ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನ ಕುಂದಬೆಟ್ಟದಲ್ಲೊಂದು ವಿಶಿಷ್ಟ ಕುದುರೆ ಹಬ್ಬ!

By ಬಿಎಂ ಲವಕುಮಾರ್
|
Google Oneindia Kannada News

ಕೊಡಗಿನ ತಲಕಾವೇರಿಯಲ್ಲಿ ತೀರ್ಥೋದ್ಭವವಾದ ಬಳಿಕ ಪವಿತ್ರ ತೀರ್ಥವನ್ನು ದೇಗುಲಗಳಿಗೆ ತಂದು ದೇವರಿಗೆ ಅರ್ಪಿಸುವುದು ಜಿಲ್ಲೆಯಲ್ಲಿ ಕಂಡು ಬರುತ್ತದೆ. ಇದೇ ವೇಳೆ ವಿವಿಧ ಹಬ್ಬಗಳು ನಡೆಯುತ್ತದೆ. ಈ ಪೈಕಿ ದಕ್ಷಿಣಕೊಡಗಿನ ಇತಿಹಾಸ ಪ್ರಸಿದ್ಧ ಕುಂದಬೆಟ್ಟದಲ್ಲಿ ಬೊಟ್ಲಪ್ಪ(ಈಶ್ವರ) ದೇಗುಲದಲ್ಲಿ ತೀರ್ಥೋದ್ಭವದ ಮಾರನೆಯ ದಿನ ಅಂದರೆ ಅ.18ರಂದು ನಡೆಯುವ ಕುದುರೆಯಲ್ಲಿ ಬಂದು ಹರಕೆ ತೀರಿಸುವುದು ಮತ್ತು ವಿವಿಧ ವೇಷದೊಂದಿಗೆ ಆಗಮಿಸಿ ಬೇಡು ಹಬ್ಬಕ್ಕೆ ಚಾಲನೆ ನೀಡುವುದು ವಿಶೇಷವಾಗಿದೆ.

ಈ ಹಬ್ಬದ ವಿಶೇಷತೆ ಏನೆಂದರೆ ಹಬ್ಬಕ್ಕೆ ಸಂಬಂಧಿಸಿದಂತೆ ಕಟ್ಟು ವಾರದ ಹಿಂದೆಯೇ ಬೀಳುತ್ತದೆ. ತಲಕಾವೇರಿ ತೀರ್ಥೋದ್ಭವ ದಿನ ರಾತ್ರಿ ಮನೆಕಳಿ ನಡೆಯುತ್ತದೆ. ಸಣ್ಣುವಂಡ ಹಾಗೂ ಮನೆಯಪಂಡ ತಕ್ಕಾಮೆಯಲ್ಲಿ ಹಬ್ಬ ನಡೆಯಲಿದ್ದು, ತಲಕಾವೇರಿಯಿಂದ ತೀರ್ಥವನ್ನು ತಂದು ಬೆಟ್ಟದ ಮೇಲಿನ ಈಶ್ವರ ದೇವರಿಗೆ ಅರ್ಪಿಸಿದ ಬಳಿಕ ಕೃತಕವಾಗಿ ಬಿದಿರಿನಿಂದ ಮಾಡಿದ ಕುದುರೆಯನ್ನು ಸಿಂಗರಿಸಿ ಅದನ್ನು ಹೊತ್ತ ವ್ರತದಾರಿಗಳು ಎತ್ತರದ ಬೆಟ್ಟವನ್ನು ಯಾವುದೇ ಆಯಾಸವಿಲ್ಲದೆ ಏರಿ ಹರಕೆ ತೀರಿಸುತ್ತಾರೆ. ಇದೇ ವೇಳೆ ವಿವಿಧ ವೇಷಧರಿಸಿದ ವೇಷಧಾರಿಗಳು ಹಬ್ಬಕ್ಕೆ ಕಳೆಕಟ್ಟುತ್ತಾರೆ. ಈ ಹಬ್ಬವನ್ನು ಹೆಚ್ಚಿನವರು ಕುಂದ ಬೆಟ್ಟದ ಕುದುರೆ ಹಬ್ಬ ಎಂದೇ ಕರೆಯುತ್ತಾರೆ.

ತುಲಾಮಾಸದಲ್ಲಿ ತಲಕಾಡಿನ ಗೋಕರ್ಣಕ್ಕೆ ಗಂಗೆ ಪ್ರವೇಶತುಲಾಮಾಸದಲ್ಲಿ ತಲಕಾಡಿನ ಗೋಕರ್ಣಕ್ಕೆ ಗಂಗೆ ಪ್ರವೇಶ

ವಿವಿಧ ವೇಷಧರಿಸಿ ಹರಕೆ ಸಲ್ಲಿಸುವುದನ್ನು ಬೇಡು ಹಬ್ಬವೆಂದೇ ಕರೆಯಲಾಗುತ್ತದೆ. ಕುಂದಬೆಟ್ಟದಲ್ಲಿ ಆರಂಭವಾಗುವ ಬೇಡು ಹಬ್ಬ ಬಳಿಕ ಜಿಲ್ಲೆಯ ವಿವಿಧೆಡೆ ನಡೆಯುತ್ತವೆ. ಬಳಿಕ ಬೇರಳಿ ನಾಡಿನಲ್ಲಿ ಅಂತ್ಯವಾಗುತ್ತದೆ. ಈ ಬೇಡು ಹಬ್ಬ ಕೊಡಗಿನಲ್ಲಿ ತಲತಲಾಂತರಗಳಿಂದ ನಡೆದು ಬಂದಿದ್ದು ವೇಷಧಾರಿಗಳು ಹಾಡು ಹೇಳುತ್ತಾ ಕುಣಿಯುತ್ತಾರೆ. ಈ ವೇಳೆ ಬರುವ ಹಾಡಿನ ತುಣುಕಿನಲ್ಲಿ " ಕುಂದಾತ್ ಬೊಟ್ಟ್' ಲ್ ನೇಂದಾ ಕುಂದುರೆ. ಪಾರಣ ಮಾನಿಲ್ ಅಳ್ಂಜ ಕುದುರೆ" ಎಂದು ಬೇಡು ಹಬ್ಬದ ಆರಂಭ ಮತ್ತು ಕೊನೆಯ ಬೇಡು ಹಬ್ಬದ ಬಗ್ಗೆ ಪ್ರಸ್ತಾಪಿಸಲಾಗಿದೆ.

 ಬಿದಿರಿನಿಂದ ಮಾಡಿದ ಕುದುರೆಗೆ ಪೂಜೆ

ಬಿದಿರಿನಿಂದ ಮಾಡಿದ ಕುದುರೆಗೆ ಪೂಜೆ

ಇನ್ನು ಕುಂದ ಗ್ರಾಮದ ಈಶ್ವರ ದೇವಸ್ಥಾನದಲ್ಲಿ 'ಬೇಡು' ಹಬ್ಬದ ಧಾರ್ಮಿಕ ವಿಧಿ ವಿಧಾನಗಳು ನಡೆದು ಬೇಡು ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ಬಳಿಕ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಕೊಡಗಿನ ವಿವಿಧ ಗ್ರಾಮಗಳಲ್ಲಿ ಈಶ್ವರ, ಭದ್ರಕಾಳಿ ದೇಗುಲಗಳಲ್ಲಿ ಬೇಡು ಹಬ್ಬ ನಡೆಯುತ್ತದೆ. ಕುಂದ ಬೆಟ್ಟದಲ್ಲಿ 'ಬೇಡು' ಹಬ್ಬದಲ್ಲಿ ಬಿದಿರಿನಿಂದ ಮಾಡಿದ ಕುದುರೆಯನ್ನು ಪೂಜಿಸಿ ನಂತರ ಬಲಿ ನೀಡಲಾಗುತ್ತದೆ.

ಕಾವೇರಿ, ಲಕ್ಷ್ಮಣತೀರ್ಥ, ಹೇಮಾವತಿಯ ಉಗಮವಾಗಿದ್ದು ಹೇಗೆ?ಕಾವೇರಿ, ಲಕ್ಷ್ಮಣತೀರ್ಥ, ಹೇಮಾವತಿಯ ಉಗಮವಾಗಿದ್ದು ಹೇಗೆ?

 ಕುಂದಬೆಟ್ಟ ನಿಸರ್ಗದ ಸೌಂದರ್ಯದ ತಾಣ

ಕುಂದಬೆಟ್ಟ ನಿಸರ್ಗದ ಸೌಂದರ್ಯದ ತಾಣ

ಬೇಡು ಹಬ್ಬ ನಡೆಯುವ ಕುಂದಬೆಟ್ಟವು ನಿಸರ್ಗದ ಸೌಂದರ್ಯದ ತಾಣವಾಗಿದೆ. ಜತೆಗೆ ಪವಿತ್ರ ತಾಣವೂ ಹೌದು. ಕೊಡಗಿನ ಪ್ರಮುಖ ಪಟ್ಟಣ ಮಡಿಕೇರಿಯಿಂದ ಅರವತ್ತು ಕಿಲೋಮೀಟರ್ ದೂರದಲ್ಲಿದ್ದು, ಪೊನ್ನಂಪೇಟೆ ತಾಲೂಕಿಗೆ ಸೇರಿದೆ. ಸಮುದ್ರ ಮಟ್ಟದಿಂದ ಮೂರು ಸಾವಿರದ ಇನ್ನೂರು ಅಡಿ ಎತ್ತರವಿದೆ. ಕೊಡವ ಭಾಷೆಯಲ್ಲಿ 'ಕುಂದ್' ಎಂಬ ಪದವು ಬೆಟ್ಟ ಎಂಬ ಅರ್ಥವನ್ನು ನೀಡುತ್ತದೆ. ಬೆಟ್ಟವೊಂದು ಗ್ರಾಮದ ಹೃದಯ ಭಾಗದಲ್ಲಿ ಮೈದಾಳಿ ನಿಂತಿದ್ದರಿಂದಲೋ ಏನೋ ಈ ಗ್ರಾಮವನ್ನು ಕುಂದವೆಂದೇ ಕರೆಯುತ್ತಾರೆ. ಗ್ರಾಮದ ಕಣ್ಮಣಿಯೇ ಕುಂದಬೆಟ್ಟ.

 ಕೊಡಗು ರಾಜರ ಕಾಲದಲ್ಲಿ ನಿರ್ಮಿತ ದೇವಾಲಯ?

ಕೊಡಗು ರಾಜರ ಕಾಲದಲ್ಲಿ ನಿರ್ಮಿತ ದೇವಾಲಯ?

ಇಲ್ಲಿರುವ ಬೊಟ್ಲಪ್ಪ (ಈಶ್ವರ) ದೇವಾಲಯ ಬಹಳ ಪುರಾತನವಾದುದಾಗಿದ್ದು, ವನವಾಸಕ್ಕೆ ತೆರಳಿದ ಪಾಂಡವರು ಕುಂದಬೆಟ್ಟಕ್ಕೆ ಬಂದಿದ್ದರಂತೆ ಈ ಸಂದರ್ಭದಲ್ಲಿ ಒಂದೇ ರಾತ್ರಿಯಲ್ಲಿ ಭೀಮನು ಕಲ್ಲು ಹೊತ್ತು ತಂದು ದೇವಾಲಯವನ್ನು ಕಟ್ಟಿದನೆಂದೂ ಕೆಲಸ ಸಂಪೂರ್ಣ ಮುಗಿಯುವ ವೇಳೆಗೆ ಬೆಳಗಾದುದರಿಂದ ದೇವಾಲಯಕ್ಕೆ ಬಾಗಿಲು ನಿರ್ಮಿಸಲಿಕ್ಕಾಗಲಿಲ್ಲ ಎಂಬ ಕಥೆಗಳಿವೆ. ಮತ್ತೆ ಕೆಲವರ ಅಭಿಪ್ರಾಯದ ಪ್ರಕಾರ ಈ ದೇವಾಲಯವು ಕೊಡಗು ರಾಜರ ಕಾಲದಲ್ಲಿ ನಿರ್ಮಿತವಾಗಿದೆಯೆಂದು, ಇದಕ್ಕೆ ಪೂರಕ ಎನ್ನುವಂತೆ ಶಿಲಾಸನದಲ್ಲಿ 'ಮನೆಯ ಪಂಡ ಸಂಬ್ರಾಯ' ಎಂಬ ಹೆಸರಿರುವುದು ಕಂಡು ಬರುತ್ತದೆ. ಅದೇನೆ ಇರಲಿ ಈ ದೇವಾಲಯದ ಅಧಿದೇವತೆಯೂ ಆದ ಈಶ್ವರ ಸುತ್ತ ಮುತ್ತಲ ಗ್ರಾಮದ ರಕ್ಷಕನಾಗಿದ್ದಾನೆ.

 ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತದೆಯೆಂಬ ಪ್ರತೀತಿ

ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತದೆಯೆಂಬ ಪ್ರತೀತಿ

ದೇವಾಲಯದ ಮುಂದೆ ಬೃಹತ್ ಶಿಲಾ ಬಂಡೆಯೊಂದು ಹರಡಿಕೊಂಡಿದ್ದು, ಈ ಬಂಡೆಯ ತುದಿಯಲ್ಲಿ ಒಂದು ಉಬ್ಬು ಕಲ್ಲಿದ್ದು ಇದರ ಮೇಲೆ ನಿಂತು ಮೂರು ಸುತ್ತು ಸುತ್ತಿದರೆ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತದೆಯೆಂಬ ಪ್ರತೀತಿಯಿದೆ. ಹಿಂದೆ ಸುಬ್ರಹ್ಮಣ್ಯ ಸ್ವಾಮಿಯ ನವಿಲು ಈ ಕಲ್ಲಿನ ಮೇಲೆ ನಾಟ್ಯವಾಡಿದ್ದರಿಂದ ಈ ಕಲ್ಲನ್ನು ದೇರಟೆಕಲ್ಲು ಎಂದು ಕರೆಯುತ್ತಾರೆ. ದೇವಾಲಯದ ಹಿಂಭಾಗದಲ್ಲಿ ಬೃಹತ್ ಭೀಮನ ಕಲ್ಲಿದ್ದು, ಬೊಟ್ಲಪ್ಪ ಈಶ್ವರ ದೇವಾಲಯವನ್ನು ನಿರ್ಮಿಸುತ್ತಿದ್ದ ಸಂದರ್ಭ ಭೀಮನೇ ಆ ಬೃಹತ್ ಕಲ್ಲನ್ನು ಹೊತ್ತು ತಂದು ಅಲ್ಲಿಟ್ಟನಂತೆ. ಈ ಕಲ್ಲಿನಲ್ಲಿ ಕಾಲಿನ ಮಂಡಿಯ ಮತ್ತು ಕೈಬೆರಳುಗಳ ಗುರುತು ಕಂಡು ಬರುತ್ತದೆ. ಈ ಕಲ್ಲಿನ ಪಕ್ಕದಲ್ಲೇ ಚಿಕ್ಕ ಪೊಟರೆಯೊಂದಿದ್ದು ಹಿಂದೆ ಪಾಂಡವರು ಈ ಪೊಟರೆಯನ್ನು ಅಡುಗೆ ಸಾಮಾನುಗಳನ್ನು ಇಡಲು ಉಪಯೋಗಿಸುತ್ತಿದ್ದರಂತೆ.

 ಹಸಿರಿನಿಂದ ಸುತ್ತುವರಿದ ಸುಂದರ ವಾತಾವರಣ

ಹಸಿರಿನಿಂದ ಸುತ್ತುವರಿದ ಸುಂದರ ವಾತಾವರಣ

ದೇವಾಲಯದ ಮುಂಭಾಗಕ್ಕಾಗಿ ಹಾದು ಕಾಡು, ಮೇಡನ್ನೆಲ್ಲಾ ಕ್ರಮಿಸಿದರೆ, ಅಲ್ಲೊಂದು ಬಾಯಿ ತೆರೆದ ಗುಹೆಯೊಂದು ಗೋಚರವಾಗುತ್ತದೆ. ನೆಲಮಾಳಿಗೆಯಂತಿರುವ ಗುಹೆಯಲ್ಲಿ ಕತ್ತಲು ಆವರಿಸಿದ್ದು ಈ ಗುಹೆಯೊಳಗೆ ನುಗ್ಗಿ ಮುನ್ನೆಡೆದರೆ ಅಲ್ಲೊಂದು ಕಿಂಡಿಯಿದ್ದು, ಇದರ ಮೂಲಕ ಇಲ್ಲಿಂದ ಕಾಣಬರುವ ಪ್ರಕೃತಿ ಸೊಬಗನ್ನು ನೋಡಬಹುದಾಗಿದೆ. ಈಗಂತೂ ಇಡೀ ಪರಿಸರ ಹಸಿರಿನಿಂದ ಕೂಡಿದ್ದು, ಸುಂದರ ವಾತಾವರಣದಿಂದ ಮನಕ್ಕೆ ಮುದನೀಡುತ್ತದೆ.

English summary
Following the Cauvery Theerthodbhava festival, kodagu people to celebrated Kudure habba at the Kunda Hills near Ponnampet in South Kodagu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X