರದಲ್ಲಿ ಸಾರ್ಥಕ ಬದುಕು ಕಟ್ಟಿಕೊಂಡ ಮಹಿಳೆಯರು, ಮಾಹಿತಿ ಇಲ್ಲಿದೆ
ಶ್ರಮದ ಕೆಲಸಕ್ಕೆ ಮಹಿಳೆಯರು ಸೂಕ್ತವಲ್ಲ ಎಂಬುದು ತುಂಬಾ ಜನರ ಅಭಿಪ್ರಾಯವಾಗಿರುತ್ತದೆ. ಆದರೆ ಕಾರವಾರದ ಮಹಿಳೆಯುಬ್ಬರು ಪ್ರಸ್ತುತ ದಿನಗಳಲ್ಲಿ ಇದಕ್ಕೆ ಸೆಡ್ಡು ಹೊಡೆದವರಂತೆ ಬದುಕುತಿದ್ದಾರೆ. ಯಾವ ಪುರುಷರಿಗೂ ಕಡಿಮೆ ಇಲ್ಲವೆಂಬಂತೆ ದಿನವಿಡಿ ಶ್ರಮದಾಯಕ ಕೆಲಸದಲ್ಲಿ ತೊಡ
ಕಾರವಾರ, ಮಾರ್ಚ್, 08: ಶ್ರಮದ ಕೆಲಸಕ್ಕೆ ಮಹಿಳೆಯರು ಸೂಕ್ತವಲ್ಲ ಎಂಬುದು ತುಂಬಾ ಜನರ ಅಭಿಪ್ರಾಯವಾಗಿರುತ್ತದೆ. ಆದರೆ ಕಾರವಾರದ ಮಹಿಳೆಯೊಬ್ಬರು ಪ್ರಸ್ತುತ ದಿನಗಳಲ್ಲಿ ಇದಕ್ಕೆ ಸೆಡ್ಡು ಹೊಡೆದವರಂತೆ ಬದುಕುತಿದ್ದಾರೆ. ಯಾವ ಪುರುಷರಿಗೂ ಕಡಿಮೆ ಇಲ್ಲವೆಂಬಂತೆ ದಿನವಿಡಿ ಶ್ರಮದಾಯಕ ಕೆಲಸದಲ್ಲಿ ತೊಡಗಿಕೊಂಡು ಸಾರ್ಥಕ ಬದುಕು ನಡೆಸುತ್ತಿದ್ದಾರೆ.
ಮಹಿಳೆಯರು ಎಂದರೆ ಕೇವಲ ಮನೆ ಕೆಲಸಕ್ಕೆ ಮಾತ್ರ ಸೀಮಿತರಾಗಿರುತ್ತಾರೆ ಎನ್ನುವುದು ಹಲವರ ಭಾವನೆಯಾಗಿರುತ್ತದೆ. ಆದರೆ ಅವಳಿಗೆ ದೊಡ್ಡ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುವ ದಿನಗಳಲ್ಲಿ ಅವರಿಗೆ ತಿರುಗೇಟು ನೀಡುವಂತೆ ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ.
ನಗರದ ವಿವಿಧ ಹೋಟೆಲ್‌ಗಳಲ್ಲಿ, ಮೀನು ಮಾರಾಟ, ತರಕಾರಿ ಮಾರಾಟ, ಮನೆ ಮನೆಗೆ ತೆರಳಿ ಕೆಲಸ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಉತ್ತಮ ಶಿಕ್ಷಣ ಪಡೆದ ಮಹಿಳೆ ಉನ್ನತ ಹುದ್ದೆ ಅಲಂಕರಿಸಿ ಜೀವನಕ್ಕೆ ದಾರಿಮಾಕೊಂಡರೆ, ಅಕ್ಷರ ಜ್ಞಾನವೆ ಇಲ್ಲದ ಈ ಮಹಿಳೆಯರು ತನ್ನ ಮತ್ತು ತನ್ನವರ ಒಳಿತಿಗಾಗಿ ಹಗಲಿರುಳು ದುಡಿದು ಜೀವನ ಸಾಗಿಸುತ್ತಿದ್ದಾರೆ.
ತಾಲೂಕಿನ ಕುಗ್ರಾಮ ಗುಡ್ಡೆಹಳ್ಳಿಯಿಂದ ನಗರ ಪ್ರದೇಶದವರೆಗೆ ಸುಮಾರು 8 ಕಿಲೋ ಮೀಟರ್ ಕಟ್ಟಿಗೆ ಹೊತ್ತುತಂದು ಮಾರುವ ಹಾಲಕ್ಕಿ ಮಹಿಳೆಯರ ಶ್ರಮ ಎಂತಹವರನ್ನು ಬೆರಗುಗೊಳಿಸುತ್ತದೆ. ಸುಮಾರು 30 ರಿಂದ 40 ಕೆ.ಜಿ. ತೂಕದ ಕಟ್ಟಿಗೆಯನ್ನು ಕಾಲು ನಡಿಗೆಯಲ್ಲಿಯೇ ಬೆಟ್ಟದಿಂದ ತಲೆಯ ಮೇಲೆ ಹೊತ್ತು ತರುತ್ತಾರೆ. ತೀರಾ ಹಿಂದುಳಿದಿರುವ ಇವರು ಕುಟುಂಬ ನಿರ್ವಹಣೆಗೆ ಬೆಟ್ಟದಲ್ಲಿ ಸಿಗುವ ಒಣ ಕಟ್ಟಿಗೆಗಳನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಕಟ್ಟಿಗೆ ಮಾರಾಟದಿಂದ ಜೀವನ
ಅಲ್ಲದೆ ಸಂಗ್ರಹಿಸಿದ ಕಟ್ಟಿಗೆಗಳನ್ನು ಮುಂಜಾನೆ ನಗರೆದೆಡೆಗೆ ಹೊತ್ತು ತರುತ್ತಾರೆ. ಬೇಕಾದವರಿಗೆ 100 ರಿಂದ 150ರೂ. ವರೆಗೂ ಇವುಗಳನ್ನು ಮಾರಾಟ ಮಾಡುತ್ತಾರೆ. ಆದರೆ ಸ್ವಲ್ಪ ದೂರ ಕಾಲ್ನಡಿಗೆಯಲ್ಲಿ ಸಾಗಲು ವಿಚಾರ ಮಾಡುವ ದಿನಗಳಲ್ಲಿ ಈ ಮಹಿಳೆಯರು ಅಷ್ಟೊಂದು ಭಾರದ ಕಟ್ಟಿಗೆ ಹೊತ್ತು ಶ್ರಮವಹಿಸುತ್ತಿರುವುದು ಶ್ಲಾಘನೀಯವಾಗಿದೆ.

ಇನ್ನಿತರರಿಗೂ ಮಾದರಿಯಾದ ಮಹಿಳೆಯರು
ಹೊಟೇಲ್‌ಗಳಲ್ಲಿ ಪುರುಷರು ಹೆಚ್ಚಾಗಿ ಕೆಲಸ ಮಾಡುವುದು ಸಾಮಾನ್ಯವಾಗಿರುತ್ತದೆ. ಆದರೆ ನಗರದಲ್ಲಿ ಮಾತ್ರ ಬಹುತೇಕ ಹೋಟೆಲ್‌ಗಳಲ್ಲಿ ಮಹಿಳೆಯರೇ ಕಂಡುಬರುತ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಇಲ್ಲಿ ದುಡಿಯುವ ಮಹಿಳೆಯರು ಸಪ್ಲಯರ್, ಅಡುಗೆ ಮಾಡುವುದು, ಪಾರ್ಸಲ್ ಕೋಡುವುದು, ಜ್ಯೂಸ್ ಮಾಡುವುದು ಸೇರಿದಂತೆ ಎಲ್ಲ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುವ ಇವರು ದಿನಬೆಳಗಾಗುತ್ತಿದ್ದಂತೆಯೇ ಮನೆಯ ಕೆಲಸಗಳ ಜೊತೆಗೆ ಹೋಟ್‌ಲ್‌ಗಳಲ್ಲಿ ಕೆಲಸ ಮಾಡುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲದೆ ಹೋಟೆಲ್‌ಗಳಲ್ಲಿ ಕೇವಲ ಪುರುಷರು ಮಾತ್ರವಲ್ಲದೆ ಮಹಿಳೆಯರು ಕಾರ್ಯನಿರ್ವಹಿಸಲು ಸಾಧ್ಯ ಎಂಬ ಕಲ್ಪನೆಯನ್ನು ಈ ಮಹಿಳೆಯವರು ತೋರಿಸಿಕೊಟ್ಟಿದ್ದಾರೆ.

ವ್ಯಾಪಾರ ಮಾಡಿ ಗಮನ ಸೆಳೆದ ಮಹಿಳೆಯರು
ಗ್ರಾಮೀಣ ಪ್ರದೇಶದ ತಮ್ಮ ಹೊಲ-ಗದ್ದೆಗಳಲ್ಲಿ ಬೆಳೆದ ತರಕಾರಿ, ಸೊಪ್ಪು, ಹಣ್ಣು ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಬೆಳೆದು ಮಾರಾಟ ಮಾಡಿ ಜೀವನ ಸಾಗಿಸುತ್ತಾರೆ. ಹಾಗೆಯೇ ಅದೆಷ್ಟೋ ಮಹಿಳೆಯರು ಇಂದು ಸ್ವಾವಲಬಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ. ತಾವು ಬೆಳೆದ ತರಕಾರಿಗಳನ್ನು ಹೊತ್ತು ತಂದು ನಗರದ ಗ್ರೀನ್ ಸ್ಟ್ರೀಟ್ ರಸ್ತೆ, ಹಳೆ ಮೀನುಮಾರುಕಟ್ಟೆ, ಶಿವಾಜಿ ಸರ್ಕಲ್‌ಗಳಲ್ಲಿ ಮಾರಾಟ ಮಾಡುತ್ತಾರೆ.
ಹೀಗೆ ಮಹಿಳೆಯರು ಸಂಜೆಯವರೆಗೂ ವ್ಯಾಪಾರ ನಡೆಸಿ ಜೀವನ ಕಂಡುಕೊಂಡಿದ್ದಾರೆ. ಅಲ್ಲದೆ ಬಿಸಿಲು -ಮಳೆ ಎನ್ನದೆ ವರ್ಷವಿಡಿ ತರಕಾರಿ ವಾಪಾರ ಮಾಡುವ ಇವರು ಗ್ರಾಹಕರ ಅಭಿರುಚಿಗೆ ತಕ್ಕಂತೆ ಬೆಳೆಗಳನ್ನು ಬೆಳೆದು ಪ್ರೀತಿಗೆ ಪಾತ್ರರಾಗಿದ್ದಾರೆ.
ಮನಸಿದ್ದರೆ ಮಾರ್ಗ ಎನ್ನುವಂತೆ ನಗರದಲ್ಲಿ ಅದೆಷ್ಟೋ ಮಹಿಳೆಯರು ನಿತ್ಯ ನಾಲ್ಕಾರು ಮನೆಗಳಲ್ಲಿ ಕೆಲಸ ಮಾಡಿಕೊಂಡು ಜೀವನ ರೂಪಿಸಿಕೊಂಡಿದ್ದಾರೆ. ಮನೆಯಲ್ಲಿನ ಬಡತನ, ಮಕ್ಕಳ ವಿದ್ಯಾಭ್ಯಾಸ ಹೀಗೆ ಹತ್ತು ಒತ್ತಡಗಳ ನಡುವೆಯೂ, ಇಂದು ಹಲವಾರು ಮಹಿಳೆಯರು ದಿನ ಬೆಳಗಾದರೆ ಮನೆ ಮನೆಗಳಿಗೆ ತೆರಳಿ ಕೆಲಸ ಮಾಡುವುದು ಕಂಡುಬರುತ್ತದೆ. ವಿಶೇಷ ಎಂದರೆ ಬಹುತೇಕ ಮಹಿಳೆಯರು ತಮ್ಮ ಓಡಾಟಕ್ಕೆ ಸೈಕಲ್ ಬಳಸಿ ಸಂಚಾರಕ್ಕೆ ಹಾದಿ ಕಂಡುಕೊಂಡಿದ್ದಾರೆ.
ಬಹುದೂರದಿಂದ ಬರುವುದರಿಂದ ಸಮಯಕ್ಕೆ ಸರಿಯಾಗಿ ಹೋಗಿ ಕೆಲಸ ಮಾಡಬೇಕಾಗುತ್ತದೆ. ಅಲ್ಲದೆ ಒಂದು ಮನೆಯಿಂದ ಮತ್ತೊಂದು ಮನೆಗೆ ಸಮಯಕ್ಕೆ ಸರಿಯಾಗಿ ಹೋಗಬೇಕಾಗುತ್ತದೆ. ಅವಶ್ಯಕವಿರುವುದರಿಂದ ಸೈಕಲ್ ಅನ್ನು ಕೊಂಡುಕೊಂಡಿದ್ದೇನೆ. ಪ್ರತಿದಿನವೂ ಸೈಕಲ್ ಮೇಲೆ ಸವಾರಿ ಮಾಡುವುದು ಅಭ್ಯಾಸವಾಗಿದೆ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.

ಮಹಿಳೆಯರಿಂದ ಸಮುದ್ರಗಳಲ್ಲಿ ಮೀನುಗಾರಿಕೆ
ಕಡಲತಡಿಯ ನಗರದಲ್ಲಿ ವಾಸಿಸುವ ಬಹುತೇಕ ಮಹಿಳೆಯರು ಇಂದು ಮೀನಿನ ವ್ಯಾಪಾರದ ಮೂಲಕ ಉದ್ಯೋಗ ಕಂಡುಕೊಂಡಿದ್ದಾರೆ. ಸಮುದ್ರಗಳಿಗೆ ತೆರಳಿ ಮೀನುಗಳುನ್ನು ಹಿಡಿದುಕೊಂಡು ಬರುತ್ತಾರೆ. ಬಳಿಕ ಅವುಗಳನ್ನು ಮನೆ ಮನೆಗೆ ತೆರಳಿ ಇಲ್ಲವೆ ಮುಖ್ಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಜೀವನಕ್ಕೆ ದಾರಿ ಮಾಡಿಕೊಂಡಿದ್ದಾರೆ.
ಹೀಗೆ ಜವಾಬ್ದಾರಿ ಬೆನ್ನು ಹತ್ತಿ ವಯಸ್ಸಿನ ಪರಿವೇಯೆ ಇಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ. ಮನೆ ನಿರ್ವಹಣೆ, ಪತಿ ಮಾಡಿದ ಸಾಲ, ಮಕ್ಕಳ ಓದು, ದೈನಂದಿನ ಖರ್ಚ್, ಖರೀದಿ ಹೀಗೆ ಎಲ್ಲ ಜವಾಬ್ದಾರಿಯನ್ನು ಈ ಮಹಿಳೆಯವರು ತಮ್ಮ ಮೇಲೆ ಹಾಕಿಕೊಂಡಿದ್ದಾರೆ.
ಹೀಗೆ ಹತ್ತಾರು ಕೆಲಸಗಳ ಮೂಲಕ ನಗರದೆಲ್ಲೆಡೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಮಹಿಳೆಯರು ಸಾರ್ಥಕ ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲದೆ ಮನೆಯ ಕೆಲಸದ ಜೊತೆಗೆ ಹೊರ ಜಗತ್ತಿನಲ್ಲಿಯೂ ದಿನವಿಡಿ ದುಡಿಯುವ ಮಹಿಳೆಯರು ಇಂದು ಯಾವ ಪುರುಷರಿಗೂ ಕಡಿಮೆ ಇಲ್ಲವೆಂಬಂತೆ ಕೆಲಸ ನಿರ್ವಹಿಸುತ್ತಿದ್ದಾರೆ.












Click it and Unblock the Notifications