ಮಂಡ್ಯದ ದಡಿಘಟ್ಟದ ಸಿಡಿಲು ಕಲ್ಲು ಜಾತ್ರೆ ಹೇಗಿರುತ್ತದೆ?
ಮಂಡ್ಯ, ನವೆಂಬರ್ 07: ಬೆಟ್ಟಗುಡ್ಡಗಳ ಬಂಡೆಕಲ್ಲು, ಮರಗಿಡಗಳೊಂದಿಗೆ ಬೆರೆತು ನಿಸರ್ಗದ ಮಡಿಲಲ್ಲಿ ಒಂದಷ್ಟು ಸಮಯವನ್ನು ಕಳೆದು ಬರುವುದು ಎಲ್ಲರಿಗೂ ಇಷ್ಟವೇ... ಅದರಲ್ಲೂ ನಾವು ಪ್ರಕೃತಿಯ ಆರಾಧಕರು ಗಿಡಮರಗಳಿಂದ ಆರಂಭವಾಗಿ ಬಂಡೆಕಲ್ಲುಗಳ ತನಕ ಎಲ್ಲದರಲ್ಲೂ ದೇವರನ್ನು ಹುಡುಕುವುದು ಪೂರ್ವಜರಿಂದಲೇ ನಡೆದುಕೊಂಡು ಬಂದಿದ್ದು ಅದು ಇಂದಿಗೂ ಮುಂದುವರೆಯುತ್ತಿದೆ. ಇದಕ್ಕೆ ನಿದರ್ಶನ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ದಡಿಘಟ್ಟದ ಗ್ರಾಮ ದೇವತೆ ಶ್ರೀ ಲಕ್ಷ್ಮೀದೇವಿ ಅಮ್ಮನವರ ಸಿಡಿಲು ಕಲ್ಲು ಜಾತ್ರೆಯಾಗಿದೆ.
ನಾವು ಆಚರಿಸುವ ಪ್ರತಿಯೊಂದು ಹಬ್ಬವನ್ನು ಒಂದೊಂದು ಊರಲ್ಲಿ ವಿಭಿನ್ನ ಮತ್ತು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೆ ಸಂಕ್ರಾಂತಿ, ಶಿವರಾತ್ರಿ, ಯುಗಾದಿ ಮತ್ತು ದೀಪಾವಳಿ ಹಬ್ಬದ ಸಂದರ್ಭ ಕೆಲವು ಊರುಗಳ ಗ್ರಾಮದೇವತೆಯ ಜಾತ್ರೆಯೂ ನಡೆಯುತ್ತದೆ. ಈ ಜಾತ್ರೆಗಳ ಸಂಪ್ರದಾಯ ಕೂಡ ಒಂದು ಊರಿನಲ್ಲಿದ್ದಂತೆ ಮತ್ತೊಂದು ಊರಿನಲ್ಲಿ ಇಲ್ಲದೆ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತವೆ.

ದಡಿಘಟ್ಟದ ಗ್ರಾಮ ದೇವತೆ ಶ್ರೀ ಲಕ್ಷ್ಮೀದೇವಿ ಅಮ್ಮನವರ ಸಿಡಿಲು ಕಲ್ಲು ಜಾತ್ರೆ ಕೂಡ ವೈಶಿಷ್ಟ್ಯಪೂರ್ಣವಾಗಿದೆ. ದಡಿಘಟ್ಟದ ಬೆಟ್ಟದಲ್ಲಿ ನಡೆಯುವ ಸಿಡಿಲು ಕಲ್ಲು ಜಾತ್ರೆ ಗಮನಾರ್ಹವಾಗಿದ್ದು, ಈ ತಾಣಕ್ಕೂ ದ್ವಾಪರಯುಗದ ಪಾಂಡವರಿಗೂ ಸಂಬಂಧವಿದೆ ಎನ್ನುವುದು ಹಿರಿಯರ ನಂಬಿಕೆಯಾಗಿದೆ.
ಪಾಂಡವರು ಈ ಬೆಟ್ಟಕ್ಕೆ ಬಂದಿದ್ದರಂತೆ
ಹಿರಿಯರು ಹೇಳುವ ಪ್ರಕಾರ ಸಿಡಿಲು ಕಲ್ಲು ಜಾತ್ರೆ ನಡೆಯುವ ಬೆಟ್ಟ ಪ್ರದೇಶಕ್ಕೆ ಪಾಂಡವರು ಬಂದಿದ್ದರಂತೆ. ಪಗಡೆಯಲ್ಲಿ ಕೌರವರ ಮುಂದೆ ಸೋತ ಪಾಂಡವರು 14 ವರ್ಷಗಳ ವನವಾಸ ಅನುಭವಿಸಿ ಒಂದು ವರ್ಷದ ಅಜ್ಞಾನವಾಸದಲ್ಲಿದ್ದಾಗ ವೇಳೆ ಸಿಡಿಲು ಕಲ್ಲು ಜಾತ್ರೆ ನಡೆಯುವ ಸ್ಥಳದ ಬೆಟ್ಟಕ್ಕೆ ಬಂದಿದ್ದರಂತೆ. ಈ ವೇಳೆ ಬೆಟ್ಟದ ಮೇಲೆ ಸಿಡಿದು ನಿಂತಿದ್ದ ಎರಡು ಬೃಹತ್ ಬಂಡೆಗಳು ಉರುಳಿ ಹೋಗದಂತೆ ತಡೆಯುವ ಸಲುವಾಗಿ ಕೇವಲ ಸಣ್ಣ ಕಲ್ಲನ್ನು ಒತ್ತು ಕೊಟ್ಟು ನಿಲ್ಲಿಸಿದ್ದರಂತೆ.
ಇವತ್ತಿಗೂ ಈ ಎರಡು ಬೃಹತ್ ಬಂಡೆಗಳು ಉರುಳಿ ಹೋಗುತ್ತವೆಯೇನೋ ಎಂಬಂತೆ ನಿಂತಿರುವುದು ಅಚ್ಚರಿ ಮೂಡಿಸುತ್ತದೆ. ಇದೇ ಸ್ಥಳದಲ್ಲಿ ಪಾಂಡವರು ಆಟವಾಡುತ್ತಾ ಕೆಲವು ಸಮಯವನ್ನು ಕಳೆದಿದ್ದರು. ಈ ವೇಳೆ ಕಲ್ಲು ಉರುಳಿ ಹೋಗದಂತೆ ತಾವು ಆಡುತ್ತಿದ್ದ ಅಣ್ಣೇ ಕಲ್ಲಿನಿಂದ ತಡೆ ಹಾಕಿದ್ದರು ಎಂಬ ದಂತಕಥೆಯೂ ಈ ಬೆಟ್ಟದ ಕುರಿತಂತೆ ಕೇಳಿ ಬರುತ್ತವೆ.

ಜಾತ್ರೆಗೆ ಕಳೆಕಟ್ಟುವ ಗ್ರಾಮದ ಜನ
ಇನ್ನು ಇಲ್ಲಿ ಪ್ರತಿ ವರ್ಷವು ದೀಪಾವಳಿ ಹಬ್ಬವು ಮುಗಿದ ನಂತರ ಕಾರ್ತೀಕ ಮಾಸದ ಮೊದಲೇ ವಾರದಲ್ಲಿ ನಡೆಯುವ ಜಾತ್ರೆಯು ಗಮನಸೆಳೆಯುತ್ತದೆ. ಗ್ರಾಮೀಣ ಸೊಗಡಿನ ಈ ಜಾತ್ರೆ ನಿಸರ್ಗದ ಸುಂದರ ವಾತಾವರಣದಲ್ಲಿ ನಡೆಯುತ್ತದೆ. ಊರಿನವರು ಮತ್ತು ಸುತ್ತಮುತ್ತಲಿನವರು ಈ ವೇಳೆ ನೆರೆದು ಜಾತ್ರೆಗೆ ಕಳೆಕಟ್ಟುತ್ತಾರೆ. ಈ ಜಾತ್ರೆ ಹೇಗೆ ನಡೆಯುತ್ತದೆ ಎಂಬುದನ್ನು ನೋಡಿದ್ದೇ ಆದರೆ ಜಾತ್ರೆಗೂ ಮುನ್ನ ದಿನ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿಯು ದಡಿಘಟ್ಟದಿಂದ ಚಲ್ಯ, ಕುಂಬೇನಹಳ್ಳಿ ಗ್ರಾಮಗಳಿಗೆ ಹೋಗಿ ನಂತರ ಸಿಡಿಲು ಕಲ್ಲು ಜಾತ್ರೆ ಆಗಮಿಸುತ್ತದೆ.
ಈ ಸಂದರ್ಭ ಮಧ್ಯಾಹ್ನದಿಂದ ಸಂಜೆವರೆಗೂ ಭಕ್ತಾಧಿಗಳಿಗೆ ದೇವರಿಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಜೊತೆಗೆ ಬೆಟ್ಟದಹಳ್ಳಿ ಗ್ರಾಮದ ದೊಡ್ಡಯ್ಯ, ಚಿಕ್ಕಯ್ಯ, ಮೈಲಾರಲಿಂಗೇಶ್ವರ ಸ್ವಾಮಿಗೂ ಪೂಜೆ ಸಲ್ಲಿಸಲಾಗುತ್ತದೆ. ಆ ನಂತರ ಶ್ರೀ ಲಕ್ಷ್ಮೀದೇವಿ ಮತ್ತು ದೊಡ್ಡಯ್ಯ, ಚಿಕ್ಕಯ್ಯ, ಮೈಲಾರಲಿಂಗೇಶ್ವರ ಸ್ವಾಮಿಯವರ ಪೂಜಾ ಕುಣಿತ ಹಾಗೂ ಶ್ರೀ ಲಕ್ಷ್ಮೀದೇವಿ ಅಮ್ಮನವರ ಪಲ್ಲಕ್ಕಿ ಉತ್ಸವವು ಹೆಣ್ಣು ಮಕ್ಕಳ ಉಯ್ಯಾಲೆ ಉತ್ಸವವು ಇದರ ಜತೆಗೆ ನಡೆಯುತ್ತದೆ.
ಜಾತ್ರೆಯಲ್ಲಿ ಭಕ್ತಿಭಾವ ಮೆರೆಯುವ ಭಕ್ತರು
ಇನ್ನು ಜಾತ್ರೆಗೆ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಹಣ್ಣು ಕಾಯಿ ಸಮರ್ಪಿಸಿ ತಮ್ಮ ಭಕ್ತಿ ಭಾವ ಮೆರೆಯುತ್ತಾರೆ. ಇದೇ ವೇಳೆ ಹಾಲು ಮತ ಸಮುದಾಯದವರು ಶ್ರೀ ಲಕ್ಷ್ಮೀದೇವಿಗೆ ಕುರಿಗಳ ಪ್ರದರ್ಶನ ಮಾಡಿ ತಮ್ಮ ಭಕ್ತಿಯನ್ನು ಸಲ್ಲಿಸುತ್ತಾರೆ. ಇದೇ ವೇಳೆ ಶ್ರೀ ಲಕ್ಷ್ಮೀದೇವಿ ಅಮ್ಮನವರ ಜೊತೆಗೆ ಬೆಟ್ಟದಹಳ್ಳಿ ಚಿಕ್ಕಯ್ಯ, ದೊಡ್ಡಯ್ಯ, ಮೈಲಾರಲಿಂಗೇಶ್ವರ ಸ್ವಾಮೀಯವರ ಪೂಜಾ ಕುಣಿತವು ಗಮನಸೆಳೆಯುತ್ತದೆ.
ಇನ್ನು ಜಾತ್ರೆಗೆ ಬಂದವರು ಬೆಟ್ಟವನ್ನೇರಿ ಬೃಹತ್ ಬಂಡೆಗಳ ನಡುವಿನ ಗಿಡ ಮರಗಳ ಕೆಳಗೆ ಕುಳಿತು ತಮ್ಮವರೊಂದಿಗೆ ಬೆರೆತು ಖುಷಿಪಡುತ್ತಾರೆ. ಅಷ್ಟೇ ಅಲ್ಲದೆ, ಕಡ್ಲೆಪುರಿ, ಖರ್ಜೂರ, ಸಿಹಿ ತಿಂಡಿಗಳನ್ನು ಸವಿದು ಸಂತಸ ಪಡುತ್ತಾರೆ. ಅಪರೂಪಕ್ಕೆ ಸಿಕ್ಕಿದ ಸಂಬಂಧಿಕರು, ಪರಿಚಿತರು ಹೀಗೆ ಎಲ್ಲರೊಂದಿಗೂ ಬೆರೆತು, ದೇವರನ್ನು ಮನಸಾರೆ ಆರಾಧಿಸಿ ಒಳಿತು ಮಾಡೆಂದು ಬೇಡಿಕೊಳ್ಳುತ್ತಾ ಮನೆ ಕಡೆಗೆ ಹೆಜ್ಜೆ ಹಾಕುತ್ತಾರೆ. ಅಲ್ಲಿಗೆ ಶ್ರೀ ಲಕ್ಷ್ಮೀದೇವಿ ಅಮ್ಮನವರ ಸಿಡಿಲು ಕಲ್ಲು ಜಾತ್ರೆ ಮುಗಿದು ಹೋಗುತ್ತದೆ.












Click it and Unblock the Notifications