ತ್ರಿವಳಿ ತಲಾಖ್ ಮಸೂದೆ ಮಂಡನೆ: ವಿರೋಧಿಸಿದ್ದು ಯಾರು? ಅಧಿವೇಶನದಲ್ಲಿ ನಡೆದಿದ್ದೇನು?
ನವದೆಹಲಿ, ಜೂನ್ 21: ಕೊನೆಗೂ ತ್ರಿವಳಿ ತಲಾಖ್ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದೆ. ಹಲವರ ವಿರೋಧಗಳ ನಡುವಲ್ಲೂ ಈ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದ್ದು, ಮುಸ್ಲಿಂ ಮಹಿಳೆಯರ ಹಕ್ಕನ್ನು ರಕ್ಷಿಸುವಲ್ಲಿ ಈ ಮಸೂದೆ ಮಹತ್ವದ ಪಾತ್ರ ವಹಿಸಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸರ್ಕಾರದ ಈ ಹಿಂದಿನ ಅವಧಿಯಲ್ಲೇ ಈ ಮಸೂದೆಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿತ್ತಾದರೂ ರಾಜ್ಯ ಸಭೆಯಲ್ಲಿ ಅದಕ್ಕೆ ಅನುಮೋದನೆ ದೊರಕಿರಲಿಲ್ಲ. ಆದ್ದರಿಂದ ಇತ್ತೀಚೆಗಷ್ಟೇ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತ್ರಿವಳಿ ತಲಾಖ್ ಗೆ ಸಂಬಂಧಿಸಿದಂತೆ ನೂತನ ಮಸೂದೆಯನ್ನು ಮುಂಗಾರು ಅದಿವೇಶನದ ಸಮಯದಲ್ಲಿ ಮಂಡಿಸಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ಮಸೂದೆಯನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ರವಿಶಂಕರ್ ಪ್ರಸಾದ್ ಅವರು ಲೋಕಸಭೆಯಲ್ಲಿ ಮಂಡಿಸಿದರು. ಇದಕ್ಕೆ ಹೆಚ್ಚಿನ ಸಂಖ್ಯೆಯ ಸಂಸದರು ಒಪ್ಪಿಗೆ ಸೂಚಿಸಿದ್ದರಿಂದ ಅಂಗೀಕಾರದ ಮುದ್ರೆ ದೊರೆತಿದೆ.
ಅಷ್ಟಕ್ಕೂ ಈ ಮಸೂದೆಗೆ ಯಾರೆಲ್ಲ ವಿರೋಧ ವ್ಯಕ್ತಪಡಿಸಿದರು, ಮಸೂದೆ ಪರವಾಗಿ ಬಿದ್ದ ವೋಟುಗಳೆಷ್ಟು, ಅಧಿವೇಶನದಲ್ಲಿ ನಡೆದಿದ್ದೇನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಶಶಿ ತರೂರ್ ವಿರೋಧ
ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ತ್ರಿವಳಿ ತಲಾಖ್ ಮಸೂದೆಯನ್ನು ವಿರೋಧಿಸಿದರು. "ಬೇರೆ ಮತಗಳಲ್ಲೂ ಗಂಡಂದಿರು ತಮ್ಮ ಪತ್ನಿಯರನ್ನು ತೊರೆಯುತ್ತಾರೆ. ಆದರೆ ಇದು ತಾರತಮ್ಯದ ಮಸೂದೆ. ಇದರಲ್ಲಿ ಮುಸ್ಲಿಂ ಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸುವ ಯಾವ ಅಂಶವೂ ಇಲ್ಲ" ಎಂದು ಶಶಿ ತರೂರ್ ವಾದಿಸಿದರು.

ತಾರತಮ್ಯದ ಮಸೂದೆ ಎಂದ ಓವೈಸಿ
ಈ ಮಸೂದೆಯು ತಾರತಮ್ಯದಿಂದ ಕೂಡಿದ್ದು, ಅದರ ಗುರಿಯೇ ಒಂದಾಗಿದ್ದರೆ, ತಲುಪುವ ದಾರಿಯೇ ಒಂದಾಗಿದೆ. ತ್ರಿವಳಿ ತಲಾಖ್ ಅನ್ನು ಅಪರಾಧ ಎಂದು ಕರೆದು ತಲಾಖ್ ನೀಡುವವರು ಜೈಲಿಗೆ ತಳ್ಳಿದರೆ ಅವರ ಸಂತ್ರಸ್ಥೆಗೆ ಜೀವನಾಂಶ ಕೊಡುವುದಕ್ಕೆ ಹೇಗೆ ಸಾಧ್ಯ? ಜೈಲಿನಲ್ಲಿದ್ದುಕೊಂಡು ಜೀವನಾಂಶ ನೀಡಲಾಗುತ್ತದೆಯೇ? ಎಂದು ಎಐಎಂಐಎಂ ಮುಖಂಡ ಅಸಾದುದ್ದಿನ್ ಓವೈಸಿ ಪ್ರಶ್ನಿಸಿದ್ದಾರೆ.

ಸಮರ್ಥಿಸಿಕೊಂಡ ರವಿ ಶಂಕರ್ ಪ್ರಸಾದ್
"ಜನರು ನಮ್ಮನ್ನು ಆಯ್ಕೆ ಮಾಡಿದ್ದು ಕಾನೂನು ಮಾಡಲು. ಕಾನೂನಿಂದ ತ್ರಿವಳಿ ತಲಾಖ್ ಸಂತ್ರಸ್ಥರಿಗೆ ನ್ಯಾಯ ದೊರಕುತ್ತದೆ. ಈ ಮಸೂದೆಯ ಮೂಲಕ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲಾಗುತ್ತದೆ, ಮತ್ತು ಅವರಿಗೆ ನ್ಯಾಯ ನೀಡಲು, ಸಬಲೀಕರಣದತ್ತ ಕೊಂಡೊಯ್ಯುವ ಸಾಧನ ಇದಾಗಿದೆ" ಎಂದು ರವಿಶಂಕರ್ ಪ್ರಸಾದ್ ಅವರು ಈ ಸಂದರ್ಭದಲ್ಲಿ ಹೇಳಿದರು.

ವಿರೋಧಿಸಿ ಬಿದ್ದ ಮತಗಳೆಷ್ಟು?
ಅಧಿವೇಶನದಲ್ಲಿ ಇಂದು ಇದ್ದಿದ್ದೇ 187 ಸದಸ್ಯರು. ಅವರಲ್ಲಿ 74 ಸದಸ್ಯರು ಮಸೂದೆಯ ವಿರುದ್ಧ ಮತ ಚಲಾಯಿಸಿದರು. ಮಮತಾ ಬ್ಯಾನರ್ಜಿಯವರ ಟಿಎಂಸಿ ನಾಯಕರು ಮಸೂದೆಗೆ ವಿರೋಧ ವ್ಯಕ್ತಪಡಿಸುವ ಸೂಚಕ ಎಂಬಂತೆ ಅಧಿವೇಶನಕ್ಕೆ ಹಾಜರಾಗಿರಲಿಲ್ಲ. ವೈಎಸ್ ಆರ್ ಕಾಂಗ್ರೆಸ್ ಸಂಸದರು ಸಹ ಹಾಜರಾಗಿರಲಿಲ್ಲ. ನಿತೀಶ್ ಕುಮಾರ್ ಅವರ ಜೆಡಿಯು ಈ ಮಸೂದೆಯನ್ನು ಬೆಂಬಲಿಸುವುದಿಲ್ಲ ಎಂದು ಈ ಮೊದಲೇ ತಿಳಿಸಿದೆ. ಬೆಜೆಡಿ ಈ ಕುರಿತು ಸ್ಪಷ್ಟ ಅಭಿಪ್ರಾಯ ತುಳಿಸಿಲ್ಲ. ಆದ್ದರಿಂದ ಈ ಎಲ್ಲ ಪಕ್ಷದ ಸದಸ್ಯರು ಅಧಿವೇಶನಕ್ಕೆ ಹಾಜರಾಗಿರಲಿಲ್ಲ.

ರಾಜ್ಯ ಸಭೆಯಲ್ಲಿ ಅಂಗೀಕಾರ ಸಿಕ್ಕಿರಲಿಲ್ಲ
ಹದಿನಾರನೇ ಲೋಕಸಭೆಯಲ್ಲೂ ತ್ರಿವಳಿ ತಲಾಖ್ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತಾದರೂ ಲೋಕಸಭೆಯ ಅವಧಿ ಮುಕ್ತಾಯವಾಗಿದ್ದರಿಂದ ಮತ್ತು ರಾಜ್ಯ ಸಭೆಯಲ್ಲೂ ಈ ಮಸೂದೆಗೆ ಅಂಗೀಕಾರ ಸಿಗದ ಕಾರಣ ಅದು ಮಂಡನೆಯಾಗಿರಲಿಲ್ಲ.
ಯಾವುದೇ ಲಿಖಿತ ದಾಖಲೆಗಳಿಲ್ಲದೆ ವಿಚ್ಛೇದನ ನೀಡುವ ಈ ಪದ್ಧತಿಯನ್ನು 2018 ರ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಮಹತ್ವದ ತೀರ್ಪಿನಲ್ಲಿ ಅಪರಾಧ ಮತ್ತು ಅಸಾಂವಿಧಾನಿಕ ಎನ್ನಲಾಗಿತ್ತು. ನಂತರ ಈ ಕುರಿತು ಕಾನೂನು ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ನಂತರ ಲೋಕಸಭೆಯಲ್ಲಿ ಈ ಮಂಡನೆಗೆ ಅಂಗೀಕಾರ ದೊರೆತಿತ್ತಾದರೂ ರಾಜ್ಯ ಸಭೆಯಲ್ಲಿ ದೊರೆತಿರಲಿಲ್ಲ. ಅಷ್ಟರಲ್ಲೇ ಹಿಂದಿನ ಲೋಕಸಬೆಯ ಅವಧಿ ಮುಗಿದಿದ್ದರಿಂದ ಅದು ಜಾರಿಗೆ ಬಂದಿರಲಿಲ್ಲ.

ಮಂಡನೆಯಾದ ಮಸೂದೆಯಲ್ಲೇನಿದೆ?
ಇದೀಗ ಮಂಡನೆಯಾದ ತಿದ್ದುಪಡಿ ಮಸೂದೆಯ ಪ್ರಕಾರ ಮುಸ್ಲಿಂ ಪತಿ ತ್ರಿವಳಿ ತಲಾಖ್ ನೀಡಿದರೆ ಆತನ ವಿರುದ್ಧ ಪತ್ನಿ ಅಥವಾ ಯಾವುದೇ ಹತ್ತಿರದ ಬಂಧುಗಳು ದೂರು ನೀಡಬಹುದು, ಪತಿ ಸಂಧಾನಕ್ಕೆ ಬಂದರೆ ಅಥವಾ ರಾಜಿ ಮಾಡಿಕೊಳ್ಳಲು ಒಪ್ಪಿದರೆ ಆಕೆ ದೂರನ್ನು ವಾಪಸ್ ಪಡೆಯುವುದಕ್ಕೆ ಅವಕಾಶವಿದೆ, ಪತಿಯನ್ನು ತ್ರಿವಳಿ ತಲಾಖ್ ಪ್ರಕರಣದಲ್ಲಿ ಜೈಲಿಗಟ್ಟಬಹುದು ಮತ್ತು ಆತನಿಗೆ ಜಾಮೀನು ನೀಡಬೇಕೋ ಬೇಡವೋ ಎಂಬುದನ್ನು ಪತ್ನಿಯೊಂದಿಗೆ ಮಾತುಕತೆ ನಡೆಸಿಯೇ ಮ್ಯಾಜಿಸ್ಟ್ರೇಟ್ ತೀರ್ಪು ನೀಡಬೇಕು, ಮೌಖಿಕವಾಗಿ ತಲಾಖ್ ಹೇಳುವುದು ಅಥವಾ ವಾಟ್ಸಾಪ್, ಟೆಲಿಫೋನ್, ಪತ್ರ ಯಾವುದೇ ತಂತ್ರಜ್ಞಾನವನ್ನು ಬಳಸಿಕೊಂಡು ತಲಾಖ್ ಸಂದೇಶ ಕಳಿಸಿ ವಿಚ್ಛೇದನ ಪಡೆಯುವುದನ್ನೂ ಈ ಕಾಯ್ದೆ ಅಪರಾಧವೆಂದಿದೆ.












Click it and Unblock the Notifications