Maha Kumbh Mela 2025: ಮಹಾ ಕುಂಭಮೇಳದಲ್ಲಿ ಸುಧಾ ಮೂರ್ತಿ: ಮೂರು ದಿನಗಳ ಪ್ರತಿಜ್ಞೆ
ಉತ್ತರ ಪ್ರದೇಶದ ಪ್ರಯಾಗ್ ರಾಜ್ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕೋಟ್ಯಂತರ ಭಕ್ತರು, ಸಾಧು-ಸಂತರು ನಾಗಸಾಧುಗಳು, ವಿದೇಶಿ ಭಕ್ತರು ಮಾತ್ರವಲ್ಲದೇ ದೇಶದ ಹಾಗೂ ವಿದೇಶದ ಗಣ್ಯರು ಕೂಡ ಭಾಗಿಯಾಗುತ್ತಿದ್ದಾರೆ. ಮಹಾ ಕುಂಭ ಮೇಳ ಆರಂಭವಾದ ದಿನದಿಂದ ನಿನ್ನೆಯವರೆಗೆ ಒಂಬತ್ತು ಕೋಟಿಗೂ ಅಧಿಕ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಅಂದರೆ ಪ್ರತಿ ದಿನ ಅಂದಾಜು ಒಂದು ಕೋಟಿ ಭಕ್ತರು ಪವಿತ್ರ ಸ್ನಾನ ಕೈಗೊಳ್ಳುತ್ತಿದ್ದಾರೆ.
ಕರ್ನಾಟಕದಿಂದಲೂ ಸಾವಿರಾರು ಭಕ್ತರು ಮಹಾ ಕುಂಭಮೇಳಕ್ಕೆ ಭೇಟಿ ನೀಡುತ್ತಿದ್ದು, ಇದೀಗ ರಾಜ್ಯಸಭಾ ಸದಸ್ಯೆ ಹಾಗೂ ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ಗೆ ಭೇಟಿ ನೀಡಿದ್ದಾರೆ. ಸರಳತೆಗೆ ಹೆಸರಾಗಿರುವ ಸುಧಾ ಮೂರ್ತಿ ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಾರೆ. ಇದೀಗ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ ಅವರು, ಮೂರು ದಿನಗಳ ಕಾಲ ಅಲ್ಲಿಯೇ ತಂಗಲಿದ್ದಾರೆ.

ಗಂಗಾ, ಯಮುನಾ ಮತ್ತು ಸರಸ್ವತಿ ಮಹಾ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಮೂರು ದಿನಗಳ ಕಾಲ ಕುಂಭ ಪವಿತ್ರ ಸ್ನಾನ ಮಾಡಲಿರುವ ಸುಧಾ ಮೂರ್ತಿ ಅವರು ಮಹಾ ಕುಂಭ ಮೇಳ ನೋಡಬೇಕು ಎನ್ನುವ ಬಯಕೆ ಹೊಂದಿದ್ದ ಅವರ ಪೂರ್ವಜರಿಗೆ ತರ್ಪಣ ಬಿಡಲಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ,' ನಾವು ಕರ್ನಾಟಕದಿಂದ ಬಂದಿದ್ದೇವೆ. ದೇವರ ಆಶೀರ್ವಾದದಿಂದ ಇಂದು ನಮಗೆ ಮಹಾ ಕುಂಭ ಮೇಳದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ನಮ್ಮ ಪೂರ್ವಜರಿಗೆ ಇಲ್ಲಿಗೆ ಬರುವ ಬಯಕೆ ಇತ್ತು. ಆದರೆ ಅದು ಈಡೇರಲಿಲ್ಲ. ಹೀಗಾಗಿ ನಾನು ಮೂರು ದಿನಗಳ ಪ್ರತಿಜ್ಞೆ ಮಾಡಿದ್ದೇನೆ. ಮೂರು ದಿನಗಳು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಅವರ ಹೆಸರಿನಲ್ಲಿ ನಾನು ತರ್ಪಣ ಬಿಡುತ್ತೇನೆ' ಎಂದರು.

ಜೊತೆಗೆ ಮೂರು ದಿನಗಳ ಕಾಲ ಉಪವಾಸ ಕೈಗೊಂಡಿರುವ ಬಗ್ಗೆ ತಿಳಿಸಿದ ಅವರು, ಪ್ರಯಾಗ್ ರಾಜ್‌ನಲ್ಲಿ ಮಹಾ ಕುಂಭ ಮೇಳಕ್ಕಾಗಿ ಮಾಡಿರುವ ವ್ಯವಸ್ಥೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. 'ಇಲ್ಲಿ ಭಕ್ತರಿಗಾಗಿ ಬಹಳ ಒಳ್ಳೆಯ ವ್ಯವಸ್ಥೆ ಮಾಡಲಾಗಿದೆ. ಪೊಲೀಸರು ಕೂಡ ಜನರಿಗೆ ತುಂಬಾ ಸಹಾಯವಾಗುತ್ತಿದ್ದಾರೆ. ಇಂತಹ ಜಾಗತೀಕ ಮಟ್ಟದ ಕಾರ್ಯಕ್ರಮ ಆಯೋಜಿಸಿ ಉತ್ತಮ ವ್ಯವಸ್ಥೆ ಮಾಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ದೇವರು ದೀರ್ಘಾಯುಷ್ಯ ನೀಡಲಿ' ಎಂದು ಹಾರೈಸಿದರು.
ಇನ್ನೂ ಒಂದು ತಿಂಗಳು ನಡೆಯುವ ಮಹಾ ಕುಂಭ ಮೇಳದಲ್ಲಿ ಫೆಬ್ರವರಿ 5 ಬುಧವಾರದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಜನವರಿ 27ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಫೆಬ್ರವರಿ 10ರಂದು ರಾಷ್ಟ್ರಪತಿಗಳು ಹಾಗೂ ಫೆಬ್ರವರಿ 1ರಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಭಾಗಿಯಾಗಲಿದ್ದಾರೆ.












Click it and Unblock the Notifications