ಮನುಷ್ಯ ಸುಖವಲ್ಲದ ಸುಖದ ಬೆನ್ನತ್ತಿದರೆ ಏನಾಗುತ್ತದೆ..?
ಹೊಳೆಯುವುದೆಲ್ಲ ಚಿನ್ನವೆಂದೂ, ಬೆಳ್ಳಗಿರುವುದನ್ನು ಹಾಲೆಂದು ಭ್ರಮಿಸುವ ನಾವು ಸುಖವೇ ಅಲ್ಲದ ಸುಖದ ಭ್ರಮೆಯಲ್ಲಿ ಅದರ ಹಿಂದೆ ಬಿದ್ದು ಹಲವು ಸಂಕಷ್ಟಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತೇವೆ. ಇದನ್ನು ತಪ್ಪಿಸಬೇಕಾದರೆ ಮೊದಲು ನಾವು ಅದು ಸುಖವಲ್ಲ ಬರೀ ಭ್ರಮೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಿದೆ. ಆಗ ಇದ್ದುದನ್ನು ಅನುಭವಿಸಿಕೊಂಡು ನೆಮ್ಮದಿಯಾಗಿರಲು ಸಾಧ್ಯವಾಗುತ್ತದೆ.
ಸ್ವಾಮಿ ಶಿವಾನಂದರು ಹೇಳಿದ ಕಥೆ. ಇದೊಂದು ಕಥೆ ಸಾಕು ನಾವು ಭ್ರಮೆಯಿಂದ ಹೊರ ಬರಲು... ಹಾಗಾದರೆ ಏನಿದು ಕಥೆ? ಇಲ್ಲಿದೆ ನೋಡಿ.. ಒಬ್ಬ ವ್ಯಕ್ತಿ ಮನೆ ಮುಂದೆ ಬಿಟ್ಟಿದ್ದ ಹಲಸಿನ ಹಣ್ಣನ್ನು ನೋಡುತ್ತಾನೆ. ಆದರೆ ಅದು ಅವನನ್ನು ಆಕರ್ಷಿಸಲಿಲ್ಲ. ಏಕೆಂದರೆ ಅದು ನೋಡಲು ನುಣುಪಾಗಿರದೆ ಮೈಮೇಲೆ ಮುಳ್ಳುಗಳಂತಿತ್ತು. ಹೀಗಾಗಿ ಅದರ ಬಗ್ಗೆ ಗಮನಹರಿಸದ ಆತ ದೂರದಲ್ಲಿ ನೇತಾಡುತ್ತಿದ್ದ ಸುಂದರ ತಾಳೆ ಕಾಯಿಯನ್ನು ಕಂಡನು. ಅದರತ್ತ ಆಕರ್ಷಿತನಾಗಿ ಮುಳ್ಳು ಪೊದೆಗಳ ನಡುವೆ ಬೆಳೆದಿದ್ದ ಮರದತ್ತ ಪ್ರಯಾಸ ಪಟ್ಟು ಬಂದನು.

ಮರದ ಮೇಲಿದ್ದ ಕಾಯಿಯನ್ನು ಕೀಳುವುದು ಅಷ್ಟು ಸುಲಭವಾಗಿರಲಿಲ್ಲ. ಆದರೂ ಆತ ತನ್ನ ಛಲ ಬಿಡದೆ ಕಾಯಿಯನ್ನು ಕೀಳುವ ಸಲುವಾಗಿ ಮರವೇರಿದನು. ಆದರೆ ಮರವೇರಲು ಸಾಧ್ಯವಾಗದೆ ಮುಳ್ಳಿನ ಪೊದೆಗೆ ಬಿದ್ದನು. ಈ ಸಂದರ್ಭ ಅವನ ಮೈಗೆ ಮುಳ್ಳುಗಳು ಚುಚ್ಚಿದವು ಆದರೂ ಆತ ಅದನ್ನೆಲ್ಲಾ ಲೆಕ್ಕಿಸದೆ ಮತ್ತೆ ಮರವನ್ನೇರ ತೊಡಗಿದನು.
ಆಗ ಮರದ ಒರಟಾದ ತೊಗಟೆಗಳು ಅವನನ್ನು ಚುಚ್ಚಿದವು. ಮರದಲ್ಲಿದ್ದ ಇರುವೆಗಳು ಕಚ್ಚಿದವು. ಅಲ್ಲಲ್ಲಿ ತರಚಿದ ಗಾಯಗಳಾದವು. ಆದರೆ ಇದ್ಯಾವುದನ್ನೂ ಲೆಕ್ಕಿಸದ ಆತ ಮರದ ಮೇಲ್ಭಾಗ ತಲುಪಿದನು. ಇನ್ನೇನು ಕಾಯಿಯನ್ನು ಕೀಳಬೇಕೆನ್ನುವಷ್ಟರಲ್ಲಿ ಹಾರಾಡುತ್ತಿದ್ದ ಜೇನುನೊಣಗಳು ಕುಟುಕಿದವು.
ಮನೆಯಲ್ಲಿಯೇ ಇದೆ ಸುಖ ನೆಮ್ಮದಿ
ಸುಂದರ ಕಾಯಿಗಳನ್ನು ಕೀಳುವುದೇ ಅವನ ಉದ್ದೇಶವಾಗಿದ್ದರಿಂದ ಇದ್ಯಾವುದರ ಬಗ್ಗೆಯೂ ಆತ ತಲೆಕೆಡಿಸಿಕೊಳ್ಳದ ಶ್ರಮ ಪಟ್ಟು ಕಾಯಿಯ ಗೊಂಚಲಿಗೆ ಕೈ ಹಾಕಿ ಕೀಳತೊಡಗಿದನು. ಆದರೆ ಕೆಲವು ಕೈ ತಪ್ಪಿ ಕೆಳಗೆ ಬಿದ್ದು ಪೊದೆಯಲ್ಲಿ ಕಾಣದಾದವು. ಕೈಗೆ ಸಿಕ್ಕ ಒಂದೆರಡು ಕಾಯಿಗಳೊಂದಿಗೆ ಮರದಿಂದ ಕೆಳಗೆ ಇಳಿದ ಆತ ಕಾಯಿಯನ್ನು ಒಡೆದು ತಿನ್ನುವ ಸಲುವಾಗಿ ಜಜ್ಜಿದನು.

ಒಳಗಿದ್ದ ಕಾಯಿ ಬೆಳೆದು ತಿನ್ನದಾಗದಂತಾಗಿದ್ದವು. ಇದರಿಂದ ನಿರಾಶನಾದ ಆತ ಅದನ್ನೆಲ್ಲಾ ಎಸೆದು ಬೇಸರದಿಂದ ಅಯ್ಯೋ ಕೈಗೆ ಸಿಗುವಂತಿದ್ದ ಹಲಸಿನ ಹಣ್ಣನ್ನು ಬಿಟ್ಟು, ಈ ತಾಳೆ ಕಾಯಿಯನ್ನು ಪಡಬಾರದ ಕಷ್ಟ ಪಟ್ಟು ಕಿತ್ತು ಮೋಸ ಹೋದೆನಲ್ಲ ಎಂದು ಮರುಕ ಪಡುತ್ತಾ ಮನೆ ಕಡೆಗೆ ಹೆಜ್ಜೆ ಹಾಕಿದನು.
ಚುಚ್ಚಿದ ಮುಳ್ಳುಗಳ ನೋವು, ಇರುವೆ, ಜೇನುನೊಣಗಳ ಕಡಿತ, ತರಚಿದ ಗಾಯ, ಮರದ ತೊಗಟೆಗೆ ಸಿಕ್ಕಿ ಚಿಂದಿಯಾದ ಬಟ್ಟೆ, ಬಾಡಿದ ಮುಖದೊಂದಿಗೆ ಮನೆಗೆ ಬಂದ ಮಗನನ್ನು ಕಂಡ ತಂದೆ ಆತನನ್ನು ವಿಚಾರಿಸಿ ಎಲ್ಲವನ್ನೂ ತಿಳಿದುಕೊಂಡು ಮೊದಲೇ ತಾವು ಬಿಡಿಸಿಟ್ಟಿದ್ದ ಹಲಸಿನ ಹಣ್ಣಿನ ತೊಳೆಗಳನ್ನು ನೀಡುತ್ತಾರೆ. ಆತ ಅದನ್ನು ತಿನ್ನುತ್ತಿದ್ದಾಗ ಮೈಮೇಲೆ ಚುಚ್ಚಿದ್ದ ಮುಳ್ಳುಗಳನ್ನು ತೆಗೆದು ಗಾಯಗಳಿಗೆ ಔಷಧಿ ಲೇಪಿಸಿ ಉಪಚಾರ ಮಾಡುತ್ತಾರೆ. ಇದರಿಂದ ಆತ ನೆಮ್ಮದಿಯಾಗಿ ತಂದೆಯ ತೊಡೆಯ ಮೇಲೆಯೇ ಮಲಗಿ ನಿದ್ದೆಗೆ ಜಾರುತ್ತಾನೆ.
ಸುಖದ ಭ್ರಮೆಯಲ್ಲಿ ಬರುವ ಸಂಕಷ್ಟ
ಈ ಕಥೆ ಸುಖವಲ್ಲದ ಸುಖವನ್ನು ಬಯಸಿ ತೆರಳುವವರಿಗೆ ಜ್ಞಾನೋದಯ ನೀಡುತ್ತದೆ. ಅದು ಹೇಗೆಂದರೆ? ಸಾಮಾನ್ಯ ಮನುಷ್ಯನು ತನ್ನ ಪಕ್ಕದಲ್ಲಿಯೇ ಇರುವ ಮಡಿದಯ ಹೃದಯ ಮಂದಿರದಲ್ಲಿ ತನ್ನೆಡೆಗೆ ಇರುವ ಪ್ರೇಮವನ್ನು ಕಡೆಗಣಿಸಿ ದೂರಕ್ಕೆ ಸಾಗುತ್ತಾನೆ. ಏನೋ ಸಾಧಿಸಿ ಬಿಡುತ್ತೇನೆಂಬ ಅಹಂನಿಂದ ಬೀಗುತ್ತಾನೆ. ಎಲ್ಲ ರೀತಿಯ ಸುಖಭೋಗವೂ ತನ್ನ ಗೃಹದಲ್ಲಿಯೇ ಇದೆ ಎಂಬುದನ್ನು ಮರೆಯುತ್ತಾನೆ. ಬಾಹ್ಯ ಸುಖದತ್ತ ವಾಲುತ್ತಾನೆ. ಆಗ ಅವನು ಅವಮಾನವೆಂಬ ಪೊದೆಯೊಳಗೆ ಬೀಳುತ್ತಾನೆ. ಅಪಜಯ ಎಂಬ ಕಲ್ಲನ್ನು ತುಳಿಯುತ್ತಾನೆ.
ಕ್ರಮೇಣ ಸ್ತ್ರೀಯೊಬ್ಬಳ ವ್ಯಾಮೋಹಕ್ಕೆ ಒಳಗಾಗಿ ಅವಳ ಬಲೆಗೆ ಬೀಳುತ್ತಾನೆ. ತನ್ನ ನಿರಾತಂಕ ಜೀವನ, ಭೀತಿ ಚಿಂತೆಗಳಿಲ್ಲದ ಒಂದು ಸುಂದರ ಜೀವನವನ್ನು ಆಕೆಗಾಗಿ ತ್ಯಾಗ ಮಾಡುತ್ತಾನೆ. ಅವಳ ವ್ಯಾಮೋಹದಲ್ಲಿ ಅವಳ ಸುಖಕ್ಕಾಗಿ ಸಾಮರ್ಥ್ಯಕ್ಕಿಂತಲೂ ಹೆಚ್ಚಿದನ್ನೇ ಮಾಡುತ್ತಾನೆ. ಇಂದ್ರಿಯ ತೃಪ್ತಿ ಎಂಬ ಫಲವನ್ನು ಪಡೆಯುವ ಕಾತರದಲ್ಲಿ ಎಲ್ಲ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ಮುನ್ನಡೆಯುತ್ತಾನೆ.
ಕರ್ಮದ ಫಲ ಅರ್ಥವಾದರೆ ಜ್ಞಾನೋದಯ
ಇಂದ್ರಿಯ ತೃಪ್ತಿಯಿಂದ ಬೀಗುವ ಹೊತ್ತಿಗೆ ಅವನನ್ನು ವ್ಯಾಧಿಗಳು ಕಾಡುತ್ತವೆ. ಶರೀರ ರೋಗ ರುಜಿನಗಳ ಗೂಡಾಗುತ್ತದೆ. ಸುತ್ತಲಿನ ಸಂಸಾರ, ಬಂಧು ಬಾಂಧವರು ದೂರವಾಗಿ ಆತ ಒಬ್ಬಂಟಿಯಾಗುತ್ತಾನೆ. ತಾನು ಮಾಡಿದ ಕರ್ಮದ ಫಲ ಅರ್ಥವಾಗುತ್ತದೆ. ಆಗ ಅವನಿಗೆ ಜ್ಞಾನೋದಯವಾಗುತ್ತದೆ. ತನ್ನ ಗೃಹದೆಡೆಗೆ ನಡೆಯುತ್ತಾನೆ. ಅಲ್ಲಿ ಅವನನ್ನು ಕ್ಷಮಿಸಿ ಮಡದಿ ಉಪಚಾರ ಮಾಡುತ್ತಾಳೆ. ಅಲ್ಲಿ ಆತ ವಿಷಯಾಪೇಕ್ಷೆಗಳನ್ನು ಮರೆತು ನಿಶ್ಚಿಂತನಾಗಿ ನಿದ್ದೆ ಮಾಡುತ್ತಾನೆ.












Click it and Unblock the Notifications