• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೃಷ್ಣನಿಗೆ ಜೀವನ ಅರ್ಪಿಸಿದ ಪೇಜಾವರ ಶ್ರೀಗಳು ನಡೆದು ಬಂದ ಹಾದಿ

By ವಿಕಿಪೀಡಿಯಾ ಮಾಹಿತಿ
|

ಉಡುಪಿಯಿಂದ 120 ಕಿ.ಮೀ ದೂರದ ಸುಬ್ರಮಣ್ಯದ ಸಮೀಪದ ಹಳ್ಳಿ. ಅಚಾರ್ಯ ಮಧ್ವರು ನಡೆದಾಡಿದ ಪವಿತ್ರ ಸ್ಥಳ. ಹೆಸರು ರಾಮಕುಂಜ. ಬಹಳ ಜನಕ್ಕೆ ಹೆಸರು ಕೇಳಿಯೇ ಗೊತ್ತಿಲ್ಲ. ಅಂಥ ಅಜ್ಞಾತವಾದೊಂದು ಕುಗ್ರಾಮ. ಇಂಥ ಹಳ್ಳಿಯಲ್ಲಿ 1931ಎಪ್ರಿಲ್ 27 ರಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಜನಿಸಿದರು.

ತಂದೆ ನಾರಾಯಣಾಚಾರ್ಯ, ತಾಯಿ ಕಮಲಮ್ಮ. ಹುಟ್ಟಿದ ಎರಡನೆಯ ಗಂಡುಮಗುವಿಗೆ 'ವೆಂಕಟರಮಣ' ಎಂದು ಹೆಸರಿಟ್ಟರು. ಪ್ರಜಾಪತಿ ಸಂವತ್ಸರದ ವೈಶಾಖ ಶುದ್ಧ ದಶಮಿ ಸೋಮವಾರದಂದು ವೆಂಕಟರಮಣನ ಶುಭ ಜನನ. ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ. ಏಳನೆಯ ವರ್ಷದಲ್ಲೇ ಗಾಯತ್ರಿಯ ಉಪದೇಶ. ವೇದಮಾತೆ ವಟುವಿನ ತುಟಿಯಲ್ಲಿ ನಲಿದಳು.

Breaking: ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಇನ್ನಿಲ್ಲ

ಉಪನಯನಕ್ಕೂ ಮುಂಚೆ, ಹುಡುಗನಿಗಿನ್ನೂ ಆರು ವರ್ಷ. ಆಟವಾಡುವ ವಯಸ್ಸು. ತಂದೆ - ತಾಯಿ ಮಗನನ್ನು ಉಡುಪಿಗೆ ಕರೆ ತಂದರು. ಆಗ ಪೇಜಾವರ ಮಠದ ಪರ್ಯಾಯವೇ ನಡೆದಿತ್ತು. ವೆಂಕಟರಮಣ ಮಠದ ಸ್ವಾಮೀಜಿ ಕೃಷ್ಣ ಪೂಜೆ ಮಾಡುವುದನ್ನು ಆಸಕ್ತಿಯಿಂದ ಗಮನಿಸಿದ. ಏನೋ ಒಂದು ಅಂತರಂಗದ ಸೆಳೆತ: ತಾನೂ ಹೀಗೆ ಕೃಷ್ಣನನ್ನು ಪೂಜಿಸಬಹುದೆ?

ತಂದೆ - ತಾಯಿ ವೆಂಕಟರಮಣನನ್ನು ಸ್ವಾಮಿಗಳ ಭೇಟಿಗೆ ಕರೆದುಕೊಂಡು ಹೋದರು. ವೆಂಕಟರಮಣ ಭಕ್ತಿಯಿಂದ ಸ್ವಾಮಿಗಳಿಗೆ ನಮಸ್ಕರಿಸಿದ. ಪುಟ್ಟ ಹುಡುಗನ ಮುಗ್ಧ ಮುಖ, ಅಲ್ಲಿ ತುಂಬಿದ ಭಕ್ತಿ ಭಾವ, ನಡೆಯ ಚುರುಕುತನ ಎಲ್ಲ ಗಮನಿಸಿದ ಸ್ವಾಮಿಗಳಿಗೆ ಏನನ್ನಿಸಿತೋ! ಆಕಸ್ಮಿಕವಾಗಿ ಅವರ ಬಾಯಿಂದ ಹೀಗೊಂದು ಮಾತು ಬಂತು.

'ನೀನು ನನ್ನಂತೆ ಸ್ವಾಮಿಯಾಗುತ್ತೀಯಾ?'

ವೆಂಕಟರಮಣ ಉತ್ತರಿಸಿದ: "ಹ್ಞೂ, ಆಗುತ್ತೇನೆ"

ಈ ಆಕಸ್ಮಿಕ ಸಂಭಾಷಣೆಗೆ ಒಳಗಿನಿಂದ ಪ್ರೆರಿಸಿದ, ಮೇಲೆ ನಿಂತ ದೇವತೆಗಳು 'ತಥಾಸ್ತು' ಎಂದರು.

ಪರ್ಯಾಯದ ಅವಧಿ ಮುಗಿಯಿತು. ಆಗಿನ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಮಾನ್ಯ ತೀರ್ಥರು ಸಂಚಾರಕ್ಕೆ ಹೊರಟರು. ಪಯಣದ ಹಾದಿಯಲ್ಲಿ ಹಂಪೆಯನ್ನು ತಲುಪಿದರು. ವ್ಯಾಸತೀರ್ಥರ ತಪೋಭೂಮಿಯಾದ ಹಂಪೆಯಲ್ಲಿ ಅವರ ನಿರ್ಧಾರ ಗಟ್ಟಿಗೊಂಡಿತು. ಅವರು ವಿಳಂಬ ಮಾಡದೆ ವೆಂಕಟರಮಣನನ್ನು ಕರೆಸಿಕೊಂಡರು. ಆಗಷ್ಟೇ ಉಪನೀತನಾಗಿದ್ದ ವಟು ವೆಂಕಟರಮಣ ಹಿರಿಯರ ಜತೆ ಹಂಪೆಗೆ ತೆರಳಿದರು.

ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿಯಂದು (3.12.1938) ವೆಂಕಟರಮಣನಿಗೆ ಹಂಪೆಯ ಯಂತ್ರೋದ್ಧಾರ ಮುಖ್ಯಪ್ರಾಣನ ಸನ್ನಿಧಿಯಲ್ಲಿ ದೀಕ್ಷೆ ನಡೆಯಿತು.

ರಾಮಕುಂಜದ ಪುಟ್ಟ ಹಳ್ಳಿಯ ಮುಗ್ಧ ಬಾಲಕ, ಇನ್ನೂ ಏಳರ ಬಾಲ್ಯದ ಹಸುಳೆ, ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ, ಪೇಜಾವರ ಮಠದ ಪರಂಪರೆಯ 32ನೆಯ ಯತಿಯಾಗಿ, ಆಚಾರ್ಯ ಮಧ್ವರ ವೇದಾಂತ ಪೀಠವನ್ನೇರಿದ. ಬಾಲಕ ವೆಂಕಟರಾಮ 'ವಿಶ್ವೇಶ ತೀರ್ಥ'ರಾದರು.

20 ವರ್ಷದ ಪೇಜಾವರಶ್ರೀ

ಆಗ ಪೇಜಾವರ ಶ್ರೀಪಾದರಿಗೆ, ವಿಶ್ವೇಶ ತೀರ್ಥರಿಗೆ 20 ರ ಹರೆಯ. 1951ರಲ್ಲಿ ನಂಜನಗೂಡಿನಲ್ಲಿ ಆಗಮತ್ರಯ ವಿದ್ವಾಂಸರ ಸಮ್ಮೇಳನ ನಡೆಯಿತು. ಎಲ್ಲ ಪಂಡಿತರ ಒಮ್ಮತದಿಂದ ಆ ಸಮ್ಮೇಳನದ ಅಧ್ಯಕ್ಷತೆಯ ಹೊಣೆಯನ್ನು ಹೊಸ ಹರೆಯದ ವಿಶ್ವೇಶತೀರ್ಥರಿಗೆ ಒಪ್ಪಿಸಿದರು.

ಆ ಸಭೆಯಲ್ಲಿ ಆಗಿನ ಮೈಸೂರು ಅರಸರಾಗಿದ್ದ ದಿ. ಜಯಚಾಮರಾಜೇಂದ್ರ ಒಡೆಯರು ಉಪಸ್ಥಿತರಿದ್ದರು. ತರುಣ ಯತಿಯ ತೇಜಸ್ವಿತೆಗೆ, ಪಾಂಡಿತ್ಯಕ್ಕೆ ಮೆಚ್ಚಿದ ಒಡೆಯರು ಶ್ರೀಪಾದರನ್ನು ಅರಮನೆಗೆ ಕರೆಸಿ ಪೂಜೆ ಮಾಡಿಸಿದರು.

*1951 ಜನವರಿ 18 ರಂದು, 21ರ ಹರೆಯದಲ್ಲಿ ಮೊದಲ ಪರ್ಯಾಯ ಪೀಠಾರೋಹಣ, ಅನ್ನದಾನ - ಜ್ಞಾನದಾನಗಳಲ್ಲಿ ಸಾಟಿಯಿಲ್ಲದ ಪರ್ಯಾಯ*

ಪರ್ಯಾಯದ ಅವಧಿಯಲ್ಲೇ ಮಾಧ್ವರೆಲ್ಲರ ಸಂಘಟನೆಗೆ ನಾಂದಿ ಹಾಡಿದ ಮಾಧ್ವ ತತ್ವಜ್ಞಾನ ಸಮ್ಮೇಳನ, 1956 ಜುಲೈ 28, ಟೀಕಾಚಾರ್ಯರ ಪುಣ್ಯದಿನದಂದು ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠದ ಸ್ಥಾಪನೆ. 12 ವರ್ಷಗಳ ಕಾಲ ನಿರಂತರ ಶಾಸ್ತ್ರಾಧ್ಯಯನ ನಡೆಸುವ ಗುರುಕುಲದ ಮಾದರಿಯ ನಾಡಿನ ಹೆಮ್ಮೆಯ ಆಧ್ಯಾತ್ಮ ವಿದ್ಯಾಕೇಂದ್ರ. ಈ 56 ವರ್ಷಗಳ ಹರೆಯದಲ್ಲಿ ಈ ಸಂಸ್ಥೆಯಲ್ಲಿ ಕಲಿತು ಹೊರಬಂದ ಖ್ಯಾತ ವಿದ್ವಾಂಸರು ನೂರಾರು ಮಂದಿ. ಇವೆಲ್ಲಾ ತರುಣ ಶ್ರೀಪಾದರ ಉತ್ತುಂಗ ಸಾಧನೆಯ ಕಿರೀಟಕ್ಕೊಂದು ಗರಿ. ಚಿನ್ನದಲ್ಲಿ ಕಂಪು ಸೇರಿದಂತೆ ಆಯ್ತು.

ಗುರು ವಿದ್ಯಾಮಾನ್ಯ ತೀರ್ಥರು ಏರ್ಪಡಿಸಿದ ಈ ಯಾಗದಲ್ಲಿ ಸಹಜವಾಗಿಯೇ ಶಿಷ್ಯ ವಿಶ್ವೇಶ ತೀರ್ಥ ಶ್ರೀಪಾದರು ಭಾಗವಹಿಸಿದ್ದರು. ಯಾಗದಲ್ಲೊಂದು ವಿದ್ವತ್ ಸಭೆ. ಕಾಶಿಯ ಪ್ರಖಾಂಡ ಪಂಡಿತ ಷಡಂಗ ರಾಮಚಂದ್ರ ಶಾಸ್ತ್ರಿಗಳು ಆ ಸಭೆಯ ಮುಂದೆ ಒಂದು ಸಮಸ್ಯೆಯನ್ನಿಟ್ಟರು. ತರ್ಕಶಾಸ್ತ್ರದ ಅತ್ಯಂತ ಜಟಿಲವಾದ ಪ್ರಶ್ನೆ. ಪಂಡಿತರೆಲ್ಲ ಉತ್ತರ ಕಾಣದೆ ತತ್ತರಿಸಿದರು. ಉತ್ತರ ಸಿಗದೆ ಆ ದಿನ ಸಂದಿತು. ರಾಮಚಂದ್ರ ಶಾಸ್ತ್ರಿಗಳು ತನಗೆ ಸಾಟಿಯಿಲ್ಲ ಎಂದು ಬೀಗಿದರು. ಆ ಹಮ್ಮಿನಿಂದಲೇ ಶಾಸ್ತ್ರಿಗಳು ಮಾರನೆಯ ದಿನ ಸಭೆಗೆ ಆಗಮಿಸಿದರು. ಪೇಜಾವರ ಶ್ರೀಪಾದರು ಮುಂಜಾನೆಯ ಸಭೆಯಲ್ಲಿ ಆ ಸಮಸ್ಯೆಗೆ ಸೂಕ್ತ ಉತ್ತರ ನೀಡಿದರು. ಷಡಂಗರಿಗೆ ಅಚ್ಚರಿ ಅವರು ತೆಪ್ಪಗೆ ಶ್ರೀಪಾದರ ಕಾಲಿಗೆರಗಿದರು.

1965 ರಲ್ಲಿ ಕೊಚ್ಚಿಯ ಮಹಾರಾಜರ ಭೇಟಿ. ಮಹಾರಾಜರು ದೊಡ್ಡ ಸಂಸ್ಕೃತ ವಿದ್ವಾಂಸರು. ನ್ಯಾಯ ಶಾಸ್ತ್ರದಲ್ಲಿ ವಿಶೇಷ ಪರಿಣತರು. ಅವರು ಪೇಜಾವರ ಶ್ರೀಪಾದರನ್ನು ವಾಕ್ಛಾತುರ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಮೊದಲು ನ್ಯಾಯ ಶಾಸ್ತ್ರದಲ್ಲಿ ಚರ್ಚೆ. ಅನಂತರ ದ್ವೈತಾದ್ವೈತ ವಿಮರ್ಶೆ. ಶ್ರೀಪಾದರ ಸಮರ್ಥನೆಗೆ ಮಹಾರಾಜರು ಮನಸೋತರು. ಅರಮನೆಯಲ್ಲಿ ಶೀಪಾದರನ್ನು ವೈಭವದಿಂದ ಸನ್ಮಾನಿಸಿ ಕಳಿಸಿಕೊಟ್ಟರು.

1966 ರಲ್ಲಿ ಕಾಶಿಯಲ್ಲೊಂದು ವಿದ್ವತ್ ಸಭೆ. ಕಾಶಿ ತರ್ಕಪಂಡಿತರ ತವರೂರು. ಇಡಿಯ ದೇಶದಲ್ಲಿ ಖ್ಯಾತರಾದ ಮಹಾನ್ ಅದ್ವೈತ ವಿದ್ವಾಂಸ ಅನಂತಕೃಷ್ಣ ಶಾಸ್ತ್ರಿಗಳು, ಅಖಿಲ ಭಾರತ ಖ್ಯಾತಿಯ ಮಹಾ ತರ್ಕ ಪಂಡಿತ ರಾಜರಾಜೇಶ್ವರ ಶಾಸ್ತ್ರಿ ದ್ರಾವಿಡ ಮುಂತಾದ ದಿಗ್ಗಜರೊಡನೆ ಶಾಸ್ತ್ರಾರ್ಥ ಚರ್ಚೆ. ಸೋಲರಿಯದ ಪಂಡಿತರು, ವಯಸ್ಸಿನಲ್ಲಿ ಹಿರಿಯರು. ಅವರ ಮುಂದೆ ಉಡುಪಿಯಿಂದ ಬಂದ 35ರ ತರುಣ ಯತಿ.

ಲೆಕ್ಕಾಚಾರ ತಲೆ ಕೆಳಗಾಯಿತು. ತಮ್ಮ ಭದ್ರಕೋಟೆಯಲ್ಲಿದ್ದ ದಿಗ್ಗಜಗಳೆಲ್ಲ ಈ ತರುಣ ಯತಿ ಸಿಂಹದ ಮುಂದೆ ಮಾತು ಮೂಕವಾಗಿ ತಲೆ ಬಾಗಿಸಿದರು. ಇದು ಒಂದೆರಡು ಉದಾಹರಣೆಯಷ್ಟೇ. ಇತರ ಮತದ ವಿದ್ವಾಂಸರು, ಯತಿಗಳು ಕೂಡಾ ಪೇಜಾವರ ಶ್ರೀಪಾದರ ಪಾಂಡಿತ್ಯಕ್ಕೆ ಮೆಚ್ಚಿಅವರ ಕೊರಳಿಗೆ ವಿಜಯಮಾಲೆ ತೊಡಿಸಿ ಸತ್ಕರಿಸಿದರು. ಪುಣೆ - ಪ್ರಯಾಗ ಮುಂತಾದ ಎಲ್ಲ ಕಡೆಯೂ, ಎಲ್ಲಾ ವಿದ್ವತ್ ಸಭೆಗಳಲ್ಲೂ ಶ್ರೀಪಾದರಿಗೇ ಜಯಭೇರಿ ಸಿಕ್ಕಿತ್ತು.

*1968 ಜನವರಿ 18ರಿಂದ, 1970 ಜನವರಿ 17ರ ವರೆಗೆ ಎರಡನೆಯ ಶ್ರೀಕೃಷ್ಣ ಪೂಜಾ ಪರ್ಯಾಯ ಐತಿಹಾಸಿಕ ಪರ್ಯಾಯ*

ಮೊದಲ ಪರ್ಯಾಯವನ್ನೂ ಮೀರಿ ನಿಂತ ಅದ್ದೂರಿಯ ಎರಡನೆಯ ಪರ್ಯಾಯ. ಕಲಾವಿದರ, ವಿದ್ವಾಂಸರ ಮನಸೂರೆಗೊಂಡ ಪರ್ಯಾಯ.

ಈ ಅವಧಿಯಲ್ಲೇ, ಪರ್ಯಾಯೋತ್ಸವದ ಸಂಭ್ರಮದಲ್ಲೇ, ಶ್ರೀಪಾದರು ಗೀತೆಯ ಕುರಿತು ನೀಡಿದ ಉಪನ್ಯಾಸ ಮಾಲಿಕೆ ಪುಸ್ತಕ ರೂಪದಲ್ಲಿ ಮೂಡಿ ಬಂತು:

ಬಡನತಕ್ಕೊಂದು ವರದಾನ. ಶ್ರೀಪಾದರ ಸಾಮಾಜಿಕ ಕಳಕಳಿಗೊಂದು ಅನನ್ಯ ನಿದರ್ಶನ. ಈ ಅವಧಿಯಲ್ಲೇ ಉಡುಪಿಯಲ್ಲಿ ಶ್ರೀಪಾದರ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮಹಾಸಮ್ಮೇಳನ ನಡೆಯಿತು. ಜನಸಾಗರವವೇ ಉಡುಪಿಯತ್ತ ಹರಿದುಬಂತು. 'ಹಿಂದೂಗಳೆಲ್ಲ ಒಂದಾಗಿ ಬಂಧುಭಾವದಿಂದ ಬದುಕಬೇಕು' ಎಂಬ ಸಂದೇಶವನ್ನು ಶ್ರೀಪಾದರು ಈ ವೇದಿಕೆಯಲ್ಲಿ ನೀಡಿದರು.

ಶ್ರೀಪಾದರನ್ನು ಬಾಲ್ಯದಿಂದ ಕಾಡುತ್ತಿದ್ದ ಸಮಸ್ಯೆ ಅಸ್ಪೃಶ್ಯತೆ. ಸಮಾಜದಲ್ಲಿ ಒಂದು ವರ್ಗವನ್ನು ಅಸ್ಪೃಶ್ಯರೆಂದು ಪರಿಗಣಿಸಿ ದೂರವಿಡುವುದರ ವಿರುದ್ಧ ಅವರ ಒಳಮನಸ್ಸು ಸಿಡಿದೇಳುತ್ತಲೇ ಇತ್ತು.

ಈ ಸಂದರ್ಭದಲ್ಲಿಯೇ ಗಾಂಧೀಜಿಯ ವಿಚಾರಧಾರೆ ಅವರ ಮೇಲೆ ಗಾಢವಾದ ಪ್ರಭಾವ ಬೀರಿತು. ಅಂದಿನಿಂದ, ಮಠದ ಯತಿಗಳು ಉತ್ಸವಗಳಲ್ಲಿ ಧರಿಸುತ್ತಿದ್ದ ಪಟ್ಟೆ ಪೀತಾಂಬರಗಳ ವೈಭವದ ಪೋಷಾಕನ್ನು ತೊರೆದು ಶುದ್ಧ ಖಾದಿಧಾರಿಯಾಗುವ ದೀಕ್ಷೆ ತೊಟ್ಟರು.

ಮಠದಲ್ಲಿ ಸ್ವಾಮಿಗಳಿಗೆ ಪ್ರತ್ಯೇಕ ಅಡುಗೆ ಮಾಡುವ ಪದ್ಧತಿಯನ್ನು ರದ್ದುಗೊಳಿಸಿದರು. ಎಲ್ಲರಿಗೂ ಬಡಿಸುವ ಅಡುಗೆಯನ್ನೇ ತಾನೂ ಉಂಡರು. ವೈಭವದ ಉತ್ತುಂಗ ಸ್ಥಿತಿಯಲ್ಲಿ ಸರಳತೆಯ ಸಾಕಾರ ಮೂರ್ತಿಯಾಗಿ ನಿಂತರು.

ಜಾತಿಯ ಬಗ್ಗೆ ಆಚಾರ್ಯ ಮಧ್ವರ ಹೇಳಿಕೆ ಅವರಲ್ಲಿ ಕ್ರಾಂತಿಯ ಕಿಡಿಯನ್ನು ಮೂಡಿಸಿತು. 13 ನೆಯ ಶತಮಾನದಷ್ಟು ಹಿಂದೆಯೇ ಅಚಾರ್ಯ ಮಧ್ವರು ಸಾರಿದ್ದರು.

ತಂದೆ-ತಾಯಿಯ ಜಾತಿಯಿಂದ ಮಗನ ಜಾತಿಯನ್ನು ನಿರ್ಧರಿಸುವುದು ಕೇವಲ ಸಾಮಾಜಿಕ ಪದ್ಧತಿ ಮಾತ್ರ. ಅಧ್ಯಾತ್ಮದಲ್ಲಿ ಅದಕ್ಕೆ ಸ್ಥಾನವಿಲ್ಲ. ಅಧ್ಯಾತ್ಮದ ಸಾಧನೆಯಲ್ಲಿ ಮುಖ್ಯವಾಗುವುದು ವ್ಯಕ್ತಿಯ ಸ್ವಭಾವಗುಣ ಮಾತ್ರ. ಜಾತಿಯಲ್ಲಿ ಶೂದ್ರನ ಮಗ ಸ್ವಭಾವದಲ್ಲಿ ಬ್ರಾಹ್ಮಣನಿರಬಹುದು, ಜಾತಿಯಲ್ಲಿ ಬ್ರಾಹ್ಮಣನ ಮಗ ಸ್ವಭಾವದಲ್ಲಿ ಶೂದ್ರನಿರಬಹುದು. ಅಚಾರ್ಯ ಮಧ್ವರ ಈ ಕ್ರಾಂತಿಕಾರಿ ಹೇಳಿಕೆ ಶ್ರೀಪಾದರ ಮನದಲ್ಲಿ ಗಾಢವಾಗಿ ಬೇರೂರಿತು. ಏಳು ಶತಮಾನಗಳ ಹಿಂದೆ ಸಾರಿದ ಈ ಸಂದೇಶ ಇವತ್ತಿಗೂ ಬರಿಯ ಪುಸ್ತಕದ ಮಾತಾಗಿ ಉಳಿದಿದೆ.

ಮನಸ್ಸು ಬಂಡಾಯವೇಳುತ್ತದೆ, ಆದರೆ ಸಂಪ್ರದಾಯದ ಚೌಕಟ್ಟಿನ ದಿಗ್ಬಂಧನದಲ್ಲಿ ಬಡಭಡಿಕೆಯ ಹಿಂದೆ ಮಡುಗಟ್ಟಿರುವುದು ಈ ಭಯವೇ.

40 ವರ್ಷಗಳ ಹಿಂದೆ ಪ್ರಾರಂಭಿಸಿದ್ದ ಈ ಕಾರ್ಯ ಹಾಗೆಯೇ ಮುಂದುವರೆದಿದ್ದರೆ ಏನೆಲ್ಲಾ ಅದ್ಭುತವನ್ನು ಸಾಧಿಸಬಹುದಿತ್ತು. ಈ ಸನಾತನಿಗಳು ಮತ್ತು ವಿಚಾರವಾದಿಗಳು ಸೇರಿ ಒಂದು ಅಧ್ಬುತ ಕ್ರಾಂತಿಯ ಸಾಧ್ಯತೆಯನ್ನೇ ಹೊಲೆಗೆಡಿಸಿಬಿಟ್ಟರು. 40 ವರ್ಷಗಳ ಹಿಂದೆ ಶ್ರೀಪಾದರು ಮೊದಲು ಹರಿಜನ ಕೇರಿಗೆ ಹೋದಾಗ ಬಂದ ಟೀಕೆಗಳಿಗೆ ನೊಂದ ಶ್ರೀಪಾದರು

ತಪ್ಪು ಅರ್ಥ ಹಚ್ಚಿ ನನ್ನ ಪ್ರಾಮಾಣಿಕತೆಯನ್ನೇ ಪ್ರಶ್ನಿಸಲಾಗುತ್ತಿದೆ. ಇದರಿಂದ ನನಗೆ ತುಂಬಾ ನೋವಾಗಿದೆ. ಇದು ಹೀಗೆಯೇ ಮುಂದುವರಿದರ ನಾನು ಪೀಠ ತ್ಯಾಗ ಮಾಡಿ, ಬಿಡಿ ಸನ್ಯಾಸಿಯಾಗಿ ಬದುಕುತ್ತೇನೆ. ಹರಿದ್ವಾರದಲ್ಲೋ ಹೃಷಿಕೇಶದಲ್ಲೋ ಒಂದು ಪುಟ್ಟ ಗುಡಿಸಲು ಕಟ್ಟಿಕೊಂಡು ಇದ್ದು ಬಿಡುತ್ತೇನೆ. ಎಂದಿದ್ದರು.

ಶೀಪಾದರ ಪ್ರೀತಿಯ ಗುರುಗಳಾದ ಶ್ರೀ ವಿದ್ಯಾಮಾನ್ಯ ತೀರ್ಥರೆ ಅವರನ್ನು ಕರೆಸಿಕೊಂಡರು. 'ನೀವು ಮಾಡಿದ ಕೆಲಸ ಶಾಸ್ತ್ರೀಯವಾಗಿದೆ. ದಲಿತರಿಗೂ ಹರಿಭಕ್ತಿಯ ಸಂದೇಶ ನೀಡಿದಿರಿ. ಇದು ಪುಣ್ಯದ ಕೆಲಸ' ಎಂದು ಪ್ರೀತಿಯಿಂದ ಹರಸಿ ಸಂತೈಸಿದ್ದರು.

English summary
Pejawar Seer Vishwesha Teertha Swamiji born in Udupi Ramanujam. Here is the complete life journey of Pejawar Seer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X