ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತೀಶ್ ಕುಮಾರ್ ಬಿಜೆಪಿ ಸಖ್ಯ ತೊರೆಯಲು ಏನು ಕಾರಣ?

|
Google Oneindia Kannada News

ನಿತೀಶ್ ಕುಮಾರ್ ಬಿಹಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಆರ್‌ಜೆಡಿ-ಬಿಜೆಪಿ ಮೈತ್ರಿಕೂಟ ಸರಕಾರ ಅಂತ್ಯವಾಗಿದೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ಪಕ್ಷಗಳ ಮಧ್ಯೆ ಮೈತ್ರಿಯಾಗಿದ್ದು, ಎರಡೂ ಸೇರಿ ಸರಕಾರ ಸ್ಥಾಪಿಸುವ ಪ್ರಯತ್ನವಾಗಲಿದೆ. ನಿತೀಶ್ ಕುಮಾರ್ ಇಂದು ಮಂಗಳವಾರವೇ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಮಾಡುವ ನಿರೀಕ್ಷೆ ಇದೆ.

ಮೂಲಗಳ ಪ್ರಕಾರ, ರಾಜ್ಯಪಾಲರು ಜೆಡಿಯು-ಆರ್‌ಜೆಡಿ ಮೈತ್ರಿಗೆ ಸಮ್ಮತಿಸಿದರೆ ನಿತೀಶ್ ಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿದ್ದಾರೆ. ತೇಜಸ್ವಿ ಯಾದವ್ ಡಿಸಿಎಂ ಆಗಲಿದ್ದಾರೆ. ಸ್ಪೀಕರ್ ಸ್ಥಾನ ಆರ್‌ಜೆಡಿ ಪಕ್ಷದವರಾಗಲಿದ್ದಾರೆ. ಇನ್ನುಳಿದಂತೆ ಮಿಕ್ಕೆಲ್ಲಾ ಸಚಿವ ಸ್ಥಾನವನ್ನು ನಿತೀಶ್ ಕುಮಾರ್ ಅವರೇ ಆಯ್ಕೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ರಾಜೀನಾಮೆಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ರಾಜೀನಾಮೆ

ಜೆಡಿಯು-ಆರ್‌ಜೆಡಿ ಮೈತ್ರಿ ಸರಕಾರದಲ್ಲಿ ಬಹುತೇಕ ಬಿಜೆಪಿಯೇತರ ಪಕ್ಷಗಳೆಲ್ಲಾ ಕೈಜೋಡಿಸುವ ನಿರೀಕ್ಷೆ ಇದೆ. ಎಡ ಪಕ್ಷಗಳು ಹಾಗೂ ಕಾಂಗ್ರೆಸ್ ಪಕ್ಷ ನಿತೀಶ್ ನೇತೃತ್ವದ ಹೊಸ ಮೈತ್ರಿಕೂಟದ ಭಾಗವಾಗಲು ಆಸಕ್ತಿ ತೋರಿಸಿರುವುದು ತಿಳಿದುಬಂದಿದೆ.

ನಿತೀಶ್ ಕುಮಾರ್ ಮತ್ತು ಬಿಜೆಪಿ ಮಧ್ಯೆ ಸಂಬಂಧದಲ್ಲಿ ಒಡಕು ಬಿಟ್ಟಿದ್ದು ಇದೇ ಮೊದಲಲ್ಲ. ಹಿಂದಿನಿಂದಲೂ ಇಬ್ಬರ ಮಧ್ಯೆ ಪ್ರೀತಿ, ಕೋಪ ತಾಪ, ಮುನಿಸು ಎಲ್ಲವೂ ನಡೆದೇ ಇದೆ. ಕುತೂಹಲ ಎಂದರೆ ನಿತೀಶ್ ಕುಮಾರ್ ಈವರೆಗೆ ಏಳು ಬಾರಿ ಸಿಎಂ ಸ್ಥಾನ ಪಡೆದಿದ್ದಾರೆ. ಈಗ ಮತ್ತೊಮ್ಮೆ ಸಿಎಂ ಆದರೆ ಅದು ಎಂಟನೇ ಬಾರಿ. ಇದು ದಾಖಲೆ.

ಈಗ ಬಿರುಕು ಯಾಕೆ?

ಈಗ ಬಿರುಕು ಯಾಕೆ?

ಜೆಡಿಯು ಪಕ್ಷದ ಕೇಂದ್ರದ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದೆ. ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿಯಲ್ಲಿ 2020 ನವೆಂಬರ್‌ನಿಂದಲೂ ಸರಕಾರ ನಡೆದಿತ್ತು. ಆದರೆ, ಜೆಡಿಯು ಪಕ್ಷವನ್ನು ಬಿಜೆಪಿ ಒಡೆಯುತ್ತಿದೆ ಎಂಬುದು ನಿತೀಶ್ ಕುಮಾರ್ ಆರೋಪ.

ಜೆಡಿಯು ನಾಯಕ ಆರ್‌ಸಿಪಿ ಸಿಂಗ್ ಅವರನ್ನು ನಿತೀಶ್‌ಗೆ ಪರ್ಯಾಯ ನಾಯಕನಾಗಿ ಪೋಷಿಸಲಾಗುತ್ತಿದೆ ಎಂಬ ಆರೋಪ ಇದೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆಗೆ ಪರ್ಯಾಯವಾಗಿ ಏಕನಾಥ್ ಶಿಂಧೆಯನ್ನು ಬಿಜೆಪಿ ಬೆಳೆಸಿದ ರೀತಿಯಲ್ಲಿ ಜೆಡಿಯುನಲ್ಲಿ ಪ್ರಯೋಗ ಮಾಡುತ್ತಿದೆ ಎಂಬುದು ನಿತೀಶ್ ಆಪಾದನೆ.

"ಬೇರೆ ಪಕ್ಷಗಳಿಗೆ ಉಳಿಗಾಲ ಇಲ್ಲ. ಬಿಜೆಪಿ ಮಾತ್ರ ಇರುತ್ತದೆ" ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇತ್ತೀಚೆಗೆ ನೀಡಿದ್ದ ಹೇಳಿಕೆ ಎನ್‌ಡಿಎ ಅಂಗಪಕ್ಷಗಳನ್ನು ಕಸಿವಿಸಿಗೊಳಿಸಿದೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಪ್ರಾದೇಶಿಕ ಪಕ್ಷಗಳಿಗೆ ಉಳಿಗಾಲ ಇಲ್ಲ ಎನ್ನುವ ಭಯ ಹುಟ್ಟಿದೆ. ಈ ಕಾರಣಕ್ಕೆ ನಿತೀಶ್ ಕುಮಾರ್ ಬಿಜೆಪಿ ಸಖ್ಯ ತೊರೆಯಲು ನಿರ್ಧರಿಸಿದರು ಎಂದು ಮೂಲಗಳು ಹೇಳುತ್ತವೆ.

ಬಿಹಾರ ಸಿಎಂ ನಿತೀಶ್‌ ಕುಮಾರ್‌ ರಾಜೀನಾಮೆ; ಗಿರಿರಾಜ್‌ ಪ್ರತಿಕ್ರಿಯೆಬಿಹಾರ ಸಿಎಂ ನಿತೀಶ್‌ ಕುಮಾರ್‌ ರಾಜೀನಾಮೆ; ಗಿರಿರಾಜ್‌ ಪ್ರತಿಕ್ರಿಯೆ

ನಿತೀಶ್ ಕುಮಾರ್ ಸಿಎಂ ಆಗಿದ್ದು...

ನಿತೀಶ್ ಕುಮಾರ್ ಸಿಎಂ ಆಗಿದ್ದು...

ನಿತೀಶ್ ಕುಮಾರ್ ಒಟ್ಟು ಏಳು ಬಾರಿ ಸಿಎಂ ಆಗಿದ್ದಾರೆ. 2000ರ ವರ್ಷದಲ್ಲಿ ಮೊದಲ ಬಾರಿಗೆ ಅವರು ಬಿಹಾರ ಮುಖ್ಯಮಂತ್ರಿಯಾದರು. ಅದು ಏಳು ದಿನ ಮಾತ್ರ.

ಸಿಎಂ 1: 2000 ಮಾರ್ಚ್ 3-10
ಸಿಎಂ 2: 2005 ನವೆಂಬರ್ 24- 2010 ನವೆಂಬರ್ 24
ಸಿಎಂ 3: 2010 ನವೆಂಬರ್ 26 - 2014 ಮೇ 17
ಸಿಎಂ 4: 2015 ಫೆಬ್ರವರಿ 22 - 2015 ನವೆಂಬರ್ 19
ಸಿಎಂ 5: 2015 ನವೆಂಬರ್ 20 - 2017 ಜುಲೈ 26
ಸಿಎಂ 6: 2017 ಜುಲೈ 27 - 2020 ನವೆಂಬರ್
ಸಿಎಂ 7: 2020 ನವೆಂಬರ್ - 2022 ಆಗಸ್ಟ್ 9

ನಿತೀಶ್ ಕುಮಾರ್ ಪರಿಚಯ

ನಿತೀಶ್ ಕುಮಾರ್ ಪರಿಚಯ

ಬಿಹಾರದ ಭಕ್ತಿಯಾರ್‌ಪರ್‌ನಲ್ಲಿ 1951 ಮಾರ್ಚ್ 1ರಂದು ಹುಟ್ಟಿದ ನಿಈಶ್ ಕುಮಾರ್ ಬಿಇ ಪದವೀಧರ. ಭಾರತದ ಸಮಾಜವಾದಿ ರಾಜಕಾರಣಿಗಳಲ್ಲಿ ಅವರೂ ಒಬ್ಬರು. ಜೆಪಿ ಚಳವಳಿ ಮೂಲಕ ಬೆಳೆದು ಬಂದವರು.

ಜನತಾ ಪಕ್ಷದಲ್ಲಿದ್ದ ನಿತೀಶ್ ಕುಮಾರ್ 1984ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಚುನಾಯಿತರಾದರು. ಜನತಾ ಪಕ್ಷ ವಿಭಜನೆಯಾದಾಗ ಜನತಾ ದಳ ಸೇರಿಕೊಂಡರು. ನಂತರ ಆ ಪಕ್ಷದಿಂದ ನಿತೀಶ್ ಕುಮಾರ್, ಜಾರ್ಜ್ ಫರ್ನಾಂಡಿಸ್ ಮೊದಲಾದವರು ಸಿಡಿದು ಸಮತಾ ಪಕ್ಷ ಕಟ್ಟಿದರು. ಬಿಹಾರದ ಜನತಾ ದಳದಲ್ಲಿ ಶರದ್ ಯಾದವ್ ಮತ್ತು ರಾಮ್ ವಿಲಾಸ್ ಪಾಸ್ವಾನ್ ಮಾತ್ರವೇ ಪ್ರಮುಖ ಶಕ್ತಿಯಾದರು. ಇಬ್ಬರೂ ಕೂಡ ಬೆಳದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು.

ಆರ್‌ಜೆಡಿ ಸ್ಥಾಪನೆಯಾದ ಬಳಿಕ ಜನತಾ ದಳ ಮತ್ತು ಸಮತಾ ದಳಗಳ ಬೆಳವಣಿಗೆಗೆ ಕಷ್ಟವಾಯಿತು. 1998ರ ಲೋಕಸಭಾ ಚುನಾವಣೆಯಲ್ಲಿ ಜನತಾ ಪರಿವಾರದ ಮತಗಳು ಈ ಎರಡು ಪಕ್ಷಗಳಿಗೆ ಹಂಚಿಕೆಯಾದವು. ಇದನ್ನು ಮನಗಂಡ ನಿತೀಶ್ ಕುಮಾರ್ 1999ರಲ್ಲಿ ಎರಡೂ ಪಕ್ಷಗಳನ್ನು ವಿಲೀನಗೊಳಿಸಿ ಜೆಡಿಯು ಸ್ಥಾಪಿಸಿದರು.

ಬಿಜೆಪಿ ಜೊತೆಗಿನ ಸಂಬಂಧ

ಬಿಜೆಪಿ ಜೊತೆಗಿನ ಸಂಬಂಧ

ನಿತೀಶ್ ಕುಮಾರ್ ಸಮಾಜವಾದಿ ಹಿನ್ನೆಲೆಯ ನಾಯಕರಾಗಿದ್ದರೂ ಬಿಜೆಪಿ ಜೊತೆ ಸಂಬಂಧ ಬೆಳೆಸಲು ಮುಜುಗರ ಪಡುತ್ತಿರಲಿಲ್ಲ. ಮೊದಲ ಬಾರಿಗೆ ಸಚಿವ ಸ್ಥಾನ ಅಲಂಕರಿಸಿದ್ದು ಬಿಜೆಪಿ ನೇತೃತ್ವದ ಸರಕಾರದಲ್ಲೇ. 1998 ಮತ್ತು 1999ರಲ್ಲಿ ಅವರು ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ಎರಡು ಬಾರಿ ಕೇಂದ್ರ ಸಚಿವರಾಗಿದ್ದರು. ಅಲ್ಲಿಂದ ಅವರಿಗೆ ಬಿಜೆಪಿ ಜೊತೆಗಿನ ಸಹವಾಸ ಶುರುವಾಗಿದ್ದು. 1999ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟ ಮ್ಯಾಜಿಕ್ ಮಾಡಿತು. ಆ ಚುನಾವಣೆಯಲ್ಲಿ 324 ವಿಧಾನಸಭಾ ಕ್ಷೇತ್ರಗಳ ಪೈಕಿ ಈ ಮೈತ್ರಿಕೂಟ 199 ಕ್ಷೇತ್ರಗಳಲ್ಲಿ ಹೆಚ್ಚು ಮತಗಳನ್ನು ಪಡೆದು ಹೊಸ ಸಂಚಲವನ್ನೇ ಮೂಡಿಸಿತು. ಆಗ ಬಿಹಾರದಲ್ಲಿ ಅಧಿಕಾರದಲ್ಲಿದ್ದದ್ದು ಲಾಲೂ ಪತ್ನಿ ರಾಬ್ರಿ ದೇವಿ ನೇತೃತ್ವದ ಆರ್‌ಜೆಡಿ ಸರಕಾರವೇ.

2000ರಲ್ಲಿ ಬಿಹಾರದಲ್ಲಿ ಅತಂತ್ರ ವಿಧಾನಸಭೆ ಇತ್ತು. ಕೇಂದ್ರದಲ್ಲಿ ಎನ್‌ಡಿಎ ಅಧಿಕಾರದಲ್ಲಿದ್ದರಿಂದ ಬಿಹಾರದಲ್ಲಿ ಮೊದಲು ಸರಕಾರ ರಚಿಸುವ ಯೋಗ ಜೆಡಿಯು-ಬಿಜೆಪಿ ಮೈತ್ರಿಕೂಟಕ್ಕೆ ಸಿಕ್ಕಿತು. ನಿತೀಶ್ ಕುಮಾರ್ ಸಿಎಂ ಆದರು. ಅದರೆ, ಬಹುಮತ ಸಾಬೀತು ಮಾಡಲಾಗಲಿಲ್ಲ.

2005ರಲ್ಲಿ ಎರಡು ಬಾರಿ ವಿಧಾನಸಭೆ ಚುನಾವಣೆಗಳು ನಡೆದವು. ಮೊದಲ ಚುನಾವಣೆಯಲ್ಲಿ ಅತಂತ್ರ ವಿಧಾನಸಭೇ ನಿರ್ಮಾಣವಾಯಿತು. ಏಳೆಂಟು ತಿಂಗಳ ಬಳಿಕ ನಡೆದ ಎರಡನೇ ಚುನಾವಣೆಯಲ್ಲಿ ಜೆಡಿಯು ಅತಿ ಹೆಚ್ಚು ಸ್ಥಾನಗಳನ್ನು ಜಯಿಸಿತು. ಆಗ ಜೆಡಿಯು ಮತ್ತು ಬಿಜೆಪಿ ಸೇರಿ ಸರಕಾರ ರಚಿಸಿದವು. ನಿತೀಶ್ ಕುಮಾರ್ ಮುಖ್ಯಮಂತ್ರಿಯಾದರು.

ಮೋದಿ ಪ್ರವೇಶದ ಬಳಿಕ

ಮೋದಿ ಪ್ರವೇಶದ ಬಳಿಕ

2010ರ ಚುನಾವಣೆಯಲ್ಲೂ ಎನ್‌ಡಿಎ ಮೈತ್ರಿಕೂಟವೇ ಜಯಿಸಿದ್ದು. ಬಹುತೇಕ ಕ್ಲೀನ್ ಸ್ವೀಪ್ ಮಾಡಿತ್ತು. ಆದರೆ, 2014ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಎನ್‌ಡಿಎ ಕಳಪೆ ಪ್ರದರ್ಶನ ತೋರಿತು. 20 ಕ್ಷೇತ್ರಗಳ ಪೈಕಿ ಎರಡಷ್ಟೇ ಸಿಕ್ಕಿದ್ದು. ಇದರ ನೈತಿಕ ಹೊಣೆ ಹೊತ್ತು ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಆದರೆ ಆ ಸಂದರ್ಭದಲ್ಲಿ ಮತ್ತೊಂದು ಗಮನಾರ್ಹ ಬೆಳವಣಿಗೆಯಾಗಿತ್ತು. 2014ರ ಲೋಕಸಭಾ ಚುನಾವಣೆಗೆ ನರೇಂದ್ರ ಮೋದಿ ಅವರನ್ನು ಪಿಎಂ ಮುಖವಾಗಿ ಬಿಂಬಿಸಲಾಗಿತ್ತು. ಅದು ನಿತೀಶ್ ಕುಮಾರ್‌ಗೆ ಪಥ್ಯವೆನಿಸಲಿಲ್ಲ. ಅದನ್ನು ಬಲವಾಗಿ ವಿರೋಧಿಸಿದ್ದರು. 2014ರ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ ಸಿಕ್ಕಿತು. ಮೋದಿ ಪ್ರಧಾನಿಯಾದರು. ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಇದು ಕಾರಣ ಎಂದೂ ಹೇಳಲಾಗುತ್ತದೆ. ಆಗಿನಿಂದಲೂ ಬಿಜೆಪಿ ಜೊತೆ ನಿತೀಶ್ ಕುಮಾರ್ ಸಖ್ಯ ಅಷ್ಟಕಷ್ಟಕ್ಕೆ ಎಂಬಂತಿದೆ.

ನಿತೀಶ್ ಕುಮಾರ್ ನಂತರ ಎನ್‌ಡಿಎ ಸಖ್ಯ ತೊರೆದು ತಮ್ಮ ಕಡು ಎದುರಾಳಿ ಜೆಡಿಯು ಮತ್ತು ಕಾಂಗ್ರೆಸ್ ಜೊತೆ ಸೇರಿ ಮಹಾಘಟಬಂಧನ್ ಮೈತ್ರಿಕೂಟ ರಚಿಸಿದರು. ಮೈತ್ರಿಕೂಟಕ್ಕೆ ಭರ್ಜರಿ ಜಯ ಸಿಕ್ಕಿತು. ಮೈತ್ರಿಕೂಟದಲ್ಲಿ ಆರ್‌ಜೆಡಿ ಹೆಚ್ಚು ಸ್ಥಾನ ಗಳಿಸಿತು. ಜೆಡಿಯುಗೆ 9 ಸ್ಥಾನ ಕಡಿಮೆ ಬಂದಿತು. ನಿತೀಶ್ ಕುಮಾರ್ ಸಿಎಂ ಆದರೆ ತೇಜಸ್ವಿ ಯಾದವ್ ಡಿಸಿಎಂ ಆದರು.

ತೇಜಸ್ವಿ ಯಾದವ್ ಬ್ರೇಕಪ್

ತೇಜಸ್ವಿ ಯಾದವ್ ಬ್ರೇಕಪ್

ಅಂದಿನ ಮೈತ್ರಿ ಸರಕಾರದಲ್ಲಿ ಡಿಸಿಎಂ ಆಗಿದ್ದ ತೇಜಸ್ವಿ ಯಾದವ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿತು. ರಾಜೀನಾಮೆ ನೀಡುವಂತೆ ನಿತೀಶ್ ಕೇಳಿದರು. ಆದರೆ, ಯಾದವ್ ಇದಕ್ಕೆ ಒಪ್ಪಲಿಲ್ಲ. ಅಗ ಆರ್‌ಜೆಡಿ ಜೊತೆಗಿನ ಮೈತ್ರಿ ಕಡಿದುಕೊಂಡ ನಿತೀಶ್ ಕುಮಾರ್ ಅದೇ ದಿನ ಎನ್‌ಡಿಎ ಸೇರಿ ಸರಕಾರ ರಚಿಸಿದರು.

2020ರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಸರಳ ಬಹುಮತ ಸಿಕ್ಕಿತು. ನಿತೀಶ್ ಕುಮಾರ್ ಮತ್ತೆ ಸಿಎಂ ಆದರು. ಕಳೆದ 20 ವರ್ಷದಲ್ಲಿ ಅವರು ಸಿಎಂ ಆಗಿದ್ದು ಅದು ಏಳನೇ ಬಾರಿ. ಈಗ ಆರ್‌ಜೆಡಿ ಜೊತೆ ಎರಡನೇ ಬಾರಿ ಸಖ್ಯ ಮಾಡಿಕೊಂಡಿರುವ ನಿತೀಶ್ ಕುಮಾರ್ ಎಂಟನೇ ಬಾರಿ ಮುಖ್ಯಮಂತ್ರಿ ಆಗಲಿದ್ದಾರೆ. ಕಳೆದ 15 ವರ್ಷಗಳಿಂದ ಬಿಹಾರದಲ್ಲಿ ಆಡಳಿತ ನಡೆಸುತ್ತಾ ಬಂದಿರುವ ನಿತೀಶ್ ಕುಮಾರ್ ಎನ್‌ಡಿಎ ತೊರೆಯುವುದರ ಹಿಂದೆ ಬೇರೇನೋ ಮಹಾ ಪ್ಲಾನ್ ಇರಬಹುದು ಎಂದನಿಸಿದರೆ ಅಚ್ಚರಿ ಇಲ್ಲ.

ಎನ್‌ಡಿಎ ಮೈತ್ರಿಕೂಟದಲ್ಲಿದ್ದರೂ ಕೆಲವಾರು ವಿಚಾರಗಳಲ್ಲಿ ಅವರು ಅಭಿಪ್ರಾಯಭೇದ ತೋರಿದ್ದಾರೆ. ನಿತೀಶ್ ಕುಮಾರ್ ಉದ್ದೇಶಪೂರ್ವಕವಾಗಿ ಎನ್‌ಡಿಎ ಜೊತೆ ಅಂತರ ಕಾಯ್ದುಕೊಳ್ಳುತ್ತಾ ಬಂದಿದ್ದರೆನ್ನಲಾಗಿದೆ. ರಾಷ್ಟ್ರಾದ್ಯಂತ ಬಿಜೆಪಿಯೇತರ ಮೈತ್ರಿಕೂಟ ರೂಪುಗೊಂಡು ಬಹುಮತ ಪಡೆದಲ್ಲಿ ಪಿಎಂ ಸ್ಥಾನಕ್ಕೆ ಸ್ಪರ್ಧಿಸುವ ಕೆಲವೇ ಅಭ್ಯರ್ಥಿಗಳಲ್ಲಿ ನಿತೀಶ್ ಒಬ್ಬರಾಗಬಹುದು. ಆ ಸ್ಥಾನಕ್ಕೆ ಈಗಾಗಲೇ ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಶರದ್ ಪವಾರ್ ಕಣ್ಣು ನೆಟ್ಟಿದೆ. ಬಹಳ ಆಡಳಿತ ಅನುಭವ ಇರುವ ನಿತೀಶ್ ಕುಮಾರ್‌ಗೆ ಪಿಎಂ ಪಟ್ಟ ಒಲಿದರೂ ಒಲಿಯಬಹುದು.

(ಒನ್ಇಂಡಿಯಾ ಸುದ್ದಿ)

English summary
Nitish Kumar is about to become Chief Minister of Bihar for record 8th time. He has previously tried alliance with BJP and RJD as well, and remained in power for 15 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X