ಮದ್ರಾಸ್ ಐ ಪ್ರಕರಣ ಹೆಚ್ಚಳ; ರೋಗ ಲಕ್ಷಣ, ಮುನ್ನೆಚ್ಚರಿಕೆ ಕ್ರಮಗಳು
ಬೆಂಗಳೂರು, ಜುಲೈ 27; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೆಲವು ದಿನಗಳಿಂದ ಹವಾಮಾನ ವ್ಯತ್ಯಾಸದಿಂದ ಮತ್ತು ನಿರಂತರವಾಗಿ ಬರುತ್ತಿರುವ ಮಳೆಯಿಂದ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿವೆ. ಕೆಲವು ಜನರಲ್ಲಿ ಕಣ್ಣಿನ ಉರಿ ಊತ ಸಮಸ್ಯೆ ಕಂಡುಬರುತ್ತಿರುವ ಕಾರಣ ಸಾರ್ವಜನಿಕರಲ್ಲಿ ಅರಿವು ಮೂಡಿಸಲು 'ಮದ್ರಾಸ್ ಐ' ಬಗ್ಗೆ ರೋಗ ಲಕ್ಷಣ, ಮುನ್ನೆಚ್ಚರಿಕೆ ಕ್ರಮಗಳನ್ನು ಹಂಚಿಕೊಳ್ಳಲಾಗಿದೆ.
ತೇವಾಂಶ ಹೆಚ್ಚಾದಾಗ ಅಥವಾ ಚಳಿಗಾಲದ ವಾತಾವರಣದಲ್ಲಿ ಹುಟ್ಟಿಕೊಳ್ಳುವ ಈ ವೈರಾಣುಗಳು ನೇರವಾಗಿ ಕಣ್ಣಿನ ಮೇಲೆ ಪರಿಣಾಮವನ್ನು ಉಂಟು ಮಾಡುತ್ತಿದ್ದು ಸಾರ್ವಜನಿಕರು ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಮನವಿ ಮಾಡಲಾಗಿದೆ.

'ಮದ್ರಾಸ್ ಐ'ನಿಂದಾಗಿ ಮನುಷ್ಯನ ಕಣ್ಣಿನ ಬಿಳಿ ಭಾಗವು ಕೆಂಪಾಗುತ್ತದೆ. ಕಣ್ಣುಗಳಲ್ಲಿ ಉರಿ, ನೋವುಉಂಟಾಗಿ, ಕಣ್ಣುಗಳಿಂದ ನಿರಂತರವಾಗಿ ನೀರು ಹೊರಬರುವುದು ಹಾಗೂ ಕಣ್ಣು ಊದಿಕೊಂಡಂತಾಗುತ್ತವೆ.
ವೈದ್ಯಾಧಿಕಾರಿಗಳು ಆಸ್ಪತ್ರೆಗಳಲ್ಲಿ ಬಂದ ಕಣ್ಣಿನ ಉರಿ ಊತದ ರೋಗಿಗಳಿಗೆ ನೋವು ನಿವಾರಕ ಮಾತ್ರೆ ಮತ್ತು ಕಣ್ಣಿನ ಡ್ರಾಪ್ಸ್ ಚಿಕಿತ್ಸೆ ನೀಡಬೇಕು. ಮೂಗಿನ ಮತ್ತು ಗಂಟಲಿನ ಸೊಂಕು ಇದ್ದಲ್ಲಿ ಅದಕ್ಕೆ ಬೇಕಾದ ಚಿಕಿತ್ಸೆ ನೀಡಬೇಕು. ಶಸ್ತ್ರ ಚಿಕಿತ್ಸೆ ಒಳಪಟ್ಟಿರುವ ರೋಗಿಗಳು ಮತ್ತು ಕಣ್ಣಿನ ಉರಿ ಊತ ಇರುವ ರೋಗಿಗಳಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ಜನರಿಗಾಗಿ ಮಾಹಿತಿ; ಕಣ್ಣಿನ ಉರಿ ಊತ ಕಾಣಿಸುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಈ ಮಾಹಿತಿಗಳನ್ನು ನೀಡಲಾಗಿದೆ. 'ಮದ್ರಾಸ್ ಐ' ಲಕ್ಷಣಗಳಲ್ಲಿ ಕಣ್ಣಿನ ಬಿಳಿ ಭಾಗವು ಕೆಂಪಾಗುತ್ತದೆ. ಕಣ್ಣುಗಳಲ್ಲಿ ಉರಿ ಮತ್ತು ನೋವು ಇರುತ್ತದೆ. ಕಣ್ಣುಗಳಿಂದ ನಿರಂತರವಾಗಿ ನೀರು ಹೊರಬರುತ್ತಿರುತ್ತದೆ. ಕಣ್ಣುಗಳು ಊದಿಕೊಳ್ಳುತ್ತದೆ.
ಮುನ್ನೆಚ್ಚರಿಕೆ ಕ್ರಮಗಳು. ಹೆಚ್ಚಿನ ಜನ ಇರುವ ಪ್ರದೇಶಗಳಿಗೆ ಹೋಗುವುದನ್ನು ಕಡಿಮೆ ಮಾಡಬೇಕು. ಪದೇ-ಪದೇ ಕಣ್ಣುಗಳನ್ನು ಮುಟ್ಟುವುದನ್ನು ಕಡಿಮೆ ಮಾಡಬೇಕು. ಸೋಪ್ ನಲ್ಲಿ ಆಗಾಗ ಕೈ ತೊಳೆಯುವುದನ್ನು ಅಭ್ಯಾಸ ಮಾಡಬೇಕು. ಕಣ್ಣಿನ ಉರಿ ಊತ ಬಂದ ವ್ಯಕ್ತಿ ಬೇರೆಯವರ ಜೊತೆ ನಿಕಟ ಸಂಪರ್ಕ ಹೊಂದುವುದನ್ನು ತಪ್ಪಿಸಬೇಕು. ಅವರು ಉಪಯೋಗಿಸಿದ ಟವೆಲ್, ತಲೆ ದಿಂಬನ್ನು ಇತರರು ಉಪಯೋಗಿಸದಂತೆ ನೋಡಿಕೊಳ್ಳಬೇಕು.
ಆತಂಕ ಬೇಡ; ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮದ್ರಾಸ್ ಐ ಈಗ ಮಳೆಗಾಲದಲ್ಲಿ ಕಾಣಿಸಿಕೊಂಡಿದೆ. ವೈರಾಣು ಅತೀ ವೇಗವಾಗಿ ಹರಡುತ್ತಿದ್ದು ಇದಕ್ಕೆ ಭಯ ಪಡಬೇಕಾಗಿಲ್ಲ. ಮುಖ್ಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಹಾಸ್ಟಲ್ ವಿದ್ಯಾರ್ಥಿಗಳಲ್ಲಿ 'ಮದ್ರಾಸ್ ಐ' ವೇಗಾಗಿ ಹರಡುತ್ತಿದೆ.
ರಾಜ್ಯದಲ್ಲಿ ಮಳೆಯಾಗುತ್ತಿರುವ ಪರಿಣಾಮ ಬಿಸಿಲು ಇಲ್ಲದಂತಾಗಿದೆ ಇದರ ಪರಿಣಾಮ ತೇವಾಂಶ ಹೆಚ್ಚಾಗಿ ಅವಧಿಗೂ ಮೊದಲೇ ಈ ವೈರಾಣು ಕಾಣಿಸಿಕೊಂಡಿದೆ. ಕಸ ಬಿದ್ದದಂತೆ ಆಗುವ ರೀತಿಯಾಗಿಕಣ್ಣುಚುಚ್ಚುವುದು, ಬೆಳಗ್ಗೆ ಎದ್ದಾಗ ಹೆಚ್ಚು ಪಿಸುರು (ಪಿಚ್ಚು) ಬರುತ್ತದೆ, ಕಣ್ಣುಗಳು ಕೆಂಪಾಗಿ, ಕಿರಿಕಿರಿ ಹೆಚ್ಚುವುದು, ಕಣ್ಣಲ್ಲಿ ನೀರು ಬರುವುದು, ರೆಪ್ಪೆ ಕಣ್ಣು ದಪ್ಪ ಆಗುವುದು ಕಂಡು ಬರುತ್ತದೆ.
ಸಮಸ್ಯೆ ಉಳ್ಳವರು ಇತರರಿಂದ ದೂರ ಇರಬೇಕು. ವೈದ್ಯರ ಬಳಿ ತೋರಿಸಿ, ಐ ಡ್ರಾಪ್ಸ್ ಮಾತ್ರ ಹಾಕಬೇಕು. ಸಮಸ್ಯೆ ಕಡಿಮೆ ಆಗುವವರೆಗೆ ಗಾಳಿಗೆ ಹೋಗಬಾರದು, ದ್ವಿಚಕ್ರ ವಾಹನ ಓಡಿಸಬಾರದು, ಟಿವಿ, ಮೊಬೈಲ್, ಕಂಪ್ಯೂಟರ್‌ಗಳನ್ನು ನೋಡುವುದನ್ನ ಕಡಿಮೆ ಮಾಡಿ ಕಣ್ಣಿಗೆ ವಿಶ್ರಾಂತಿ ಕೊಡಬೇಕು.
ರೋಗದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಸಮೀಪದ ನಗರ, ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾಆಸ್ಪತ್ರೆಗೆ ಭೇಟಿ, ವೈದ್ಯರ ಹತ್ತಿರ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯುವುದು ಸೂಕ್ತ.












Click it and Unblock the Notifications