ಪಿಎಂಎಫ್‍ಎಂಇ ಯೋಜನೆ ಸಬ್ಸಿಡಿ ಮಾಹಿತಿ, ಅರ್ಹತೆಗಳು
ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ ಆಹಾರ ಸಂಸ್ಕರಣ ಉದ್ದಿಮೆಗಳ ಮಂತ್ರಾಲಯದಿಂದ ಪ್ರಧಾನಮಂತ್ರಿಯವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯು (ಪಿಎಂಎಫ್‍ಎಂಇ) 2020-21ರಿಂದ ಪ್ರಾರಂಭವಾಗಿದೆ.
ಈ ಯೋಜನೆಯಡಿ ಅಸಂಘಟಿತ ವಲಯದಲ್ಲಿರುವ ಸೂಕ್ಷ್ಮ, ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳನ್ನು ಪ್ರೋತ್ಸಾಹಿಸಿ ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಮತ್ತು ಅವುಗಳನ್ನು ಸಂಘಟಿತ ವಲಯಕ್ಕೆ ತರುವುದು ಹಾಗೂ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು ಹಾಗೂ ರೈತ ಉತ್ಪಾದಕ ಸಹಕಾರಿ ಸಂಘಗಳಿಗೆ ಉತ್ತೇಜನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಪಿಎಂಎಫ್‌ಎಂಇ ಯೋಜನೆಯಡಿ ಸಬ್ಸಿಡಿಯನ್ನು ಪಡೆಯಲು ಆಸಕ್ತರು ಅರ್ಜಿ ಸಲ್ಲಿಸಬೇಕು. ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯ ಸರ್ಕಾರಗಳ ಜೊತೆಯಾಗಿ ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವ ಸಲುವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಸಬ್ಸಡಿ ಪಡೆಯಲು ಅರ್ಹತೆಗಳು; 18 ವರ್ಷ ಮೇಲ್ಪಟ್ಟ ಆಸಕ್ತ ಫಲಾನುಭವಿಗಳು ಪಿಎಂಎಫ್‌ಎಂಇ ಯೋಜನೆಯಡಿ ಅರ್ಜಿ ಸಲ್ಲಿಸಬಹುದು. ಯೋಜನೆಯಡಿ ಅರ್ಜಿ ಸಲ್ಲಿಸಲು ಯಾವುದೇ ವಿದ್ಯಾರ್ಹತೆಯ ಮಿತಿ ಇರುವುದಿಲ್ಲ.
ಅರ್ಹ ಯೋಜನಾ ವೆಚ್ಚದ ಶೇ.35 ರಷ್ಟು ಮೌಲ್ಯದ ಸಾಲ-ಸಂಪರ್ಕವಿರುವ ಸಹಾಯಧನ ಜೊತೆಗೆ ಹೆಚ್ಚುವರಿ ಶೇ.15 ರಷ್ಟು ರಾಜ್ಯ ಸರ್ಕಾರದಿಂದ ಸಹಾಯಧನ ಒದಗಿಸಲಾಗುವುದು (ಗರಿಷ್ಠ ಮಿತಿ 15 ಲಕ್ಷಗಳು), ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಚಟುವಟಿಕೆಗಳಾದ ಪ್ಯಾಕೇಜಿಂಗ್, ಜಾಹೀರಾತು, ಸಾಮಾನ್ಯ ಬ್ರಾಂಡ್ ಅಭಿವೃದ್ಧಿ, ಚಿಲ್ಲರೆ ಮಾರಾಟ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮತ್ತಿತರಗಳಿಗೆ ಸರ್ಕಾರದಿಂದ ಶೇ.50 ರಷ್ಟು ಸಹಾಯಧನ ನೀಡಲಾಗುತ್ತದೆ.
ದೇಶದ ಅಸಂಘಟಿತ ಆಹಾರ ಸಂಸ್ಕರಣಾ ಕ್ಷೇತ್ರದಡಿ, ನೋಂದಾಯಿಸದ ಹಾಗೂ ಅನೌಪಚಾರಿಕವಾಗಿರುವ ಸುಮಾರು 25 ಲಕ್ಷ ಆಹಾರ ಸಂಸ್ಕರಣಾ ಉದ್ದಿಮೆಗಳಿವೆ. ಆಹಾರ ಸಂಸ್ಕರಣಾ ಕೈಗಾರಿಕೆ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಇದರಿಂದ ಇವುಗಳ ಅಭಿವೃದ್ಧಿ ಸೀಮಿತಗೊಳ್ಳುತ್ತಿರುವುದರ ಜೊತೆಗೆ ಕಾರ್ಯಕ್ಷಮತೆಯೂ ಬಲಹೀನವಾಗುತ್ತಿದೆ.
ಸೀಮಿತ ಕೌಶಲ್ಯಗಳು ಹಾಗೂ ಉತ್ಪಾದನೆ ಮತ್ತು ಪ್ಯಾಕೇಜಿಂಗ್‌ಗಾಗಿ ಆಧುನಿಕ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳ ಕೊರೆತೆಯಿಂದಾಗಿ ಉತ್ಪಾದನೆ ಹಾಗೂ ಹೊಸತನದ ಕೊರತೆ, ಉತ್ತಮ ನೈರ್ಮಲ್ಯ ಹಾಗೂ ತಯಾರಿಕಾ ಅಭ್ಯಾಸಗಳಂತಹ ಮೂಲಭೂತ ಅರಿವಿನ ಕೊರತೆಯೂ ಒಳಗೊಂಡಂತೆ ಗುಣಮಟ್ಟದ ಹಾಗೂ ಆಹಾರ ಸುರಕ್ಷತಾ ನಿಯಂತ್ರಣ ವ್ಯವಸ್ಥೆಗಳ ಕೊರತೆಯನ್ನು ಎದುರಿಸುತ್ತಿವೆ.
ಈ ಅಸಂಘಟಿತ ಕಿರು ಆಹಾರ ಸಂಸ್ಕರಣಾ ಘಟಕಗಳಿಗೆ, ಕೌಶಲ್ಯ ತರಬೇತಿ, ಉದ್ಯಮಶೀಲತೆ, ತಂತ್ರಜ್ಞಾನ, ಸಾಲ ಹಾಗೂ ಮೌಲ್ಯ ಸರಪಳಿಯಾದ್ಯಂತ ಮಾರ್ಕೆಟಿಂಗ್‌ನಲ್ಲಿ ಕೈಆಸರೆ ಬೆಂಬಲದ ಅಗತ್ಯವಿದೆ. ಕಿರು ಉದ್ದಿಮೆಗಳ ವ್ಯಕ್ತಿ ಮತ್ತು ಗುಂಪಿಗೆ ಬೆಂಬಲ, ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್‌ಗೆ ಬೆಂಬಲ, ಸಂಸ್ಥೆಗಳನ್ನು ಬಲಪಡಿಸಲು ಕ್ರಮ, ಬಲಿಷ್ಠವಾದ ಯೋಜನಾ ನಿರ್ವಹಣೆ ಚೌಕಟ್ಟು ರಚನೆಯನ್ನು ಈ ಯೋಜನೆ ಒಳಗೊಂಡಿದೆ.
ಈ ಯೋಜನೆಯಡಿ ವೈಯಕ್ತಿಕ ಕಿರು ಉದ್ಯಮಗಳ ಅರ್ಹತಾ ಮಾನದಂಡವಾಗಿ ಹಾಲಿ ಕಿರು ಆಹಾರ ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸುತ್ತಿರಬೇಕು. ಹಾಲಿ ಘಟಕಗಳೆಂದರೆ, ಒಡಿಒಪಿ ಉತ್ಪನ್ನಗಳಿಗಾಗಿ ಎಸ್‌ಎಲ್‌ಯುಪಿಯಲ್ಲಿ ಗುರುತಿಸಿರುವಂತಹ ಘಟಕಗಳಾಗಿರಬೇಕು ಅಥವಾ ವೈಯಕ್ತಿಕವಾಗಿ ಸಂಪನ್ಮೂಲ ವ್ಯಕ್ತಿಯೇ ಪರಿಶೀಲನೆ ಮಾಡಿರುವಂತಹವುಗಳಾಗಿರಬೇಕು. ವಿದ್ಯುತ್ ಬಳಸುತ್ತಿರುವಂತಹ ಘಟಕಗಳಾಗಿದ್ದಲ್ಲಿ, ವಿದ್ಯುತ್ ಬಿಲ್ಲು ಅದರ ಕಾರ್ಯಾಚರಣೆಗಳನ್ನು ಬೆಂಬಲಿಸುತ್ತದೆ.
ಉಮ್ಯಮವು ಅಸಂಘಟಿತವಾಗಿರಬೇಕು ಹಾಗೂ 10ಕ್ಕಿಂತ ಕಡಿಮೆ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರಬೇಕು. ಉದ್ಯಮವು ಜಿಲ್ಲೆಯ ಒಡಿಪಿಯಲ್ಲಿ ಗುರುತಿಸಿಲಾಗಿರುವ ಉತ್ಪನ್ನದ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ಅಪೇಕ್ಷಣೀಯ. ಇತರೆ ಕಿರು ಉದ್ಯಮಗಳನ್ನೂ ಸಹ ಪರಿಗಣಿಸಬಹುದು. ಅರ್ಜಿದಾರರು ಉದ್ಯಮದ ಮಾಲೀಕತ್ವವನ್ನು ಹೊಂದಿರಬೇಕು. ಉದ್ಯಮವು ಮಾಲೀಕತ್ವ ಪಾಲುದಾರಿಕೆ ಸಂಸ್ಥೆಯಾಗಿರಬೇಕು. ಹಣಕಾಸಿನ ನೆರವನ್ನು ಪಡೆಯಲು ಒಂದು ಕುಟುಂಬದಿಂದ ಕೇವಲ ಓರ್ವ ವ್ಯಕ್ತಿ ಅರ್ಹತೆಯನ್ನು ಹೊಂದಿರುತ್ತಾರೆ.
ಆಸಕ್ತ ಫಲಾನುಭವಿಗಳು http://pmfme.mofpi.gov.in ಪೋರ್ಟಲ್ ಮೂಲಕ ಅರ್ಜಿ ನೋಂದಾಯಿಸಬಹುದು. ಹಾಗೂ ಫಲಾನುಭವಿಗಳ ದಾಖಲೆಗಳ ಕ್ರೋಢೀಕರಣ, ವಿಸ್ತೃತ ಯೋಜನಾ ವರದಿ ತಯಾರಿಕೆ ಹಾಗೂ ಇತರೆ ಮಾರ್ಗದರ್ಶನಕ್ಕಾಗಿ ಪಿಎಂಎಫ್‍ಎಂಇ ವಿಭಾಗ, ಜಂಟಿ ಕೃಷಿ ನಿರ್ದೇಶಕರ ಕಚೇರಿ ಇವರನ್ನು ಸಂಪರ್ಕಿಸಬಹುದು.












Click it and Unblock the Notifications