
ಸುಲಭ ಮಾರ್ಗ: ಬಾಯಿ ಮುಕ್ಕಳಿಸಿದ ನೀರಿನಿಂದ ಕೊರೊನಾವೈರಸ್ ಪರೀಕ್ಷೆ!?
ನವದೆಹಲಿ, ಮೇ 29: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಲೆಗಳ ಆಟ ಹೆಚ್ಚುತ್ತಿದೆ. ಒಂದಾಯ್ತು. ಎರಡಾಯ್ತು. ಮೂರನೇ ಅಲೆಯ ಭೀತಿಯನ್ನು ಇಡೀ ದೇಶ ಎದುರಿಸುತ್ತಿದ್ದು, ಕೊವಿಡ್-19 ಪರೀಕ್ಷೆ ವೇಗವನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ದೇಶದಲ್ಲಿ ಪ್ರಸ್ತುತ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಮತ್ತು RT-PCR ವಿಧಾನದ ಮೂಲಕ ಕೊರೊನಾವೈರಸ್ ಸೋಂಕಿತ ಪರೀಕ್ಷೆ ನಡೆಸಲಾಗುತ್ತಿದೆ. ಮಹಾರಾಷ್ಟ್ರ ನಾಗ್ಪುರ್ ಮೂಲದ ರಾಷ್ಟ್ರೀಯ ಪರಿಸರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಹೊಸ ಬಗೆಯ RT-PCR ಪರೀಕ್ಷೆ ನಡೆಸುವ ವಿಧಾನವನ್ನು ಕಂಡು ಹಿಡಿದಿದೆ. ಈ ವಿಧಾನದಲ್ಲಿ ಕೊವಿಡ್-19 ಪರೀಕ್ಷೆ ಮಾಡಿಸಿಕೊಂಡ ವ್ಯಕ್ತಿಗೆ ಯಾವುದೇ ರೀತಿ ಕಿರಿಕಿರಿ ಹಾಗೂ ನೋವು ಆಗುವುದಿಲ್ಲ ಎಂದು ಸಂಶೋಧಕರು ಹೇಳುತ್ತಿದ್ದಾರೆ.
Explained: ಭಾರತದಲ್ಲಿ ಮಕ್ಕಳಿಗೆ Covid-19 ಅಲ್ಲ MIS-C ಭಯ!
ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವ ವಿಧಾನದ ಮೂಲಕ ಕೊರೊನಾವೈರಸ್ ಸೋಂಕು ಪತ್ತೆಗೆ RT-PCR ಪರೀಕ್ಷೆ ನಡೆಸುವ ಹೊಸ ವಿಧಾನವನ್ನು ಪರಿಚಯಿಸಲಾಗಿದೆ. ಬಾಯಿ ಮುಕ್ಕಳಿಸುವ ವಿಧಾನ ಹೇಗೆ ಕೆಲಸ ಮಾಡುತ್ತೆ, ಸಾಮಾನ್ಯ RT-PCR ಪರೀಕ್ಷೆಗಿಂತ ಇದು ಹೇಗೆ ವಿಭಿನ್ನವಾಗಿದೆ. ಈ ಪರೀಕ್ಷೆಯು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಹಾಗೂ ವಿಶ್ವಾಸಾರ್ಹವಾಗಿದೆ ಎನ್ನುವುದರ ಕುರಿತು ಒಂದು ವಿಶೇಷ ವರದಿಯನ್ನು ಮುಂದೆ ಓದಿ.

RT-PCR ಪರೀಕ್ಷೆಗೆ ಬಾಯಿ ಮುಕ್ಕಳಿಸುವ ವಿಧಾನ ಹೇಗಿದೆ?
ಉಪ್ಪು ನೀರನ್ನು ಬಾಯಲ್ಲಿ ತುಂಬಿಕೊಂಡು 15 ನಿಮಿಷ ಬಾಯಿ ಮುಕ್ಕಳಿಸಿದ ನಂತರದ ಅದನ್ನು RT-PCR ಪರೀಕ್ಷಾ ಟ್ಯೂಬ್ ನಲ್ಲಿ ಹಾಕುವುದು. 15 ನಿಮಿಷಗಳ ನಂತರ ಬಾಯಿ ತೊಳೆದುಕೊಳ್ಳುವ ದ್ರವ್ಯದಿಂದ ಬಾಯಿ ಮುಕ್ಕಳಿಸಿ ಅದನ್ನೂ ಕೂಡ ಟ್ಯೂಬ್ ನಲ್ಲಿ ಉಗಿಯುವುದು. ಹೀಗೆ ಬಾಯಿ ಮುಕ್ಕಳಿಸಿದ ನೀರನ್ನು ಉಗುಳಿರುವ ಟ್ಯೂಬ್ ಅನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ ಕೊಡಲಾಗುತ್ತದೆ. ಈ ದ್ರವ್ಯದಿಂದ ನಿಮಗೆ ಕೊರೊನಾವೈರಸ್ ಸೋಂಕು ತಗುಲಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ದೃಢಪಡಿಸಲಾಗುತ್ತದೆ.

ಕೊರೊನಾವೈರಸ್ ಪರೀಕ್ಷೆಗೆ ಈ ವಿಧಾನ ಬಲು ಸುಲಭ
ದೇಶದಲ್ಲಿ ಕೊರೊನಾವೈರಸ್ ಪರೀಕ್ಷೆಗೆ ಬಾಯಿ ಮುಕ್ಕಳಿಸುವ ವಿಧಾನವು ಬಹಳಷ್ಟು ಆಕರ್ಷಣೀಯ ಎನ್ನುವುದಕ್ಕೆ ಸಾಕಷ್ಟು ಕಾರಣಗಳಿವೆ. ಈ ವಿಧಾನವು ಅತ್ಯಂತ ಸುಲಭ, ವೇಗ, ಪರಿಣಾಮಕಾರಿ ಹಾಗೂ ಜನಸ್ನೇಹಿ ಆಗಿರುತ್ತದೆ. ಗ್ರಾಮೀಣ ಮತ್ತು ಬುಡಕಟ್ಟು ಜನಾಂಗಗಳನ್ನು ಹೆಚ್ಚಾಗಿ ಹೊಂದಿರುವ ಪ್ರದೇಶಗಳಲ್ಲಿ ಲಭ್ಯವಿರುವ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ಕೊವಿಡ್-19 ಪರೀಕ್ಷೆ ಮಾಡುವುದುಕ್ಕೆ ಈ ವಿಧಾನವು ಸಹಕಾರಿ ಆಗಿರುತ್ತದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಮಾಧ್ಯಮಗಳಲ್ಲಿ ತಿಳಿಸಿದೆ.
ಎಚ್ಚರಿಕೆ: ನಾಲಗೆ ತುರಿಕೆ, ಬಾಯಿ ಒಣಗುವಿಕೆ ಕೂಡಾ ಕೊರೊನಾ ಲಕ್ಷಣ!

ಬಾಯಿ ಮುಕ್ಕಳಿಸುವ ವಿಧಾನದಿಂದ 3 ಗಂಟೆಯಲ್ಲಿ ವರದಿ
ಕೊರೊನಾವೈರಸ್ ಸೋಂಕು ಪರೀಕ್ಷೆಗಾಗಿ ಸ್ವಾಬ್ ಸಂಗ್ರಹಿಸುವುದು ದೀರ್ಘಾವಧಿಯ ಪ್ರಕ್ರಿಯೆ ಆಗಿರುತ್ತದೆ. ಅಲ್ಲದೇ, ಕೆಲವು ಬಾರಿ ಜನರು ಕೊವಿಡ್-19 ಪರೀಕ್ಷೆಯಿಂದ ಕಿರಿಕಿರಿ ಆಗುವ ಹಿನ್ನೆಲೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಾರೆ, ಅಸಮಾಧಾನ ವ್ಯಕ್ತಪಡಿಸುತ್ತಾರೆ. ಆದರೆ ಬಾಯಿ ಮುಕ್ಕಳಿಸುವ ಮೂಲಕ RT-PCR ಪರೀಕ್ಷೆ ಮಾಡುವ ವಿಧಾನವು ಸಹಜ ಮತ್ತು ಸಾರ್ವಜನಿಕರಿಗೆ ಸುಲಭ ಹಾಗೂ ಸಮಾಧಾನಕರ ಪ್ರಕ್ರಿಯೆಯಂತೆ ಗೋಚರಿಸುತ್ತದೆ. ಮೂರು ಗಂಟೆಗಳಲ್ಲಿ ಈ ಪರೀಕ್ಷೆ ವರದಿ ಹೊರಬೀಳಲಿದ್ದು, ಇದರಿಂದ RT-PCR ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಾಗೂ ಹಿರಿಯ ವಿಜ್ಞಾನಿ ಡಾ ಕೃಷ್ಣಾ ಖಿರ್ನಾರ್ ತಿಳಿಸಿದ್ದಾರೆ.

ಕೊರೊನಾ ಪರೀಕ್ಷೆಗೆ ದುಬಾರಿ ಉಪಕರಣಗಳ ಅಗತ್ಯವಿಲ್ಲ
ಬಾಯಿ ಮುಕ್ಕಳಿಸಿದ ಮಾದರಿಯನ್ನು ಸಂಗ್ರಹಿಸಿದ ನಂತರ ಅದನ್ನು ವೈದ್ಯಕೀಯ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗುತ್ತದೆ. ರಾಷ್ಟ್ರೀಯ ಪರಿಸರ ತಾಂತ್ರಿಕ ಸಂಶೋಧನಾ ಸಂಸ್ಥೆಯು ರಚಿಸಿರುವ ವಿಶೇಷ ಕೊಠಡಿಯಲ್ಲಿ ಈ ಮಾದರಿಯನ್ನು ಸಂಗ್ರಹಿಸಿ ಇಡಲಾಗುತ್ತದೆ. ಈ ತಾಪಮಾನದಲ್ಲಿ ಆರ್ಎನ್ಎ ಪ್ರಮಾಣವನ್ನು ಹೊರತೆಗೆಯುವಿಕೆ ಪ್ರಕ್ರಿಯೆ ಆರಂಭವಾಗುತ್ತಿದೆ. ಯಾವುದೇ ದುಬಾರಿ ಉಪಕರಣಗಳ ಸಹಾಯವಿಲ್ಲದೇ, RT-PCR ಪರೀಕ್ಷೆಯು ಯಶಸ್ವಿಯಾಗುತ್ತದೆ. ಈ ರೀತಿ ಮಾದರಿ ಸಂಗ್ರಹಣೆಯನ್ನು ಸಾರ್ವಜನಿಕರು ತಾವೇ ಸ್ವಯಂಪ್ರೇರಿತರಾಗಿ ಮಾಡಿಕೊಂಡು ಅದನ ಮಾದರಿಯನ್ನು ಪ್ರಯೋಗಾಲಯಕ್ಕೆ ನೀಡುವುದಕ್ಕೂ ಅವಕಾಶವಿರುತ್ತದೆ ಎಂದು ಡಾ. ಕೃಷ್ಣಾ ಖಿರ್ನಾರ್ ಹೇಳಿದ್ದಾರೆ.

ಬಾಯಿ ಮುಕ್ಕಳಿಸುವ ವಿಧಾನಕ್ಕೆ ಅನುಮೋದನೆ ನಿರೀಕ್ಷೆ
ರಾಷ್ಟ್ರೀಯ ಪರಿಸರ ತಾಂತ್ರಿಕ ಸಂಶೋಧನಾ ಸಂಸ್ಥೆಯು ವೈಜ್ಞಾನಿಕ ತಂತ್ರಜ್ಞರು ಆವಿಷ್ಕಾರಗೊಳಿಸಿರುವ ಬಾಯಿ ಮುಕ್ಕಳಿಸುವ RT-PCR ಪರೀಕ್ಷೆ ವಿಧಾನವು ಹೆಚ್ಚಾಗಿ ವೈದ್ಯಕೀಯ ಮೂಲಸೌಕರ್ಯಗಳು ಇಲ್ಲದ ಗ್ರಾಮೀಣ ಮತ್ತು ಬುಡಕಟ್ಟು ಜನಾಂಗದ ಪ್ರದೇಶಗಳಲ್ಲಿ ಹೆಚ್ಚು ಉಪಯುಕ್ತವಾಗಲಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯು ರಾಷ್ಟ್ರೀಯ ಪರಿಸರ ತಾಂತ್ರಿಕ ಸಂಶೋಧನಾ ಸಂಸ್ಥೆಯ ಬಾಯಿ ಮುಕ್ಕಳಿಸುವ ಮೂಲಕ RT-PCR ಪರೀಕ್ಷೆ ನಡೆಸುವುದಕ್ಕೆ ಅನುಮೋದನೆ ನೀಡಬೇಕಿದೆ. ಐಸಿಎಂಆರ್ ಅನುಮೋದನೆ ನಂತರವಷ್ಟೇ ಈ ವಿಧಾನವನ್ನು ರಾಷ್ಟ್ರದಾದ್ಯಂತ ಅಳವಡಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
ಸಖತ್ ಸುದ್ದಿ: ಭಾರತದಲ್ಲಿ ಕೊರೊನಾವೈರಸ್ ನಿವಾರಣೆಗೆ UV-C ಬೆಳಕಿನ ಕಿರಣ!

20 ಲಕ್ಷ ಜನರಿಗೆ ಕೊರೊನಾವೈರಸ್ ಸೋಂಕು ತಪಾಸಣೆ
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪತ್ತೆಗೆ ತಪಾಸಣೆ ವೇಗವನ್ನು ಹೆಚ್ಚಿಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 20,70,508 ಜನರ ಮಾದರಿಯನ್ನು ತಪಾಸಣೆಗೊಳಪಡಿಸಲಾಗಿದೆ. ದೇಶದಲ್ಲಿ ಈವರೆಗೂ 33,90,39,861 ಜನರಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.

ಭಾರತದಲ್ಲಿ ಕೊರೊನಾ ಪ್ರಕರಣ ಮತ್ತು ಸಾವಿನ ಸಂಖ್ಯೆ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1,86,364 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 2,59,459 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾವೈರಸ್ ಸೋಂಕಿನಿಂದ 3,660 ಮಂದಿ ಪ್ರಾಣ ಬಿಟ್ಟಿದ್ದಾರೆ. ದೇಶದಲ್ಲಿ ಒಟ್ಟು 2,75,55,457 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,48,93,410 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 3,18,895 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 23,43,152 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.