ಹೊಸವರ್ಷಕ್ಕೆ ಮೈಸೂರಿನತ್ತ ಪ್ರವಾಸಿಗರ ದೌಡು: ಭರ್ತಿಯಾದ ಹೋಟೆಲ್‌ಗಳು
ಮೈಸೂರು, ಡಿಸೆಂಬರ್ 25: ವರ್ಷಾಂತ್ಯಕ್ಕೆ ಬಂದು ನಿಂತಿದ್ದೇವೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ 2024ಕ್ಕ ವಿದಾಯ ಹೇಳಿ 2025ನ್ನು ಸ್ವಾಗತಿಸಲು ನಾವೆಲ್ಲರೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಕೆಲವರು ಇದ್ದಲ್ಲೇ ಹೊಸವರ್ಷಾಚರಣೆ ಮಾಡಿದರೆ ಮತ್ತೆ ಕೆಲವರು ದೂರದ ಊರುಗಳಿಗೆ ಪ್ರವಾಸ ತೆರಳಿ ವರ್ಷಾಚರಣೆ ಮಾಡುತ್ತಾರೆ. ಇತ್ತೀಚೆಗಿನ ವರ್ಷಗಳಲ್ಲಿ ಪ್ರವಾಸ ತೆರಳುವವರ ಸಂಖ್ಯೆ ಹೆಚ್ಚಾಗಿದ್ದು, ಅದರಲ್ಲೂ ಅರಮನೆ ನಗರಿ ಮೈಸೂರಿಗೆ ಆಗಮಿಸುವರ ಸಂಖ್ಯೆ ದೊಡ್ಡಮಟ್ಟದಲ್ಲಿದೆ.
ಈಗಾಗಲೇ ಹೊಸವರ್ಷಾಚರಣೆಗೆ ಮೈಸೂರಿಗೆ ಟ್ರಿಪ್ ಬರಲು ಸಿದ್ಧತೆ ಮಾಡಿಕೊಂಡು ಹೋಟೆಲ್, ಲಾಡ್ಜ್ ಗಳಲ್ಲಿ ಕೊಠಡಿಗಳನ್ನು ಮುಂಗಡ ಬುಕಿಂಗ್ ಮಾಡಿಕೊಂಡವರನ್ನು ಹೊರತು ಪಡಿಸಿ ಕೊನೆಗಳಿಗೆಯಲ್ಲಿ ಆಲೋಚನೆ ಮಾಡಿದವರು ಮೈಸೂರಿಗೆ ಆಗಮಿಸುವ ಮುನ್ನ ಎಚ್ಚರಿಕೆ ವಹಿಸುವುದು ಒಳಿತು. ಏಕೆಂದರೆ ಯಾವುದೇ ಸಿದ್ಧತೆಗಳನ್ನು ಮಾಡಿಕೊಳ್ಳದೆ ನೇರವಾಗಿ ಬಂದರೆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅದರಲ್ಲೂ ಮೈಸೂರಿನಲ್ಲಿ ಒಂದೆರಡು ದಿನಗಳ ಕಾಲ ಕಳೆದು ಹೋಗಬೇಕೆಂದು ಬಯಸುವವರು ಹೋಟೆಲ್ ಗಳಲ್ಲಿ ಕೊಠಡಿಗಳು ಖಾಲಿ ಇದೆಯಾ ಎಂಬುದನ್ನು ಪರಿಶೀಲಿಸುವುದು ಒಳ್ಳೆಯದು.

ಏಕೆಂದರೆ ಈಗಾಗಲೇ ಮೈಸೂರಿಗೆ ಪ್ರವಾಸಿಗರ ದಂಡು ಹರಿದು ಬಂದಿದ್ದು, ಬಹುತೇಕರು ವಾಸ್ತವ್ಯ ಹೂಡಿದ್ದಾರೆ. ಜತೆಗೆ ಮೊದಲೇ ಹೋಟೆಲ್ ಗಳ ಕೊಠಡಿಯನ್ನು ಮುಂಗಡ ಬುಕಿಂಗ್ ಮಾಡಿದ್ದಾರೆ. ಹೀಗಾಗಿ ಮೈಸೂರು ನಗರದಲ್ಲಿರುವ 425 ಹೋಟೆಲ್ ಗಳ 10500 ಕೊಠಡಿಗಳು ಡಿಸೆಂಬರ್ 22ಕ್ಕೆ ಶೇ.100ರಷ್ಟು ಭರ್ತಿಯಾಗಿವೆ. ಅಲ್ಲದೆ ಜನವರಿ 1ರ ತನಕವೂ ಭರ್ತಿಯಾಗಿರಲಿವೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಅವರು ಮಾಹಿತಿ ನೀಡಿದ್ದಾರೆ.
ಎಲ್ಲೆಡೆ ತುಂಬಿ ತುಳುಕುತ್ತಿರುವ ಪ್ರವಾಸಿಗರು
ಈಗಾಗಲೇ ವಾರಾಂತ್ಯ ರಜೆ ಸೇರಿದಂತೆ ಕ್ರಿಸ್ ಮಸ್ ಹಬ್ಬದ ಕಾರಣದಿಂದಾಗಿ ಪ್ರವಾಸಿಗರು ಮೈಸೂರು ಕಡೆಗೆ ಮುಖ ಮಾಡಿದ್ದಾರೆ. ಹೀಗೆ ಬರುವ ಪ್ರವಾಸಿಗರು ಮೈಸೂರು ನಗರವನ್ನು ಕೇಂದ್ರವನ್ನಾಗಿರಿಸಿಕೊಂಡು ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಸದ್ಯ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಸಂಜೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅತ್ತ ದಸರಾ ವಸ್ತುಪ್ರದರ್ಶನ ಜನವರಿ 1ರವರೆಗೂ ಇರಲಿದ್ದು, ಪ್ರವಾಸಿಗರು ರಾತ್ರಿ ವೇಳೆ ವಸ್ತುಪ್ರದರ್ಶನ, ಫಲಫುಷ್ಪಪ್ರದರ್ಶನ ಹೀಗೆ ಖುಷಿಯಾಗಿ ಅಡ್ಡಾಡುತ್ತಿದ್ದಾರೆ. ಇನ್ನು ಚಾಮುಂಡಿಬೆಟ್ಟ, ಮೃಗಾಲಯ, ಕಾರಂಜಿಕೆರೆ, ಸಂತಫಿಲೋಮಿನಾ ಚರ್ಚ್ ಸೇರಿದಂತೆ ಹಲವೆಡೆ ಪ್ರವಾಸಿಗರು ತುಂಬಿ ತುಳುಕುತ್ತಿದ್ದಾರೆ. ಶೈಕ್ಷಣಿಕ ಪ್ರವಾಸ, ಫ್ಯಾಮಿಲಿ ಟ್ರಿಪ್ ಹೀಗೆ ರಾಜ್ಯ ಮಾತ್ರವಲ್ಲದೆ, ಕೇರಳ, ತಮಿಳುನಾಡು ಕಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಲಿದ್ದು, ವರ್ಷಾಂತ್ಯಕ್ಕೆ ಪ್ರವಾಸಿಗರ ದಂಡೇ ಸಮಾವೇಶಗೊಳ್ಳಲಿದೆ.

ಮೈಸೂರು ನಗರ ಮಾತ್ರವಲ್ಲದೆ ಹೊರ ವಲಯದಲ್ಲಿರುವ ಪ್ರವಾಸಿ ತಾಣಗಳಾದ ಸೋಮನಾಥ ದೇವಾಲಯ, ಟಿಬೇಟಿಯನ್ ಕ್ಯಾಂಪ್, ತಲಕಾಡು, ನಂಜನಗೂಡು ಶ್ರೀಕಂಠೇಶ್ವರ ದೇಗುಲ, ನಾಗರಹೊಳೆ ಅಭಯಾರಣ್ಯ, ಕೆಆರ್ಎಸ್ ಸೇರಿದಂತೆ ಹೆಚ್ಚಿನ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಕಂಡು ಬರುತ್ತಿದೆ. ದಸರಾ ನಂತರ ಹೊಸವರ್ಷಾಚರಣೆಗೆ ಪ್ರವಾಸಿಗರು ಬರುವುದರಿಂದ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿದೆ.
ಡಿ.31ರವರೆಗೆ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನದ ಮುಂದುವರೆಯಲಿದ್ದು, ಡಿ.31ರಂದು ರಾತ್ರಿ 11ರಿಂದ 12ರವರೆಗೆ ಪೊಲೀಸ್ ಇಲಾಖೆ ವತಿಯಿಂದ ಕರ್ನಾಟಕ ಮತ್ತು ಆಂಗ್ಲ ಬ್ಯಾಂಡ್ ಕಾರ್ಯಕ್ರಮ ನಡೆಯಲಿದೆ. ಇದಾದ ನಂತರ ರಾತ್ರಿ 12ರಿಂದ 12.15ರ ವರೆಗೆ ಅರಮನೆ ಮಂಡಳಿ ವತಿಯಿಂದ ಶಬ್ದರಹಿತ ಹಸಿರು ಪಟಾಕಿ ಸಿಡಿಸುವ ಮೂಲಕ ಹೊಸ ವರ್ಷದ ಸಂಭ್ರಮಾಚರಣೆ ನಡೆಸಲಾಗುತ್ತದೆ.
ವಿದ್ಯುತ್ ದೀಪಾಲಂಕಾರದ ರಂಗು
ಅರಮನೆಯ ಸೊಬಗನ್ನು ಮತ್ತಷ್ಟು ಹೆಚ್ಚಿಸಲು ಅರಮನೆಯ ವಿದ್ಯುತ್ ದೀಪಾಲಂಕಾರವನ್ನು ಸಂಜೆ 7ರಿಂದ 9 ರವರೆಗೆ ವಿಸ್ತರಣೆ ಮಾಡಲಾಗುತ್ತದೆ. ನಗರದ ಪ್ರಸಿದ್ಧ ಹೋಟೆಲ್ ಗಳಲ್ಲಿ ಈಗಾಗಲೇ ಹೊಸ ವರ್ಷಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ವರ್ಷಾಂತ್ಯದ ದಿನಗಳಾಗಿರುವುದರಿಂದ ನಗರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ.
ಮೈಸೂರು-ಬೆಂಗಳೂರು ರಸ್ತೆ, ಮೈಸೂರು-ಕೊಡಗು ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಹಾಗೂ ಅರಮನೆ ಸುತ್ತಲಿನ ರಾಜಮಾರ್ಗ ವಾಹನ ದಟ್ಟಣೆ ಕಂಡು ಬರುತ್ತಿದೆ. ಒಟ್ಟಾರೆ ಹೊಸವರ್ಷಕ್ಕೆ ಮೈಸೂರು ತೆರೆದುಕೊಳ್ಳುತ್ತಿರುವುದು ಎದ್ದು ಕಾಣಿಸುತ್ತಿದೆ. ಸಂಭ್ರಮ ಸಡಗರ ಈಗಿನಿಂದಲೇ ಶುರುವಾಗಿರುವುದು ಗಮನಾರ್ಹವಾಗಿದೆ.












Click it and Unblock the Notifications