• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗು: ಜಲಪ್ರಳಯದ ಆ ದಿನ ನೆನೆದರೆ ಜನ ಬೆಚ್ಚಿ ಬೀಳ್ತಾರೆ!

By ಕೊಡಗು ಪ್ರತಿನಿಧಿ
|
Google Oneindia Kannada News

ಈಗ ವರುಣ ಅಬ್ಬರಿಸುವುದನ್ನು ನೋಡುತ್ತಿದ್ದರೆ 2018ರಲ್ಲಿ ಸಂಭವಿಸಿದ ಆ ದುರಂತಗಳು ನೆನಪಾಗುತ್ತಿವೆ. ಅವತ್ತಿನ ದಿನಗಳನ್ನು ನೆನಪಿಸಿಕೊಂಡರೆ ಇವತ್ತಿಗೂ ಕೊಡಗಿನ ಜನ ನಡಗುತ್ತಾರೆ. ನಿದ್ದೆಯಲ್ಲೂ ಬೆಚ್ಚಿ ಬೀಳುತ್ತಾರೆ. ಅಷ್ಟೇ ಅಲ್ಲದೆ, ಅಬ್ಬಾ ಅಂಥ ದುರಂತ ಮತ್ಯಾವತ್ತೂ ಸಂಭವಿಸದಿರಲಿ ಎಂದು ಬೇಡಿಕೊಳ್ಳುತ್ತಾರೆ.

ಕೊಡಗಿನ ಜನ ಬಹಳಷ್ಟು ಮಳೆಗಾಲವನ್ನು ನೋಡಿದ್ದರು. ಆದರೆ 2018ರಲ್ಲಿ ಸುರಿದ ಆ ಮಳೆ ಬರೀ ಮಳೆಯಾಗಿರಲಿಲ್ಲ. ಬದುಕನ್ನೇ ಕಸಿದ ಜಲಪ್ರಳಯವಾಗಿತ್ತು. ಅವತ್ತು ತಮ್ಮ ಕಣ್ಣಾರೆ ಕಂಡಾರೆ ಕಂಡ ಆ ದೃಶ್ಯಗಳನ್ನು ಜನ ಹೇಳುತ್ತಾ ಹೋದರೆ ಭಯವಾಗುತ್ತದೆ. ಏಕೆಂದರೆ ಅವತ್ತು ಇದ್ದಕ್ಕಿದ್ದಂತೆ ಆಕಾಶವೇ ತೂತಾಯಿತೇನೋ ಎಂಬಂತೆ ಮಳೆ ಸುರಿದಿತ್ತು. ಪರಿಣಾಮ ಒಂದೆಡೆ ಭೂಮಿ ಬಾಯಿಬಿಟ್ಟು ಗುಡ್ಡಗಳೆಲ್ಲ ಕುಸಿಯುತ್ತಿದ್ದರೆ, ಕಾವೇರಿ ರೌದ್ರಾವತಾರ ತಾಳಿ ಹರಿಯಲಾರಂಭಿಸಿದ್ದಳು. ಸಣ್ಣ ಪುಟ್ಟ ತೊರೆಗಳೆಲ್ಲವೂ ಧುಮ್ಮಿಕ್ಕಿ ಹರಿಯುತ್ತಾ ಸಿಕ್ಕಸಿಕ್ಕಿದ್ದನೆಲ್ಲ ಕೊಚ್ಚಿಕೊಂಡು ಹೋಗಿದ್ದವು. ಏನಾಗುತ್ತಿದೆ ಎಂದು ಊಹೆ ಮಾಡುವ ಹೊತ್ತಿಗೆ ಮನೆಗಳು ಜರಿಯಲಾರಂಭಿಸಿದ್ದವು. ಗುಡ್ಡಗಳು ಕುಸಿದು ಹೋಗಿದ್ದವು.

ಕೊಡಗಿನ ಜನರನ್ನು ಕಂಗೆಡಿಸುತ್ತಿದೆ ಭಾರೀ ಗಾಳಿ, ಮಳೆ!ಕೊಡಗಿನ ಜನರನ್ನು ಕಂಗೆಡಿಸುತ್ತಿದೆ ಭಾರೀ ಗಾಳಿ, ಮಳೆ!

ಎಲ್ಲಿ ನೋಡಿದರೂ ಕುಸಿದ ಗುಡ್ಡ, ಕಾಫಿ ತೋಟಗಳು, ಧರೆಗುರುಳಿದ ಮನೆಗಳು, ಭೂಮಂಡಲನ್ನೇ ಒಂದು ಮಾಡಿದ ಜಲರಾಶಿ, ಕುಸಿದ, ಬಿರುಕುಬಿಟ್ಟ ರಸ್ತೆಗಳು, ಅಡ್ಡಾದಿಡ್ಡಿ ನೆಲಕ್ಕುರಳಿದ ಮರಗಳು, ವಿದ್ಯುತ್ ಕಂಬಗಳು, ನೀರಿನಲ್ಲಿ ಮುಳುಗಡೆಯಾದ ವಸತಿ ಪ್ರದೇಶಗಳು, ಮುಗಿಲು ಮುಟ್ಟಿದ ಆಕ್ರಂದನ, ಒಂದೇ ಊರಲ್ಲಿ ಇದ್ದರೂ ತಮ್ಮವರನ್ನು ಸಂಪರ್ಕಿಸಲಾಗದೆ ಅಸಹಾಯಕತೆಯಿಂದ ಕಣ್ಣೀರಿಡುತ್ತಿರುವ ಜನ ಕಾಣಿಸಿದ್ದರು.

 ಮಳೆಯಾಗದೆ ಜನರೆಲ್ಲರೂ ದೇವರ ಮೊರೆ ಹೋಗಿದ್ರು

ಮಳೆಯಾಗದೆ ಜನರೆಲ್ಲರೂ ದೇವರ ಮೊರೆ ಹೋಗಿದ್ರು

ಹಿಂದಿನಿಂದಲೂ ಕೊಡಗಿನಲ್ಲಿ ಮಳೆಗಾಲಕ್ಕೆ ಜನ ಹೆದರುತ್ತಿರಲಿಲ್ಲ. ಮಳೆಗಾಲಕ್ಕೆ ಏನೇನು ವ್ಯವಸ್ಥೆ ಬೇಕೋ ಅದನ್ನು ಬೇಸಿಗೆಯಲ್ಲಿಯೇ ಮಾಡಿಕೊಂಡು ಸುರಿಯುವ ಮಳೆಗೆ ಅಂಜದೆ ಎದೆಗೊಟ್ಟು ಬದುಕು ಸಾಗಿಸಿಕೊಂಡು ಬಂದಿದ್ದರು. ಆದರೆ ಕಾಲ ಕ್ರಮೇಣ ಒಂದಷ್ಟು ಬದಲಾವಣೆಗಳಿಂದ ಮಳೆ ಕ್ಷೀಣವಾಗುತ್ತಾ ಹೋಗಿತ್ತು. ಮೇ ನಿಂದ ಆರಂಭವಾಗಿ ನವೆಂಬರ್ ತನಕವೂ ಸುರಿಯುತ್ತಿದ್ದ ಮತ್ತು ಜುಲೈ ಆಗಸ್ಟ್ ನಲ್ಲಿ ಎಡೆಬಿಡದೆ ಸುರಿಯುತ್ತಿದ್ದ ಮಳೆ ಮಧ್ಯೆ ವಿರಾಮ ನೀಡಲಾರಂಭಿಸಿತು. ಒಂದಷ್ಟು ವರ್ಷಗಳ ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗದೆ ಜನರೆಲ್ಲರೂ ದೇವರ ಮೊರೆ ಹೋದ ಪ್ರಸಂಗಗಳು ನಡೆದಿದ್ದವು. ಕೆಲವು ವರ್ಷಗಳ ಕಾಲ ಸಮರ್ಪಕವಾಗಿ ಮಳೆ ಸುರಿಯದೆ ಜನ ನೀರಿನ ಸಮಸ್ಯೆಯನ್ನು ಎದುರಿಸಿದ್ದರು. ನದಿಗಳು ಉಕ್ಕಿ ಹರಿಯದ ಕಾರಣದಿಂದ ಜನ ಪ್ರವಾಹ ಪರಿಸ್ಥಿತಿಯನ್ನು ಮರೆತಿದ್ದರು.

ಭೂಕಂಪನ ಮಹಾಮಳೆಯ ಮುನ್ಸೂಚನೆಯಾ?... ಅವತ್ತು ಹಾಗೆಯೇ ಆಗಿತ್ತು!ಭೂಕಂಪನ ಮಹಾಮಳೆಯ ಮುನ್ಸೂಚನೆಯಾ?... ಅವತ್ತು ಹಾಗೆಯೇ ಆಗಿತ್ತು!

 ಮಳೆಗಾಲದ ಬಗ್ಗೆ ನಿರ್ಲಕ್ಷ್ಯ ತಾಳಿದ್ದ ಜನ

ಮಳೆಗಾಲದ ಬಗ್ಗೆ ನಿರ್ಲಕ್ಷ್ಯ ತಾಳಿದ್ದ ಜನ

ಹಿಂದಿನ ಕಾಲದವರು ನೀರಿನ ಸೆಲೆಯೆಂದು ಜಾಗಗಳನ್ನು ಖಾಲಿ ಬಿಟ್ಟಿದ್ದರೋ ಅಲ್ಲೆಲ್ಲ ಕಟ್ಟಡಗಳು ತಲೆ ಎತ್ತಿದವು. ನದಿ ಹರಿಯುತ್ತಿದ್ದ ಜಾಗಗಳು ಒತ್ತುವರಿಯಾದವು. ಜನ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಪಟ್ಟಣಗಳ ಬಳಿಯಿರುವ ಗುಡ್ಡಗಳತ್ತ ದೃಷ್ಟಿ ನೆಟ್ಟ ಜನ ಗುಡ್ಡಗಳನ್ನು ಸಮತಟ್ಟು ಮಾಡಿ ಮನೆಗಳನ್ನು ನಿರ್ಮಿಸಿಕೊಂಡರು. ಬಳಿಕ ಮನೆಗಳಿಗೆ ಅನುಕೂಲವಾಗುವಂತೆ ಬೆಟ್ಟಗಳನ್ನು ಅಗೆದು ರಸ್ತೆ ಮಾಡಿದರು. ಬಂಡವಾಳ ಶಾಹಿಗಳು ಹಣ ತಂದು ಗುಡ್ಡಗಳನ್ನೆಲ್ಲ ಸಮತಟ್ಟು ಮಾಡಿ ಹೋಂ ಸ್ಟೇ, ರೆಸಾರ್ಟ್ ನಿರ್ಮಿಸಿದರು. ಅದಕ್ಕೆ ಬರಲು ಗುಡ್ಡಕೊರೆದು, ಮರಕಡಿದು ಒಂದೊಳ್ಳೆಯ ರಸ್ತೆ ಮಾಡಿದರು.

ಒಂದು ದಶಕಗಳ ಕಾಲ ಸರಿಯಾಗಿ ಮಳೆಯಾಗದ ಕಾರಣದಿಂದ ಜನ ಮಳೆಗಾಲದ ಬಗ್ಗೆ ನಿರ್ಲಕ್ಷ್ಯ ತಾಳಿದರು. ಕೊಡಗಿನಲ್ಲಿ ಮಳೆ ಕ್ಷೀಣಿಸಿದ ಪರಿಣಾಮ ಕೆಲವು ವರ್ಷಗಳ ಕಾಲ ಕೆಆರ್ ಎಸ್ ಜಲಾಶಯ ಭರ್ತಿಯಾಗಿರಲಿಲ್ಲ. 2015 ನಂತರ 2017ರವರೆಗೂ ಕೊಡಗಿನಲ್ಲಿ ಹಿಂಗಾರು ದುರ್ಬಲವಾಗಿತ್ತು. 2017ರಲ್ಲಿ ಮುಂಗಾರು ಮಳೆ ಹೆಚ್ಚು ಸುರಿಯಲಿಲ್ಲ. ಆದರೆ ಹಿಂಗಾರು ಮಳೆ ಒಂದಷ್ಟು ಸುರಿದಿತ್ತು. 2018ರ ಮುಂಗಾರು ಆರಂಭದ ವೇಳೆಗೆ ಒಂದಷ್ಟು ವಿಚಿತ್ರ ವಿದ್ಯಮಾನಗಳು ಪ್ರಕೃತಿಯಲ್ಲಿ ನಡೆದಿತ್ತು. ಜನ ಇದೆಲ್ಲ ಏನು ಎಂಬುದು ಗೊತ್ತಾಗದೆ ತಲೆ ಕೆಡಿಸಿಕೊಂಡಿದ್ದರು.

 ರೌದ್ರಾವತಾರಾ ತಾಳಿದ್ದ ಸಣ್ಣಪುಟ್ಟ ಹೊಳೆಗಳು

ರೌದ್ರಾವತಾರಾ ತಾಳಿದ್ದ ಸಣ್ಣಪುಟ್ಟ ಹೊಳೆಗಳು

ಅವತ್ತು(2018) ಜೂನ್ ಮೊದಲ ವಾರದಲ್ಲಿಯೇ ಅಬ್ಬರಿಸಿದ ಮೃಗಶಿರ ಮಳೆ ಪ್ರವಾಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು. ಭಾಗಮಂಡಲ ಸೇರಿದಂತೆ ಹಲವು ಪ್ರದೇಶಗಳು ಜಲಾವೃತವಾಗಿತ್ತು. ವಿದ್ಯುತ್ ಕಂಬಗಳು, ಮರಗಳು ನೆಲಕ್ಕುರುಳಿದ್ದವು. ಜನ ಇದನ್ನು ಮಾಮೂಲು ಮಳೆ ಎಂದು ನಂಬಿದ್ದರು. ಹೇಗೋ ಪ್ರವಾಹ ಪರಿಸ್ಥಿತಿಯಿಂದ ಪಾರಾಗಿ ಬಂದರು. ನಂತರದ ದಿನಗಳಲ್ಲಿ ಮಳೆಯ ಅಬ್ಬರವೂ ತಗ್ಗಿತ್ತು. ಆದರೆ ಕೆಲವೇ ದಿನಗಳಲ್ಲಿ ಮತ್ತೆ ಮಳೆಯ ಅರ್ಭಟ ಹೆಚ್ಚಾಗತೊಡಗಿತು. ಮಡಿಕೇರಿ ಬಳಿಯ ಕಾಲೂರಿನ ಕೆಲವು ಪ್ರದೇಶಗಳಲ್ಲಿ ಬಿರುಕು ಕಾಣಿಸಿತು. ಸದ್ದುಗಳು ಬರತೊಡಗಿದವು. ನೆಲಕ್ಕೆ ಕಿವಿಕೊಟ್ಟರೆ ನೀರು ಹರಿದು ಹೋಗುವ ಶಬ್ದಗಳು ಕೇಳಿಸತೊಡಗಿತು. ಆಗಲೇ ಇಲ್ಲಿ ಏನೋ ಅನಾಹುತ ಸಂಭವಿಸುತ್ತದೆ ಎಂಬ ಚಿಕ್ಕ ಸೂಚನೆ ಸಿಕ್ಕಿತ್ತು. ಆದರೆ ಅದರ ಭೀಕರತೆಯ ಬಗ್ಗೆ ಯಾರು ನಿರೀಕ್ಷೆ ಮಾಡಿರಲಿಲ್ಲ.

ಆಗಸ್ಟ್ ತಿಂಗಳ ಮೊದಲ ವಾರ ಮಡಿಕೇರಿ ಮತ್ತು ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಮಡಿಕೇರಿಗೆ ಸಮೀಪವೇ ಕುಸಿಯಿತು. ಅದಾದ ಬಳಿಕ ಮದೆನಾಡು ಬಳಿ ಗುಡ್ಡವೇ ರಸ್ತೆಗೆ ಕುಸಿದು ಬಿತ್ತು. ಅದಾದ ಬಳಿಕ ಮಡಿಕೇರಿ ವ್ಯಾಪ್ತಿಯ ಗುಡ್ಡಗಳಲ್ಲಿ ಸಣ್ಣಗೆ ಆತಂಕ ಶುರುವಾಯಿತು. ಮಡಿಕೇರಿಗೆ ಸುಮಾರು 15 ಕಿ.ಮೀ.ದೂರವಿರುವ ಕಾಲೂರು, ದೇವಸ್ತೂರು, ಮೊಣ್ಣಂಗೇರಿ, ಮೇಘತ್ತಾಳ, ಮಕ್ಕಂದೂರು, ತಂತಿಪಾಲ ಹೀಗೆ ವಿವಿಧ ಕಡೆ ಮಳೆಯ ರಭಸ ಹೆಚ್ಚಿ ಸಣ್ಣಪುಟ್ಟ ಹೊಳೆಗಳೆಲ್ಲ ರೌದ್ರಾವತಾರ ತಾಳಿ ಹರಿಯತೊಡಗಿದವು. ಮೊದಲೇ ಸೇತುವೆಯಿಲ್ಲದೆ, ತಾವೇ ನಿರ್ಮಿಸಿಕೊಂಡಿದ್ದ ಸೇತುವೆ ಮೂಲಕ ಪಟ್ಟಣದೊಂದಿಗೆ ಸಂಪರ್ಕ ಹೊಂದಿದ್ದ ಪ್ರದೇಶಗಳು ಆಗ ಸಂಪೂರ್ಣ ಜಲಾವೃತವಾದವು.

 ಬದುಕಿ ಬಂದವರಿಗೆ ಪುನರ್ಜನ್ಮ

ಬದುಕಿ ಬಂದವರಿಗೆ ಪುನರ್ಜನ್ಮ

ಅಷ್ಟೇ ಆಗಿದ್ದರೆ ಜನ ಹೇಗೋ ನಿಭಾಯಿಸಿಕೊಂಡು ಬದುಕು ಸಾಗಿಸುತ್ತಿದ್ದರು. ಆದರೆ, ಹಾಗೆ ಆಗಲೇ ಇಲ್ಲ. ಗದ್ದೆ ಬದಿಯಲ್ಲಿ ಹರಿಯುತ್ತಿದ್ದ ನದಿಗಳು ಭೀಕರ ಸ್ವರೂಪ ತಾಳಿ ಗದ್ದೆ, ತೋಟವನ್ನೆಲ್ಲ ನೀರು ಆವರಿಸಿತು. ಇದ್ದಕ್ಕಿದ್ದಂತೆ ಆಕಾಶವೇ ತೂತು ಬಿದ್ದಂತೆ ಸುರಿದ ಮಳೆಗೆ ಎತ್ತರ ಪ್ರದೇಶದಲ್ಲಿದ್ದ ಮನೆಗಳು ನಡುಗತೊಡಗಿದವು.

ಗುಡ್ಡಗಳು ಮನೆಯ ಮೇಲೆ ಕುಸಿದರೆ, ಮತ್ತೆ ಕೆಲವೆಡೆ ಮನೆಗಳೇ ಕುಸಿದು ಬಿದ್ದವು. ಆಗಲೇ ಜನ ಬೆಚ್ಚಿ ಬಿದ್ದರು. ಮನೆಯಿಂದ ಹೊರಗೆ ಹೋಗಿ ಸುರಕ್ಷಿತ ಸ್ಥಳ ತಲುಪೋಣ ಎಂದರೆ ಸುತ್ತಲೂ ನೀರು. ಅಷ್ಟೇ ಅಲ್ಲ ರಸ್ತೆಗಳಲ್ಲಿ ತೆರಳೋಣ ಎಂದರೆ ಅವುಗಳು ಅದಾಗಲೇ ಕುಸಿದು ಬಿದ್ದಿದ್ದವು. ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಮನೆಯಿಂದ ಹೊರ ಬಂದ ಜನ ಕಾಡು ಮೇಡು ಅಲೆದು ಗುಡ್ಡ ಹತ್ತಿ ಕುಳಿತರು. ಕೆಲವರು ಯಾವ ಕಡೆ ತೆರಳಿದರೆ ಸುರಕ್ಷಿತ ಸ್ಥಳ ತಲುಪಬಹುದು ಯೋಚಿಸಿ ನಡೆದರು. ವಯಸ್ಸಾದವರು, ಮಕ್ಕಳು ಎಲ್ಲರನ್ನು ಕರೆದುಕೊಂಡು ಹೊರ ಬರುವ ವೇಳೆಗೆ ಅವರಿಗೆ ಪುನರ್ಜನ್ಮ ಕಂಡಂತಾಗಿತ್ತು.

 ಭೂಮಿ ಕಂಪನ, ಆಗಸ್ಟ್‌ ಮಳೆಯ ಭೀತಿಯಲ್ಲಿ ಜನ

ಭೂಮಿ ಕಂಪನ, ಆಗಸ್ಟ್‌ ಮಳೆಯ ಭೀತಿಯಲ್ಲಿ ಜನ

ಇದೆಲ್ಲವೂ ನಡೆದು ನಾಲ್ಕು ವರ್ಷ ಕಳೆದಿದೆ. ಆದರೆ ಅವತ್ತಿನ ಆ ಜಲಪ್ರಳಯದಲ್ಲಿ ಸಿಲುಕಿದ ಬಹುತೇಕ ಮಂದಿಯ ಬದುಕು ಇನ್ನೂ ಕೂಡ ತಹಬದಿಗೆ ಬಂದಿಲ್ಲ. ಎಲ್ಲರೂ ಸಂಕಷ್ಟದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಹೀಗಿರುವಾಗಲೇ ಮತ್ತೆ ಒಂದಲ್ಲ ಒಂದು ರೀತಿಯ ದುರಂತಗಳು ಕಾಡಲು ಆರಂಭಿಸಿದೆ. ಇತ್ತೀಚೆಗೆ ಕೆಲವು ಕಡೆ ಭೂಮಿ ಕಂಪಿಸಿದೆ, ಇನ್ನೂ ಆಗಸ್ಟ್ ತಿಂಗಳಲ್ಲಿ ಸುರಿಯುವ ಮಳೆ ಇನ್ಯಾವ ರೀತಿಯ ಅನಾಹುತ ಸೃಷ್ಟಿಸಿ ಬಿಡುತ್ತದೆಯೋ ಎಂಬ ಭಯದಲ್ಲಿಯೇ ಜನ ಕಾಲ ಕಳೆಯುವಂತಾಗಿದೆ. ವರುಣ ಸಂಕಷ್ಟ ತಾರದಿದ್ದರೆ ಅಷ್ಟೇ ಸಾಕು. ಇದು ಎಲ್ಲರ ಪ್ರಾರ್ಥನೆಯೂ ಹೌದು.

English summary
The heavy rains in 2018 caused heavy damage to the farming community as many farmers lost houses and other properties.But After 4 years still, the People of Kodagu feared to remembering the flood,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X