"ಶಿಕ್ಷಣ ಸಚಿವರೇ, ಮದರಸಾಗಳಷ್ಟೇ ಅಲ್ಲ, ಮಠ, ಚರ್ಚು, ಬಸದಿ ಯಾವುದೇ ಇದ್ದರೂ ಏಕರೂಪ ಶಿಕ್ಷಣ ತನ್ನಿ"
ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಶಾಲೆಗಳಲ್ಲಿ ಮುಂದಿನ ವರ್ಷದಿಂದ ಭಗವದ್ಗೀತೆ ಹೇಳಿಕೊಡುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಪ್ರಾಯಶಃ ಮುಂಬರುವ ವರ್ಷಗಳಲ್ಲಿ ಬೈಬಲ್, ಕುರ್‌ಆನ್, ಗ್ರಂಥಸಾಹಿಬ್ ಒಂದೊಂದನ್ನೇ ಪರಿಚಯಿಸಬಹುದೇನೋ! ನಾಗೇಶ್ ಅವರು ಈಚೆಗೆ ಮಾತನಾಡುತ್ತಾ, ಮದರಸಾಗಳಲ್ಲಿನ ಶಿಕ್ಷಣ ಇಂದಿನ ಅಗತ್ಯಗಳಿಗೆ ತಕ್ಕಂತೆ ಇಲ್ಲ. ಏಕರೂಪದ ಶಿಕ್ಷಣ ಜಾರಿಗೆ ತರುವುದಕ್ಕೆ ಬಯಸುವುದಾದರೆ ನೆರವು ನೀಡುವುದಕ್ಕೆ ಸಿದ್ಧ ಅಂತಲೂ ಎಂದಿದ್ದಾರೆ. ಅಬ್ಬಾ, ಅಂಥದ್ದೊಂದು ನಿರ್ಧಾರ ಆದಷ್ಟು ಬೇಗ ಜಾರಿಗೆ ಬರಬೇಕಿದೆ. ಜತೆಗೆ ನಾಗೇಶ್ ಅವರು ಕರ್ನಾಟಕದ ವ್ಯಾಪ್ತಿಯಲ್ಲಿ ತಮ್ಮ ಪ್ರಯತ್ನವನ್ನು ಇನ್ನಷ್ಟು ವಿಸ್ತರಿಸಿಕೊಂಡರೆ ಚೆನ್ನಾಗಿರುತ್ತದೆ. ಕೆಲವು ಮಠಗಳು (ನನಗೆ ತಿಳಿದಿರುವಂತೆ) ಸಂಪ್ರದಾಯ ಉಳಿಸಿಕೊಳ್ಳುವ ಹಾಗೂ ಧರ್ಮವನ್ನು ಕಾಪಾಡಿಕೊಳ್ಳುವ ಕಾರಣ ನೀಡಿ, ಏಳೆಂಟು ವರ್ಷದ ಗಂಡು ಮಕ್ಕಳಿಗೆ ಆಗಿನಿಂದಲೇ ಇಂದಿನ ಅಗತ್ಯಗಳಿಗೆ ತಕ್ಕಂತೆ ಇಲ್ಲದ ಶಿಕ್ಷಣವನ್ನು ನೀಡುತ್ತಿವೆ. ತಮಗೆ ಶಿಕ್ಷಣ ನೀಡುತ್ತಿರುವ ಆ "ಗುರುಕುಲ"ದಿಂದ ಆಚೆ ಬಂದ ಮೇಲೆ ಒಂದೇ ಬಗೆಯ ವೃತ್ತಿ ಬದುಕಿಗೆ ಜೋತು ಬೀಳಬೇಕಾದ ಅನಿವಾರ್ಯಕ್ಕೆ ಆ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ.
ಸ್ವತಃ ಸಚಿವರೇ ಇಂಥದ್ದೊಂದು ಗಂಭೀರ ಹಾಗೂ ಮುಖ್ಯವಾದ ವಿಚಾರವನ್ನು ಎತ್ತಿದ್ದಾರೆ. ಆದ್ದರಿಂದ "ಇಂದಿನ ಅಗತ್ಯದ ಶಿಕ್ಷಣ" ಎಂಬ ಚೌಕಟ್ಟಿನೊಳಗೆ ಯಾವುದೆಲ್ಲ ಬರುತ್ತದೆ ಎಂಬುದಕ್ಕೆ ವ್ಯಾಖ್ಯಾನದ ಅಗತ್ಯ ಇದೆ. ಏಕೆಂದರೆ, ಕರ್ನಾಟಕವಷ್ಟೇ ಅಲ್ಲ, ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಕಾನ್‌ಗಳಂತೆ ಬಿಂಬಿತ ಆಗಿರುವ ಇನ್ಫಿ ನಾರಾಯಣ ಮೂರ್ತಿ ಹಾಗೂ ಮೋಹನ್‌ದಾಸ್ ಪೈ ಅಂಥವರು ಭಾರತದ ಶಿಕ್ಷಣ ವ್ಯವಸ್ಥೆಯೇ (ಮದರಸಾ, ಕಾಲೇಜು ಮತ್ತೊಂದು ಅನ್ನೋ ತಾರತಮ್ಯವೇ ಇಲ್ಲದೆ) ಉತ್ತಮವಾಗಿಲ್ಲ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ, ಹೇಳುತ್ತಾರೆ. ಅಷ್ಟೇ ಅಲ್ಲ, ಎಂಜಿನಿಯರಿಂಗ್ ಸೇರಿದಂತೆ ಯಾವುದೇ ಡಿಗ್ರಿ ತೆಗೆದುಕೊಂಡು ಬರುವವರು ನೇರವಾಗಿ ಒಂದು ಕಂಪೆನಿಗೆ ಲಾಯಕ್ಕಾಗಬಹುದು ಎಂಬಂತೆ ಇರುವುದಿಲ್ಲ ಎನ್ನುತ್ತಾರೆ. ಆದ್ದರಿಂದ ಒಂದು ಸಮಿತಿಯನ್ನು ರಚಿಸಿ, ಇಂದಿನ ಅಗತ್ಯದ ಶಿಕ್ಷಣ ಏನು ಎಂದು ನಾಗೇಶ್ ಅವರ ಪರಿಭಾಷೆಯಲ್ಲಿ ಹಾಗೂ ಇನ್ಫಿ ನಾರಾಯಣ ಮೂರ್ತಿ ಮತ್ತಿತರರ ಪರಿಭಾಷೆಯಲ್ಲಿ ವ್ಯಾಖ್ಯಾನ ನೀಡಿದರೆ ಅನುಕೂಲ ಆದೀತು. ಏಕೆಂದರೆ ಈ ದೇಶದ ಕೋಡು ಎಂಬಂತೆ ಇರುವ ಉದ್ಯಮಿಗಳೇ ಹೇಳಿದ ಮೇಲೆ ಮದರಸಾಗಳಷ್ಟೇ ಅಲ್ಲ, ಉಳಿದಂತೆಯೂ ಶಿಕ್ಷಣ ವ್ಯವಸ್ಥೆ ಚೆನ್ನಾಗಿಲ್ಲ ಅಂತಲೇ ಆಯಿತಲ್ಲವಾ?
ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿರಲಿ
ಹೀಗೆ ಅಗತ್ಯ ಶಿಕ್ಷಣ ನೀಡುತ್ತಿಲ್ಲ ಎಂದು ಖಾತ್ರಿ ಆದ ಮೇಲೆ ಮದರಸಾ, ಚರ್ಚ್, ಮಠ, ಬಸದಿ ಹೀಗೆ ಯಾವುದೇ ಧರ್ಮ, ಜಾತಿಯ ಮುಲಾಜು ನೋಡದೆ ಏಕರೂಪ ಶಿಕ್ಷಣ ನೀಡುವ ಬಗ್ಗೆ ಯೋಜನೆ ರೂಪಿಸುವುದಕ್ಕೆ ಅನುಕೂಲ ಆಗುತ್ತದೆ. ಹೇಗಿದ್ದರೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮುಂದಿನ ವರ್ಷದಿಂದ ಜಾರಿಗೆ ತರುವುದಕ್ಕೆ ಪ್ರಯತ್ನ ನಡೆದಿದೆ. ಈ ಸಂದರ್ಭದಲ್ಲಿ ಇದೂ ಆಗಿಬಿಡಲಿ. ಇಲ್ಲಿ ಇನ್ನೂ ಒಂದು ವಿಚಾರವನ್ನು ವಿಷಯದ ಆಚೆಗೆ ಪ್ರಸ್ತಾಪಿಸಬೇಕು. ಪಕ್ಕದ ತಮಿಳುನಾಡಿನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರಂತೆ. ಅಲ್ಲಿನ ಒಬ್ಬ ಪತ್ರಕರ್ತರು ಸಂದರ್ಶನವೊಂದರಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅದು ಇವತ್ತಿನ ಅಗತ್ಯಗಳಿಗೆ ಇಲ್ಲ ಎಂಬುದು ಅವರ ಆರೋಪವಾಗಿತ್ತು. ಆದರೆ ಏನು ಮಾಡುವುದಕ್ಕೆ ಸಾಧ್ಯ, ಜಗ್ಗಿ ವಾಸುದೇವ್ ಅವರ ವಾಗ್ಝರಿಗೆ ಆ ಪತ್ರಕರ್ತನ ಧ್ವನಿಗಿಂತ ಹೆಚ್ಚಿನ ಒಪ್ಪಿಸುವ ಶಕ್ತಿ ಇದೆ. ಆ ಮಕ್ಕಳಿಗೆ ತಮಗೇನು ಬೇಕು ಎಂದು ಹೇಳುವ ಬುದ್ಧಿಶಕ್ತಿ ಇಲ್ಲ. ತಂದೆ- ತಾಯಿಗಳ ಮನಸ್ಸಲ್ಲಿ ತಮ್ಮ ಮಕ್ಕಳಿಗೆ ನಿಜವಾಗಲೂ ಬೇಕಾದದ್ದು- ಅಗತ್ಯವಾದದ್ದು ಸಿಗುತ್ತಿದೆ ಅನ್ನೋ ನಂಬಿಕೆಯೂ ಇರಬಹುದು. ಈ ರೀತಿ ಕರ್ನಾಟಕದಲ್ಲಿ ಬೇಕಾದಷ್ಟಿವೆ. ಆ ಕಡೆಗೆ ಸಚಿವರು ಕಣ್ಣು ಹಾಯಿಸಬೇಕು.

ಆದರೆ, ಏಕರೂಪದ ಶಿಕ್ಷಣ ಅನ್ನುವುದು ಇದೆಯಲ್ಲಾ, ಅದನ್ನು ಕೇಳಿದರೆ ರೋಮಾಂಚನ ಆಗುತ್ತದೆ. ಶಿಕ್ಷಣ ಸಚಿವರಾಗಿ ಬಿ.ಸಿ.ನಾಗೇಶ್ ಅವರ ನಿರ್ಧಾರದ ಬಗ್ಗೆ ಹೆಮ್ಮೆಯೂ ಎನಿಸುತ್ತದೆ. ಹಾಗೇ ಬಿಡುವು ಮಾಡಿಕೊಂಡು ಒಮ್ಮೆ ಬೆಂಗಳೂರಿನ ನಾರ್ಥ್ ರೋಡ್‌ನ ನ್ಯಾಷನಲ್ ಕಾಲೇಜಿನ ಬಳಿ ಇರುವ ಉತ್ತರಾದಿ ಮಠದಿಂದ ನಡೆಯುವ ಗುರುಕುಲಕ್ಕೆ ಹಾಗೂ ಪೇಜಾವರ ಮಠದಿಂದ ನಡೆಯುವ ವಿದ್ಯಾಪೀಠಕ್ಕೆ ಹೋದಲ್ಲಿ ಚೆಂದ. ಇನ್ನು ಶೃಂಗೇರಿ ಮಠದಲ್ಲೂ ಗುರುಕುಲ ಇದೆ. ಅಲ್ಲಿಗೂ ಹೋಗಿಬನ್ನಿ. ಒಂದು ವೇಳೆ ಇವೆಲ್ಲ ಆದರ್ಶವಾಗಿ ಕಂಡಲ್ಲಿ ಅಲ್ಲಿ ಅನುಸರಿಸುತ್ತಿರುವ ಪದ್ಧತಿಯನ್ನು ಇಡೀ ರಾಜ್ಯದಲ್ಲಿ ಎಲ್ಲೆಲ್ಲ ಧಾರ್ಮಿಕ ನೆಲೆಗಟ್ಟಿನ ಶಿಕ್ಷಣ ನೀಡಲಾಗುತ್ತಿದೆಯೋ ಅದು ಮಂದಿರ, ಮಸೀದಿ, ಚರ್ಚು ಏನೇ ಇರಲಿ, ಎಲ್ಲ ಕಡೆಯೂ ಜಾರಿಗೆ ತರಬಹುದು. ಅಯ್ಯೋ ಈ ಎಲ್ಲ ಗುರುಕುಲಗಳು ಹಾಗೂ ಮದರಸಾಗಳು ಎರಡೂ ಒಂದೇ ಆಗಲು ಸಾಧ್ಯವಾ? ಇಂಥ ಪ್ರಶ್ನೆ ಕೇಳುವುದೇ ಅಕ್ಷಮ್ಯ ಎಂದು ಸಿಟ್ಟು ಮಾಡಿಕೊಳ್ಳದಿರಿ.
ಏಕೆಂದರೆ, ಹೀಗೆ ಪ್ರಶ್ನೆ ಮಾಡುವುದನ್ನು ಹಾಗೂ ಹೋಲಿಕೆ ಮಾಡುವುದನ್ನು ಹೇಳಿಕೊಟ್ಟಿರುವುದು ಈ ದೇಶದಲ್ಲಿನ ಶೈಕ್ಷಣಿಕ ವ್ಯವಸ್ಥೆಯೇ. ಹೇಗೂ ಕೈಗೆ ಪೊರಕೆ ತೆಗೆದುಕೊಂಡ ಮೇಲೆ ಇಡೀ ಮನೆಯನ್ನು ಸ್ವಚ್ಛಗೊಳಿಸಿದರೆ ಉತ್ತಮ ಅಲ್ಲವೆ. ಮದರಸಾದಲ್ಲಿ ಓದುವ ವಿದ್ಯಾರ್ಥಿಗಳ ಬಗ್ಗೆ ಅಕ್ಕರಾಸ್ಥೆ ತೋರಿಸಿ, ಉಳಿದ ಕಡೆಗಳಲ್ಲಿ ಇರುವವರ ಬಗ್ಗೆ ತೋರಿಸಲಿಲ್ಲ ಅಂದರೆ ತಪ್ಪಾಗುವುದಿಲ್ಲವೆ? ಇನ್ನು ಮದರಸಾಗಳ ಬಗ್ಗೆ ತಜ್ಞರು, ಪರಿಣತರು ಅನ್ನಿಸಿಕೊಂಡವರ ವರದಿ, ಶಿಫಾರಸು ಏನಾದರೂ ಶಿಕ್ಷಣ ಸಚಿವರ ಕೈ ಸೇರಿರಬಹುದಾ ಎಂಬ ಪ್ರಶ್ನೆಯೂ ಇದೆ. ಹಾಗೇ ಈ ಮೇಲೆ ತಿಳಿಸಿದ ವಿದ್ಯಾಪೀಠ, ಗುರುಕುಲದ ಶಿಕ್ಷಣ ವ್ಯವಸ್ಥೆ ಬಗ್ಗೆಯೂ ವರದಿ ತರಿಸಿಕೊಳ್ಳುವುದು ಉತ್ತಮ. ಇಡೀ ರಾಜ್ಯದ ಶಿಕ್ಷಣ ವ್ಯವಸ್ಥೆಗೇ ಹೊಸ ದಿಕ್ಕು ತೋರಬಲ್ಲಂಥ ಶಕ್ತಿ ಇರುವವರಂತೆ ಕಾಣುತ್ತಿರುವ ಬಿ.ಸಿ.ನಾಗೇಶ್ ಅವರಿಂದ ಉತ್ತರ ನಿರೀಕ್ಷಿಸುತ್ತಾ...
-
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
SSLC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಒಟ್ಟು ಅಂಕ 625ರ ಬದಲು 525ಕ್ಕೆ ಇಳಿಕೆ, ತೃತೀಯ ಭಾಷೆಗೆ ಗ್ರೇಡ್ -
ಹಿಂದಿ ಹೆಚ್ಚು ಜನ ಮಾತನಾಡುವ ಭಾಷೆ, ವಿದ್ಯಾರ್ಥಿಗಳು ಎಲ್ಲ ಭಾಷೆ ಕಲಿಯಬೇಕು: ಶ್ರೀರಾಮುಲು -
SSLC ಪರೀಕ್ಷೆ ನಡೆಯುತ್ತಿರುವಾಗಲೇ ಅಂಕ 525ಕ್ಕೆ ಇಳಿಕೆ: ಸರ್ಕಾರದ ವಿರುದ್ಧ ಸುರೇಶ್ ಕುಮಾರ್ ವಾಗ್ದಾಳಿ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ












Click it and Unblock the Notifications