ಗಾನ ಕೋಗಿಲೆ ಲತಾ ವಿಧಿವಶ: ಈ ರಾಜ್ಯಗಳು ನಾಳೆ ರಜೆ ಘೋಷಿಸಿದೆ..
ಮುಂಬೈ, ಫೆಬ್ರವರಿ 06: ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಭಾನುವಾರ ಸಂಜೆ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವದ ಜೊತೆಗೆ ಲತಾರ ಅಂತ್ಯ ಸಂಸ್ಕಾರವನ್ನು ನಡೆಸಲಾಗಿದೆ.
ಲತಾ ಮಂಗೇಶ್ಕರ್ ಅವರ ನಿಧನದಿಂದ ಭಾರತ ಇಂದು ತನ್ನ ಶ್ರೇಷ್ಠ ರತ್ನಗಳಲ್ಲಿ ಒಂದನ್ನು ಕಳೆದುಕೊಂಡಿದೆ. ಭಾರತ ಸರ್ಕಾರವು ಮೆಲೋಡಿ ಕ್ವೀನ್ ಎಂದೇ ಪ್ರಸಿದ್ಧವಾದ ಲತಾ ಮಂಗೇಶ್ಕರ್ ಸ್ಮರಣಾರ್ಥ ಎರಡು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. "ಇಂದು ಮತ್ತು ನಾಳೆ ಎರಡು ದಿನಗಳ ರಾಜ್ಯ ಶೋಕಾಚರಣೆಯನ್ನು ಆಚರಿಸಲಾಗುತ್ತದೆ, ಈ ಸಮಯದಲ್ಲಿ ಲತಾ ಮಂಗೇಶ್ಕರ್ ಗೌರವಾರ್ಥವಾಗಿ ಭಾರತದಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗುತ್ತದೆ," ಎಂದು ಭಾರತ ಸರ್ಕಾರ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.
ಈ ನಡುವೆ ಅನೇಕ ರಾಜ್ಯಗಳು ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನದ ಹಿನ್ನೆಲೆ ಸಾರ್ವಜನಿಕ ರಜೆಯನ್ನು ಘೋಷಣೆ ಮಾಡಿದ್ದು ಈ ಮೂಲಕ ರಾಜ್ಯ ಶೋಕಾಚರಣೆಗಳನ್ನು ಘೋಷಿಸಿದೆ. ಮಹಾರಾಷ್ಟ್ರ ಸರ್ಕಾರ ಸೋಮವಾರ ಸಾರ್ವಜನಿಕ ರಜೆ ಘೋಷಿಸಿದ್ದು, ಪಶ್ಚಿಮ ಬಂಗಾಳ ಸರ್ಕಾರ ಅರ್ಧ ದಿನ ರಜೆ ಘೋಷಿಸಿದೆ. ಗೋವಾ ಸರ್ಕಾರ ಫೆಬ್ರವರಿ 6 ರಿಂದ ಫೆಬ್ರವರಿ 8 ರವರೆಗೆ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದ್ದು, ಮಧ್ಯಪ್ರದೇಶ, ಕರ್ನಾಟಕ, ಛತ್ತೀಸ್‌ಗಢ ಮತ್ತು ಸಿಕ್ಕಿಂ ಎರಡು ದಿನಗಳ ಶೋಕಾಚರಣೆಯನ್ನು ಘೋಷಿಸಿವೆ. ಹಾಗಾದರೆ ಯಾವೆಲ್ಲಾ ರಾಜ್ಯಗಳು ರಜೆಯನ್ನು ಘೋಷಣೆ ಮಾಡಿದೆ ಎಂದು ತಿಳಿಯಲು ಮುಂದೆ ಓದಿ...

ಕರ್ನಾಟಕದಲ್ಲಿ ಶೋಕಾಚರಣೆ
ಭಾರತ ರತ್ನ ಪ್ರಶಸ್ತಿ ಪುರಸ್ಕೃತೆ ಲತಾ ಮಂಗೇಶ್ಕರ್ ಅವರ ಗೌರವಾರ್ಥ ಕರ್ನಾಟಕ ಸರ್ಕಾರ ಎರಡು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಅವರ ನಿಧನಕ್ಕೆ ಸರ್ಕಾರ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಗಲಿದ ಲತಾ ಮಂಗೇಶ್ಕರ್‌ರ ಗೌರವಾರ್ಥವಾಗಿ ಫೆಬ್ರವರಿ 6 ಮತ್ತು 7 ರಂದು ರಾಜ್ಯಾದ್ಯಂತ ಶೋಕಾಚರಣೆ ನಡೆಯಲಿದೆ. ಈ ಅವಧಿಯಲ್ಲಿ ಯಾವುದೇ ಅಧಿಕೃತ, ಸಾರ್ವಜನಿಕ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ಭಾರತದ ತ್ರಿವರ್ಣ ಧ್ವಜ ಅರ್ಧಕ್ಕೆ ಹಾರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮಹಾರಾಷ್ಟ್ರದಲ್ಲಿ ರಜೆ ಘೋಷಣೆ
ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದ ಲತಾ ಮಂಗೇಶ್ಕರ್ ಅವರ ಗೌರವಾರ್ಥವಾಗಿ ಮಹಾರಾಷ್ಟ್ರ ಸರ್ಕಾರ ಸೋಮವಾರ ಸಾರ್ವಜನಿಕ ರಜೆ ಮತ್ತು ಒಂದು ದಿನದ ಶೋಕಾಚರಣೆಯನ್ನು ಘೋಷಿಸಿತು. ಇದಕ್ಕೂ ಮೊದಲು ಭಾರತ ರತ್ನ ಲತಾ ಮಂಗೇಶ್ಕರ್ ನಿಧನಕ್ಕೆ ಸಿಎಂ ಉದ್ಧವ್ ಠಾಕ್ರೆ ಸಂತಾಪ ಸೂಚಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ರಜೆ
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಗಾಯಕಿ ಲತಾ ಮಂಗೇಶ್ಕರ್ ಅವರ ಗೌರವಾರ್ಥ ರಾಜ್ಯ ಸರ್ಕಾರ ನಾಳೆ (ಫೆ.7) ಅರ್ಧ ದಿನದ ರಜೆಯನ್ನು ಘೋಷಿಸಿ ಸೂಚನೆ ನೀಡಿದ್ದಾರೆ. ಮುಂದಿನ 15 ದಿನಗಳವರೆಗೆ ಪ್ರತಿ ಸಾರ್ವಜನಿಕ ಸ್ಥಳ, ಸರ್ಕಾರಿ ಸಂಸ್ಥೆ ಮತ್ತು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಲತಾ ಮಂಗೇಶ್ಕರ್ ಅವರ ಹಾಡುಗಳನ್ನು ಮೊಳಗಿಸಲಾಗುವುದು ಎಂದು ಮಮತಾ ಬ್ಯಾನರ್ಜಿ ಘೋಷಿಸಿದರು.

ಮಧ್ಯಪ್ರದೇಶದಲ್ಲಿ ಶೋಕಾಚರಣೆ
ಭಾನುವಾರ ಬೆಳಗ್ಗೆ ಮುಂಬೈ ಆಸ್ಪತ್ರೆಯಲ್ಲಿ ನಿಧನರಾದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಗೌರವಾರ್ಥವಾಗಿ ಮಧ್ಯಪ್ರದೇಶ ಸರ್ಕಾರ ಎರಡು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಭಾರತ ರತ್ನ ಪ್ರಶಸ್ತಿ ಪುರಸ್ಕೃತರು ಸೆಪ್ಟೆಂಬರ್ 28, 1929 ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದರು. ಅಗಲಿದ ಗಣ್ಯರಿಗೆ ಗೌರವ ಸೂಚಕವಾಗಿ, ಫೆಬ್ರವರಿ 6 ಮತ್ತು ಫೆಬ್ರವರಿ 7 ರಂದು ಎರಡು ದಿನಗಳ ರಾಜ್ಯ ಶೋಕಾಚರಣೆಯನ್ನು ಆಚರಿಸಲಾಗುತ್ತದೆ ಎಂದು ರಾಜ್ಯ ಸರ್ಕಾರವು ಆದೇಶದಲ್ಲಿ ತಿಳಿಸಿದೆ.

ಛತ್ತೀಸ್‌ಗಢದಲ್ಲಿ ಶೋಕಾಚರಣೆ
ಗಾನ ಕೋಗಿಲೆ ಲತಾ ನಿಧನದ ಗೌರವಾರ್ಥವಾಗಿ ಛತ್ತೀಸ್‌ಗಢ ಸರ್ಕಾರ ಎರಡು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಮಂಗೇಶ್ಕರ್ ಅವರು ಹಾಡಿದ ಸುಮಧುರ ಗೀತೆಗಳು ಜನರ ಹೃದಯದಲ್ಲಿ ಸದಾ ಜೀವಂತವಾಗಿರುತ್ತವೆ ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಲತಾರ ಧ್ವನಿಯೇ ಅವರ ಗುರುತು, ಅದು ಎಂದಿಗೂ ಕಳೆದುಹೋಗುವುದಿಲ್ಲ. ಅವರು 30 ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಅವರ ಸಾವಿನಿಂದ ಭಾರತ ಇಂದು ರತ್ನವನ್ನು ಕಳೆದುಕೊಂಡಿದೆ," ಎಂದು ತಿಳಿಸಿದ್ದಾರೆ. ಫೆಬ್ರವರಿ 6 ಮತ್ತು 7 ರಂದು ರಾಜ್ಯದಲ್ಲಿ ಎರಡು ದಿನಗಳ ಶೋಕಾಚರಣೆ ನಡೆಯಲಿದೆ ಎಂದು ಸರ್ಕಾರದ ಮತ್ತೊಂದು ಹೇಳಿಕೆ ತಿಳಿಸಿದೆ.

ಸಿಕ್ಕಿಂನಲ್ಲಿ ಶೋಕಾಚರಣೆ
ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ಭಾನುವಾರ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಗೃಹ ವ್ಯವಹಾರಗಳ ಸಚಿವಾಲಯದ ಸೂಚನೆಯಂತೆ ಸಿಕ್ಕಿಂ ಸರ್ಕಾರವು ಫೆಬ್ರವರಿ 6 ಮತ್ತು 7 ರಂದು ರಾಜ್ಯಾದ್ಯಂತ ಶೋಕಾಚರಣೆಯನ್ನು ಆಚರಿಸಲಾಗುವುದು ಎಂದು ಘೋಷಿಸಿದೆ. ಫೆಬ್ರವರಿ 6 ರಿಂದ 7 ರವರೆಗೆ ಎರಡು ದಿನಗಳ ರಾಜ್ಯ ಶೋಕಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಸರ್ಕಾರದ ಅಧಿಸೂಚನೆ ಹೇಳಿದೆ. (ಒನ್‌ಇಂಡಿಯಾ ಸುದ್ದಿ)











Click it and Unblock the Notifications