ಮೈಮನಸ್ಸನ್ನು ಹಗುರವಾಗಿಸುವುದು ಅಂದರೆ ಏನು? ಹೇಗೆ?
ಮಾನಸಿಕ ಮತ್ತು ದೈಹಿಕ ಇದೆರಡನ್ನು ಸಮತೋಲನದಲ್ಲಿಡುವಲ್ಲಿ ವ್ಯಾಯಾಮ ಮತ್ತು ಹವ್ಯಾಸ ಎರಡು ಕೂಡ ಸಹಕಾರಿಯಾಗಿದೆ ಎಂದರೆ ಅಚ್ಚರಿಯಾಗಬಹುದು. ಆದರೆ ಇದು ನಿಜ ಎಂಬುದು ಇದೆರಡರಲ್ಲಿ ತೊಡಗಿಸಿಕೊಂಡವರನ್ನು ನೋಡಿದರೆ ಗೊತ್ತಾಗಿ ಬಿಡುತ್ತದೆ. ನಮ್ಮ ನಿತ್ಯದ ಬದುಕಿನ ನಡುವೆ ನಿಯಮಿತ ವ್ಯಾಯಾಮ, ಜತೆಗೆ ತಮ್ಮ ಹವ್ಯಾಸಕ್ಕೊಂದಿಷ್ಟು ಸಮಯ ನೀಡುವುದು. ಹೀಗೆ ಮಾಡುತ್ತಾ ಬಂದರೆ ಎಲ್ಲೋ ಒಂದು ಕಡೆ ಮೈಮನಸ್ಸು ಹಗುರವಾದ ಅನುಭವವಾಗುತ್ತದೆ.
ಈಗೀಗ ಹೆಚ್ಚಿನವರಿಗೆ ಮೊಬೈಲ್ ನೋಡುವುದನ್ನು ಬಿಟ್ಟರೆ ಮತ್ಯಾವ ಹವ್ಯಾಸವೂ ಇಲ್ಲದಂತಾಗಿದೆ. ಹಾಗೆಂದು ಮೊಬೈಲ್ ನೋಡಲೇ ಬೇಡಿ ಎನ್ನುವುದು ಇವತ್ತಿನ ಪರಿಸ್ಥಿತಿಯಲ್ಲಿ ಮೂರ್ಖತನವಾಗಿ ಬಿಡುತ್ತದೆ. ಆದರೆ ಎಲ್ಲದಕ್ಕೂ ಮಿತಿಯಿದ್ದರೆ ಉತ್ತಮ. ಮೊಬೈಲ್ ನಡುವೆ ಒಂದೊಳ್ಳೆಯ ಆರೋಗ್ಯಕಾರಿ ಹವ್ಯಾಸಗಳು ನಮ್ಮಿಂದ ದೂರವಾಗುತ್ತಿದೆ. ಹೀಗಾಗಿ ನಾವು ದೈಹಿಕ ಮತ್ತು ಮಾನಸಿಕ ಎರಡು ವಿಚಾರದಲ್ಲಿಯೂ ಕುಗ್ಗಿ ಹೋಗುತ್ತಿದ್ದೇವೆ.

ನಾವು ಧೀರ್ಘ ಕಾಲದ ರೋಗಗಳೊಂದಿಗೆ ಬದುಕಬೇಕಾದ ಅನಿವಾರ್ಯತೆಯಲ್ಲಿದ್ದೇವೆ. ಪ್ರತಿದಿನವೂ ಮಾತ್ರೆ ನುಂಗಬೇಕಾಗಿದೆ. ಆ ಮಾತ್ರೆ ಆರೋಗ್ಯವನ್ನು ಕಾಪಾಡುವ ಜತೆಗೆ ನೀವೊಬ್ಬರು ರೋಗಿ ಎಂಬುದನ್ನು ಪ್ರತಿ ನಿತ್ಯ ನೆನಪಿಸುತ್ತದೆ. ಆದರೆ ಮಾತ್ರೆ ನುಂಗಿದ ಮೇಲೆಯೂ ನಾವು ಆರೋಗ್ಯವಾಗಿದ್ದೇವೆ ಎಂಬ ಧೈರ್ಯ ನೀಡುವುದು ನಮ್ಮ ಮನಸ್ಸು. ಅದು ಗಟ್ಟಿಯಾಗಿದ್ದರೆ ಮಾತ್ರ ನಾವು ದೈಹಿಕವಾಗಿ ಆರೋಗ್ಯವಾಗಿರಲು ಸಾಧ್ಯ.
ಯೌವನದ ಯಡವಟ್ಟು ಕಂದಾಯ ಕೇಳುತ್ತದೆ
ಯೌವನದಲ್ಲಿ ಮಾಡಿಕೊಳ್ಳುವ ಹತ್ತಾರು ಎಡವಟ್ಟುಗಳ ಪೈಕಿ ಹಲವು ವಯಸ್ಸಾದಂತೆಲ್ಲ ಕಂದಾಯ ಕೇಳಲಾರಂಭಿಸುತ್ತದೆ. ನಮಗೆ ಗೊತ್ತಿಲ್ಲದಂತೆ ಕಾಯಿಲೆಗಳು ಬಾಧಿಸಲಾರಂಭಿಸುತ್ತವೆ. ಬದುಕಬೇಕಾದರೆ ದುಡಿಯಬೇಕು, ದುಡಿಯಬೇಕಾದರೆ ದೈಹಿಕ ಶಕ್ತಿ ಬೇಕು, ದೈಹಿಕ ಶಕ್ತಿಗೆ ಆರೋಗ್ಯ ಚೆನ್ನಾಗಿರಬೇಕು, ಆರೋಗ್ಯ ಚೆನ್ನಾಗಿರಬೇಕಾದರೆ ಶಿಸ್ತಿನ ಜೀವನ ರೂಢಿಸಿಕೊಳ್ಳಬೇಕು, ದುಶ್ಚಟಗಳಿಂದ ದೂರವಿರಬೇಕು. ಹೀಗೆ ಒಂದಕ್ಕೊಂದು ಬದುಕಿನ ಸರಪಳಿ ಜೋಡಣೆಯಾಗಿರುತ್ತದೆ.
ಇಲ್ಲಿ ಮುಖ್ಯವಾಗಿ ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇ ಬೇಕಾಗಿದೆ. ನಮ್ಮ ಸಂಪಾದನೆಯಲ್ಲಿ ನಾವು ಎಲ್ಲದಕ್ಕೂ ಇಂತಿಷ್ಟು ಹಣ ಅಂಥ ಎತ್ತಿಡುತ್ತೇವೆ. ಆದರೆ ಆರೋಗ್ಯದ ವಿಚಾರಕ್ಕೆ ಹಣ ಎತ್ತಿ ಇಡುವವರು ಕಡಿಮೆಯೇ.. ಅಯ್ಯೋ ಆಗ ನೋಡಿಕೊಳ್ಳೋಣವೆಂದು ಉಡಾಫೆ ತೋರಿಸುತ್ತೇವೆ. ನಮಗೆ ನಮ್ಮ ಆರೋಗ್ಯ ಎಷ್ಟು ಮುಖ್ಯ ಎಂಬುದು ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರಿದಾಗಲೇ ಗೊತ್ತಾಗುವುದು. ಮತ್ತು ಇವತ್ತಿನ ಬದುಕಿನಲ್ಲಿ ಚಿಕಿತ್ಸೆ ಎಷ್ಟು ದುಬಾರಿ ಎನ್ನುವುದು ಆಸ್ಪತ್ರೆ ಸೇರಿ ಸಂಕಷ್ಟ ಅನುಭವಿಸಿದವರಿಗಷ್ಟೆ ಅರಿವಿಗೆ ಬರುವುದು.

ಮಧ್ಯಮ ವರ್ಗದವರದ್ದು ಸಂಕಷ್ಟದ ಬದುಕು
ಬಹುತೇಕ ಮಧ್ಯಮ ವರ್ಗದವರ ಬದುಕು ದುಡಿಮೆಗಷ್ಟೇ ಸೀಮಿತವಾಗಿ ಬಿಟ್ಟಿರುತ್ತದೆ. ಬರುವ ಆದಾಯದಲ್ಲಿ ಜೀವನ ನಿರ್ವಹಣೆಯೇ ಕಷ್ಟವಾಗಿರುವಾಗ ಆತ ಆರೋಗ್ಯ ವಿಮೆಗಳನ್ನು ಮಾಡಿಸುವುದು ತಾನೆ ಹೇಗೆ? ಇದೆಲ್ಲದರ ನಡುವೆ ಬಿಪಿ,ಶುಗರ್ ಸೇರಿದಂತೆ ಹಲವು ಕಾಯಿಲೆಗಳು ನಮ್ಮನ್ನು ಧೀರ್ಘ ಕಾಲದ ತನಕ ಬಾಧಿಸುವ ರೋಗಗಳಾಗಿವೆ. ಹೀಗಾಗಿ ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾದರೆ ನಿತ್ಯ ಮಾತ್ರೆ ಸೇವಿಸಲೇ ಬೇಕಾಗಿದೆ. ಅದಕ್ಕೆ ಇಂತಿಷ್ಟು ಹಣ ಅಂಥ ವಿನಿಯೋಗಿಸಬೇಕಾಗಿದೆ.
ಕೆಲವು ಕಾಯಿಲೆಗಳಿಗೆ ಮಾತ್ರೆ ಜತೆಯಲ್ಲಿ ನಮ್ಮ ಲೈಫ್ ಸ್ಟೈಲ್ ಗಳನ್ನು ಕೂಡ ಬದಲಾಯಿಸಿಕೊಳ್ಳುವುದು ಬಹುಮುಖ್ಯವಾಗುತ್ತದೆ. ಊಟ ತಿಂಡಿಗಳಲ್ಲಿಯೂ ಶಿಸ್ತನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಮಧುಮೇಹಕ್ಕೆ ಯಾವ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಬೇಕೆಂದು ವೈದ್ಯರು ಸಲಹೆ ನೀಡುತ್ತಾರೋ ಅದನ್ನು ಪಾಲಿಸಬೇಕು. ಅದರಂತೆ ರಕ್ತದೊತ್ತಡ ಇನ್ನಿತರ ಕಾಯಿಲೆಗಳ ನಿಯಂತ್ರಣಕ್ಕೂ ಅದರದ್ದೇ ಆದ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇಲ್ಲದೆ ಹೋದರೆ ಮಾತ್ರೆ ಸೇವಿಸಿಯೂ ಪ್ರಯೋಜನವಾಗುವುದಿಲ್ಲ.
ಕಾಳಜಿ ಮತ್ತು ಎಚ್ಚರಿಕೆ ಸದಾ ಇರಬೇಕು
ಇವತ್ತು ಎಲ್ಲರೂ ರಾಸಾಯನಯುಕ್ತ, ಕಲಬೆರಕೆ, ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸೇವಿಸುವಂತಾಗಿದೆ. ಹೀಗಾಗಿ ಯಾವ ಕಾಯಿಲೆ ಯಾವಾಗ ನಮಗೆ ತಗಲುತ್ತದೆ ಎಂಬುದನ್ನು ಹೇಳುವುದು ಕಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಒಂದಷ್ಟು ಮುಂಜಾಗ್ರತೆ, ಮತ್ತೊಂದಷ್ಟು ಕಾಳಜಿ ಮತ್ತು ಎಚ್ಚರಿಕೆಗಳನ್ನು ವಹಿಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ.
ಇದೆಲ್ಲದರ ನಡುವೆಯೂ ನಾವು ನಮ್ಮ ಬಗ್ಗೆ ಕಾಳಜಿ ವಹಿಸಲು ಮರೆಯಬಾರದು ದಿನನಿತ್ಯದ ಚಟುವಟಿಕೆಯ ಬದುಕಿನಲ್ಲಿ ದೀರ್ಘಕಾಲದ ಅನಾರೋಗ್ಯವನ್ನು ಸರಿದೂಗಿಸುತ್ತಾ ಸಾಗುವುದು ಸುಲಭವಲ್ಲ ಅದೊಂದು ರೀತಿಯ ತಪಸ್ಸಿನಂತೆಯೇ.. ಹೀಗಾಗಿ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ತೊಂದರೆಗಳು ದೇಹವನ್ನೇ ಕಾಡುವುದು. ಆದರೆ ಆ ದೇಹಕ್ಕೆ ಶಕ್ತಿ ತುಂಬ ಬೇಕಾದರೆ ಮನಸ್ಸು ಆರೋಗ್ಯವಾಗಿರಬೇಕು. ಹೀಗಾಗಿ ಎಲ್ಲರ ತಾಪತ್ರಯಗಳ ನಡುವೆಯೂ ಮನಸ್ಸಿನ ಆರೋಗ್ಯದ ಕಡೆಗೂ ಒತ್ತು ನೀಡುವುದು ಅಗತ್ಯವಾಗಿದೆ.
ಒಂದೊಳ್ಳೆಯ ಹವ್ಯಾಸ ಅಳವಡಿಸಿಕೊಳ್ಳಿ
ನಮ್ಮೆಲ್ಲ ತೊಂದರೆಗಳು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರದಂತೆ ನೋಡಿಕೊಳ್ಳುವುದು ಕೂಡ ನಮಗೊಂದು ಸವಾಲ್ ಎಂದರೆ ತಪ್ಪಾಗಲಾರದು. ಹೀಗಾಗಿ ಮೊಬೈಲ್ ಆಚೆಗಿಟ್ಟು ಒಂದಷ್ಟು ಸಮಯವನ್ನು ಒಳ್ಳೆಯ ಹವ್ಯಾಸದ ಕಡೆಗೆ ವಾಲಿಕೊಳ್ಳಿ, ಮನೆಯಲ್ಲಿ ಗಿಡ ನೆಟ್ಟು ಅದರ ಪೋಷಣೆ ಮಾಡಿ, ಒಂದೊಳ್ಳೆಯ ಪುಸ್ತಕಗಳನ್ನು ಓದಿ, ಸಮಯ ಮಾಡಿಕೊಂಡು ಪ್ರಯಾಣ ಮಾಡಿ ಹೊಸ ಸ್ಥಳಕ್ಕೆ ಭೇಟಿ ನೀಡಿ, ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಆತ್ಮೀಯರೊಂದಿಗೆ ಬೆರೆತು ರೋಗವನ್ನು ಮರೆತು ಮಾತನಾಡಿ ಖುಷಿ ಹಂಚಿಕೊಳ್ಳಿ... ಖುಷಿಪಡಿ...












Click it and Unblock the Notifications