ಅಬ್ಬಬ್ಬಾ, ಮಹಾಕುಂಭ ಮೇಳಕ್ಕೆ ಈವರೆಗೆ ಹೋಗಿದ್ದು ಎಷ್ಟು ಕೋಟಿ ಜನ ಗೊತ್ತಾ?
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವು ದಾಖಲೆಗಳನ್ನು ನಿರ್ಮಿಸುತ್ತಿದೆ. ಪ್ರತಿನಿತ್ಯವೂ ಲಕ್ಷಾಂತರ ಮಂದಿ ಪ್ರಯಾಗ್‌ರಾಜ್‌ಗೆ ಬಂದು ಪವಿತ್ರ ಸ್ನಾನ ಮಾಡುವ ಮೂಲಕ ಕುಂಭಮೇಳದಲ್ಲಿ ಭಾಗಿಯಾಗುತ್ತಿದ್ದಾರೆ. ಜನವರಿ 13ರಿಂದ ಶುರುವಾಗಿರುವ ಮಹಾಕುಂಭಮೇಳಕ್ಕೆ ಕೋಟ್ಯಂತರ ಮಂದಿ ಭಕ್ತರು ಭೇಟಿ ನೀಡಿದ್ದಾರೆ.
ಜನವರಿ 13ರಿಂದ ಫೆಬ್ರವರಿ 26ರವೆರೆಗೆ ಮಹಾಕುಂಭ ಮೇಳ ನಡೆಯಲಿದೆ. ಉತ್ತರ ಪ್ರದೇಶ ಸರ್ಕಾರದ ಮಾಹಿತಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಇಂದು ಪ್ರಯಾಗ್‌ರಾಜ್‌ನಲ್ಲಿ 35.50 ಲಕ್ಷ ಮಂದಿ ಪವಿತ್ರ ಸ್ನಾನ ಮಾಡಿದ್ದಾರೆ. ಮೇಳ ಶುರುವಾದ ಇಲ್ಲಿಯವರೆಗೆ 15 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಹೇಳಿದೆ.

ಬುಧವಾರ ಮೌನಿ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸಚಿವ ಎ.ಕೆ ಶರ್ಮಾ ಅವರು ಇಂದು ಪ್ರಯಾಗರಾಜ್‌ನ ಅರೈಲ್ ಘಾಟ್‌ನಲ್ಲಿ ಸ್ನಾನ ಘಟ್ಟಗಳನ್ನು ಪರಿಶೀಲಿಸಿದ್ದಾರೆ. ನಾಳೆ ಪ್ರಯಾಗರಾಜ್‌ನಲ್ಲಿ 10ರಿಂದ 12 ಕೋಟಿ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆ ನಾವು ಟ್ರಾಫಿಕ್ ನಿರ್ವಹಣಾ ವ್ಯವಸ್ಥೆ, ಎಐ ಕ್ಯಾಮೆರಾಗಳು, ನೀರಿನ ಎಟಿಎಂಗಳು, ಸ್ವಚ್ಛ ಶೌಚಾಲಯಗಳು ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದೇವೆ. ಯಾತ್ರಿಕರು ತಮ್ಮ ವಾಹನಗಳನ್ನು ಎಲ್ಲಿ ನಿಲ್ಲಿಸಿದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಂತರ ನಿಮಗೆ ಹತ್ತಿರವಿರುವ ಘಾಟ್ ಅನ್ನು ತಲುಪಿರಿ. ಗುಂಪಿನಲ್ಲಿ ಒಟ್ಟಿಗೆ ಇರಿ ಎಂದು ಅವರು ಸಲಹೆ ನೀಡಿದ್ದಾರೆ.

ಪ್ರಯಾಗ್‌ರಾಜ್ ರೈಲಿನ ಮೇಲೆ ಕಲ್ಲು ತೂರಾಟ: ಮಹಾಕುಂಭ ಮೇಳಕ್ಕಾಗಿ ಪ್ರಯಾಗ್‌ರಾಜ್‌ಗೆ ತೆರಳಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ. ಝಾನ್ಸಿಯಿಂದ ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ವಿಶೇಷ ರೈಲಿಗೆ ಹರ್ಪಾಲ್‌ಪುರ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದ ಪ್ರಯಾಣಿಕರು ಕಂಪಾರ್ಟ್‌ಮೆಂಟ್‌ಗಳ ಬಾಗಿಲು ಲಾಕ್ ಆಗಿರುವುದನ್ನು ಕಂಡು ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ವಿಶೇಷ ರೈಲಿಗೆ ಕಲ್ಲು ಎಸೆದು ಅದರ ಗಾಜುಗಳನ್ನು ಒಡೆದು ಹಾಕಿದ್ದು, ಇದರಿಂದ ಪ್ರಯಾಣಿಕರು ಭಯದಿಂದ ಕಿರುಚುತ್ತಿರುವುದು ವಿಡಿಯೋದಲ್ಲಿದೆ.
ಈ ಘಟನೆ ನಿನ್ನೆ ರಾತ್ರಿ ರೈಲು ಝಾನ್ಸಿ ನಿಲ್ದಾಣದಿಂದ ಪ್ರಯಾಗ್‌ರಾಜ್‌ಗೆ ಹೊರಟಿದ್ದಾಗ ನಡೆದಿದೆ ಎನ್ನಲಾಗಿದೆ. ರೈಲು ಹರ್ಪಾಲ್‌ಪುರ ತಲುಪಿದ ನಂತರ ದಾಳಿಗೆ ಒಳಗಾಯಿತು. ಕೆಲವರು ರೈಲಿಗೆ ಕಲ್ಲು ಎಸೆದರು. ಮಹಿಳೆಯರು ಮತ್ತು ಮಕ್ಕಳೇ ಇದ್ದ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಕರನ್ನು ಕೊಲ್ಲಲು ಯತ್ನಿಸಿದರು ಎಂದು ಕೆಲವರು ದೂರಿದ್ದಾರೆ.
ಪ್ರಯಾಗ್‌ರಾಜ್‌ಗೆ ತೆರಳುವ ಪ್ರಯಾಣಿಕರ ಗುಂಪು ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿತ್ತು. ವಿಶೇಷ ರೈಲು ಬಂದ ಕೂಡಲೇ ಅವರು ಒಳ ಪ್ರವೇಶಿಸಲು ಯತ್ನಿಸಿದರು. ಆದರೆ, ಬಾಗಿಲು ಲಾಕ್ ಮಾಡಿರುವುದು ಕಂಡು ಉದ್ರೇಕಗೊಂಡರು. ಇದರಿಂದ ಅವರು ಕೋಲಾಹಲವನ್ನು ಸೃಷ್ಟಿಸಿದರು. ರೈಲ್ವೆ ಪೊಲೀಸರು ಶೀಘ್ರವೇ ಸ್ಥಳಕ್ಕೆ ತಲುಪಿದರು. ಜನರನ್ನು ಶಾಂತಗೊಳಿಸಿ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು ಎಂದು ವರದಿಯಾಗಿದೆ.












Click it and Unblock the Notifications