ದುಡಿಯುವ ಕೈಗಳನ್ನು ಕಟ್ಟಿ ಹಾಕಿದ ಕೋವಿಡ್; ಕಾರು ಚಾಲಕನ ಬದುಕು ಈಗ ಹೇಗಿದೆ?
ಬರೀ ನಾಲ್ಕನೆ ಕ್ಲಾಸ್ ಸರ್ ಓದಿರೋದು. ಆದರೆ, ಮಾತು ಬಲ್ಲವನಿಗೆ ಜಗಳ ಇಲ್ಲ ಎಂಬ ಗಾದೆಯನ್ನು ಸ್ವಲ್ಪ ಬದಲಾಯಿಸಿ ಮಾತು ಬಲ್ಲವನು ಜಗತ್ತನ್ನೆ ಗೆಲ್ಲಬಹುದು ಎಂಬಂತೆ ನನ್ನ ಬದುಕಿನಲ್ಲಿ ನನ್ನ ಮಾತು ಎಲ್ಲರ ಮನಸಿನಲ್ಲೂ ಆತ್ಮೀಯತೆಯ ಭಾವ ಮೂಡಿಸುತ್ತಿತ್ತು. ಹೀಗಾಗಿ ಯಾರು ನೆಂಟರಿಲ್ಲದ, ಸ್ನೇಹಿತರು, ಪರಿಚಯಸ್ತರಿಲ್ಲದ ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಬದುಕನ್ನು ಚೆನ್ನಾಗಿಯೇ ಕಟ್ಟಿಕೊಂಡಿದ್ದೆ ಎನ್ನುತ್ತಾರೆ ಇವರು.
ಒಂದಷ್ಟು ಹಣವನ್ನು ಕೂಡಿಟ್ಟುಕೊಂಡಿದ್ದೆ. ಕೈಯಲ್ಲಿ ಕಾಸಿದ್ದರೆ ಖರ್ಚಾಗುತ್ತದೆ. ಹೀಗಾಗಿ ಇರುವ ಹಣದ ಜೊತೆ ಲೋನ್ ತೆಗೆದುಕೊಂಡು ಒಂದೆರಡು ಕಾರನ್ನು ಖರೀದಿಸಿ ಏನೇನೊ ಆಸೆ ಪಟ್ಟಿದ್ದೆ. ಆದರೆ, ಕೋವಿಡ್ ಸೋಂಕು ನನ್ನ ವ್ಯವಹಾರಗಳನ್ನು ತಿಂದು ಬಿಸಾಕಿತು ಸಾರ್. ಸಾಲ ಮಾಡಿ ಮನೆಗೆ ತಂದ ಎರಡು ಕಾರುಗಳು ಕೇವಲ ಎರಡು ತಿಂಗಳು ಮಾತ್ರ ರಸ್ತೆಗೆ ಇಳಿದವು ಎನ್ನುತ್ತಾ ಕೊರೊನಾದ ಕಹಿ ನೆನಪುಗಳನ್ನು ಮೆಲುಕು ಹಾಕಿದರು.

ದಿಢೀರನೆ ಬಂದೆರಗಿದ ಕೋವಿಡ್ ಲಾಕ್‌ಡೌನ್‌ನಿಂದ ಒಂದು ವರ್ಷಕ್ಕೂ ಹೆಚ್ಚು ಕಾಲ ನಿಂತ ಜಾಗದಲ್ಲೇ ನಿಂತು ಸಾಲ ತೀರಿಸಲಾಗದೆ, ಬಡ್ಡಿ ಕಟ್ಟಲಾಗದೆ ಕಾರುಗಳನ್ನು ಮಾರಿಕೊಂಡೆ. ಈಗ ಹಗಲು ರಾತ್ರಿ ದುಡಿದರೂ ಲಾಕ್‌ಡೌನ್ ಸಮಯದಲ್ಲಿ ಮಾಡಿದ್ದ ಸಾಲ ತೀರಿಸುವುದಕ್ಕೆ ಹೋಗುತ್ತಿದೆ. ಕೋವಿಡ್ ಸಂದರ್ಭವನ್ನು ನೆನಸಿಕೊಂಡರೆ ನಿದ್ದೆಯಲ್ಲೂ ಇವತ್ತಿಗೂ ಬೆಚ್ಚಿ ಬೀಳುತ್ತೇನೆ ಸರ್ ಎನ್ನುತ್ತಾರೆ ಸ್ವಾಮೆಗೌಡ.
ಇದು ರಾಯಚೂರು ಜಿಲ್ಲೆಯ ಸ್ವಾಮೆ ಗೌಡರ ಕತೆ. ಅಪ್ಪ-ಅಮ್ಮ ಓದಲು ಶಾಲೆಗೆ ಕಳಿಸಿದರೆ, ಇವರು ಊರಿನಲ್ಲಿದ್ದ ಟ್ರ್ಯಾಕ್ಟರ್ ಡ್ರೈವರ್, ಗೂಡ್ಸ್ ಗಾಡಿ ಡ್ರೈವರ್ ಜೊತೆಗೆ ಡ್ರೈವಿಂಗ್ ಕಲಿಯಲು ಹೋಗುತ್ತಿದ್ದರು. ಕೊನೆಗೆ ಶಾಲೆಗೆ ಹೋಗುವುದನ್ನೆ ಬಿಟ್ಟು 14 ವರ್ಷಕ್ಕೆ ಸ್ಟೇರಿಂಗ್ ಹಿಡಿದರು. ರಾಯಚೂರಿನಲ್ಲಿ ಹತ್ತು ವರ್ಷ ದುಡಿದು ಬೆಂಗಳೂರಿಗೆ ಬಂದಾಗ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ರಾಯಚೂರಿನಿಂದ ಬೆಂಗಳೂರಿಗೆ
ಊರಿನಲ್ಲಿ ಹತ್ತುವರ್ಷ ಗೂಡ್ಸ್ ಟೆಂಪೊದಲ್ಲಿ ದುಡಿದ ಹಣದಲ್ಲಿ ಒಂದಷ್ಟು ಉಳಿತಾಯ ಮಾಡಿ, ಒಂದಷ್ಟು ಸಾಲ ಮಾಡಿ ಟಿಟಿ ವಾಹನವನ್ನು ಖರೀದಿಸಿದೆ. ಪ್ರಾರಂಭದಲ್ಲಿ ಚೆನ್ನಾಗಿಯೇ ನಡೆಯುತ್ತಿತ್ತು. ಒಂದು ಸಲ ಊರಿನ ಸಮೀಪ ಅಪಘಾತವೊಂದರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ನಾನು ಅಲ್ಲಿಯೇ ಸಮೀಪ ಇದ್ದೆ. ಆ ತಕ್ಷಣಕ್ಕೆ ಅಲ್ಲಿ ಯಾವುದೇ ಗಾಡಿ ಇರಲಿಲ್ಲ. ಮಾನವೀಯತೆಯಿಂದ ನನ್ನ ಟಿಟಿಯಲ್ಲೇ ಗಾಯಾಳುವನ್ನು ಆಸ್ಪತ್ರೆಯಲ್ಲಿ ಸಾಗಿಸಿದೆ. ದುರಾದೃಷ್ಟವಶತ್ ಆ ಗಾಯಾಳು ಸಾವನ್ನಪ್ಪಿದ. ಪುನಃ ನನ್ನ ಟಿಟಿಯಲ್ಲೇ ಶವವನ್ನು ಊರಿಗೆ ತಂದಿದ್ದೆ ನನ್ನ ತಪ್ಪಾಯ್ತು. ಊರಿನಲ್ಲಿ ನನ್ನ ಗಾಡಿಯನ್ನು ಅಂಬುಲೆನ್ಸ್ ಯೆಂದು ಕರೆಯಲು ಪ್ರಾರಂಭಿಸಿದರು. ಅಲ್ಲಿಂದ ನನ್ನ ಟಿಟಿ ವಾಹನವನ್ನು ನೋಡಿದ ತಕ್ಷಣ ಪಕ್ಕದ ಊರಿನವರು ಸಹ ಆಂಬುಲೆನ್ಸ್ ಬಂತು ಅನ್ನೋರು. ಹೀಗಾಗಿ ನಿಧಾನವಾಗಿ ಜನತೆ ಸಾಮಾನ್ಯ ಓಡಾಟಕ್ಕೆ, ಪ್ರವಾಸಕ್ಕೆ, ಮದುವೆಗೆ ನನ್ನ ಟಿಟಿ ವಾಹವವನ್ನು ಕರೆಯುವುದನ್ನೆ ಬಿಟ್ಟರು. ಹೀಗಾಗಿ ಟಿಟಿ ಸಮೇತವಾಗಿ ರಾಯಚೂರಿನಿಂದ ಬೆಂಗಳೂರಿಗೆ ಬಂದು ಬಿಟ್ಟೆ ಎಂದರು.
ಸಾಕಿದ ಬೆಂಗಳೂರೆಂಬ ಮಾಯಾನಗರಿ
ನನಗೆ ಬೆಂಗಳೂರು, ಅಲ್ಲಿನ ವ್ಯವಹಾರಗಳು ಏನೇನು ಗೊತ್ತಿರಲಿಲ್ಲ. ಆನಂದ್ ಸರ್ಕಲ್ ಬಳಿ ತುಂಬಾ ಟ್ರಾವೆಲ್ಸ್ ಏಜೆನ್ಸಿಗಳಿವೆ. ಅಲ್ಲೊದ್ರೆ ಡ್ರೈವರ್‌ಗಳಿಗೆ ಕೆಲಸ ಸಿಗುತ್ತದೆ ಎಂದು ಕೇಳಿದ್ದೆ. ಅದರ ಅಂದಾಜಿನ ಮೇಲೆ ಅವರಿವರನ್ನು ಕೇಳಿಕೊಂಡು ಫ್ರೀಡಂ ಪಾರ್ಕ್ ಬಳಿ ಟಿಟಿ ವಾಹವನ್ನು ನಿಲ್ಲಿಸಿ ಆನಂದ್ ಸರ್ಕಲ್ ಬಳಿಗೆ ಬಂದು ಯಾರನ್ನು ಮಾತನಾಡಿಸುವುದು, ಹೇಗೆ ಮಾತನಾಡಿಸುವುದೆಂದು ಸ್ವಲ್ಪ ಸಮಯ ನಿಂತೆ.
ಯಾರೊ ನನ್ನ ಬೆನ್ನಿನ ಹಿಂಭಾಗ ಫೋನಿನಲ್ಲಿ ನಮ್ಮ ರಾಯಚೂರು ಭಾಷೆಯ ಕನ್ನಡ ಮಾತನಾಡುತ್ತಿದದ್ದು ಕವಿಗೆ ಬಿತ್ತು. ಕೂಡಲೇ ಹಿಂತಿರುಗಿ ಆತ ಫೋನ್‌ನಲ್ಲಿ ಮಾತನಾಡುತ್ತಿದ್ದರೂ ಆತನ ಒಂದು ಕೈಯನ್ನು ಹಿಡಿದು ನಾನು ರಾಯಚೂರಿನವನೆ ಅಂತ ನಗುತ್ತಲೆ ಹೇಳಿದೆ. ಪುಣ್ಯಕ್ಕೆ ಆತ ಒಳ್ಳೆಯ ಮನಸಿನವರು ಅನಿಸುತ್ತೆ. ಫೋನ್ ಕಟ್ ಮಾಡಿ ನನ್ನನ್ನು ವಿಚಾರಿಸಿದ. ಎಲ್ಲವನ್ನು ಆತನಿಗೆ ಹೇಳಿದೆ.
'ನಿಂದು ಸ್ವಂತ ಟಿಟಿ ಇರುವುದರಿಂದ ಇಲ್ಲಿ ಬೇಡ. ಯಾವುದಾದರು ಕಂಪೆನಿಗೆ ಬಿಡು. ಚೆನ್ನಾಗಿ ಹಣ ಮಾಡಬಹುದೆಂದು' ಹೇಳಿದ. ನನಗೆ ಯಾವುದರ ಬಗೆಗೂ ಕಿಂಚಿತ್ತೂ ಮಾಹಿತಿ ಇಲ್ಲವೆಂದು ತಿಳಿಸಿದೆ. ತಕ್ಷಣ ಅವರು ಒಬ್ಬರಿಗೆ ಫೋನ್ ಮಾಡಿ ಎಲೆಕ್ಟ್ರಾನಿಕ್ ಸಿಟಿ ಬಳಿಯ ವಿಪ್ರೋ ಕಂಪೆನಿಯಲ್ಲಿ ಟಿಟಿ ವಾಹನವೊಂದು ಅವಶ್ಯ ಇರುವುದರ ಬಗ್ಗೆ ಮಾಹಿತಿ ಪಡೆದುಕೊಂಡು. ಇಪ್ರೋ ಕಂಪೆನಿಯ ಟ್ರಾನ್ಸ್ಪೋರ್ಟ್ ಮುಖ್ಯಸ್ಥರ ಫೋನ್‌ನಂಬರ್ ಕೊಟ್ಟು ಕಳುಹಿಸಿದರು.
ಸೀದಾ ವಿಪ್ರೋ ಕಂಪೆನಿಗೆ ಹೋಗುತ್ತಿದಂತೆ ನನ್ನ ಟಿಟಿ ಗಾಡಿಯನ್ನು ಕಂಪೆನಿಗೆ ಅಟ್ಯಾಚ್ ಮಾಡಿಕೊಂಡರು. ಆವತ್ತು ರಾತ್ರಿಯೇ ಉದ್ಯೋಗಿಗಳನ್ನು ಡ್ರಾಪ್ ಮಾಡಿಬರಲು ಹೇಳಿದರು. ಆದರೆ, ನನಗೆ ಬೆಂಗಳೂರು ಏನೇನು ಗೊತ್ತಿಲ್ಲ. ಅದರಲ್ಲೂ ರಾತ್ರಿ ಬೇರೆ. ಗೊತ್ತಿಲ್ಲವೆಂದರೆ ಕೆಲಸ ಕೊಡದಿದ್ದರೆ ಕಷ್ಟವೆಂದು ಆ ಉದ್ಯೋಗಿಗಳ ಬಳಿಯೇ ಅವರ ಮನೆಯ ವಿಳಾಸ ಕೇಳಿಕೊಂಡು ಬಿಟ್ಟು, ಕೊನೆಗೆ ಕೋರಮಂಗಲದಲ್ಲಿ ಮಹಿಳಾ ಉದ್ಯೋಗಿಯನ್ನು ಬಿಟ್ಟು, ಅವರ ಬಳಿಯೇ ಪುನಃ ಹೊಸೂರು ರಸ್ತೆಗೆ ಹೋಗುವ ದಾರಿ ಕೇಳಿಕೊಂಡೆ. ಆದರೆ, ನಾನೇ ಗೊಂದಲ ಮಾಡಿಕೊಂಡು ದೊಮ್ಮಲೂರು ಕಡೆಗೆ ಹೋಗಿ ಬಿಟ್ಟಿದ್ದೆ. ಹೀಗೆ ಒಂದು ತಿಂಗಳು ರಸ್ತೆಯ ತಿರುವುಗಳು ಗೊತ್ತಾಗದೆ ಒಂದು ಕಿಮೀ ಹೋಗಬೇಕಾದ ಜಗಕ್ಕೆ ಹತ್ತು ಕಿಮೀ, ಇಪ್ಪತ್ತು ಕಿಮೀ ಸುತ್ತಾಡಿಕೊಂಡು ಹೋಗುತ್ತಿದ್ದೆ. ನಿಧಾನವಾಗಿ ಎಲ್ಲ ರಸ್ತೆಗಳು ಪರಿಚಯವಾದವು.
ಬದುಕು ಕಿತ್ತುಕೊಂಡ ಕೋವಿಡ್
ವಿಪ್ರೋ ಕಂಪೆನಿಯಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಒಂದಷ್ಟು ಹಣ ಕೂಡಿಡುತ್ತಿದ್ದಂತೆ ಮತ್ತಷ್ಟು ಆಸೆಗಳು ಚಿಗುರಿತು. ಈ ಹಣ ಹಾಗೂ ಲೋನ್ ಮಾಡಿಕೊಂಡು ಒಂದೆರಡು ಕಾರನ್ನು ಹಾಕಿ ಬಿಟ್ಟು, ಡ್ರೈವರ್ ಗಳನ್ನು ನೇಮಿಸಿ ವಿಪ್ರೋಗೆ ಬಿಡೋಣವೆಂದು ಭಾವಿಸಿ ಕಾರನ್ನು ಖರೀದಿಸಿದೆ.
ಡ್ರೈವರ್‌ಗಳನ್ನು ಗೊತ್ತು ಮಾಡಿಕೊಂಡೆ. ಕಾರು ಖರೀದಿಸಿ ಮೂರು ತಿಂಗಳು ಅಷ್ಟೆ. ಕೋವಿಡ್ ಮಹಾಮಾರಿ ಬಂದ್ ಎರಗಿತು. ಕಾರನ್ನು ನಿಂತಲ್ಲೇ ನಿಂತವು. ಬಡ್ಡಿ ದರ, ಮನೆಯ ಖರ್ಚು, ಅಷ್ಟೊತ್ತಿಗೆ ಸಂಬಂಧಿಕರಿಗೆ ಕೋವಿಡ್ ಸೋಂಕು ಎಲ್ಲವೂ ಒಟ್ಟಾಗಿ ನನ್ನ ಬದುಕನ್ನು ಸಂಪೂರ್ಣವಾಗಿ ಮುಳುಗಿಸಿಬಿಟ್ಟಿತು. ಈಗ ಅದರ ಸಾಲವನ್ನು ತೀರಿಸುವುದರಲ್ಲಿಯೇ ಬ್ಯುಸಿಯಾಗಿದ್ದೇನೆ. ಇದರ ಜೊತೆಗೆ ಬಿಡುವಿದ್ದಾಗ ಧಾರವಾಹಿಗಳಲ್ಲಿ ಅಭಿನಯಿಸುತ್ತೇನೆ. ಆ ಹಣವೂ ಸಾಲ ತೀರಿಸುವುದಕ್ಕೆ ಹೋಗುತ್ತಿದೆ. ಒಂದು ವರ್ಷ ಹೀಗೆ ಕಷ್ಟ ಪಟ್ಟರೆ ನನ್ನ ಸಾಲವೆಲ್ಲ ತೀರುತ್ತದೆ. ಪುನಃ ಹೊಸ ಬದುಕನ್ನು ಕಟ್ಟಿಕೊಳ್ಳಬೇಕಿದೆ ಎಂದು ನಗುಮುಖದಿಂದಲೇ ನಮ್ಮ ಅನುಭವವನ್ನು ಬಿಚ್ಚಿಟ್ಟರು.












Click it and Unblock the Notifications