• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉತ್ತರ ಪ್ರದೇಶ ಬಿಟ್ಟು ಹೊರಬಂದರಷ್ಟೇ ರಾಹುಲ್ ಗಾಂಧಿಗೆ ಚಾನ್ಸ್?

|

ಸರಿಯಾಗಿ ಹತ್ತು ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದಲ್ಲಿ 80ರಲ್ಲಿ 21 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದಾಗ, ರಾಜಕೀಯ ಪಂಡಿತರು ಉಘೇ ಉಘೇ ಅಂದಿದ್ದರು, 'ಪಾಲಿಟಿಕಲ್ ಸ್ಟಾರ್ ಈಸ್ ಬಾರ್ನ್' ಎಂದು ಶ್ಲಾಘಿಸಿದ್ದರು. ಉತ್ತರ ಪ್ರದೇಶದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ರಾಹುಲ್ ಗಾಂಧಿ ಸಂಚಲನವೆಬ್ಬಿಸುತ್ತಾರೆ ಎಂದು ಮೆಚ್ಚುಗೆಯ ಮಾತಾಡಿದ್ದರು.

ಆದರೆ, 2014ರಲ್ಲಿ ಆಗಿದ್ದೇನು? ಉತ್ತರ ಪ್ರದೇಶದಲ್ಲಿ ನಲವತ್ತು ಸೀಟು ಗಳಿಸುವುದಿರಲಿ, ಇಡೀ ದೇಶದಲ್ಲಿ ಕೇವಲ 44 ಸೀಟುಗಳನ್ನು ಗೆದ್ದು ರಾಹುಲ್ ಗಾಂಧಿ ಸೋಲನ್ನೊಪ್ಪಿಕೊಂಡಿದ್ದರು. ಆಗ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದಿದ್ದು ಎರಡೇ ಸೀಟು, ಅಮೇಥಿಯಲ್ಲಿ ರಾಹುಲ್ ಮತ್ತು ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ. ನರೇಂದ್ರ ಮೋದಿ ಅಲೆ ಮತ್ತು ಅಮಿತ್ ಶಾ ಅವರ ಚಾಣಾಕ್ಷತನಕ್ಕೆ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಧೂಳಿಪಟವಾಗಿತ್ತು.

ಹತ್ತು ವರ್ಷದ ಫಾಸಲೆಯಲ್ಲಿ ನಾಲ್ಕು ಸಲ ಮನ ಬದಲಿಸಿದ ಉ.ಪ್ರ. ಮತದಾರರು!

ಮುಂದೆ 2017ರ ವಿಧಾನಸಭೆ ಚುನಾವಣೆಯಲ್ಲಿ ನಡೆದಿದ್ದು ಇನ್ನೂ ಆಘಾತಕರ. 403 ಸೀಟುಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ 7 ಮಾತ್ರ. ರಾಹುಲ್ ಅವರು ತಾವು ಮುಳುಗಿದ್ದಲ್ಲದೆ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನೂ ಮುಳುಗಿಸಿದ್ದರು. ಈ ಹಿನ್ನೆಲೆ ಇರುವುದರಿಂದಲೇ ಮೈತ್ರಿ ಮಾಡಿಕೊಂಡಿರುವ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ದೂರದಲ್ಲಿಯೇ ಇಟ್ಟಿದೆ.

ಇಷ್ಟಾಗಿಯೂ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದ ಮೇಲೆ ಮಮತೆ ಕಡಿಮೆಯಾಗಿಲ್ಲ. ಮತ್ತೊಂದು ಕೈ ನೋಡೇಬಿಡೋಣ ಎಂದು ತಮ್ಮ ತಂಗಿ ಪ್ರಿಯಾಂಕಾ ವಾದ್ರಾ ಅವರನ್ನು ರಾಜಕೀಯಕ್ಕೆ ಬಲವಂತವಾಗಿ ಎಳೆತಂದಿದ್ದಲ್ಲದೆ, ಅವರನ್ನು ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿ, ಉತ್ತರ ಪ್ರದೇಶ ಪಶ್ಚಿಮ ಭಾಗದ ಉಸ್ತುವಾರಿಯ ಜವಾಬ್ದಾರಿ ಬೇರೆ ಹೊರಿಸಿದ್ದಾರೆ. ಅವರೊಂದಿಗೆ ಉತ್ತರ ಪ್ರದೇಶದ ಪಶ್ಚಿಮ ಭಾಗದ ಉಸ್ತುವಾರಿಯಾಗಿ ಜ್ಯೋತಿರಾಧಿತ್ಯ ಸಿಂಧಿಯಾ.

ರಾಹುಲ್ ಅವರಿಗೆ ಇದ್ದಿದ್ದೇ ಒಂದು ಆಸರೆ

ರಾಹುಲ್ ಅವರಿಗೆ ಇದ್ದಿದ್ದೇ ಒಂದು ಆಸರೆ

ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷವನ್ನು ಸದೆಬಡಿಯಲು ರಾಹುಲ್ ಗಾಂಧಿ ಅವರಿಗಿದ್ದಿದ್ದು, ಇತರ ಬಿಜೆಪಿ ವಿರೋಧಿ ಪಕ್ಷಗಳ ಮೈತ್ರಿಯ ಆಸರೆಯೊಂದೇ. ಆದರೆ, ಈಬಾರಿ ಅವರಿಗೆ ಅದೂ ಸಿಕ್ಕಿಲ್ಲ. ಅಖಿಲೇಶ್ ಯಾದವ್ ಅವರು ಸ್ವಲ್ಪ ರಾಹುಲ್ ಗಾಂಧಿ ಪರವಾಗಿದ್ದರೂ, ಬಿಎಸ್ಪಿ ನಾಯಕಿ ಕುಮಾರಿ ಮಾಯಾವತಿ ಖಡಾಖಂಡಿತವಾಗಿ ರಾಹುಲ್ ಗಾಂಧಿಯವರನ್ನು ಬದಿಗೆ ಸರಿಸಿಬಿಟ್ಟಿದ್ದಾರೆ. ಇದನ್ನು ಅವರು ಮಧ್ಯ ಪ್ರದೇಶ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲೂ ಮಾಡಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಾಯಾವತಿ ಒಂದೇ ಒಂದು ಸೀಟು ಗೆದ್ದಿರದಿದ್ದರೂ ಅವರ ದೌಲತ್ತು, ಗತ್ತಿಗೇನೂ ಕಡಿಮೆಯಾಗಿಲ್ಲ. ಎಸ್ಪಿ ಮತ್ತು ಬಿಎಸ್ಪಿಗೆ ಏಳು ಸೀಟು ಬಿಟ್ಟುಕೊಡುವ ಅಗತ್ಯವಿಲ್ಲ, ಬೇಕಿದ್ದರೆ 80 ಸೀಟುಗಳಲ್ಲಿ ಸ್ಪರ್ಧಿಸಿ ಎಂದು ಕಾಂಗ್ರೆಸ್ಸಿಗೆ ಮಾಯಾವತಿ ಸವಾಲು ಹಾಕಿದ್ದಾರೆ.

ಅಖಿಲೇಶ್, ಮಾಯಾವತಿ ಲೋಕ ಚುನಾವಣೆಗೆ ಸ್ಪರ್ಧಿಸಲ್ಲ, ಏಕೆ ಗೊತ್ತೆ?

ಬಣ್ಣಬಣ್ಣದ ಸೀರೆಯಲ್ಲಿ ಪ್ರಿಯಾಂಕಾ

ಬಣ್ಣಬಣ್ಣದ ಸೀರೆಯಲ್ಲಿ ಪ್ರಿಯಾಂಕಾ

ನಲವತ್ತೇಳು ವರ್ಷದ ಪ್ರಿಯಾಂಕಾ ವಾದ್ರಾ ಅವರು ಗರಿಗರಿ, ಬಣ್ಣಬಣ್ಣದ, ಖಾದಿ ಸೀರೆಯನ್ನುಟ್ಟುಕೊಂಡು ಊರೂರು ಸುತ್ತುತ್ತಿದ್ದಾರಾದರೂ, ಅವರ ಪ್ರಸ್ತುತಿಯಿಂದ ಉತ್ತರ ಪ್ರದೇಶದಲ್ಲಿ ಏನಾದರೂ ಬದಲಾವಣೆಯಾಗುವುದಾ ಎಂದರೆ, ಆ ಸಾಧ್ಯತೆಯೂ ಕಮ್ಮಿಯೇ ಎಂದು ರಾಜಕೀಯ ತಜ್ಞರು ಹೇಳುತ್ತಿದ್ದಾರೆ. ಹಲವಾರು ಸಮೀಕ್ಷೆಗಳಂತೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸಿನ ಹಣೆಬರಹ ಬದಲಾಗುವ ಸಾಧ್ಯತೆಯೇ ಕ್ಷೀಣವಾಗಿದೆ. ಅಲ್ಲದೆ, ಪಾಕ್ ಬೆಂಬಲಿತ ಉಗ್ರರ ವಿರುದ್ಧ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಏರ್ ಸ್ಟ್ರೈಕ್ ನಡೆಸಿದ ನಂತರ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ನಸೀಬು ಸ್ವಲ್ಪ ಖುಲಾಯಿಸಿದೆ. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ, ಕಾಂಗ್ರೆಸ್ ಉತ್ತರ ಪ್ರದೇಶವನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವೇ ಇಲ್ಲ.

ಇಟಲಿ ಅಜ್ಜಿಯನ್ನು ನೋಡಿ ವರ್ಷಗಳೇ ಆದವು : ಬಿಜೆಪಿಗೆ ಪ್ರಿಯಾಂಕಾ ಮಾತಿನೇಟು

ಈ ಆರು ರಾಜ್ಯಗಳ ಮೇಲೆ ರಾಹುಲ್ ಕಣ್ಣಿಡಲಿ

ಈ ಆರು ರಾಜ್ಯಗಳ ಮೇಲೆ ರಾಹುಲ್ ಕಣ್ಣಿಡಲಿ

ಹಾಗೆ ನೋಡಿದರೆ, ರಾಹುಲ್ ಗಾಂಧಿ ಅವರ ಗಮನವೆಲ್ಲ ಇರಬೇಕಾಗಿರುವುದು, ಇತ್ತೀಚೆಗೆ ಆಡಳಿತ ಸ್ಥಾಪಿಸಿರುವ ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ಮತ್ತು ಉತ್ತಮ ಪ್ರದರ್ಶನ ತೋರಿರುವ ರಾಜ್ಯಗಳಾದ ಗುಜರಾತ್ ಮತ್ತು ಕರ್ನಾಟಕ. ಇನ್ನು, ಪಂಜಾಬ್ ನಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ ಮತ್ತು ಆಡಳಿತ ಚುಕ್ಕಾಣಿಯನ್ನೂ ಹಿಡಿದಿದೆ. ಗುಜರಾತ್ ನಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸೀಟು ಗೆದ್ದಿರದಿದ್ದರೂ, ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಿತ್ತು. ಅಲ್ಲಿ ಬಿಜೆಪಿ 26 ಸಂಸದೀಯ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ರಾಜಸ್ಥಾನದಲ್ಲಿಯೂ ಅದೇ ಕಥೆಯಾಗಿತ್ತು. ಇರುವ 25 ಸೀಟುಗಳಲ್ಲಿ ಬಿಜೆಪಿ 24ರಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ ಗೆ ಸಿಕ್ಕಿದ್ದು ಬಿಗ್ ಬೋಂಡಾ. ಆದರೆ, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ತೋರಿದೆ. ಕರ್ನಾಟಕದಲ್ಲಿ ಒಟ್ಟು ಕಾಂಗ್ರೆಸ್ಸಿಗಿರುವುದು 10 ಸೀಟುಗಳು.

ಸೀಟು ನೂರು ದಾಟಿದಷ್ಟೇ ಪಟ್ಟ ಏರು

ಸೀಟು ನೂರು ದಾಟಿದಷ್ಟೇ ಪಟ್ಟ ಏರು

ಇತ್ತೀಚೆಗೆ ನಡೆಸಲಾಗಿರುವ ಸಮೀಕ್ಷೆಗಳ ಪ್ರಕಾರ, ಭಾರತೀಯ ಜನತಾ ಪಕ್ಷಕ್ಕೆ ಸುಲಭ ಬಹುಮತ ದೊರೆಯುವುದು ದುರ್ಲಭ. 250 ಸೀಟುಗಳನ್ನು ಗೆದ್ದರೆ ಹೆಚ್ಚು ಎಂಬ ಮಾತುಗಳು ಕೇಳಿಬರುತ್ತಿವೆ. ಯಾರಿಗೆ ಎಷ್ಟು ಎಂಬುದು ಮೇ 23ರಂದು ಪ್ರಕಟವಾಗಲಿರುವ ಫಲಿತಾಂಶದ ನಂತರ ತಿಳಿಯಲಿದೆ. ಆದರೆ, ಕಾಂಗ್ರೆಸ್ ಪಕ್ಷ ಬಿಜೆಪಿಗೆ ಉತ್ತಮ ಪೈಪೋಟಿ ನೀಡುವ ಸ್ಥಿತಿಯಲ್ಲಾದರೂ ಇದೆಯಾ? ಅದೂ ಇಲ್ಲ. ಈ ಚುನಾವಣೆಯಲ್ಲಿ 120ರಿಂದ 130 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದರಷ್ಟೇ ಇತರ ಪಕ್ಷಗಳೊಂದಿಗೆ ಸೇರಿ ಕೇಂದ್ರದಲ್ಲಿ ಸರಕಾರ ರಚಿಸುವ ಕನಸು ಕಾಣಬಹುದು. ಈ ಕನಸಿಗೆ ತಣ್ಣೀರೆರಚಲು 'ಮಹಾಘಟಬಂಧನ್' ಕೂಡ ಸಿದ್ಧವಾಗಿದೆ. ಅಲ್ಲಿ, ಹೆಚ್ಚು ಸೀಟು ಗೆದ್ದೋನೇ ದೊಡ್ಡಪ್ಪ. ಅಲ್ಲದೆ, ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟವರು ಮಹಾಘಟಬಂಧನ್ ದಲ್ಲಿ ಹಲವರಿದ್ದಾರೆ.

ರಾಜಸ್ಥಾನ ಲೋಕ ಸಮೀಕ್ಷೆ: ಅಸೆಂಬ್ಲಿ ಆಘಾತದ ನಂತರ ಬಿಜೆಪಿ ಚೇತರಿಕೆ

ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಅವಕಾಶ

ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಅವಕಾಶ

ಹಿಂದಿ ಭಾಷಿಕರ ರಾಜ್ಯಗಳನ್ನು ಹೊರತುಪಡಿಸಿದರೆ ರಾಹುಲ್ ಗಾಂಧಿ ಅವರಿಗೆ ಹೆಚ್ಚು ಕ್ಷೇತ್ರ ಗಳಿಸಲು ಉತ್ತಮ ಅವಕಾಶ ಇರುವುದು ಕರ್ನಾಟಕದಲ್ಲಿ. ರಾಜ್ಯದಲ್ಲಿ ಹೇಗಿದ್ದರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವಿದೆ. ಕಾಂಗ್ರೆಸ್ 20 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಜೆಡಿಎಸ್ ಉಳಿದ 8ರಲ್ಲಿ ಸ್ಪರ್ಧೆಗಿಳಿಯಲಿದೆ. ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನ ಬಿಜೆಪಿಗೆ ಅಧಿಕಾರ ಸಿಗದಂತೆ ಚಾಣಾಕ್ಷ ತಂತ್ರಗಾರಿಕೆ ಅನುಸರಿಸಿ, ಕುಮಾರಸ್ವಾಮಿಗೆ ಮುಖ್ಯಮಂತ್ರಿ ಪಟ್ಟ ನೀಡಿದ್ದರು. ಈ ಲೋಕಸಭೆ ಚುನಾವಣೆಯಲ್ಲಿ ಈಗಾಗಲೆ ಹಲವಾರು ಬಾರಿ ಬಂದಿರುವ ರಾಹುಲ್ ಗಾಂಧಿ ಅವರು ಹೆಚ್ಚು ಸೀಟು ಗೆಲ್ಲಲು ಕರ್ನಾಟಕವನ್ನು ನೆಚ್ಚಿಕೊಳ್ಳಬಹುದು. ಆದರೆ, ಅವರು ಅದಕ್ಕಾಗಿ ಉತ್ತರ ಪ್ರದೇಶವನ್ನು ತ್ಯಾಗ ಮಾಡಬೇಕಾಗುತ್ತದೆ. ಅಲ್ಲಿ ಹೇಗಿದ್ದರೂ ಅವರು ಗೆಲ್ಲವುದು 2-3 ಸೀಟು ಮಾತ್ರ ಎಂದು ಸಮೀಕ್ಷೆಗಳೇ ಹೇಳಿವೆ.

ಮಾರ್ಚ್‌ 21ಕ್ಕೆ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ ಸಾಧ್ಯತೆ

ಪ್ರಿಯಾಂಕಾ ಅಸ್ತ್ರ ಪ್ರಯೋಗಿಸುವರೇ?

ಪ್ರಿಯಾಂಕಾ ಅಸ್ತ್ರ ಪ್ರಯೋಗಿಸುವರೇ?

ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ವಾದ್ರಾ ಅಸ್ತ್ರವನ್ನು ಪ್ರಯೋಗಿಸಿರುವ ರಾಹುಲ್ ಗಾಂಧಿ ಅವರು, ಅದೇ ಅಸ್ತ್ರವನ್ನು ಈ ಮೇಲೆ ತಿಳಿಸಿದ ಎಲ್ಲ ರಾಜ್ಯಗಳಲ್ಲಿಯೂ ಬಳಸಿದರೆ, ಅಂದರೆ, ಪ್ರಿಯಾಂಕಾ ಅವರು ಈ ರಾಜ್ಯಗಳಲ್ಲಿಯೂ ಹೆಚ್ಚಿನ ಪ್ರಚಾರ ಮಾಡಿದರೆ, ಇಡೀ ದೇಶದಲ್ಲಿ 100 ಸೀಟುಗಳನ್ನು ದಾಟಲು ಅವರಿಗೆ ಸಾಧ್ಯವಿದೆ. ಅಷ್ಟು ಬಲ ಅವರಲ್ಲಿದ್ದರೆ, ಮಹಾಘಟಬಂಧನ್ ದಲ್ಲಿರುವ ಇತರ ಪಕ್ಷಗಳೊಂದಿಗೆ ಬಿಜೆಪಿಯನ್ನು ಪಕ್ಕಕ್ಕೆ ತಳ್ಳಿ ಸಮ್ಮಿಶ್ರ ಸರಕಾರ ರಚಿಸುವ ಕನಸು ಅವರು ಕಾಣಬಹುದು. ತಮಾಷೆ ಅಂದ್ರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ಆರು ರಾಜ್ಯಗಳಲ್ಲಿ, ಕರ್ನಾಟಕದ ಹತ್ತೂ ಕ್ಷೇತ್ರ ಸೇರಿದಂತೆ ಕಾಂಗ್ರೆಸ್ ಗೆದ್ದಿದ್ದು ಕೇವಲ 15 ಸೀಟುಗಳು ಮಾತ್ರ. ಇದು ಕಾಂಗ್ರೆಸ್ಸಿನ ಹೀನಾಯ ಸಾಧನೆಗೆ ಕನ್ನಡಿ ಹಿಡಿದಂತಿದೆ. ಆದರೆ, ಪರಿಸ್ಥಿತಿ ಈಗ ತುಸು ಬದಲಾಗಿದೆ, ರಾಹುಲ್ ಅವರು ಜನಪ್ರಿಯತೆ ಗಳಿಸಿಕೊಂಡಿದ್ದಾರೆ.

ಉತ್ತರ ಪ್ರದೇಶ ರಾಜಕೀಯದಲ್ಲಿ ಪ್ರಿಯಾಂಕಾ ಪ್ರಭಾವ, ಯೋಗಿ ಏನಂತಾರೆ?

ಇಲ್ಲದಿದ್ದರೆ, ಜುಬ್ಬಾ ಜೇಬಿಗೆ ತೂತು ಗ್ಯಾರಂಟಿ

ಇಲ್ಲದಿದ್ದರೆ, ಜುಬ್ಬಾ ಜೇಬಿಗೆ ತೂತು ಗ್ಯಾರಂಟಿ

ಇನ್ನು ಉಳಿದಂತೆ, ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್, ಇರುವ 39 ಸೀಟುಗಳಲ್ಲಿ ಒಂದಿಷ್ಟು ತನ್ನದಾಗಿಸಿಕೊಂಡರೆ, ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಜೊತೆ ಕೈಕುಲುಕಿಸಿ, ಇರುವ 48 ಕ್ಷೇತ್ರಗಳಲ್ಲಿ ಒಂದಿಷ್ಟು ತನ್ನ ಮಡಲಿಗೆ ಹಾಕಿಕೊಂಡರೆ, ಕೇರಳದಲ್ಲಿ ಒಂದಿಷ್ಟು ಸೀಟು ಗೆದ್ದುಕೊಂಡರೆ, ರಾಹುಲ್ ಗಾಂಧಿ ಅವರು ಪ್ರಧಾನಿ ಹುದ್ದೆಯ ಪೀಠವೇರುವ ಸಾಧ್ಯತೆ ಇರುತ್ತದೆ. ಇದಕ್ಕೆಲ್ಲ, ಅವರಿಗಿಂತ ವರ್ಚಸ್ಸಿನಲ್ಲಿ ಪ್ರಬಲವಾಗಿರುವ ಪ್ರಿಯಾಂಕಾ ವಾದ್ರಾ ಅವರು ಉತ್ತರ ಪ್ರದೇಶ ಬಿಟ್ಟು ಹೊರಬರಲೇಬೇಕು. ಈ ಎಲ್ಲ ರಾಜ್ಯಗಳಲ್ಲಿಯೂ ಪ್ರಚಾರ ಕೈಗೊಂಡು, ರಫೇಲ್, ಚೌಕಿದಾರ್ ಬಿಟ್ಟು ಒಂದಿಷ್ಟು ಅಭಿವೃದ್ಧಿಯ ಮಾತಾಡಿದರೆ, ದೇಶ ಕಟ್ಟುವ ಕನಸನ್ನು ಹಂಚಿಕೊಂಡರೆ ರಾಹುಲ್ ಅವರ ಜೇಬಿಗೆ ಒಂದಿಷ್ಟು ಕ್ಷೇತ್ರಗಳು ಬಿದ್ದಾವು. ಇಲ್ಲದಿದ್ದರೆ ಅವರ ಜುಬ್ಬಾದ ಜೇಬಿಗೆ ತೂತು ಬೀಳುವುದಂತೂ ಗ್ಯಾರಂಟಿ.

English summary
Lok Sabha Elections 2019 : Why Congress should forget Uttar Pradesh and concentrate on other states where Rahul Gandhi and Priyanka Vadra have good chance to win more seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X