ಬಿಎಸ್‌ಪಿ, ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಇಲ್ಲ ಎಂದ ಎಸ್‌ಪಿ ಬೇರೇನು ಹೇಳುತ್ತದೆ?
ಲಕ್ನೋ, ಡಿಸೆಂಬರ್ 19: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಉತ್ತರ ಪ್ರದೇಶದಲ್ಲಿ ಚುನಾವಣಾ ತಯಾರಿಯಲ್ಲಿ ತೊಡಗಿದೆ. ಈಗಾಗಲೇ ಕೆಲವು ಸಮೀಕ್ಷೆಗಳು ನಡೆದಿದೆ. ಈ ಎಲ್ಲಾ ಸಮೀಕ್ಷೆಯಲ್ಲಿ ಮುಂದಿನ ಬಾರಿಯೂ ಬಿಜೆಪಿಯೇ ಆಡಳಿತದ ಚುಕ್ಕಾಣಿಯನ್ನು ಹಿಡಿಯಲಿದೆ ಎಂದು ತಿಳಿದು ಬಂದಿದೆ. ಆದರೆ ಈ ನಡುವೆ ಎಲ್ಲಾ ವಿರೋಧ ಪಕ್ಷಗಳು ಬಿಜೆಪಿಯಿಂದ ಆಡಳಿತವನ್ನು ಕಸಿದುಕೊಳ್ಳುವ ಎಲ್ಲಾ ತಯಾರಿಯನ್ನು ಮಾಡಿಕೊಂಡಿದೆ.
ಬಿಜೆಪಿ ಪಕ್ಷವು ಚುನಾವಣಾ ರ್‍ಯಾಲಿಗಳನ್ನು ಆರಂಭ ಮಾಡಿಕೊಂಡಿದೆ. ಈ ನಡುವೆ ಎಲ್ಲಾ ವಿರೋಧ ಪಕ್ಷಗಳು ಕೂಡಾ ಉತ್ತರ ಪ್ರದೇಶದಲ್ಲಿ ರ್‍ಯಾಲಿಗಳನ್ನು ಆರಂಭ ಮಾಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡರುಗಳಾದ ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಪ್ರಚಾರ ಕಾರ್ಯವನ್ನು ನಡೆಸಿದ್ದಾರೆ. ಈ ಮಧ್ಯೆ ಸಮಾಜವಾದಿ ಪಕ್ಷವೂ ಕೂಡಾ ತಯಾರಿಯನ್ನು ನಡೆಸುತ್ತಿದೆ.
ಈ ನಡುವೆ ಭಾನುವಾರ ಇಕಾನಮಿಕ್ ಟೈಮ್ಸ್ ಉತ್ತರ ಪ್ರದೇಶ ಘಟಕದ ಸಮಾಜವಾದಿ ಪಕ್ಷದ ಅಧ್ಯಕ್ಷ ನರೇಶ್ ಉತ್ತಮ್ ಪಟೇಲ್ ಜೊತೆ ಸಂದರ್ಶನವನ್ನು ನಡೆಸಿದೆ. ಈ ಸಂದರ್ಶನದಲ್ಲಿ ಮಾತನಾಡಿದ ನರೇಶ್ ಉತ್ತಮ್ ಪಟೇಲ್, "ಮುಂದಿನ ವಿಧಾನಸಭೆ ಚುನಾವಣೆಗೂ ಮುನ್ನವಾಗಲಿ ಅಥವಾ ನಂತರವಾಗಲಿ ಎಸ್‌ಪಿ ಪಕ್ಷವು ಬಿಎಸ್‌ಪಿ ಹಾಗೂ ಕಾಂಗ್ರೆಸ್ ಜೊತೆಗೆ ಯಾವುದೇ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ," ಎಂದು ಹೇಳಿದ್ದಾರೆ. ಈ ಎಕಾನಮಿಕ್ಸ್ ಟೈಮ್ಸ್‌ನ ಸಂದರ್ಶನದಲ್ಲಿ ಎಸ್‌ಪಿ ನಾಯಕರು ಯಾವೆಲ್ಲಾ ಮಾಹಿತಿಯನ್ನು ನೀಡಿದ್ದಾರೆ ಎಂಬ ಬಗ್ಗೆ ತಿಳಿಯಲು ಮುಂದೆ ಓದಿ..

ಉತ್ತರ ಪ್ರದೇಶದಲ್ಲಿ ಎಸ್‌ಪಿ ಎಷ್ಟು ಕ್ಷೇತ್ರದಲ್ಲಿ ಜಯ?
ಉತ್ತರ ಪ್ರದೇಶದಲ್ಲಿ ಎಸ್‌ಪಿ ಎಷ್ಟು ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂಬ ಬಗ್ಗೆಯೂ ನರೇಶ್ ಉತ್ತಮ್ ಪಟೇಲ್ ಹೇಳಿದ್ದಾರೆ. "ಬಿಜೆಪಿ ಸರ್ಕಾರದಿಂದ ಜನರು ನಿರಾಶೆಗೆ ಒಳಗಾಗಿದ್ದಾರೆ. 2012 ರಿಂದ 2017 ರ ಅವಧಿಯಲ್ಲಿ ಎಸ್‌ಪಿ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಮುಖ್ಯಮಂತ್ರಿ ಸ್ಥಾನವನ್ನು ಸರಿಯಾಗಿ ನಿಭಾಯಿಸಿದ್ದಾರೆ. ಅಸಾಧಾರಣ ಬೆಳವಣಿಗೆಯನ್ನು ಮಾಡಿದ್ದಾರೆ. ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಾಮಾಜಿಕ ಸಾಮರಸ್ಯ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಜನರು ಈಗಲೂ ಅಖಿಲೇಶ್ ಆಡಳಿತವನ್ನು ನೆನಪಿನಲ್ಲಿ ಇರಿಸಿಕೊಂಡಿದ್ದಾರೆ. ಆದ್ದರಿಂದಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾವು 403 ಕ್ಷೇತ್ರದ ಪೈಕಿ 351 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದೇವೆ," ಎಂದು ನರೇಶ್ ಉತ್ತಮ್ ಪಟೇಲ್ ಹೇಳಿದ್ದಾರೆ.

ಸಮೀಕ್ಷೆಗಳ ಬಗ್ಗೆ ಎಸ್‌ಪಿ ನಾಯಕರು ಹೇಳುವುದು ಹೀಗೆ...
ಇನ್ನು ಸಮೀಕ್ಷೆಯಲ್ಲಿ ಎಸ್‌ಪಿ 160 ಕ್ಕಿಂತ ಅಧಿಕ ಕ್ಷೇತ್ರದಲ್ಲಿ ಗೆಲುವು ಸಾಧಿಸಲಾರದು ಎಂಬುವುದು ಕಂಡು ಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್‌ಪಿ ನಾಯಕರು, "ಇದು ಬಿಜೆಪಿಗರ ಸಮೀಕ್ಷೆ" ಎಂದು ಆರೋಪಿಸಿದ್ದಾರೆ. "ಇದು ಅವರ ಸಮೀಕ್ಷೆ. ರಾಜಕೀಯದಲ್ಲಿ ನಮಗೂ ದೀರ್ಘವಾದ ಅನುಭವ ಇದೆ. ನಾವು ಎಂದಿಗೂ ಜನರ ಜೊತೆಯಲ್ಲೇ ಇರುತ್ತೇವೆ. ಇತ್ತೀಚಿಗೆ ಸುಮಾರು 65 ಜಿಲ್ಲೆಗಳಲ್ಲಿ ಕಿಸಾನ್-ನವಜವಾನ್ ಪಟೇಲ್ ಯಾತ್ರೆ ಹಾಗೂ ವಿಜಯ್ ರಥ ಯಾತ್ರೆಯಲ್ಲಿ ಜನರು ನಮ್ಮ ಮೇಲೆ ತೋರಿದ ಪ್ರೀತಿಯು ನಮಗೆ ಮುಂದಿನ ಗೆಲುವಿನ ಬಗ್ಗೆ ಖಚಿತ ಚಿತ್ರಣವನ್ನು ನೀಡಿದೆ," ಎಂದು ತಿಳಿಸಿದ್ದಾರೆ.

ಸಣ್ಣ ಪಕ್ಷಗಳೊಂದಿಗೇಕೆ ಎಸ್‌ಪಿ ಮೈತ್ರಿ?
ಎಸ್‌ಪಿ ಇತ್ತೀಚೆಗೆ ಸಣ್ಣ ಪಕ್ಷಗಳೊಂದಿಗೆ ಮೈತ್ರಿಯನ್ನು ಮಾಡಿಕೊಂಡಿದೆ. ಆದರೆ ದೊಡ್ಡ ಪಕ್ಷಗಳೊಂದಿಗೆ ಮೈತ್ರಿಯನ್ನು ಮಾಡಿಕೊಂಡಿಲ್ಲ. ಈ ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಎಸ್‌ಪಿ, "ಎಸ್‌ಪಿಯ ಅನುಭವ ಹಾಗೂ ಸಮೀಕ್ಷೆಯ ಫಲಿತಾಂಶದಿಂದ ಜನರು ಈ ದೊಡ್ಡ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಎಸ್‌ಪಿಯಿಂದ ತೃಪ್ತವಾಗಿಲ್ಲ ಎಂಬುವುದು ತಿಳಿದು ಬಂದಿದೆ. ಆದರೆ ಸಣ್ಣ ಪಕ್ಷಗಳು ಬಹಳ ಪ್ರಮಾಣಿಕವಾಗಿ ಬೆಂಬಲವನ್ನು ಸೂಚಿಸಿದೆ. ಸಮಾಜವನ್ನು ಒಗ್ಗಟ್ಟು ಮಾಡುವ ನಿಟ್ಟಿನಲ್ಲಿ ಈ ಪಕ್ಷಗಳು ಕಾರ್ಯ ನಿರ್ವಹಣೆ ಮಾಡುತ್ತದೆ. ಆದ್ದರಿಂದಾಗಿ ನಾವು ಪ್ರಭಾವಿತ ಸಣ್ಣ ಪಕ್ಷಗಳ ಜೊತೆ ಮೈತ್ರಿಯನ್ನು ಮಾಡಿಕೊಂಡಿದ್ದೇವೆ," ಎಂದು ಹೇಳಿದೆ. ಹಾಗೆಯೇ "ಬಿಎಸ್‌ಪಿ-ಕಾಂಗ್ರೆಸ್ ಜೊತೆ ಮೈತ್ರಿ ಚುನಾವಣಾ ಪೂರ್ವ ಅಥವಾ ಚುನಾವಣೇತ್ತರ ಮೈತ್ರಿಯನ್ನು ಎಸ್‌ಪಿ ಮಾಡಿಕೊಳ್ಳುವುದಿಲ್ಲ," ಎಂದು ನರೇಶ್ ಉತ್ತಮ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.

ಕೃಷಿ ಕಾಯ್ದೆ ವಾಪಾಸ್ ಪಡೆದಿರುವುದು ಎಸ್‌ಪಿ ಮೇಲೆ ಹೇಗೆ ಪ್ರಭಾವ?
"ಎಸ್‌ಪಿ ರೈತರ ಪಕ್ಷವಾಗಿದೆ. ಎಸ್‌ಪಿ ಸಂಸತ್ತು ಹಾಗೂ ವಿಧಾನಸಭೆಯಲ್ಲಿ ರೈತರ ಹಿತಾಸಕ್ತಿಯನ್ನು ಮೊದಲು ಸಂರಕ್ಷಣೆ ಮಾಡಬೇಕು ಎಂದು ಹೇಳಿದೆ. ಬಿಜೆಪಿಯು ರೈತರ ಆದಾಯವನ್ನು ದ್ವಿಗುಣ ಮಾಡುವ ಹಾಗೂ ಎಂ ಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸ್ಸನ್ನು ಜಾರಿ ಮಾಡುವ ಭರವಸೆಯನ್ನು ನೀಡಿದೆ. ಆದರೆ ಈ ಭರವಸೆಯನ್ನು ಇನ್ನೂ ಕೂಡಾ ಪೂರ್ಣ ಮಾಡಿಲ್ಲ. ರೈತರು ತಾವು ಬೆಳೆದ ಬೆಲೆಯನ್ನು ಅರ್ಧ ದರಕ್ಕೆ ಮಾರಾಟ ಮಾಡಬೇಕಾದ ಪರಿಸ್ಥಿತಿಯು ಬಂದೊದಗಿದೆ. ಪ್ರಮುಖವಾಗಿ ಈ ಕೃಷಿ ಕಾಯ್ದೆಗಳು ತಪ್ಪಾಗಿದೆ. ಒಂದು ವರ್ಷದಲ್ಲೇ ಬಿಜೆಪಿಯು ಕೋಟ್ಯಾಂತರ ರೂಪಾಯಿಯ ಆಸ್ತಿಯನ್ನು ನಾಶ ಮಾಡಿದೆ. ಹಲವಾರು ರೈತರ ಸಾವಿಗೆ ಅವರು ಕಾರಣ. ಆದರೆ ಬಿಜೆಪಿ ಎಂಎಸ್‌ಪಿ ವಿಚಾರದಲ್ಲಿ ಯಾವುದೇ ಬದ್ಧವಾಗಿಲ್ಲ. ಇದು ರೈತರ ಪರವಾದ ಪಕ್ಷವೇ?," ಎಂದು ಪ್ರಶ್ನೆ ಮಾಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)











Click it and Unblock the Notifications