Life Tips:ನಮ್ಮ ಬದುಕಿಗೆ ಹಿರಿಯರ ಮಾತುಗಳು ದಾರಿದೀಪ
ನಮ್ಮ ಬದುಕನ್ನು ಒಂದು ಉನ್ನತ ಅಥವಾ ಸುಸಂಸ್ಕೃತ ನೆಲೆಗಟ್ಟಿನಲ್ಲಿ ಮುನ್ನಡೆಸಿಕೊಂಡು ಹೋಗುವ ಮೂಲಕ ಈ ಭೂಮಿ ಮೇಲೆ ಜೀವಂತವಾಗಿದ್ದಷ್ಟು ದಿನ ಸುತ್ತಮುತ್ತಲ ಮಂದಿಗೆ ಬೇಕಾದವರಾಗಿ ಬದುಕಿ ಬಾಳಲು ಅಥವಾ ಈ ರೀತಿಯ ಬದುಕನ್ನು ರೂಢಿಸಿಕೊಳ್ಳಲು ಹಿರಿಯರು ಹಲವಾರು ಅಮೃತವಾಣಿಯನ್ನು ಬರೆದಿಟ್ಟು ಹೋಗಿದ್ದಾರೆ. ಅವುಗಳನ್ನು ದಿನಂಪ್ರತಿ ಉಚ್ಛಾರ ಮಾಡುವುದರೊಂದಿಗೆ ಅದರಲ್ಲಿ ಅಡಗಿರುವ ನಿಗೂಡಾರ್ಥಗಳನ್ನು ಅರಿತು ಮನದಟ್ಟು ಮಾಡಿಕೊಂಡಿದ್ದೇ ಆದರೆ ನಮ್ಮ ತಪ್ಪು ದಾರಿಗಳನ್ನು ಬದಲಿಸಿಕೊಳ್ಳಲು ಸಾಧ್ಯವಾಗಬಹುದು. ಹಾಗೆಯೇ ಒಂದೊಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಅನುಕೂಲವಾಗಲಿದೆ.
ಇವತ್ತು ನಮಗೆ ಹಣ ಸಂಪಾದನೆಯೊಂದೇ ಗುರಿಯಾಗಿದೆ. ಹಣದ ಬಗ್ಗೆ ಪ್ರೀತಿ, ವ್ಯಾಮೋಹ ಹೆಚ್ಚಾಗಿದೆ. ಹೀಗಾಗಿ ಅದರ ಬೆನ್ನು ಹತ್ತಿಹೋಗುತ್ತಿದ್ದೇವೆ. ಹೀಗಾಗಿ ನಮಗೆ ಗೊತ್ತಿಲ್ಲದ ಹಾಗೆ ಸಂಕಷ್ಟಗಳನ್ನು ಎಳೆದುಕೊಳ್ಳುತ್ತಿದ್ದೇವೆ. ಸಂಕಷ್ಟಗಳಿಲ್ಲದೆ ನಮ್ಮ ಪಾಡಿಗೆ ಸುಖಿಗಳಾಗ ಬೇಕಾದರೆ ಎಷ್ಟು ಇದೆಯೋ ಅಷ್ಟರಲ್ಲಿಯೇ ತೃಪ್ತಿ ಪಡುವುದನ್ನು ನಾವು ಕಲಿಯ ಬೇಕಾಗಿದೆ. ಆದರೆ ನಾವು ಯಾರೂ ಅದ್ಯಾವುದನ್ನು ಮಾಡುತ್ತಿಲ್ಲ ಹೀಗಾಗಿಯೇ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ನೆಮ್ಮದಿಯಿಲ್ಲದ ಬದುಕನ್ನು ಸಾಗಿಸುತ್ತಿದ್ದೇವೆ.

ನಾವು ಯಾವಾಗ ಹಣವನ್ನು ಪ್ರೀತಿಸಲು ಆರಂಭಿಸುತ್ತೇವೆಯೋ ನಮಗೆ ಗೊತ್ತಿಲ್ಲದಂತೆ ನಮ್ಮಲ್ಲಿ ದುರಾಸೆಗಳು ತಾಂಡವವಾಡಲು ಶುರುಮಾಡುತ್ತವೆ. ಮತ್ತು ಹಣದ ಮದ ಏನು ಮಾಡಿದರೂ ನಡೆಯುತ್ತದೆ ಎಂಬ ಮಟ್ಟಕ್ಕೆ ಕೊಂಡೊಯ್ದು ಬಿಡುತ್ತದೆ. ನಿಜ ಹೇಳಬೇಕೆಂದರೆ, ಕೆಲವು ಅಮೃತವಾಣಿಗಳನ್ನು ನೋಡಿದ್ದೇ ಆದರೆ ಅದರಲ್ಲಿ ನಮ್ಮ ಬದುಕಿಗೆ ಹತ್ತಿರವಾದ ಮಾತುಗಳು ಅದ್ಭುತವಾಗಿದೆ. ಹಣದ ದಾಹಕ್ಕೆ ಒಳಗಾದವನಿಗೆ ಗುರುವಾಗಲೀ, ಬಂಧುವಾಗಲೀ ಇಲ್ಲ. ಕಾಮ ಪಿಪಾಸಿಗೆ ಹೆದರಿಕೆಯಾಗಲೀ ನಾಚಿಕೆಯಾಗಲೀ ಇಲ್ಲ. ವಿದ್ಯಾಸಕ್ತನಿಗೆ ಸುಖವಾಗಲೀ, ನಿದ್ರೆಯಾಗಲೀ ದೊರೆಯದು. ಹಸಿದವನಿಗೆ ಅಥವಾ ಬಾಯಾರಿದವನಿಗೆ ರುಚಿ-ಶುಚಿಗಳ ಗೊಡವೆಯೇ ಇರುವುದಿಲ್ಲ ಎಂಬುವುದನ್ನು ಅಮೃತವಾಣಿಗಳಲ್ಲಿ ಹೇಳಲಾಗಿದೆ.
ಕಾಮುಕ ವ್ಯಕ್ತಿಗೆ ಭಯ, ಲಜ್ಜೆ ಇರಲ್ಲ
ನಾನು ಸಂಪಾದಿಸಬೇಕು ಅದರಿಂದ ಅಮೂಲ್ಯ ಸಂಪತ್ತನ್ನು ತಂದು ಮನೆಯೊಳಗೆ ಕೂಡಿಟ್ಟು ನಾನೊಬ್ಬ ಸಿರಿವಂತನಾಗಿ ಮೆರೆಯಬೇಕೆಂಬ ಹಂಬಲದಿಂದ ತನ್ನ ಬಂಧು ಬಾಂಧವರೊಂದಿಗೆ ಉತ್ತಮ ರೀತಿಯ ಬಾಂಧವ್ಯ ಹೊಂದದೆ ನಿರ್ದಾಕ್ಷಿಣ್ಯವಾಗಿ ವರ್ತಿಸುವುದರೊಂದಿಗೆ ಯಾವುದೇ ಕಷ್ಟ ಸುಖಗಳಲ್ಲಿ ಸಹಕರಿಸದೆ ಅವರನ್ನು ಹತ್ತಿರದಲ್ಲಿರಿಸಿಕೊಂಡರೆ ತನ್ನ ಸಂಪಾದನೆಗೆ ತೊಂದರೆಯಾದೀತೆಂದು ದೂರವಿರಿಸುತ್ತಾನೆ. ಇದರಿಂದ ಕ್ರಮೇಣ ಅವನ ನಡೆ-ನುಡಿಗೆ ಬೇಸತ್ತು ತಂದೆ ತಾಯಿ ಗುರುವಲ್ಲದೆ ಇತರ ಬಾಂಧವರೂ ದೂರವಾಗುತ್ತಾರೆ. ಕಾಮುಕ ವ್ಯಕ್ತಿಗೆ ಯಾವುದೇ ರೀತಿಯ ಭಯ ಅಥವಾ ಲಜ್ಜೆ ಇರಲಾರದು. ಏಕೆಂದರೆ ಈತ ಇದೆಲ್ಲದಕ್ಕೂ ವಿರುದ್ಧವಾಗಿಯೇ ನಡೆಯುತ್ತಿರುತ್ತಾನೆ.

ಯಾವ ಅಡ್ಡಿ ಆತಂಕ ಎಡರು ತೊಡರುಗಳನ್ನು ಲೆಕ್ಕಿಸದೆ ಮುನ್ನಡೆಯುತ್ತಾನೆ. ಲೋಕದಲ್ಲಿರುವ ಎಲ್ಲರೂ ಕಾಮದ ಬೊಂಬೆಯಾಗಿ ಕಾಣುತ್ತದೆ. ಎಲ್ಲರೊಂದಿಗೆ ಅಸಹ್ಯವಾಗಿ ವರ್ತಿಸುವ ಮೂಲಕ ತನ್ನ ಮಾನ ಮರ್ಯಾದೆಯನ್ನು ಕಳೆದುಕೊಳ್ಳುತ್ತಾನೆ. ಪರಸ್ತ್ರೀ ಸಂಗ ಮಾಡಿ ರೋಗ ರುಜಿನ, ಹಣ ಸಂಪತ್ತು ಕಳೆದುಕೊಂಡು ಮಾನ ಮರ್ಯಾದೆ ಎಲ್ಲವನ್ನೂ ಕಳೆದುಕೊಂಡು ಬದುಕನ್ನೇ ನಾಶ ಮಾಡಿಕೊಳ್ಳುತ್ತಾನೆ.
ಒಂದೊಳ್ಳೆಯ ಜೀವನ ಸಾಗಿಸಲು ಸಹಕಾರಿ
ವಿದ್ಯಾಸಕ್ತನಿಗೆ ಸುಖವೆಂಬುದು ಇರಲಾರದು. ಈ ವಿದ್ಯೆ ಎಂದರೆ ಯಾವುದಾದರೂ ವೃತ್ತಿ ಕಲೆಯಾಗಿಬಹುದು. ಅದನ್ನು ಇತರರಿಂದ ಕಲಿಯಬೇಕಾಗಿರುವುದರಿಂದ ಅವರ ಆದೇಶದಂತೆ ಹಗಲಿರುಳೆನ್ನದೆ ಅಭ್ಯಸಿಸ ಬೇಕಾಗಿರುವುದರಿಂದ ಅವನಿಗೆ ನಿದ್ದೆ ವಿಶ್ರಾಂತಿ ಬಗ್ಗೆ ಗೊಡವೆಯೇ ಇರುವುದಿಲ್ಲ. ಹಸಿದು ಬಾಯಾರಿದವನಿಗೆ ಯಾವ ರುಚಿ ಶುಚಿಗಳ ಗೊಡವೆ ಇರುವುದಿಲ್ಲ.
ಹಸಿವು ತೃಷೆಗಳ ಬಾಧೆಯಿಂದ ಬಳಲಿ ಬೆಂಡಾದ ಆತ ಅಪಕ್ವವಾದ ಆಹಾರಗಳನ್ನು ಅಶುದ್ಧವಾದ ನೀರನ್ನಾದರೂ ಸೇವಿಸಿ ತನ್ಮೂಲಕ ತನ್ನನ್ನು ಕಾಡುತ್ತಿರುವ ಬಾಧೆಯನ್ನು ನಿವಾರಿಸಿಕೊಳ್ಳುತ್ತಾನೆ. ಒಟ್ಟಾರೆಯಾಗಿ ಹೇಳುವುದಾದರೆ ಕೆಲವೊಂದು ಮಾತುಗಳು ಅರ್ಥಗರ್ಭಿತವಾಗಿದ್ದು, ಅವು ನಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಒಂದೊಳ್ಳೆಯ ಜೀವನವನ್ನು ಸಾಗಿಸಲು ಅನುಕೂಲವಾಗಲಿದೆ.












Click it and Unblock the Notifications